ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ…

ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ…
ನಮ್ಮದು ತಾಲೂಕೂ ಅಲ್ಲದ ಅತಿ ಚಿಕ್ಕ ಹಳ್ಳಿ, ರಟ್ಟೀಹಳ್ಳಿ.ಅಲ್ಲಿಂದ ಮೊಟ್ಟ ಮೊದಲಿಗೆ ಧಾರವಾಡಕ್ಕೆ ಬಂದದ್ದು ೧೯೬೫ ರಲ್ಲಿ, ನಾನು ಹತ್ತೊಂಬತ್ತು ವರ್ಷದವಳಿದ್ದಾಗ…ಅದೂ ಪಿ.ಯು.ಸಿ ಗೆ ಅಂದರೆ ಯಾರಿಗೂ ಸಹಜವಾಗಿಯೇ ಆಶ್ಚರ್ಯವಾದೀತು. ಹೌದು, ಶಿಕ್ಷಣ ಇದ್ದುಳ್ಳವರ ಸೊತ್ತು ಎಂಬಂತಿದ್ದ ಕಾಲಮಾನವದು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆಯಂತೂ ಒಂದು ರೀತಿಯ ದಿವ್ಯ ನಿರ್ಲಕ್ಷ್ಯ. ಇದ್ದವರು ಮಕ್ಕಳನ್ನು ಹತ್ತಿರದ ರಾಣೆಬೆನ್ನೂರು, ಹಾವೇರಿ ಹೆಚ್ಚೆಂದರೆ ಧಾರವಾಡದಲ್ಲಿ ಬಂಧುಗಳ ಮನೆಯಲ್ಲಿ ಇಟ್ಟು ಓದಿಸುತ್ತಿದ್ದರು. ಉಳಿದವರು ಅಂಥ ಒಂದು ವ್ಯವಸ್ಥೆಗೆ ಕಾಯಬೇಕು, ಇಲ್ಲವೇ ಊರಲ್ಲಿ ಇದ್ದಷ್ಟಕ್ಕೇ ಮುಗಿಸಿ ಓದಿಗೆ ಅಂತ್ಯ ಕಾಣಿಸಬೇಕು.
‌‌‌ ನನಗೋ ತುಂಬ ಓದುವ ಆಸೆ, ಅದಕ್ಕೆ MSc ಯಲ್ಲಿದ್ದ ಅಣ್ಣ ಓದು ಮುಗಿಸಿ ನೌಕರಿ ಸೇರುವವರೆಗೂ ನಾನು ಕಾಯಲೇಬೇಕಿತ್ತು. ಅವನ ಕಲಿಕೆ ಮುಗಿದು JSS college ದಲ್ಲಿ ನೌಕರಿ ಸಿಗುವವರೆಗೆ ಅಂದರೆ ನನಗೆ ೧೯ ವರ್ಷ ಮುಗಿದಿತ್ತು.ಆದರೆ ಕಲಿಕೆಗೆ ವಯಸ್ಸಿನ ಹಂಗೇಕೆ? ನೌಕರಿ ಸಿಕ್ಕಮೇಲೆ ಮೊದಲು ಅಣ್ಣ ಬಂದು ಮನೆ ಮಾಡಿ ನಮ್ಮನ್ನು ಧಾರವಾಡಕ್ಕೆ ಕರೆಸಿಕೊಂಡದ್ದು ೧೯೬೫ ಜೂನ್ ತಿಂಗಳಲ್ಲಿ…
‌ ಆಗ ಜನತಾ ಕಾಲೇಜಿನ ವಿಜ್ಞಾನ ಹಾಗೂ ಕಲಾ ವಿಭಾಗಗಳು ಪ್ರತ್ಯೇಕವಾಗಿ Shift ನಲ್ಲಿ ಬೇರೆ ಬೇರೆ ನಡೆಯುತ್ತಿದ್ದವು. ಬನಶಂಕರಿ ಆರ್ಟ್ಸ್ ಕಾಲೇಜು ಬೆಳಿಗ್ಗೆ, ಶಾಂತಿಕುಮಾರ ವಿಜ್ಞಾನ ಕಾಲೇಜು ಮದ್ಯಾನ್ಹ… ಮೊದಲ ದಿನ ಕಾಲೇಜಿಗೆ ಹೋದದ್ದು ನಿನ್ನೆ ತಾನೇ ನಡೆದಂತೆ ನೆನಪಿದೆ.ಬೆಳಿಗ್ಗೆ ಎದ್ದು ಎರಡು ಜಡೆ ಹಾಕಿ, ಮೇಲೆ ಎತ್ತಿ ಕಟ್ಟಿ ಆರು ಹೂವಾಗುವಂತೆ ಗಾಢ ಕೆಂಪು
ಬಣ್ಣದ ರಿಬ್ಬನ್ ಕಟ್ಟಿಕೊಂಡು ಚಂದದ ನೂಲಿನ ಸೀರೆಯುಟ್ಟು,(ಆರತಿ, ಲಕ್ಷ್ಮಿ, ಕಲ್ಪನಾಳಂತೆ) ಎದೆಗೆ ಪುಸ್ತಕಗಳನ್ನು ಅವುಚಿ ಹಿಡಿದು ಕ್ಲಾಸ್ ಪ್ರವೇಶಿಸಿದ್ದೆ. ಇತರರೂ ಅತಿ ಏನೂ ಹೆಚ್ಚು stylish ಆಗಿರಲಿಲ್ಲವಾದ್ದರಿಂದ ಅವರಿಗೂ ನನಗೂ ಇರುವ ವ್ಯತ್ಯಾಸ ಹೆಚ್ಚು ಢಾಳಾಗಿಯೇನೂ ಇರಲಿಲ್ಲ. ಮೊದಲ ದಿನವಾದ್ದರಿಂದ ಪಾಠದ ಗೋಜು ಹೆಚ್ಚಿರಲಿಲ್ಲವಾದರೂ ಒಂದು ತರಹದ ಅಳುಕು, ಹಿಂಜರಿಕೆ, ಕೀಳರಿಮೆ ಎಲ್ಲವೂ ಇತ್ತು.ಮೊದಲೇ ಅದರ ಕಲ್ಪನೆ ಮನಸ್ಸಿನಲ್ಲೇ ಇದ್ದಿರಬೇಕು, ಎಲ್ಲವನ್ನೂ ಎದುರಿಸುವ ಭಂಡತನ ಬಂದು ಬಿಟ್ಟಿತ್ತು ನನಗೆ.ಅಥವಾ ಹಾಗೆ ನಾನೇ ಅಂದುಕೊಂಡಿದ್ದೆ…
ಕೆಲವು ಪ್ರಾಥಮಿಕ ಸಲಹೆ- ಸೂಚನೆಗಳೊಂದಿಗೆ ಅಂದಿನ ಕ್ಲಾಸ್ ಮುಗಿಯುತ್ತಲೇ ಅಣ್ಣ ಪುನಃ ಬಂದು ನನ್ನನ್ನು ಕಾಲೇಜಿನ Bus stop ಗೆ ಬಿಟ್ಟು,ಎರಡು ರೂಪಾಯಿ ನನ್ನ ಕೈಯೊಳಗಿಟ್ಟು ” ಸ್ವಲ್ಪು ಹೊತ್ತಿಗೆ ಇಲ್ಲಿ ಹೊಸಯಲ್ಲಾಪುರ ಅಂತ ಬೋರ್ಡ್ ಇದ್ದ ಬಸ್ ಬರುತ್ತದೆ ,ಅದನ್ನು ಹತ್ತಿ ಮನೆಗೆ ಹೋಗು ಅಂತ ಹೇಳಿದ. ಅದುವರೆಗೂ ನಮ್ಮ ಊರಿನಲ್ಲಿ ಜನರು ಸಾಮಾನ್ಯವಾಗಿ ನಡೆದುಕೊಂಡು, ಸ್ವಲ್ಪು ದೂರವಿದ್ದರೆ ಸೈಕಲ್ ಮೇಲೆ,ಹೆಚ್ಚು ದೂರವಿದ್ದರೆ ಕೊಲ್ಲಾರಿ ಚಕ್ಕಡಿಯಲ್ಲಿ ಪಯಣಿಸಿ ರೂಢಿ. ಅಪರೂಪಕ್ಕೆ ಅಡ್ಡಾಡುವ ಬಸ್ಸುಗಳ ಪ್ರವಾಸವಂತೂ  ವರ್ಷಕ್ಕೆ ಒಂದೋ/ ಎರಡೋ ಆದರೆ ಪುಣ್ಯ. city bus ಗಳ ಗಂಧ ಗಾಳಿ ಗೊತ್ತಿಲ್ಲದ ಊರಲ್ಲಿ ಬೆಳೆದವಳು ನಾನು. ಹೀಗಾಗಿ ಎಲ್ಲರೂ ಇಳಿಯವವರೆಗೆ ಬಸ್ ನಲ್ಲೇ ಕುಳಿತಿದ್ದು ಕೊನೆ stop ಬಂತು ಅಂದಾಗ ಇಳಿದು ನೋಡಿದರೆ ಅದು ಪೇಟೆಯ ಹಾಗೆ ಕಾಣುತ್ತಿತ್ತು.ಆಗಿನ್ನೂ ಗಾಂಧೀ ಚೌಕ್ ಕೊನೆಯ bus stop ಗಿತ್ತು.ಎಲ್ಲರೂ ಧುಡುಧುಡು ಇಳಿದು ಹೊರಟುಬಿಟ್ಟರು.ನಾನು ಏನು ಎಂತು ತಿಳಿಯದೇ ಬಸ್ ಹೋದ ದಾರಿಯಲ್ಲೇ ಹನ್ನೆರಡರ ಬಿಸಿಲಲ್ಲಿ ನೀರಿಳಿಸುತ್ತ ಮುಟ್ಟಿದ್ದು ಆಝಾದ್ ಪಾರ್ಕ ರಸ್ತೆ.ಕೇಳಬೇಕೆಂದರೆ ಯಾರನ್ನು ಕೇಳಬೇಕು? ಎಲ್ಲೋ ದಾರಿ ತಪ್ಪಿದೆ ಎನಿಸಿ ಹೋದ ದಾರಿಯಲ್ಲೇ ಮರಳಿ ಗಾಂಧಿ ಚೌಕ್ಗೆ ಬಂದರೆ ಅಲ್ಲಿ ನಾಲ್ಕು ರಸ್ತೆಗಳು.ಎಲ್ಲಿಯೂ ಹೊರಳದೇ ಕಾಲೆಳೆಯುತ್ತಾ ಸೀದಾ ಹೋದಾಗ ಸಿಕ್ಕದ್ದು ದೇಸಾಯಿ ಓಣಿ/ ರಾಘವೇಂದ್ರ ಸ್ವಾಮಿ ಮಠ, ವಿಠ್ಠಲ ಮಂದಿರ ಮುಂತಾದವು. ನನ್ನ ಅವಸ್ಥೆ ಊಹಿಸಿದ ಒಬ್ಬರು ಕನಿಕರದಿಂದ ಏನಾದರೂ ಸಹಾಯ ಬೇಕೆ? ಎಂದು ತಾವಾಗಿಯೇ ಕೇಳಿದಾಗ (note book ನಲ್ಲಿ ಬರೆದಿಟ್ಟಿದ್ದೆ )’ ಹೆಂಬ್ಲಿ ಓಣಿ’ ಎಲ್ಲಿ ಬರುತ್ತೆ ಅಂದೆ.ಆ ಮಹಾಶಯರು ನನ್ನನ್ನು ಗಾಂಧಿಚೌಕಿನ ವರೆಗೆ  ಕರೆತಂದು ದಾರಿತೋರಿಸಿ ಎಲ್ಲಿಯೂ ನಿಲ್ಲದೇ ಸೀದಾ ಹೋಗಿ.ಹದಿನೈದು ನಿಮಿಷದಲ್ಲಿ ನಿಮ್ಮ ಬಲಗಡೆಗೆ ವೆಂಕಟೇಶ್ವರ ದೇವಸ್ಥಾನ ಬರುತ್ತದೆ.ಅದಕ್ಕೆ ಬಲಕ್ಕೆ ಹೊಂದಿ ಇದ್ದದ್ದು ನೇಕಾರ ಓಣಿ, ಅದರ ಎದುರಿನದು ಅಂದರೆ ಎಡಗಡೆಗೆ ಹೆಂಬ್ಲಿ  ಓಣಿ – ಎಂದರು.
‌‌‌ ಒಂದು ಚಿಕ್ಕ ಭಯ, ಮುಷ್ಟಿಯಷ್ಟು ಅನುಮಾನ, ಮನದ ಮೂಲೆಯಲ್ಲಿ ಒಂದಿಷ್ಟು ಭರವಸೆ ಹೊತ್ತು ಎಡ ಬಲಕ್ಕೆ ಹೊರಹೊರಳಿ ನೋಡುತ್ತಾ ನಡೆದೆ. ಹತ್ತು ಹನ್ನೆರಡು ನಿಮಿಷಗಳ ನಂತರ ವೆಂಕಟೇಶ ದೇವಸ್ಥಾನ ಕಂಡಿತು.ಗುಡಿಯೊಳಗೆ ಹೊರಟವರನ್ನು ಖಾತ್ರಿಮಾಡಿಕೊಳ್ಳಲು ಮತ್ತೊಮ್ಮೆ ಕೇಳಿದೆ.ನಿನಗೆ ಓದಲು ಬರುವದಿಲ್ಲವೇ? ತಲೆಯತ್ತಿ ನೋಡು, ಢಾಳಾಗಿ ಹೆಂಬ್ಲಿ ಓಣಿ ಎಂದು ನಿನ್ನ ತಲೆಯ ಮೇಲಿನ ಫಲಕದಲ್ಲಿಯೇ ಬರೆದಿದೆಯಲ್ಲ ಅಂದರು.
ಮಾನಾಪಮಾನವೆಲ್ಲ ಅಷ್ಟು ಹೊತ್ತಿಗೆ ಯಾವಾಗಲೋ ಹರಾಜಾಗಿ ಹೋಗಿದೆಯಲ್ಲ ಎಂದುಪೆಚ್ಚು ನಗೆ ನಕ್ಕು
ಮನೆ ತಲುಪಿದೆ.ಎಲ್ಲರೂ ಇಷ್ಟೇಕೆ ತಡ? ಏನಾಯಿತು?  ಎಂದು ಕೇಳುತ್ತಿದ್ದರೂ ಅದುವರೆಗೂ ತಡೆದು ಹಿಡಿದಿಟ್ಟಿದ್ದ ಅಳು/ ಅಳುಕು/ ಹೊಟ್ಟೆಹಸಿವು/ ಸೋಲಿನ ಭಾವ/ಬಿಸಿಲು ಅಸಹಾಯಕತೆ ಎಲ್ಲವಕ್ಕೂ ಹೊರದಾರಿ ಸಿಕ್ಕಿದ್ದೇ ತಡ, ಜೋರಾಗಿ ಬಿಕ್ಕಿ ಬಿಕ್ಕಿ ಅತ್ತು ಮುಗಿಸಿದ ಮೇಲೆಯೇ ಉತ್ತರಿಸಿದ್ದು… ಅದೇ ಹೆಂಬ್ಲಿ ಓಣಿಯಿಂದ,ಅದೇ ಮನೆಯಿಂದ ನಾನು ನಿವೃತ್ತಿಯ ನಂತರ ೨೦೦೬ ರಲ್ಲಿ(೪೧ ವರ್ಷಗಳ ದೀರ್ಘಕಾಲದ ನಂತರ) ಬೆಂಗಳೂರಿಗೆ ವಲಸೆ ಬರುವವರೆಗೂ, ನಿದ್ದೆಗಣ್ಣಿನಲ್ಲಿಯೂ ದಾರಿ ತಪ್ಪದಷ್ಟು ಆ ಏರಿಯಾ ಆಪ್ತವಾದದ್ದು ಮತ್ತೊಂದೇ ಕಥೆ…
Leave a Reply