ಹಬ್ಬದ ಹುರುಪಿಗೆ ಸೀರೆಯ ಒನಪು

ಹಬ್ಬವೆಂದು ಸಾಂಪ್ರದಾಯಿಕ ಉಡುಗೆಗಳನ್ನೇ ಹಾಕಬೇಕೆಂದಿಲ್ಲ ಈಗ. ಹಬ್ಬಗಳೆಲ್ಲ ಬದಲಾಗುತ್ತಲೇ ಇವೆ ಕಾಲದೊಂದಿಗೆ. ಹಾಗೇ ಹಬ್ಬಕ್ಕೆ ಕೊಳ್ಳುವ ಉಡುಗೆಗಳೂ. ಸದ್ಯದ ಫ್ಯಾಷನ್‌ನ ಯಾವ ಡ್ರೆಸ್ಸಾದರೂ ನಡೆದೀತು. ಹಾಗೆಂದು ರೇಷ್ಮೆ ಸೀರೆಗಳ ಸಡಗರ ಕಡಿಮೆಯಾಯಿತೆ? ಯುಗಾದಿಗೆಂದೇ ಭಾರೀ ರಿಯಾಯಿತಿ ಮಾರಾಟ ಏರ್ಪಡಿಸುವ ಸೀರೆ ಅಂಗಡಿಗಳನ್ನು ನೋಡಿದರೆ ಹಾಗೆನಿಸುವುದಿಲ್ಲ…

ಹಬ್ಬವೆಂದರೆ ಹಬ್ಬದೂಟ, ವಿಶೇಷ ಪೂಜೆ, ಹೊಸ ಬಟ್ಟೆ…ಇದರೊಂದಿಗೆ ಉಕ್ಕುವ ಹೊಸ ಹುರುಪು…ಹಬ್ಬವೆಂದರೆ ಒಟ್ಟಾರೆ ಖುಷಿ.
ಯುಗಾದಿಯಂದು ಹೊಸ ವರ್ಷವನ್ನು ಸ್ವಾಗತಿಸಲು ಹೊಸ ಬಟ್ಟೆ ಧರಿಸಿ ಚಂದ್ರನ್ನ ನೋಡೋದು ವಾಡಿಕೆ…ಹೊಸ ನಿರೀಕ್ಷೆಯೊಂದಿಗೆ. ಹಬ್ಬವೆಂದು ಸಾಂಪ್ರದಾಯಿಕ ಉಡುಗೆಗಳನ್ನೇ ಹಾಕಬೇಕೆಂದಿಲ್ಲ ಈಗ. ಹಬ್ಬಗಳೆಲ್ಲ ಬದಲಾಗುತ್ತಲೇ ಇವೆ ಕಾಲದೊಂದಿಗೆ. ಹಾಗೇ ಹಬ್ಬಕ್ಕೆ ಕೊಳ್ಳುವ ಉಡುಗೆಗಳೂ. ಸದ್ಯದ ಫ್ಯಾಷನ್‌ನ ಯಾವ ಡ್ರೆಸ್ಸಾದರೂ ನಡೆದೀತು. ಹಾಗೆಂದು ರೇಷ್ಮೆ ಸೀರೆಗಳ ಸಡಗರ ಕಡಿಮೆಯಾಯಿತೆ? ಯುಗಾದಿಗೆಂದೇ ಭಾರೀ ರಿಯಾಯಿತಿ ಮಾರಾಟ ಏರ್ಪಡಿಸುವ ಸೀರೆ ಅಂಗಡಿಗಳನ್ನು ನೋಡಿದರೆ ಹಾಗೆನಿಸುವುದಿಲ್ಲ. ವರ್ಷವಿಡೀ ಇದನ್ನೇ ಕಾಯುತ್ತಿದ್ದವರಂತೆ ಸೇಲ್‌ ದಿನಾಂಕ ಪ್ರಕಟವಾಗುವುದೇ ತಡ ಸಾಲು ಅಂಗಡಿಗಳಿಗೆ ದಾಳಿಯಿಡುವ, ಪೈಪೋಟಿಯಲ್ಲಿ ಸೀರೆ ಕೊಳ್ಳುವ ಮಹಿಳೆಯರನ್ನು ನೋಡಿದರೆ ಸೀರೆ ಇನ್ನೂ ಚಾಲ್ತಿಯಲ್ಲಿದೆ; ಎಂದೂ ಔಟ್‌ ಆಫ್‌ ಫ್ಯಾಷನ್‌ ಆಗುವುದಿಲ್ಲ ಎಂಬ ಭರವಸೆ ಮೂಡುತ್ತದೆ.
ಉಳಿದೆಲ್ಲ ಡ್ರೆಸ್‌ಗಳಂತಲ್ಲ ಸೀರೆ. ಅದರಲ್ಲೂ ಅಪರೂಪಕ್ಕೆ ಸೀರೆಯುಡುವ ಇಂದಿನವರಿಗೆಲ್ಲ ಸೀರೆ ಉಡುವುದೆಂದರೆ ಅದು ಖಂಡಿತ ವಿಶೇಷ ದಿನ. ಪ್ಯಾಂಟ್‌– ಟಾಪ್‌ ಹಾಕಿದಾಗ ಸಿಗುವ ಆತ್ಮವಿಶ್ವಾಸ, ಸ್ಕರ್ಟ್‌ ತೊಟ್ಟಾಗ ಆಪ್ತವಾಗುವ ತಾನು ಹುಡುಗಿ ಎಂಬ ಭಾವ; ಚೂಡಿದಾರ್‌ ಹಾಕಿಕೊಂಡಾಗ ಸಿಗುವ ಒಂಥರ ಪ್ರೌಢ ಕಳೆಗಳೆಲ್ಲವೂ ಸೀರೆಯೊಂದರಲ್ಲೇ ಸಿಕ್ಕುಬಿಡುತ್ತವೆ. ಜೊತೆಗೆ ಉಳಿದ ಡ್ರೆಸ್‌ಗಳಂತೆ ಫಿಟಿಂಗ್‌ ಸಮಸ್ಯೆ ಕಾಡುವುದಿಲ್ಲ. ಸ್ವಲ್ಪ ಹೆಚ್ಚು ಕಮ್ಮಿಯಾದ ತೂಕವೂ ಪ್ಯಾಂಟ್‌ ಹಾಕಲು ಹಿಂಜರಿಯುವಂತೆ ಮಾಡುತ್ತದೆ. ಫಿಗರ್‌ ಹಗ್ಗಿಂಗ್‌ ಚೂಡಿದಾರ್‌, ಬಾಡಿ ಫಿಟ್ಟಿಂಗ್‌ ಸಲ್ವಾರ್‌ ಟಾಪ್‌ಗಳೆಲ್ಲವೂ ಇದೇ ಫ್ಯಾಷನ್‌ ಬದಲಾಗುವ ವೈಚಿತ್ರ್ಯವನ್ನು ಕಣ್ಣರಳಿಸಿ ನೋಡುವಂತೆ ಮಾಡುತ್ತವೆ. ಇದ್ದುದನ್ನು ಇದ್ದಂತೇ ಇದ್ದಷ್ಟೇ ಮೈಮಾಟ ತೋರುವ ಸ್ಕರ್ಟ್‌ ಕೂಡ ಹುಡುಗಿಯರಿಗೆ ಅಪ್ಯಾಯಮಾನವಾದ ದಿರಿಸು. ಆದರೆ ಸೀರೆ ಉಟ್ಟರೆ?
ಮೊದಲ ನಿರಿಗೆಯಿಂದಲೇ ಶುರು…ಉಟ್ಟ ನಂತರ ಹೇಗೆ ಕಾಣಬಹುದು? ಗೆಳತಿಯರೆಲ್ಲ ಮೆಚ್ಚಬಹುದೆ ಈ ಬಣ್ಣವನ್ನು? ಕೇಳಿದರೆ ಅಮ್ಮ ಕೊಟ್ಟ ಸೀರೆ ಎಂದರೆ ಅದಕ್ಕೇ ಇಷ್ಟು ಚೆಂದಾಗಿದೆ ಅಂತಾರೇನೋ ಎಂದೆಲ್ಲ ಊಹಿಸುತ್ತ ಅಮ್ಮನ ನೆನಪಲ್ಲೇಒಂದೆರಡು ಬಾರಿಯಾದರೂ ಬಿಚ್ಚಿ ಮತ್ತೆ ಉಟ್ಟು ಕನ್ನಡಿ ನೋಡಿದಾಗ..ಏನಾಶ್ಚರ್ಯ ಇದು ನಾನೆ? ಎಲ್ಲಿಂದ ಬಂದಿತೀ ಕೆಂಪು ಬಣ್ಣ ಕೆನ್ನೆ ಮೇಲೆ! ಕೆಂಪು ಸೀರೆಯಂಚು ಪ್ರತಿಫಲಿಸಿತೆ? ಅಲ್ಲಿರುವ ಮಿಂಚು ಕಣ್ಣಿನೊಳ ಹೊಕ್ಕಿತೆ? ಯಾವುದೂ ಅಲ್ಲ..ಅದು ಅವನ ನೆನಪಿನ ಮೋಡಿ..ಛೆ ಸೀರೆಯುಟ್ಟರೆ ಸಾಕು ನೆನಪಾಗುತ್ತಾನೆ.
ಒಂದ್ಸಲ ಈಗ ನನ್ನ ನೋಡಿದರೆ? ಪ್ರತಿಕ್ರಿಯೆ ಏನಿರಬಹುದು? ತಕ್ಷಣ ಜಾಗೃತವಾಗುವ ಆ ಹೆಣ್ತನಕ್ಕೆ ‘ಅವನ’ ಪ್ರತಿಕ್ರಿಯೆ ಮುಖ್ಯವಾಗಿಬಿಡುತ್ತದೆ. ಛೆ, ಅವ ಹತ್ತಿರವಿಲ್ಲದಾಗಲಂತೂ ಸೀರೆಯುಡುವುದೇ ಬೇಡವೆನಿಸುತ್ತದೆ. ಅದು ಅವಳಿಗೆ ‘ಹತ್ತಿರದ’ ಗಂಡು ಮನಸ್ಸು! ನುಗ್ಗಿ ಬರುವ ಅವನ ನೆನಪುಗಳನ್ನೆಲ್ಲ ಮನಸ್ಸಿನಲ್ಲಿ ಕಟ್ಟಿ, ಸೆರಗಿನಿಂದ ಮುಚ್ಚಿ ನಡೆದರಾಯಿತು…ಸೀರೆಯುಟ್ಟ ಸಮಯ ಅದಾವ ಭಾವ ಹಿಡಿದಿಡುತ್ತದೆ ಇಬ್ಬರನ್ನೂ? ದಿನವೂ ನೋಡುವ ಅವಳನ್ನು ಅಪರೂಪಕ್ಕೆ ಸೀರೆಯಲ್ಲಿ ಕಂಡರೆ ಅವನಿಗೇನನಿಸುತ್ತದೆ? ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲೇಕೆ ಮನಸೆಳೆಯುತ್ತಾಳೆ ಅವಳು? ‘ಅವನು’ ಹೇಳಿದ್ದು –ಅವನೆಂದೂ ದೇವತೆಗಳ ಚಿತ್ರಗಳನ್ನು ಸೀರೆ ಬಿಟ್ಟರೆ ಬೇರೆ ಬಟ್ಟೆಯಲ್ಲಿ ನೋಡಿಲ್ಲ. ಅಮ್ಮನನ್ನಂತೂ ಬೇರೆ ಡ್ರೆಸ್‌ನಲ್ಲಿ ಕಲ್ಪಿಸಿಕೊಳ್ಳಲೂ ಮುಜುಗರ. ಸೀರೆ ಎಂದರೆ ಬಹುಶಃ ತಾಯಿಯ ನೆನಪಾಗುತ್ತದೇನೊ. ಸೀರೆ ಸ್ತ್ರೀ ಚೆಲುವನ್ನು ಹೆಚ್ಚಿಸುತ್ತದೆ ಎನ್ನುತ್ತಾನೆ ಇವ.
ಅದಕ್ಕೇ ಗೊಂಬೆಗೆ ಉಡಿಸಿದ ಸೀರೆಗಿಂತ ಅವಳುಟ್ಟ ಸೀರೆಯೇ ಚೆಂದ. ನೋಡುವ ಕಣ್ಣಿನಲ್ಲಷ್ಟೇ ಸೌಂದರ್ಯ ಇರದೇ ಮನದಲ್ಲಿ ಮೂಡುವ ಆ ಬಿಂಬದಲ್ಲೇನೊ ಸುಂದರ ನೆನಪಿರುತ್ತದೆ. ಕಣ್ಣರಳುತ್ತದೆ. ಸೀರೆಯಷ್ಟೇ ಮೃದು ಮನದವಳೆನಿಸಿ ಆಪ್ತವಾಗುವ ಅವಳು ಮತ್ತೆ ಮತ್ತೆ ಸೀರೆಯುಡಲಿ ಎಂದು ಮನ ಬಯಸುತ್ತದೆ. ಸೀರೆಯುಟ್ಟರೆ ಸಾಕು ಸ್ತ್ರೀ ಸಹಜ ಭಾವನೆಗಳೂ, ನಡೆನುಡಿಯಲ್ಲಿ ನಯ, ನಾಜೂಕು, ಸಹಜ ಲಾಸ್ಯವೂ ಅವಳಲ್ಲಿ ಬೆರೆತುಬಿಡುತ್ತದೆ. ನೋಡಿದ ಅವನಲ್ಲಿ ಕೋಮಲ ಭಾವನೆಗಳೂ, ಭಾವೋದ್ರೇಕವೂ, ಸಹಜವಾಗೇ ಪುರುಷಭಾವನೆಯೂ ಜಾಗೃತವಾಗುತ್ತದೆ. ಸೀರೆಯ ನಿರಿಗೆ ಚಿಮ್ಮುವ ಮನೆಯಲ್ಲೂ ಸಂಭ್ರಮ , ಸಡಗರದ ಸರಭರ. ಈ ಸಂಭ್ರಮಕ್ಕೆ ಹಬ್ಬವನ್ನೇ ಕಾಯಬೇಕಿಲ್ಲ. ಎಂದೊ ಉಟ್ಟರೂ ಮಕ್ಕಳಿಗೆ ಅಮ್ಮನನ್ನು ತಬ್ಬುವಾಸೆ. ಅವಳ ಸೀರೆಯಂಚಿನೊಡನೆ ಆಟವಾಡುತ್ತ ಮರೆಯಲ್ಲಿ ಅಡಗುವಾಸೆ. ಒಣಹಾಕಿದ ಅಮ್ಮನ ಸೀರೆಯೂ ಅಮ್ಮನಿಲ್ಲದ ಸಮಯದಲ್ಲಿ ಅವಳೇ ಸನಿಹವಿರುವ ಭಾವ ಉಕ್ಕಿಸುವ ಸೋಜಿಗ; ಚಿಕ್ಕಂದಿನಲ್ಲಿ ಅಮ್ಮನಿಲ್ಲದ ಸಮಯದಲ್ಲೆಲ್ಲ ಸೀರೆಗಳನ್ನು ಮಡಚಿದ್ದು, ಎಷ್ಟೋ ಸಲ ಹೇಗೇಗೊ ಉಟ್ಟು ಕನ್ನಡಿ ನೋಡಿದ್ದು ಮರೆತೀತೆ? ಮದುವೆಯಾಗಿ ಅದೆಷ್ಟು ಯುಗಾದಿ, ಅದೆಷ್ಟು ವಸಂತಗಳಲ್ಲಿ ಜರತಾರಿ ಸೀರೆಗಳಲ್ಲಿ ಸಂಭ್ರಮಿಸಿದ್ದರೂ ಅಪ್ಪ ಕೊಡಿಸಿದ ಆ ಮೊದಲ ಕೆಂಪಂಚಿನ ಹಳದಿ ಸಾಫ್ಟ್‌ ಸಿಲ್ಕ್‌ ಸೀರೆ ಇಂದೂ ಮನದಲ್ಲಿ ಆರ್ದ್ರತೆ ಮೂಡಿಸುತ್ತದೆ. ತವರಿನ ನೆನಪಾಗಿ ಕಣ್ಣು ತೇವಗೊಳ್ಳುತ್ತವೆ.
ನವಿರು ಸೀರೆ
ಸಂಭಾಳಿಸುವುದೆ
ಅತ್ತಿತ್ತ ಹೊರಳುವ
ನಿನ್ನ ನೆನಪ ನಿರಿಗೆಗಳನು?

ತಂಗಾಳಿಗೆ ಕಚಗುಳಿ
ಇಡುವ ಸೆರಗು
ಮುಚ್ಚಿಡುವುದೆ
ಹುಚ್ಚೆದ್ದ ಭಾವಗಳನು?

ಯಾಕೀ ತೊಳಲಾಟ? ಛೆ, ಇಷ್ಟೆಲ್ಲ ತಯಾರಾದ ಮೇಲೆ ತನ್ನವ ನೋಡಬಾರದೆ? ಎಲ್ಲರೂ ಮೆಚ್ಚಬಾರದೆ?

ಉಟ್ಟಾಗ್ಲೆಲ್ಲ ಮೆತ್ತನ್ನ ಸೀರೆ
ನೆನಪಾಗ್ತಾನೆ ಅವನು ಬೇರೆ

ಅಮ್ಮ ನೋಡಿದ್ದರೆ ಎಷ್ಟು ಸಂತೋಷಪಡುತ್ತಿದ್ದರೋ ಎಂದೆಲ್ಲ ಹಳಹಳಿಸುತ್ತಲೇ ಇರುವ ಮನ ಮತ್ತೆ ಮರುದಿನ ದುಪಟ್ಟಾದ ಮರೆಯಲ್ಲೂ ಅದೇ ಹಿಂದಿನ ದಿನದ ಕಂಪಿಸುವ ಮನದ ಭಾವನೆ, ಕಚಗುಳಿಗಳನ್ನೆಲ್ಲ ನೆನಪಿಸಿ ಸುಖಿಸುತ್ತಲೇ ಇರುತ್ತದೆ. ಮತ್ತೆ ಅದೇ ಸೀರೆಯುಟ್ಟಾಗ ಮೊದಲೊಮ್ಮೆ ಉಟ್ಟಾಗಿನ ನೆನಪುಗಳು ಬೆನ್ನತ್ತಿ ಬರುತ್ತವೆ. ಈಗ ಅವನ ನೆನಪು ಇನ್ನೂ ದಟ್ಟ. ಅವನೇಕೆ ಹತ್ತಿರವಿರಬೇಕೆನಿಸುತ್ತದೊ, ಕನ್ನಡಿಯಲ್ಲಿ ಪಕ್ಕಕ್ಕೆ ತಿರುಗಿ ನೋಡಿದಾಗ ಕಂಡ ನಡುವನ್ನು ಮುಚ್ಚುತ್ತಲೇ ಮತ್ತೆ ನೆನಪಾಗುವನಲ್ಲ!
ಸೀರೆಯ ಮೋಡಿ ಅಂಥದ್ದು. ಎಂಥ ಮೈಕಟ್ಟಿನವರಿಗೂ ಯಾವ ವಯಸ್ಸಿನವರಿಗೂ ಚೆಂದ ಕಾಣುವ ಸೀರೆಯಲ್ಲೇನು ವಿಶೇಷ ಎಂದು ಸೀರೆಯುಟ್ಟವರೂ, ನೋಡುವವರೂ ಯೋಚಿಸದೇ ಇರಲಾರರು.
ಸುಮ್ಮನೇ ಸೀರೆಯೊಂದನ್ನು ನೋಡಿದರೆ ಬಣ್ಣ, ವಿನ್ಯಾಸದ ಆಕರ್ಷಣೆಯ ಹೊರತು ವಿಶೇಷವೇನೂ ಕಾಣಲಿಕ್ಕಿಲ್ಲ. ಆದರೆ ನಂತರ ಅದೇ ಸೀರೆಯನ್ನು ಉಟ್ಟ ಹುಡುಗಿ ಸುಂದರ ಹಾಡಾದಂತೆ ಎನಿಸುವುದಿಲ್ಲವೆ? ಅದು ಸೀರೆಯ ಮೋಡಿಯೊ, ಹುಡುಗಿಯ ಮೋಡಿಯೊ? ಸೀರೆ ಉಟ್ಟಾಗ ಬದಲಾಗುವ ಅವಳ ವ್ಯಕ್ತಿತ್ವ ಮತ್ತು ಸೌಂದರ್ಯದ ಜೋಡಿ! ಒಣಹಾಕಿದ ಸೀರೆಯನ್ನು ನೋಡಿದರೆ ಮಗ್ಗದ ಮೆಲೆ ತಿಂಗಳುಗಟ್ಟಲೆ ಮೈಚೆಲ್ಲಿ ಬಿದ್ದ ಐದಾರು ಅಡಿ ಉದ್ದದ ಬಟ್ಟೆಯ ಮೇಲೆ ಅದೆಷ್ಟು ಸುಂದರ ಕಸೂತಿ, ಚಿತ್ತಾರ, ಬಣ್ಣಗಳು ಒಪ್ಪವಾಗಿ ಕಲೆತು ಮನಸೆಳೆಯುತ್ತಿವೆ ಎನಿಸುತ್ತದೆ.
ಸೀರೆ ಎಂಬ ಸುಂದರ ಕಲ್ಪನೆಯನ್ನು ಸ್ತ್ರೀಯೊಬ್ಬಳು ಹೊದ್ದುಕೊಳ್ಳುವಾಗ ಅವಳಲ್ಲಿ ಮೂಡುವ ಆಸ್ಥೆ, ಪ್ರೀತಿ, ಮೃದು ಭಾವಗಳು ಮೂಡಿಸುವ ಪರಿಣಾಮ ಮಧುರ. ಕಂಪ್ಯೂಟರ್‌ನಲ್ಲಿ, ಮಗ್ಗ ನೇಯುವವರ ಮನದಲ್ಲಿ ಮೂಡುವ ಆಕರ್ಷಕ ವಿನ್ಯಾಸಗಳು ಯಾವ ಕವಿಯ ಕಾವ್ಯವೊ. ಮಗ್ಗಗಳನ್ನೇ ನೆಚ್ಚಿಕೊಂಡ ಹಲವರ ಬದುಕು ಹಾಡಾಗುವುದೂ ಈ ಸೀರೆಗಳಿಗಿರುವ ಬೇಡಿಕೆ ಇನ್ನೂ ಕುಂದಿಲ್ಲದ ಕಾರಣಕ್ಕೆ.
ಕೇಪ್ರಿಸ್‌, ನೂಡಲ್ಸ್‌ ಸ್ಟ್ರ್ಯಾಪ್‌ ಟಾಪ್‌, ಜೀನ್ಸ್‌ ಮತ್ತು ಲಿನೆನ್‌ ಪ್ಯಾಂಟ್‌, ಮೈಮಾಟವನ್ನೇ ಅನುಸರಿಸುವ ಗರ್ಲಿಶ್‌ ಸ್ಕರ್ಟ್‌ಗಳು, ಮದುವೆಯಂಥ ವಿಶೇಷ ಸಂದರ್ಭಗಳಲ್ಲೂ ಪಾರ್ಟಿವೇರ್‌ ಎಂದು ಪ್ರಸಿದ್ಧವಾದ ಲೆಹೆಂಗಾ ಚೋಲಿ, ಗಾಗ್ರಾ, ಚೂಡಿದಾರ್‌, ಕುರ್ತಿಗಳೆಲ್ಲ ಇನ್ನೂ ಕೇಬಲ್‌ ಮೂಲಕ ಹಳ್ಳಿಗಳ ಮನೆಹೊಕ್ಕಿಯೂ ಆಗಿದೆ. ಅಲ್ಲಿ ಮಹಿಳೆಗೆ ಈಗಲೂ ಸೀರೆಯೇ ಹೊರಹೋಗುವಾಗಲೂ ಔಟ್‌ಫಿಟ್‌, ಮನೆಯಲ್ಲೂ ನೈಟಿ,ಕೆಲಸ ಮಾಡುವಾಗ ಕಚ್ಚೆ…ಅವಸರದ ಕೆಲಸಕ್ಕೆ ಸೊಂಟಕ್ಕೆ ಸಿಕ್ಕಿಸಿದ ಸೆರಗು! ಸೀರೆ ಅವಳ ಸಂಭ್ರಮಕ್ಕೆ ಸರಬರದ ನಡಿಗೆ, ಏಕಾಂತದ ಕನಸಿಗೆ ನಿರಿಗೆಯ ಗರಿ, ಏಕಾಂಗಿತನಕ್ಕೆ, ಒದ್ದೆಗಣ್ಣುಗಳನ್ನೆಲ್ಲ ಸವರುವ ಮೆತ್ತನೆ ಸೆರಗಿನ ಆಪ್ತಸಂಗಾತಿ. ತಲೆ ಮೇಲೆ ಹೊದ್ದ ಸೆರಗಿಗೆ ಗೌರವ ಉಚಿತ. ಭುಜ ಬಳಸಿದ ಸೆರಗು ನೋಡಿ ಆಸೆಗಣ್ಣುಗಳಿಗೆ ಪರದೆ, ಹೆಗಲ ಮೇಲೆ ನೀಟಾಗಿ ಪಿನ್‌ ಮಾಡಿದ ಸೆರಗು ಜಾರದೆಂಬ ವಿಶ್ವಾಸ. ಅಮ್ಮನ ಹಳೆಯ ರೇಷ್ಮೆ ಸೀರೆ ಮಗಳ ಲಂಗ, ಗಾಗ್ರಾ ಚೋಲಿ, ಲೆಹೆಂಗಾ ಚುನರಿ, ಚೂಡಿದಾರ್‌ ಆಗುತ್ತದೆ. ಹಳೆ�� ಸೀರೆಗೂ ಮೆತ್ತನೆ ಕೌದಿಯಾಗುವ ಅವಕಾಶ. ಅದನ್ನು ಹೊದ್ದು ಮಲಗುವ ಮುಗ್ಧ ಮಗುವಿಗೆ ಅಜ್ಜಿಯ ಕೈ ಹೊಸೆದ ಬೆಚ್ಚನೆ ಪ್ರೀತಿಯ ವಿನ್ಯಾಸ.
ಸೀರೆಯಲ್ಲೂ ಸೆಕ್ಸಿ ಲುಕ್‌ ಇದೆ ಎನ್ನುವವರಿದ್ದಾರೆ. ಸೀರೆ ಮತ್ತು ಅದನ್ನು ಉಡುವವರ ಹಾಗೂ ನೋಡುವವರಿಗೆ ತಕ್ಕಂತೆ ಇದು ಆಪ್ತವೊ ಸುಂದರವೊ, ಮಾದಕವೊ ಆಗಿ ಕಾಣುತ್ತದೆ.
ಏಕಾಂತದ ಹೆಜ್ಜೆಗಳಲಿ
ಚಿಮ್ಮುವ ನಿರಿಗೆ
ವಿಹರಿಸುತ್ತದೆ
ಹೊಮ್ಮುವ ಹೊಂಗನಸುಗಳಲಿ

ಬದುಕ ಬೇಲಿಯಂಚು ದಾಟದಂತೆ
ನಡೆಸುವುದೆ
ಬಳಸಿದ ಸೀರೆಯ
ಚೆಂದದ ಅಂಚು?

ಹೊಲಿಗೆಯೇ ಇಲ್ಲದೆ ಮೈ ಅಳತೆಗೆ ತಕ್ಕಂತೆ ಅಪ್ಪಿಕೊಳ್ಳುವ ಸೀರೆಯ ಮೇಲೆ ಎಲ್ಲರಿಗೂ ಪ್ರೀತಿ ಇಲ್ಲ. ವಿಶೇಷವಾಗಿ ಇಂದಿನ ಯುವತಿಯರಿಗೆ ಅದೊಂದು ಹೊರೆ. ಅಪರೂಪಕ್ಕೆ ಉಟ್ಟಾಗಲೂ ಕೆಲವೇ ಸಮಯದ ಸಂಭ್ರಮದ ನಂತರ ಯಾವಾಗ ಅದನ್ನು ಕಿತ್ತೊಗೆದು ಆರಾಮದ ನೈಟಿ ಇಲ್ಲವೇ ನೈಟ್ ಡ್ರೆಸ್‌, ಅಥವಾ ಸಲ್ವಾರ್‌ ಹಾಕೇನೊ ಎನಿಸುವಷ್ಟು ಕಷ್ಟದ ಉಡುಗೆ. ಆದರೆ ವರ್ಷಾನುಗಟ್ಟಲೆ ಅದೊಂದನ್ನೇ ಉಟ್ಟವರಿಗೆ ಅದು ನೈಟಿಗಿಂತ ಚೆಂದ. ಹೇಗೆ ಉಟ್ಟರೂ ಚೆಂದ. ಕಿತ್ತೊಗೆಯುವ ಭಾವ ಅವರಲ್ಲಿ ಇಣುಕುವುದೇ ಇಲ್ಲ. ಬಿಚ್ಚುವಾಗಲೂ ಒಂಥರ ಲಾಸ್ಯವಿರುತ್ತದೆ. ಇನ್ನೇನೊ ನೆನಪುಗಳ, ಕನಸುಗಳ ಭಾಷ್ಯವಿರುತ್ತದೆ. ತುಟಿಯ ಮೇಲೆ ತೆಳುನಗೆಯ ಲೇಪವೂ.
ನಿಭಾಯಿಸಲು ಕಷ್ಟ, ಉಡಲು (ಉಡಿಸಿಕೊಳ್ಳಲು) ಸಮಯ ಹಿಡಿಯುತ್ತದೆ, ಬೀಸಾಗಿ ಬಿಂದಾಸ್‌ ಆಗಿ ಇರಗೊಡುವುದಿಲ್ಲ ಇತ್ಯಾದಿ ದೂರುಗಳಂತೂ ಇದ್ದೇ ಇವೆ. ನಂಗೆ ಸೀರೆ ಚೆನ್ನಾಗಿ ಕಾಣುತ್ತಾ ಎಂದು ಎಂಥವರು ಕೇಳಿದರೂ ಉತ್ತರ ಒಂದೇ– ‘ಓ, ಕಾಣದೇ ಏನು? ಒಂದ್ಸಲ ಉಟ್ಟು ನೋಡಿ’ ಎಂಥವರನ್ನೂ ಸುಂದರವಾಗಿ ಅಪ್ಪುವ ಕಲೆ ಸೀರೆಗೆ ಗೊತ್ತಿದೆ.
ಎಂಥ ಸೀರೆಯುಟ್ಟರೆ ಚೆನ್ನ ಎಂದು ಹುಡುಗಿಯರಿಗೂ ಗೊತ್ತಿದೆ. ಅಗಲ ಭುಜಗಳ ಯುವತಿಯರು ಗಗನಸಖಿಯರು ಸೀರೆ ಉಡುವ ರೀತಿಯಲ್ಲಿ ಉಟ್ಟರೆ ಚೆನ್ನಾಗಿ ಕಾಣುತ್ತಾರೆ. ಕಾಟನ್‌ ಸೀರೆಗಳು ಎಲ್ಲರಿಗೂ ಒಪ್ಪುತ್ತವೆ, ಮುಖ್ಯವಾಗಿ ಉದ್ಯೋಗಸ್ಥ ಮಹಿಳೆಯರಿಗೆ. ಅದರಲ್ಲೂ ಜನಸಂಪರ್ಕ ಹೆಚ್ಚಾಗಿ ಇರುವ ಬ್ಯಾಂಕ್‌,ಇನ್ಶೂರನ್ಸ್‌ ಕಂಪೆನಿ, ಕಸ್ಟಮರ್ ಕೇರ್‌ ವಿಭಾಗಗಳಲ್ಲೆಲ್ಲ ವ್ಯವಹರಿಸುವ ಜನರು ಗೌರವಪೂರ್ಣವಾಗಿ ಮೆಚ್ಚುಗೆಯಿಂದ ತನ್ನೆಡೆಗೆ ನೋಡುವಂತೆ ಮಾಡುತ್ತದೆ ಸೀರೆ. ಎಂಥ ಒರಟು ಗ್ರಾಹಕರನ್ನೂ ಸರಳವಾಗಿ ನಿಭಾಯಿಸುತ್ತದೆ. ಎಲ್ಲ ಸರಿ, ಎರಡು ವಿಭಿನ್ನ ಜಗತ್ತುಗಳಲ್ಲಿ ಸಮವಾಗಿ ಕಾರ್ಯ ನಿಭಾಯಿಸುವ ಇಂದಿನವರಿಗೆ ಸೀರೆ ಉಡಲು ಸಮಯವೆಲ್ಲಿ? ಆದರೂ ಸೀರೆಯುಟ್ಟ ನಂತರದ ಭಾವಗಳನ್ನು ಊಹಿಸಿದರೆ, ಸ್ವಲ್ಪ ಪ್ರಾಕ್ಟೀಸ್‌ ಮಾಡಿ, ತುಸುವೇ ಪ್ರೀತಿಯಿಂದ ಉಟ್ಟರೆ ಸೀರೆ ಬೇಡವೆನಿಸುವುದೇ ಇಲ್ಲ.
ಸೀರೆಯುಡಲು ಹಬ್ಬಗಳಿಗೇ ಕಾಯಬೇಕಾಗೂ ಇಲ್ಲ. ಉಡುವಾಗಲೆಲ್ಲ ಕನಸುಗಳು ಉಕ್ಕಿ ಬಂದಾವು ಅಷ್ಟೆ. ಕನಸನ್ನೂ ನಿರಿಗೆ ಮರೆಯಲ್ಲೇ ಮುಚ್ಚಿಟ್ಟು ಉಟ್ಟರೆ ನೋಡುವ ಮಿಂಚುಗಣ್ಣುಗಳು ಮೆಚ್ಚದೇ ಏನು?

Leave a Reply