ಢೋಂಗಿ ಜಾತ್ಯತೀತರಿಂದ ದೇಶದ ಏಕತೆಗೆ ಮತ್ತು ಸಮಗ್ರತೆಗೆ ಧಕ್ಕೆ

ಢೋಂಗಿ ಜಾತ್ಯತೀತರಿಂದ ದೇಶದ ಏಕತೆಗೆ ಮತ್ತು ಸಮಗ್ರತೆಗೆ ಧಕ್ಕೆ
ಇಂವ ನಮ್ಮವ.. ಎಂದು ಜಾತಿಗಳ ಬಾಲಗಳನ್ನು ಹಿಡಿದುಕೊಂಡು ಸುಖದ ಸ್ವರ್ಗಕ್ಕೆ ಏಣಿ ಹಾಕಲೆಳಸುವ ನಾವು ಮರೆತಿದ್ದೇವೆ, ನಮ್ಮ ದೇಶದಲ್ಲಿ ಮಹಾಪುರಾಣಗಳೆಂದು ಕರೆಯಲ್ಪಡುವ ರಾಮಾಯಣ, ಮಹಾಭಾರತಗಳ ಜಾತ್ಯತೀತತೆಯನ್ನು. ರಾಮಾಯಣದ ನಾಯಕನಾದ ಶ್ರೀ ರಾಮಚಂದ್ರ ಕ್ಷತ್ರಿಯ. ಸೀತೆಯ ಹುಟ್ಟು ಯಾರೂ ಅರಿಯದ ಗುಟ್ಟು. ಹನುಮಂತ ಕಪೀಶ. ಬರೆದ ರಚನಾಕಾರ ಬೇಡನಾದ ವಾಲ್ಮೀಕಿ. ಇನ್ನು ಮಹಾಭಾರತಕ್ಕೆ ಬಂದರೆ, ಅದೂ ಹಲವಾರು ಜಾತಿಗಳ ಸಮುದಾಯವೇ. ಇಲ್ಲೆಲ್ಲೂ ನಾವು ಜಾತಿಗಾಗಿ ಬಡಿದಾಡುವುದನ್ನು ನೋಡಲಿಲ್ಲ, ಕರ್ಣನ ಕುಲದ ಬಗೆಗಿನ ಚರ್ಚೆ ಯನ್ನು ಬಿಟ್ಟರೆ. ಅಷ್ಟೇ ಅಲ್ಲ, ಇವು ನಮ್ಮ ಜನಮಾನಸಕ್ಕೆ ಹಿಡಿದ ಕನ್ನಡಿ.
ನಮ್ಮ ಭಾರತದ ಮಹಾಗ್ರಂಥವಾದ ಮಹಾಭಾರತದ ಕರ್ತೃ ವೇದವ್ಯಾಸರು ಮಹಾಭಾರತವನ್ನು ಯಾವುದೋ ಒಂದು ಕಾಲದ ಒಂದು ರಾಜಕುಟುಂಬದ ಒಂದು ಕಥೆಯನ್ನಾಗಿ ರಚಿಸಲಿಲ್ಲ. ಅದು ಭಾರತದ ಮಣ್ಣಿನ ಕಥೆ… ಜನರ ಸ್ವಭಾವಕ್ಕೆ ಹಿಡಿದ ಕನ್ನಡಿ. ಅದರಲ್ಲಿ ಬರು ವ ಘಟನೆಗಳು ಸಾರ್ವಕಾಲಿಕ. ಜಾತಿಯಲ್ಲಿಯ ಮೇಲು ಕೀಳುಗಳ ಜಗಳ, ದಾಯಾದಿ ಮತ್ಸರ, ಹೆಣ್ಣಿನ ಶೋಷಣೆ ಇವೆಲ್ಲವೂ ಇಂದಿಗೂ ಇವೆ.
ಇಂದಿನ ರಾಜಕೀಯ ಪರಿಸ್ಥಿತಿ ಕೂಡ ಅಂದಿನ ಆ ಮೋಸದ ಲೆತ್ತದಾಟವನ್ನೇ ನೆನಪಿಸುತ್ತದೆ.
ಯಾವನೋ ಒಬ್ಬ  ರಾಜಕೀಯ ಪ್ರೇರಿತನಾಗಿ ದೇವಸ್ಥಾನದಲ್ಲಿ ಗೋಮಾಂಸವನ್ನೋ, ಮಸೀದಿಗಳಲ್ಲಿ ಹಂದಿಯ ಮಾಂಸವನ್ನೋ ಎಸೆದುಹೋಗುತ್ತಾನೆ. ಕೋಮು ದಳ್ಳುರಿ ಹಬ್ಬಲೆಂದೆ ಹೂಡಿದ ಈ ಕೃತ್ಯ ಸೋದರರಂತೆ ಇದ್ದವರು ದಾಯಾದಿ ಮತ್ಸರಕ್ಕೆ ತುತ್ತಾಗಿಸುವುದಲ್ಲದೆ ಅವರಲ್ಲಿ ರಕ್ತಪಿಪಾಸು ಗುಣವನ್ನು ಬಿತ್ತುತ್ತದೆ.
ಸಾಮಾಜಿಕ ಸಮಸ್ಯೆಗೆ ಹುಟ್ಟು ಹಾಕುತ್ತದೆ.
ಜಾತ್ಯತೀತವೆಂದು ಹೇಳಿಕೊಳ್ಳುತ್ತ ನಮ್ಮ ದೇಶದ ಸಂವಿಧಾನದ ಮೂಲಮಂತ್ರವಾದ ಸೆಕ್ಯುಲರಿಸಂಗೇ ಧಕ್ಕೆ ತರುವಂತೆ ಇದೆ ಇಂದಿನ ನಮ್ಮ ನಾಯಕರ ನಡವಳಿಕೆ. ಕುರುಬರು, ಬ್ರಾಹ್ಮಣರು, ಜೈನರು, ವೈಶ್ಯರು, ಮುಸ್ಲಿಮರು, ದಲಿತರು, ಕ್ರಿಶ್ಚಿಯನ್ನರು ಎಂದು ಜಾತಿಯ ಮೇಲೆ ಮತಗಟ್ಟೆಗಳನ್ನು ವಿಭಜಿಸಿದರು. ಅಷ್ಟೇ ಅಲ್ಲ, ಒಂದು ಐತಿಹಾಸಿಕ ಹಿನ್ನೆಲೆಯ ಮಹಾಧರ್ಮವನ್ನೇ ಒಡೆದುಬಿಟ್ಟರು ಈ ರಾಜಕೀಯ ಪಟ್ಟಭದ್ರ ಹಿತಾಸಕ್ತ ರಾಜಕಾರಣಿಗಳು… ಅದಕ್ಕೆ ಕುಮ್ಮಕ್ಕಾದವರು ಮಠಗಳನ್ನು ಕಟ್ಟಿಕೊಂಡು ತಮ್ಮ ಬೇಳೆಯನ್ನು ಬೇಯಿಸಿ ಕೊಳ್ಳುತ್ತಿರುವ ಮಹಾಂತ ಬಸವಣ್ಣನವರ ಕೃತಿಚೋರರು. ಹೀಗೆ ಮತರಾಜಕಾರಣಕ್ಕೆ ಕಾರಣವಾದ ನಮ್ಮ ನಾಯಕರ ಬೆನ್ನು ತಟ್ಟಿದವರು ನಮ್ಮ ಸೋಕಾಲ್ಡ್ ಬುದ್ಧಿಜೀವಿಗಳು.
ಇದು ಬೇಕಿತ್ತೇ?
ಅಷ್ಟೇ ಅಲ್ಲ, ಅತ್ಯಾಚಾರಕ್ಕೊಳಗಾದ  ಬಾಲಿಕೆಯರ ನೋವಿಗೆ ಸ್ಪಂದಿಸುವಲ್ಲಿ ಕೂಡ ಜಾತಿರಾಜಕಾರಣವೇ ಮಧ್ಯೆ ಪ್ರವೇಶಿಸಿದೆ ಎಂದರೆ ಈ ವಿಷವರ್ತುಲ ಎಲ್ಲಿಯವರೆಗೆ ಹಬ್ಬಿದೆ ಎಂದು ಊಹಿಸಬಹುದು. ಇಲ್ಲಿ  ಕೇವಲ ಒಂದು ಪಕ್ಷವಷ್ಟೇ ಕೋಮುವಾದಿಯಲ್ಲ, ಎಲ್ಲರೂ ಅವರೇ.  ಜಾತಿಯ ಮೇಲೆಯೆ ಪಕ್ಷದ ಟಿಕೆಟ್ ಹಂಚಿಕೆಯಿಂದ ಮತದಾನದ ವರೆಗೂ ಎಲ್ಲೆಲ್ಲಿಯೂ ಹಬ್ಬಿಸಿದ್ದಾರೆ ಈ ವಿಷದ ಬಳ್ಳಿಯನ್ನು…
ಮತದಾನ ಪವಿತ್ರ ಕರ್ತವ್ಯವೇನೋ ನಿಜ. ಆದರೆ ಇಲ್ಲಿ ನಡೆಯುತ್ತಿರುವ ಹಗರಣಗಳು ಆ ಪಾವಿತ್ರ್ಯತೆಗೇ ಭಂಗ ಎನ್ನುವುದಕ್ಕಿಂತ ಅದನ್ನೇ ಚಿಂದಿ ಮಾಡಿ ಬೆಂಕಿಗೆ ಹಾಕಿವೆ ಎನ್ನಬಹುದು.
ಮಿಕ್ಸಿಗೆ, ಕುಕರಿಗೆ, ಸೀರೆಗೆ, ಸಾರಾಯಿಗೆ, ಇವ ನಮ್ಮವ,  ನಮ್ಮ ಜಾತಿಯವ ಎಂಬ ಮೋಹಕ್ಕೆ ಬೀಳಬಾರದು ಎಂಬ ಜಾಗೃತಿ ನಮ್ಮ ಲ್ಲಿಯೆ ಹುಟ್ಟಿದ ದಿನವೇ  ಈ ಸೊ ಕಾಲ್ಡ್ ಜಾತ್ಯತೀತರೆಂದು ತಮ್ಮನ್ನು ತಾವು ಕರೆದುಕೊಳ್ಳುವವರು ಮೂಲೆಸೇರುತ್ತಾರೆ.
ಕೊನೆಯ ಪಕ್ಷ ಮುಂದಿನ ಪೀಳಿಗೆಗಾದರೂ ಸ್ವಚ್ಛ ರಾಜಕಾರಣವನ್ನು ನಾವು ಕೊಡಲೇಬೇಕು. ಈ ಮತಮಾರಾಟದ, ಜಾತಿರಾಜಕಾರಣದ ಪ್ರಜಾಪ್ರಭುತ್ವದ ವಿಷವರ್ತುಲವನ್ನು ಭೇದಿಸುವ ಅಭಿಮನ್ಯುಗಳ  ಜನನವಾಗಲೇಬೇಕು. ಮುಂದಿನ ದಿನಗಳಲ್ಲಿ ನಾವು ಪ್ರಬುದ್ಧರಾಗಿ ಜಾತಿಪ್ರೇರಿತರಾಗದೆ ಯೋಗ್ಯ ವ್ಯಕ್ತಿ ಗಳನ್ನೇ ಆಯ್ಕೆ ಮಾಡಬೇಕು.

   ಮಾಲತಿ ಮುದಕವಿ

Leave a Reply