ದಯಾಮರಣ ಆವಶ್ಯಕವೇ?

ದಯಾಮರಣ ಆವಶ್ಯಕವೇ?
ಈಗ್ಗ್ಯೆ ಕೆಲವಾರು ವರ್ಷಗಳ ಹಿಂದೆ ಹಾಸ್ಪಿಟಲ್ಲಿನ ಎಮರ್ಜೆನ್ಸಿ ವಾರ್ಡಿಗೆ ಹೋಗಿದ್ದೆ. ನಮ್ಮ ಗುರ್ತಿನ ಮಹಿಳೆಯೊಬ್ಬರು ದಾಖಲಾಗಿದ್ದರು. ಅತ್ತೆ ಮನೆಯ ಕಾಟದಿಂದ ತಾಳಲಾಗದೇ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ತನ್ನದೇ ಎರಡುವರ್ಷದ ಮಗು ಅನಾಥವಾಗುತ್ತದೆ ಎಂಬ ಕಲ್ಪನೆಯೂ ಇಲ್ಲದೇ ತನ್ನ ಮೈಗೆ ಬೆಂಕಿ ಹಚ್ಚಿಕೊಂಡು ಬಿಟ್ಟಿದ್ದಳು. ಅವಳ ದುರದೃಷ್ಟ. ಅವಳು ಆಗಲೇ ಸಾಯದೇ ಬದುಕುಳಿದಳು! ಆದರೇನು? ಬದುಕಿದ್ದರೂ ಸತ್ತ ಸ್ಥಿತಿ ಅವಳದಾಗಿತ್ತು. ಮೈಯ ಚರ್ಮವೆಲ್ಲಾ ಸುಕ್ಕು ಸುಕ್ಕಾಗಿ ಜೋತು ಬಿದ್ದಿತ್ತು. ಅಲ್ಲಲ್ಲಿ ಬೊಕ್ಕೆಗಳಿಂದ ನೀರೆಲ್ಲಾ ಒಸರುತ್ತಿತ್ತು. ಒಟ್ಟಿನಲ್ಲಿ ಅವಳ ಸ್ಥಿತಿ ಭಯಾನಕವಾಗಿತ್ತು. ಅವಳ ದುರವಸ್ಥೆ, ನರಳಾಟಗಳನ್ನೆಲ್ಲ ನೋಡಿ ಇವಳು ಇರುವುದಕ್ಕಿಂತ ಸಾಯುವುದೇ ಲೇಸು ಎನ್ನಿಸಿದ್ದು ಸುಳ್ಳಲ್ಲ. ನರಳಿ ನರಳಿ ಎರಡು ದಿನಕ್ಕೆಲ್ಲ ಮರಣವನ್ನಪ್ಪಿದಳು. ಆದರೆ ಅವಳ ನಂತರ ಅವಳ ಮಗಳು ಆಕೆಯ ತೌರುಮನೆಯಲ್ಲಿಯೇ ಇದ್ದರೂ ಅನಾದರತೆಯಿಂದ ಇರುತ್ತಿದ್ದಳು. ಇತ್ತ ಅಪ್ಪನೂ ಎಂದೂ ಬರುತ್ತಿರಲಿಲ್ಲ. ಹೊಸದಾಗಿ ಬಂದ ತಮ್ಮನ ಹೆಂಡತಿ ಯಾಕೆ ಆದರದಿಂದ ನೋಡುತ್ತಾಳೆ. ಹೀಗಾಗಿ ಆ ಮಗು ನಿಜ ಅರ್ಥದಲ್ಲಿ ಅನಾಥವಾಗಿತ್ತು.
ಇಂಥ ಕೆಲವು ಪ್ರಸಂಗಗಳಲ್ಲಿ ದಯಾಮರಣ ಪ್ರಸ್ತುತವೆನಿಸಿದರೂ ಅವರ ಸಾಧ್ಯಾ ಸಾಧ್ಯತೆಗಳ ಬಗೆ ವಿಶ್ಲೇಷಣೆ ಅಗತ್ಯ.
ಗುಣಪಡಿಸಲಾಗದ ರೋಗದಿಂದ ನರಳುತ್ತಾ ಇದ್ದರೂ ಇನ್ನೊಬ್ಬರಿಗೆ ಹೊರೆಯಾಗಿ ಅಸಹನೀಯವಾಗಿ ನೋವನ್ನು ಅನುಭವಿಸುತ್ತಿದ್ದಾಗ ತನ್ನ ಕುಟುಂಬದ ಒಪ್ಪಿಗೆ ಪಡೆದು ತಜ್ಞ ವೈದ್ಯರ ಸಹಾಯದಿಂದ ಮರಣವನ್ನಪ್ಪಬಹುದು. ಅದಕ್ಕೆ “ಯುಥೇನೇಶಿಯಾ” ಅಥವಾ ‘ದಯಾಮರಣ’ವೆಂದು ಕರೆಯುತ್ತಾರೆ. ಇದು ಗ್ರೀಕ್ ಶಬ್ದವಾಗಿದ್ದು, ಯಾವಾಗ ಚಾಲ್ತಿಯಲ್ಲಿ ಬಂತೆಂಬ ವಿವರಗಳು ಸಿಗುವುದಿಲ್ಲ.
‘ಯಥೇನೇಶಿಯಾ’ ಅಥವಾ ‘ದಯಾಮರಣ’ ಯಾರೊಬ್ಬರ ಜೀವನವನ್ನು ಬೇಜವಾಬ್ದಾರಿಯಿಂದ ಕೊನೆಗೊಳಿಸುವುದಲ್ಲ. ನೋವಿನಿಂದ ನರಳುವ ಮನುಷ್ಯನಿಗೆ ಶಾಶ್ವತವಾಗಿ ನೋವಿನಿಂದ ಮುಕ್ತ ಮಾಡುವ ಉದ್ದೇಶವನ್ನು ಹೊಂದಿರುವ ಇದಕ್ಕೆ ದುರುದ್ದೇಶ ಎಳ್ಳಷ್ಟೂ ಇಲ್ಲ ಎಂಬ ವಾದವನ್ನಿಡುತ್ತಾರೆ ಇದರ ಪರ ವಾದಿಸುವ ಜನ.
ಆದರೆ ಕೆಲವಾರು ಪ್ರಸಂಗಗಳಲ್ಲಿ ದಯಾಮರಣ ಪ್ರಸ್ತುತವೆನಿಸಿದರೂ ಅದು ಆತ್ಮಹತ್ಯೆಗೆ ಸಮವೆನಿಸುವುದಿಲ್ಲವೇ? ದೇವರಿತ್ತ ಜೀವನವನ್ನು ಯಾರೋ ತೊಲಗಿಸುವ ಅಧಿಕಾರ ಇವರಿಗೆಲ್ಲಿದೆ? ವೃತ್ತಿಗೆ ಮುನ್ನ ವೈದ್ಯನೊಬ್ಬ ತಾನು ತೆಗೆದುಕೊಳ್ಳುವ ಹಿಪ್ಪೊಕ್ರಾಟಿಕ್ ಪ್ರತಿಜ್ಞಾವಿಧಿಯ ಉಲ್ಲಂಘನೆಯಲ್ಲದೆ ಮತ್ತೇನು? ದುಡ್ಡಿನ ಆಮಿಷಕ್ಕಾಗಿ ವ್ಯಕ್ತಿಯೊಬ್ಬನ ಆವಯವಗಳ ಮಾರಾಟಕ್ಕಾಗಿ ವೈದ್ಯನೊಂದಿಗೆ ರಹಸ್ಯ(?) ಒಪ್ಪಂದವೇರ್ಪಡಿಸಿ ದಯಾಮರಣದ ದುರುಪಯೋಗ ಪಡೆಯುವುದಿಲ್ಲವೆನ್ನುವುದಕ್ಕೆ ಏನು ಗ್ಯಾರಂಟಿ? ಇದು ಕೊಲೆಗಾರರ ಮುಖವಾಡವಾಗುವುದರಲ್ಲಿ ಸಂದೇಹವಿಲ್ಲ.
ಕರ್ಮ ಸಿದ್ಧಾಂತದಲ್ಲಿ ಬಲವಾದ ವಿಶ್ವಾಸವಿರಿಸಿದ ದೇಶ ನಮ್ಮದು. ಕರ್ಮಗಳಲ್ಲಿ ಮೂರು ಪ್ರಕಾರಗಳು, ಆಗಾಮೀಕರ್ಮ, ಸಂಚಿತ ಕರ್ಮ, ಮತ್ತು ಪ್ರಾರಬ್ಧ ಕರ್ಮ.
ವ್ಯಕ್ತಿಗೆ ಆಧ್ಯಾತ್ಮಕ್ಕೆ ಸಂಬಂಧಿಸಿದ ಯೋಗ ಮಾರ್ಗದಲ್ಲಿ ಮುಂದುವರೆದಾಗ ಆತ್ಮಜ್ಞಾನ ಪ್ರಾಪ್ತಿಯಾಗುತ್ತದೆ. ಆಗ ಆತ ಜ್ಞಾನಿ ಎಂದೆನಿಸಿಕೊಳ್ಳುತ್ತಾನೆ. ಅಂತಹ ಜ್ಞಾನಿಯ ದೇಹ ಮಾತ್ರದಿಂದ ಉಂಟಾಗುವ ಪುಣ್ಯ ರೂಪಗಳಾದ ಯಾವ ಕರ್ಮಗಳು ನಡೆಯುತ್ತವೆಯೋ ಅವನ್ನು ‘ಆಗಾಮಿಕರ್ಮ’ ಎಂದು ಕರೆಯುತ್ತಾರೆ.
ನಮ್ಮ ಹಿಂದಿನ ಲಕ್ಷಾಂತರ ಜನ್ಮಗಳಲ್ಲಿ ಮಾಡಿದ ಒಳ್ಳೆಯದೋ ಕೆಟ್ಟದ್ದೋ ಕರ್ಮದಿಂದ ಹುಟ್ಟಿದ ಬೀಜರೂಪದಲ್ಲಿರುವ ಪೂರ್ವಾಜಿತ ಕರ್ಮವನ್ನು ‘ಸಂಚಿತ ಕರ್ಮ’ವೆಂದು ಕರೆಯುತ್ತಾರೆ.
ನಮ್ಮ ಶರೀರವು ಈ ಜನ್ಮದಲ್ಲೇ ಸುಖದುಃಖಾದಿಗಳನ್ನು ನೀಡುವ ಕರ್ಮವನ್ನು ಅನುಭವಿಸಬೇಕಾಗುತ್ತದೆ. ಈ ಕರ್ಮವು ‘ಪ್ರಾರಬ್ಧ ಕರ್ಮ’ವೆಂದು ಕರೆಯಲ್ಪಡುತ್ತದೆ. ಇಂತಹ ಪ್ರಾರಬ್ಧ ಕರ್ಮವನ್ನು ಅನುಭವಿಸುವುದರಿಂದ ಕರ್ಮಫಲ ಕ್ಷೀಣಿಸುತ್ತವೆ.
‘ಜಾತಸ್ಯ ಹೀ ಮರಣಂ ಧ್ರುವಂ’ ಎಂದ ಕೃಷ್ಣ. ಮರಣವು ಹುಟ್ಟಿನಿಂದಲೇ ನಿಶ್ಚಿತವಾದದ್ದು. ಅದಕ್ಕಾಗಿ ಚಿಂತಿಸಿ ಫಲವಿಲ್ಲ. ಪಾಲಿಗೆ ಬಂದದ್ದು ಪಂಚಾಮೃತವೆನ್ನುವಂತೆ ಇದೇ ಜನ್ಮದಲ್ಲಿಯೇ ಅನುಭವಿಸಿ ಸಂಚಿತ ಕರ್ಮಗಳಿಂದ ಮುಕ್ತಿ ಪಡೆಯುವುದು ಒಳಿತಲ್ಲವೇ? ನೋವು ಎನ್ನುವುದು ದೈವೇಚ್ಛೆ. ನಾವು ನಮ್ಮ ಪ್ರಾರಬ್ಧ ಕರ್ಮಫಲವನ್ನು ಅನುಭವಿಸಲೇಬೇಕು. ಇಲ್ಲವಾದಲ್ಲಿ ಆ ನೋವು ಅನುಭವಿಸಲು ಇನ್ನೊಂದು ಜನ್ಮವೆತ್ತಬೇಕಾಗುತ್ತದೆ ಎಂಬುದು ನಮ್ಮ ಪ್ರಾಚೀನ ಪರಂಪರೆಯ ನಂಬಿಕೆ, ಅಥವಾ ನಮ್ಮನ್ನು ಸರಿದಾರಿಯಲ್ಲಿ ನಡೆಸಲು ಕೃಷ್ಣ ತೋರಿದ ಪಥವಿದು.
ಪುರಾಣಕಾಲದಲ್ಲಿ ಭೀಷ್ಮನು ತಾನು ಮಾಡಿದ ಕರ್ಮಗಳ (ದ್ರೌಪದಿಯ ವಸ್ತ್ರಾಪಹರಣದ ವೇಳೆಯಲ್ಲಿ ಮೌನ ವಹಿಸಿದ್ದು, ದುರ್ಯೋಧನನ ತಪ್ಪು ಕಂಡರೂ ಆತನ ಪಕ್ಷ ಸೇರಿದ್ದು ಇತ್ಯಾದಿ) ಪ್ರಾಯಶ್ಚಿತ್ತದ ಸಲುವಾಗಿ ಮುಳ್ಳಿನ ಮೇಲೆ ಮಲಗಿಕೊಂಡಾಗ ಆತನ ಸಲುವಾಗಿ ಉಳಿದವರು ಪ್ರಾರ್ಥಿಸಿದರೇ ಹೊರತು ಆತನಿಗೆ ದಯಾಮರಣವನ್ನು ದಯಪಾಲಿಸಲಿಲ್ಲ. ಸ್ವತಃ ಶ್ರೀಕೃಷ್ಣನು ಅಲ್ಲಿ ಉಪಸ್ಥಿತನಿದ್ದೂ ಆತನಿಗೆ ಸಾವನ್ನು ಕರುಣಿಸಲಿಲ್ಲ. ತನ್ನ ಪಾಪಕ್ಕೆ ತಕ್ಕ ಕಷ್ಟವನ್ನನುಭವಿಸಿಯೇ ಸಾವನ್ನಪ್ಪಿದ ಭೀಷ್ಮ. ಅಂತೆಯೇ ಇಚ್ಛಾ ಮರಣಿ ಎಂದೆನಿಸಿದ. ಸಂಚಿತ ಕರ್ಮಗಳಿಂದ ಮುಕ್ತಿ ಪಡೆಯುವ ಬಗೆಯನ್ನು ಜಗತ್ತಿಗೆ ತೋರಿಸಿ ಮಾದರಿಯಾದ ಮಹಾನುಭಾವ!
ಬಂದ ಕಷ್ಟಗಳನ್ನು ಎದುರಿಸಲು ಹೆದರಿ ಹೇಡಿಯಂತೆ ಜೀವನವನ್ನು ಕೊನೆಗಾಣಿಸುವುದು ಎಷ್ಟರಮಟ್ಟಿಗೆ ಸಮಂಜಸ? ನಮ್ಮ ಕರ್ಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬ ಭಾವನೆ ಅಥವಾ ವಿಚಾರದಿಂದ ನಮ್ಮ ಮನಸ್ಸು ಸತ್ಕರ್ಮದೆಡೆಗೆ ಒಯ್ಯುತ್ತದೆ. ಅದರಿಂದ ನಮ್ಮ ನಡೆ, ನುಡಿ, ಧನಾತ್ಮಕಯೆಡೆಗೆ ಸಾಗುತ್ತದೆ. ಅಲ್ಲದೇ ಯಾವುದೇ ಕಷ್ಟಬಂದರೂ, ನೋವಾದರೂ ನಮ್ಮ ಮನಸ್ಸು ಅದನ್ನೆದುರಿಸಲು ಸಿದ್ಧಗೊಳ್ಳುತ್ತದೆ. ಅಲ್ಲಿ ದಯಾಮರಣಕ್ಕೆ ಆಸ್ಪದವಿಲ್ಲ. ‘ದಯಾಮರಣದ Concept’ ಇದ್ದು ಜೈಸಬೇಕು ಎನ್ನುವ ಸಿದ್ಧಾಂತಕ್ಕೆ ವಿರುದ್ಧವಿದೆ ಎಂದೆನಿಸುವುದಿಲ್ಲವೇ? ಆತ್ಮಹತ್ಯೆ, ಕೊಲೆಗೆ ಪ್ರಚೋದನೆ ಇತ್ತಂತಾಗುವುದಿಲ್ಲವೇ? ಬಿಡಿಗಾಸಿಗಾಗಿ ಯಾರನ್ನೂ ಮುಗಿಸಲೂ ಹೇಸದ ಜನ ದಯಾಮರಣದ ಕಾನೂನು ಬಂದರೆ ಅದರ ದುರ್ಬಳಕೆಯಾಗುವುದಿಲ್ಲವೆನ್ನುವುದಕ್ಕೆ ಗ್ಯಾರಂಟಿ ಇಲ್ಲ. ಅಂತೆಯೇ ಜಗತ್ತಿನಾದ್ಯಂತ ದಯಾ ಮರಣಕ್ಕೆ ಇನ್ನೂ ಅನುಮೋದನೆಯ ಮುದ್ರೆ ಬಿದ್ದಿಲ್ಲವೆಂದರೆ ತಪ್ಪಾಗಲಿಕ್ಕಿಲ್ಲ.

Leave a Reply