ಜೈ ರಾಧೇಕೃಷ್ಣ….

ಜೈ ರಾಧೇಕೃಷ್ಣ….
ದ್ವಾಪರ ಮುಗಿದ ನಂತರದ ಕಥೆಯಿದು.
ಕೃಷ್ಣ ಮತ್ತು ರಾಧೆ ಸ್ವರ್ಗದ ನಂದನವನದಲ್ಲಿ ಬಹಳ ದಿನಗಳ ನಂತರ ಭೇಟಿಯಾಗುತ್ತಾರೆ.
ಬಹಳ ವರ್ಷಗಳ ನಂತರದ ರಾಧೆಯ ಅನಿರೀಕ್ಷಿತ ದರ್ಶನದಿಂದ ಕೃಷ್ಣ ವಿಚಲಿತನಾಗುತ್ತಾನೆ.
ರಾಧೆ ಹಿಂದಿನಂತೆಯೇ ಪ್ರಸನ್ನಚಿತ್ತಳಾಗಿಯೇ ಇದ್ದಾಳೆ.
ಕೃಷ್ಣ ಗಲಿಬಿಲಿಗೊಂಡ, ರಾಧೆ ಮುಗುಳ್ನಕ್ಕಳು.
ಕೃಷ್ಣ ರಾಧೆಯನ್ನು ಮಾತನಾಡಿಸಬೇಕೆಂದುಕೊಳ್ಳುವಷ್ಟರಲ್ಲಿಯೇ
ರಾಧೆಯೇ ಕೇಳಿದಳು, ಹೇಗಿದ್ದಿಯಾ ದ್ವಾರಕಾಧೀಶ?
ತನ್ನನ್ನು ‘ಶ್ಯಾಮ… ಶ್ಯಾಮನೆಂದು … ಪ್ರೇಮದಿಂದ ಕರೆಯುತ್ತಿದ್ದ ರಾಧೆಯ ಬಾಯಿಂದ ‘ಹೇಗಿದ್ದಿಯಾ ದ್ವಾರಕಾಧೀಶ’ ಎಂಬ ಸಂಬೋಧನೆ ಕೃಷ್ಣ ಅಂತರಾಳವನ್ನು ನೋಯಿಸಿತು. ಹಾಗೂ ಹೀಗೂ ತನ್ನನ್ನು ಸಂಭಾಳಿಸಿಕೊಂಡು ಕೃಷ್ಣ ರಾಧೆಗೆ ಮರು ನುಡಿದ,
ನಾನು ಇಂದಿಗೂ ನಿನ್ನ ಶ್ಯಾಮನೇ… ‘ದ್ವಾರಕಾಧೀಶ’ನೆಂದು ನನ್ನನ್ನು ಕರೆಯಬೇಡ.
ಬಾ ಇಲ್ಲಿ…, ಈ ಲತಾ ಮಂಟಪದಲ್ಲಿ ಒಂದೆಡೆ ಕುಳಿತುಕೊಳ್ಳೋಣ.
ನಿನ್ನ ಬಗ್ಗೆ ನೀನು ಮತ್ತು ನನ್ನ ಬಗ್ಗೆ ನಾನು ನಮ್ಮ ಅಗಲಿಕೆಯ ನಂತರದ ನೆನಪುಗಳನ್ನು ಹಂಚಿಕೊಳ್ಳೋಣ.
ನಿಜ ಹೇಳಲೆ ರಾಧೆ, ನಿನ್ನ ನೆನಪಾದಾಗಲೆಲ್ಲ ಈ ಕಣ್ಣುಗಳಿಂದ ಕಂಬನಿಯ ಮುತ್ತುಗಳು ಹರಿಯುತ್ತಿತ್ತು, ಎದೆ ಭಾರವಾಗುತ್ತಿತ್ತು. ನಾನು ಒಂಟಿ ಎನಿಸುತ್ತಿತ್ತು.
ನಿನಗೆ ಹೇಗೋ….? ಪ್ರಶ್ನಿಸಿದ ಕೃಷ್ಣ.
ರಾಧೆ ನುಡಿದಳು, ನಿಜ ಹೇಳಲೇ ಶ್ಯಾಮ, ನನ್ನಲ್ಲಂತೂ ಈ ತರಹದ್ದೇನೂ ನಡಿಯಲಿಲ್ಲಪ್ಪಾ..
ನಿನ್ನ ನೆನಪೇ ನನಗೆ ಬರಲಿಲ್ಲ, ನಿನ್ನ ನೆನಪಲ್ಲಿ ನನ್ನ ಕಣ್ಣಿಂದ ಒಂದು ಹನಿ ನೀರೂ ಬರಲಿಲ್ಲ! ನಾನೆಂದು ಒಂಟಿಯೆಂದು ನನಗನಿಸಲೇ ಇಲ್ಲ. ಯಾಕೆಂದರೆ ನನ್ನುಸಿರು ಉಸಿರಲ್ಲೂ ನೀನೆ ಇದ್ದೆ. ನೆನಪಾಗುವುದು ಮರೆತರೆ ತಾನೆ? ನನ್ನ ಕಣ್ಣಲ್ಲಿ ಸದಾ ನೀನೇ ತುಂಬಿರುತ್ತಿದ್ದೆ. ನಾನೆಲ್ಲಾದರೂ ಕಣ್ಣಿರುಗೆರೆದರೆ ನನ್ನ ಕಣ್ಣೀರ ಜತೆ ನಿನ್ನ ಬಿಂಬ ಎಲ್ಲಿ ಕರಗಿ ಹೋದಿತೋ ಎಂಬ ಭೀತಿಯಿತ್ತು ನನಗೆ.

ನನ್ನ ಪ್ರೇಮದಿಂದ ದೂರಸರಿದ ಬಳಿಕ ನೀನೇನು ಕಳಕೊಂಡೆ ಎಂಬುದನ್ನು ತಿಳಿಸಲೇನು, ಅದರ ದೃಶ್ಯಗಳನ್ನು ವಿವರಿಸಲೇನು? ಕೆಲವು ಕಟು ಸತ್ಯವಿದೆ, ನೀನರಗಿಸಿಕೊಳ್ಳಬಲ್ಲೆಯೇನು?
ಯಮುನೆಯ ಸಿಹಿ ನೀರ ಕುಡಿದು ಪ್ರಾರಂಭವಾದ ನಿನ್ನ ಬದುಕು ಉಪ್ಪುನೀರ ಸಮುದ್ರದಲ್ಲಿ ದ್ವಾರಕೆಯನ್ನು ನಿರ್ಮಿಸುವಲ್ಲಿ ಕೊನೆಗೊಂಡಿತು. ಎಂತಹ ವಿಪರ್ಯಾಸ ನೋಡು.
ಒಂದು ಬೆರಳ ಮೇಲೆ ತಿರುಗುವಂತಹ ಸುದರ್ಶನ ಚಕ್ರದ ಮೇಲೆ ಭರವಸೆಯಿಟ್ಟೆ,
ಹತ್ತು ಬೆರಳಲ್ಲಿ ಬಾರಿಸುವ ಕೊಳಲ ಮರೆತುಬಿಟ್ಟೆ.
ನೀನು ಪ್ರೇಮಮಯಿಯಾಗಿದ್ದಾಗ ನಿನ್ನಲ್ಲಿ ಎಷ್ಟು ಶಕ್ತಿಯಿತ್ತು ಬಲ್ಲೆಯಾ?
ನೀನು ಕಿರು ಬೆರಳಿಂದ ಗೋವರ್ಧನವನೆತ್ತಿಬಿಟ್ಟೆ!
ನೀನು ಪ್ರೇಮದಿಂದ ವಿಮುಖನಾದಾಗ ಕೈಯ್ಯಲ್ಲಿ ಸುದರ್ಶನ ಚಕ್ರವನ್ನು ಹಿಡಿದು ವಿನಾಶಕ್ಕೆಳಸಿದೆ.
ನೀನ್ನ ಶ್ಯಾಮ ಮತ್ತು ದ್ವಾರಕಾಧೀಶನ ನಡುವಿನ ವ್ಯತ್ಯಾಸವನ್ನು ತಿಳಿಸಲೇ ಕೃಷ್ಣ.
ನೀನು ಶ್ಯಾಮನಾಗಿಯೇ ಇದ್ದಿದ್ದರೆ, ಸುಧಾಮ ನಿನ್ನ ಮನೆಗೆ ಬರಬೇಕಾದ್ದಿರಲಿಲ್ಲ, ನೀನೇ ಅವನ ಮನೆಗೆ ಹೋಗುತ್ತಿದ್ದೆ!
ಯುದ್ಧ ಮತ್ತು ಪ್ರೇಮದಲ್ಲಿ ಬಹಳ ವ್ಯತ್ಯಾಸವಿದೆ ಕೃಷ್ಣ
ಯುದ್ಧದಲ್ಲಿನ ಗೆಲುವು ನಾಶದ ಮೂಲಕ
ಪ್ರೇಮದಲ್ಲಿನ ಗೆಲುವು ಸೃಷ್ಠಿಯ ಮೂಲಕ.
ಕೃಷ್ಣ, ಪ್ರೇಮದಲ್ಲಿ ಮುಳುಗಿರುವವನು ದುಃಖವನ್ನು ಅನುಭವಿಸಬಹುದು
ಆದರೆ ಆತ ಇತರರಿಗೆ ದುಃಖವನ್ನು ನೀಡಲಾರ !
ಕೃಷ್ಣಾ, ನೀನೊಬ್ಬ ಸಮರ್ಥ ಕಲಾವಿದ, ಅದ್ಭುತ ದೂರದರ್ಶಿತ್ವ ನಿನ್ನದು
ಗೀತೆಯಂತಹ ಮಹಾ ಗ್ರಂಥವನ್ನು ಜಗತ್ತಿಗೆ ಕೊಟ್ಟವನು ನೀನು.
ಆದರೆ ನಿನ್ನ ಮುರಲಿಗಾನವನ್ನು ಬಿಟ್ಟು ನೀನು ಕೈಯಲ್ಲಿ ಸುದರ್ಶನವನ್ನು ಹಿಡಿದ ಮೇಲೆ
ಏನಾಯಿತು ಬಲ್ಲೆಯಾ…?
ನೀನು, ನಿನ್ನ ಸೇನೆಯನ್ನೆಲ್ಲ ಕೌರವರಿಗೆ ಕೊಟ್ಟೆ,ನೀನು ಪಾಂಡವರ ಪರವಾಗಿ ನಿಂತೆ!
ನೀನು ಅರ್ಜುನನ ರಥಕ್ಕೆ ಸಾರಥಿಯಾದೆ, ಅವನು ನಿರ್ದಯವಾಗಿ ನಿನ್ನ ಪ್ರಜೆಗಳನ್ನೇ ನಾಶ ಮಾಡಿದ.
ಉಭಯ ಸೇನೆಗಳಲ್ಲಿದ್ದ ಪ್ರಜೆಗಳೆಲ್ಲ ನಿನ್ನ ಸೃಷ್ಟಿಯೇ,ಅವರನ್ನು ನಿರ್ದಯನಾಗಿ ಕೊಲ್ಲಿಸಿದೆ.
ನೀನು ಪಾಲಕನಾಗಬೇಕಾಗಿತ್ತು, ರಕ್ಷಕನಾಗಬೇಕಾಗಿತ್ತು.
ಇಷ್ಟಾದರೂ ನಿನ್ನಲ್ಲಿ ಕರುಣೆ ಹುಟ್ಟಲಿಲ್ಲ
ಯಾಕೆಂದರೆ ನೀನು ನಿನ್ನ ಸಹಜ ಗುಣವಾದ ಪ್ರೇಮವನ್ನು ತ್ಯಜಿಸಿದ್ದೆ.

ಇಂದು ಕೂಡ ಭೂಲೋಕದ ಮನೆ ಮನೆಗೆ ಹೋಗಿ ನೋಡು
ಇಂದು ಜನರು ಪೂಜಿಸುವುದು
ಕೈಯಲ್ಲಿ ಸುದರ್ಶನ ಹಿಡಿದ ಕೃಷ್ಣನನ್ನಲ್ಲ,
ರಥದ ಮೇಲೇ ಸಾರಥಿಯಾಗಿರುವ ಕೃಷ್ಣನನ್ನಲ್ಲ,
ಮಂದಿರಗಳಲ್ಲಿ, ದೇಗುಲಗಳಲ್ಲಿ ರಾಧೆಯೊಡನಿರುವ ಕೃಷ್ಣನನ್ನು,
ರಾಧಾಕೃಷ್ಣನನ್ನು.

ನೀನು ರಚಿಸಿದ ಗೀತೆಯ ಕುರಿತು
ಜ್ಞಾನಿಗಳು ಉಪನ್ಯಾಸ, ಪ್ರವಚನಗಳನ್ನು ನೀಡುತ್ತಾರೆ.
ಜನರು ಇಂದಿಗೂ ನಿನ್ನನ್ನು
ಸ್ಮರಿಸುವುದು ‘ಗೀತಾಚಾರ್ಯನೆಂದು’
ದ್ವಾರಕಾಧೀಶನೆಂದಲ್ಲ!
ಗೀತೆಯಲ್ಲೆಲ್ಲೂ ನನ್ನ ಹೆಸರಿಲ್ಲ ಕೃಷ್ಣ
ಆದರೆ ಗೀತಾ ಪಠಣದ ಕೊನೆಯಲ್ಲಿ
ಎಲ್ಲರ ಬಾಯಲ್ಲೂ ಒಂದೇ ಮಾತು
ರಾಧೇ ಕೃಷ್ಣ… ರಾಧೇ ಕೃಷ್ಣ ಎಂದು.

Radha Krishna

(ಹಿಂದಿ ಲೇಖನವೊಂದರ ಭಾಷಾಂತರ)

Leave a Reply