ಪಂಢರಪುರ ಯಾತ್ರೆಗೆ ಹೋಗೋಣ ಬನ್ನಿ

ಪಂಢರಪುರ ಯಾತ್ರೆಗೆ ಹೋಗೋಣ ಬನ್ನಿ

ಜು.27 ಆಷಾಢ ಶುದ್ಧ ಏಕಾದಶಿ. ಭಗವಂತ ಯೋಗನಿದ್ರೆ ಆರಂಭಿಸುವ ಈ ಪವಿತ್ರ ದಿನದಂದು ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಆಗಮಿಸಿ ವಿಠ್ಠಲನ ದರ್ಶನ ಪಡೆಯುತ್ತಾರೆ. ಇಲ್ಲಿದೆ ಅವರ ಬಗ್ಗೆ ವಿಸ್ತೃತ ಲೇಖನ.

ಧಾವಾ ಧಾವಾ ಅತಾ ಪಂಢರಿ ವಿಸಾವ (ಓಡಿ ಓಡಿ ವಿಠ್ಠಲ ದರ್ಶನ ನೀಡಲು ನಿಂತಿದ್ದಾನೆ)….
ಆಷಾಢ ಮಾಸ ಆರಂಭವಾಗುತ್ತಿದ್ದಂತೆ ಪಂಢರಪುರ ವಿಠ್ಠಲನ ಭಕ್ತರ ಮನದಲ್ಲಿ ಈ ಅಭಂಗ (ಮರಾಠಿ ಭಕ್ತಿಗೀತೆ)ದ ಸಾಲು ಅನುರಣಿಸುತ್ತದೆ.

ಲಕ್ಷಾಂತರ ಜನ ತಮ್ಮ ಮನೆಗಳಿಂದ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಾರೆ. ಕೀರ್ತನೆ, ಭಜನೆಗಳಲ್ಲಿ ತಣಿಯುತ್ತಾರೆ. ನಾವೆಲ್ಲ ಒಂದು ಎಂದು ಬೆರೆಯುತ್ತಾರೆ. ಆಷಾಢ ಶುದ್ಧ ಏಕಾದಶಿ ವಿಠ್ಠಲ ದರ್ಶನ ಪಡೆದು ನಡಿಗೆಯ ನೋವನ್ನೇ ಮರೆಯುತ್ತಾರೆ. ಇದು ನಡಿಗೆ ಹಾಗೂ ನಾದೋಪಾಸನೆಗೆ ಇರುವ ಅದ್ಭುತ ಶಕ್ತಿ.

ತೀರ್ಥ ಕ್ಷೇತ್ರಗಳಿಗೆ ಕಾಲ್ನಡಿಗೆ ಮೂಲಕ ತೆರಳುವುದು ಒಂದು ದಿವ್ಯ ಅನುಭವ. ಈ ಸಂಪ್ರದಾಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇದರಲ್ಲಿ ಪಂಢರಪುರಕ್ಕೆ ತೆರಳುವವರ ಸಂಖ್ಯೆ ಅಧಿಕ.

ನಾಮಸಂಕೀರ್ತನೆ ಸುಖದಲ್ಲಿ ನಡೆಯುವ ಇವರು ಜಾತಿ, ಜನಾಂಗದ ನಡುವಿನ ಭೇದ ಮರೆಯುತ್ತಾರೆ. ಬದುಕಿನುದ್ದಕ್ಕೂ ತ್ಯಾಗ, ಕ್ಷಮೆ, ಅನುಕಂಪ, ಶಾಂತಿ, ಅಹಿಂಸೆ, ಪ್ರೀತಿ, ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸರಳ ಜೀವನ ನಡೆಸುತ್ತಾರೆ. ಸಿಟ್ಟು ಗೆದ್ದು ಸಮಾಜಮುಖಿ ಬದುಕು ನಡೆಸುತ್ತಾರೆ. ದುಶ್ಚಟಗಳಿಂದ ದೂರವಿದ್ದು, ಶಾಖಾಹಾರಿಗಳಾಗಿ ತುಳಸಿ ಮಾಲೆ ಧರಿಸುತ್ತಾರೆ. ಏಕಾದಶಿ ಉಪವಾಸ ವ್ರತ ಆಚರಿಸುತ್ತಾರೆ. ಹರಿಪಥ ಓದಿ, ಭಜನೆ ಕೀರ್ತನೆಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಬಿಂಬದಲ್ಲಿ ಭಗವಂತನ ಸ್ವರೂಪ ಕಂಡು ಸಂತೃಪ್ತಿ ಪಡುವ ಇವರಿಗೆ ಉಳಿದ ಭೋಗ ವಿಷಯಗಳು ಗೌಣವಾಗುತ್ತವೆ. ಇದು ಪಾದಯಾತ್ರೆ, ಉಪವಾಸದಿಂದ ಕಲಿಯಬಹುದಾದ ಪಾಠ.

ಇನ್ನು ತಿರುಪತಿ ತಿಮ್ಮಪ್ಪ, ಶ್ರೀಶೈಲ ಮಲ್ಲಿಕಾರ್ಜುನ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಹೀಗೆ ನಾನಾ ಕ್ಷೇತ್ರಗಳಿಗೆ ತೆರಳುವ ಭಕ್ತರೂ ಒಂದು ಸರಳ, ಸಾತ್ವಿಕ ಚೌಕಟ್ಟು ರೂಪಿಸಿಕೊಂಡು ಬದುಕು ನಡೆಸುತ್ತಿರುತ್ತಾರೆ. ಸತ್ಯ ಶೋಧನೆಯ ತುಡಿತದಲ್ಲಿರುವ ಇವರ ಅಂತರ್ಯಾನ ಇತರರಿಗಿಂತ ಭಿನ್ನವಾಗಿರುತ್ತದೆ.

ಭಕ್ತಿಯ ನಡಿಗೆ ಅಂತರಂಗ ಶೋಧನೆಗೆ ಸಾಧಕ, ಏಕತೆ ಭಾವನೆ ಮೂಡಿಸಲು ಪ್ರೇರಕ ಹಾಗೂ ಶರೀರ, ಮನಸ್ಸಿನ ಶುದ್ಧಿಗೆ ಪೂರಕ ಎಂಬುದು ಅವರ ಅನುಭವಕ್ಕೆ ಬಂದಿರುತ್ತದೆ. ಇದು ನಡಿಗೆಗೆ ಇರುವ ದಿವ್ಯ ಶಕ್ತಿ.

ವಾರಕರಿ ಸಂಪ್ರದಾಯ…
ಪಂಢರಪುರದಲ್ಲಿ ಆಷಾಢ, ಶ್ರಾವಣ, ಕಾರ್ತಿಕ ಹಾಗೂ ಮಾಘ ಮಾಸಗಳಲ್ಲಿ ಬೃಹತ್ ಉತ್ಸವ ನಡೆಯುತ್ತವೆ. ಈ ಸಂದರ್ಭದಲ್ಲಿ ಭಕ್ತರು ಕಾಲ್ನಡಿಗೆಯಿಂದ ಇಲ್ಲಿಗೆ ಆಗಮಿಸುತ್ತಾರೆ. ವಿಶೇಷವಾಗಿ ಆಷಾಢ ಶುದ್ಧ ಏಕಾದಶಿಗೆ ಹೆಚ್ಚು ಭಕ್ತರು ಆಗಮಿಸುತ್ತಾರೆ. ಈ ಯಾತ್ರೆಗೆ 13ನೇ ಶತಮಾನದಷ್ಟು ಹಳೆಯ ಇತಿಹಾಸವಿದೆ. ಇದನ್ನು ವಾರಕರಿ ಸಂಪ್ರದಾಯ ಎನ್ನುತ್ತಾರೆ. ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ ಈ ಸಂಪ್ರದಾಯದಲ್ಲಿ ಬಂದ ಪ್ರಮುಖರು. ಮುಂದೆ ಅಂದಾಜು 500 ವರ್ಷಗಳಿಂದ 50 ಜನ ಪ್ರಮುಖ ಸಂತರು ಆಗಿ ಹೋಗಿದ್ದಾರೆ ಎಂದು 18ನೇ ಶತಮಾನದಲ್ಲಿ ದಾಖಲಿಸಲಾಗಿದೆ. ಇವರ ಹೆಸರಿನ ವಾರಕರಿಗಳು ಇಂದಿಗೂ ಪಂಢರಪುರಕ್ಕೆ ಪಲ್ಲಕ್ಕಿಗಳನ್ನು ಹೊತ್ತು ಆಗಮಿಸುತ್ತವೆ.

ತುಕಾರಾಮ ಅವರ ಮಗ ನಾರಾಯಣ ಮಹಾರಾಜರು 1685ರಿಂದ ಈ ಪಲ್ಲಕ್ಕಿಗಳಲ್ಲಿ ಸಂತರ ಪಾದುಕೆ ಕೊಂಡೊಯ್ಯುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. 1820ರಲ್ಲಿ ಹೈಬತ್ ಬಾಬಾ ಎಂಬ ಮುಸ್ಲಿಂ ಸಮುದಾಯದ ಸಂತ ಈ ವಾರಕರಿ ಸಂಪ್ರದಾಯಕ್ಕೆ ಹೊಸರೂಪ ನೀಡಿದರು.

ಇನ್ನು ವಾರಕರಿ ಸಂಪ್ರದಾಯದಲ್ಲಿ ಕಂಡುಬರುವ ಎರಡು ಪ್ರಮುಖ ಆಚರಣೆಗಳೆಂದರೆ ರಿಂಗಣ ಮತ್ತು ಧಾವಾ. ಪಂಢರಪುರದಿಂದ 14 ಕಿ.ಮೀ.ದೂರದಲ್ಲಿರುವ ಬಂಡಿಸೇಗಾಂವ ಗ್ರಾಮದಲ್ಲಿ ಭಕ್ತರು ಒಂದು ವೃತ್ತ ನಿರ್ಮಿಸಿ ಮಧ್ಯೆ ಒಂದು ಕುದುರೆಯ ಮೇಲೆ ಸಂತರ ಪಾದುಕೆಗಳನ್ನಿಟ್ಟು ವೃತ್ತಾಕಾರದಲ್ಲಿ ಓಡುವ ಕುದುರೆ ಹಿಂದೆ ಸಾಗುತ್ತಾರೆ. ಕುದುರೆ ಓಡುವಾಗ ಅದರ ಕಾಲಿನಿಂದ ಬರುವ ಧೂಳನ್ನು ನೊಸಲಿಗೆ ಹಚ್ಚಿಕೊಳ್ಳುತ್ತಾರೆ. ಇದು ಸಂತರ ಪಾದದ ಧೂಳು ಎಂಬುದು ನಂಬಿಕೆ. ಇದನ್ನೇ ರಿಂಗಣ ಎನ್ನುತ್ತಾರೆ.

ಇನ್ನು ಪಂಢರಪುರ 25 ಕಿ.ಮೀ.ಇರುವಂತೆ ಅಂದರೆ ಬೋಂಡ್ಲೆ ಗ್ರಾಮದಿಂದ ಪಾದಯಾತ್ರೆ ವೇಗ ಹೆಚ್ಚುತ್ತದೆ. ದೇವರು ದರ್ಶನ ನೀಡಲು ನಿಂತಿದ್ದಾನೆ ಎಂದು ಭಕ್ತಿಯ ಉನ್ಮಾದದಲ್ಲಿ ಜನ ಓಡುತ್ತ ಬಂದು ವಿಠ್ಠಲನ ದರ್ಶನ ಪಡೆಯುತ್ತಾರೆ. ಇದನ್ನು ಧಾವಾ ಎನ್ನುತ್ತಾರೆ. ಹೀಗೆ ಓಡುತ್ತ ಬಂದು ಮೊದಲು ಪಂಢರಪುರ ತಲುಪುವ ವಾರಕರಿ ತಂಡದ ಮುಖ್ಯಸ್ಥರನ್ನು ಆಷಾಢ ಶುದ್ಧ ಏಕಾದಶಿ ದಿನ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಸಲ್ಲಿಸುವ ವಿಶೇಷ ಪೂಜೆ ಸಂದರ್ಭದಲ್ಲಿ ದರ್ಶನಕ್ಕೆ ಬಿಡಲಾಗುತ್ತದೆ. ಈ ಸಂಪ್ರದಾಯ 1996ರಿಂದ ನಡೆದುಕೊಂಡು ಬಂದಿದೆ.

ಪ್ರಸಿದ್ಧ ಪಲ್ಲಕ್ಕಿ…
ಪಂಢರಪುರಕ್ಕೆ ಪಲ್ಲಕ್ಕಿ ಹೊತ್ತು ಪಾದಯಾತ್ರೆ ಮೂಲಕ ಬರುವುದು ಸಂಪ್ರದಾಯ. ಅಳಂದದಿಂದ ಜ್ಞಾನೇಶ್ವರ ಮಹಾರಾಜ ಭಕ್ತರು, ದೇಹುದಿಂದ ತುಕಾರಾಮರ ಭಕ್ತರು, ಪೈಠಣದಿಂದ ಏಕನಾಥರ ಭಕ್ತರು, ತ್ರಯಂಬಕೇಶ್ವರದಿಂದ ನಿವೃತ್ತಿನಾಥರ ಭಕ್ತರು, ಮುಕ್ತಿನಗರದಿಂದ ಮುಕ್ತಾಬಾಯಿ ಭಕ್ತರು, ಶೇಗಾಂವದಿಂದ ಗಜಾನನ ಮಹಾರಾಜರ ಭಕ್ತರು, ಸಾಸವಾಡದಿಂದ ಸೋಪಾನ ಮಹಾರಾಜರ ಭಕ್ತರು ಪಲ್ಲಕ್ಕಿ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಪ್ರಸ್ತುತ ನಾನಾ ಸ್ಥಳಗಳಿಂದ ಅಂದಾಜು 40 ಪಲ್ಲಕ್ಕಿಗಳು ಉತ್ಸವ ಸಂದರ್ಭದಲ್ಲಿ ಪಂಢರಪುರಕ್ಕೆ ಆಗಮಿಸುತ್ತವೆ.

ಏಕಾದಶಿ ಮಹತ್ವ…
ಪ್ರತಿ ತಿಂಗಳ ಶುಕ್ಲ ಹಾಗೂ ಕೃಷ್ಣ ಪಕ್ಷಗಳ ಹನ್ನೊಂದನೇ (ಏಕಾದಶಿ) ದಿನ ವಿಶೇಷ ಮಹತ್ವ ಪಡೆದಿದೆ. ಈ ದಿನ ಆಹಾರವನ್ನು ತ್ಯಜಿಸಿ ದೇವರ ಧ್ಯಾನದಲ್ಲಿ ತೊಡಗಿದರೆ ವಿಶೇಷ ಫಲ ದೊರೆಯುತ್ತದೆ ಎಂಬುದು ನಿಯಮ. ಅದರಲ್ಲಿ ಆಷಾಢ ಶುದ್ಧ ಏಕಾದಶಿಗೆ ವಿಶೇಷ ಮಹತ್ವವಿದೆ. ಇದನ್ನು ಶಯನಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಭಗವಂತ ಈ ದಿನ ಯೋಗ ನಿದ್ರೆಗೆ ಜಾರುತ್ತಾನೆ. ಮುಂದೆ ಭಾದ್ರಪದ ಶುದ್ಧ ಏಕಾದಶಿ (ಇದನ್ನು ಪರಿವರ್ತನಿ ಏಕಾದಶಿ ಎಂದೂ ಕರೆಯುತ್ತಾರೆ) ದಿನ ದೇವರು ಮಗ್ಗಲು ಬದಲಿಸುತ್ತಾನೆ. ಕಾರ್ತಿಕ ಶುದ್ಧ ಏಕಾದಶಿ ಮರುದಿನ (ಉತ್ಥಾನ ದ್ವಾದಶಿ) ಭಗವಂತ ಯೋಗನಿದ್ರೆಗೆ ಮಂಗಲ ಹಾಡುತ್ತಾನೆ ಎಂಬುದು ಪುರಾಣಗಳಿಂದ ತಿಳಿದುಬರುತ್ತದೆ.

ಭವಿಷ್ಯೋತ್ತರ ಪುರಾಣದಲ್ಲಿ ಶ್ರೀಕೃಷ್ಣ ಧರ್ಮರಾಜನಿಗೆ ಆಷಾಢ ಶುದ್ಧ ಏಕಾದಶಿ ಮಹತ್ವ ತಿಳಿಸಿದ್ದಾನೆ. ಬ್ರಹ್ಮದೇವರು ಕೂಡ ನಾರದರಿಗೆ ಇದರ ಬಗ್ಗೆ ಹೇಳಿದ್ದಾರೆ. ಮಾಂಧಾತ ರಾಜನ ಕಾಲದಲ್ಲಿ ಮೂರು ವರ್ಷ ಬರಗಾಲ ಉಂಟಾಗಿ ತೊಂದರೆಯಾಗಿತ್ತು. ಆಗ ಆಂಗೀರಸ ಋಷಿಗಳ ಸಲಹೆಯಂತೆ ಆಷಾಢ ಶುದ್ಧ ಏಕಾದಶಿ ದಿನ ಮಾಂಧಾತ ಉಪವಾಸ ವ್ರತ ಕೈಗೊಂಡಾಗ ರಾಜ್ಯದಲ್ಲಿ ಸುಭಿಕ್ಷೆ ಉಂಟಾಯಿತು ಎಂದು ಪುರಾಣಗಳಿಂದ ತಿಳಿದು ಬರುತ್ತದೆ.
—————-
              -ಸಚಿನ್ ಕೆ.ದೇಸಾಯಿ, ಬಾಗಲಕೋಟ

Leave a Reply