ದಿಲ್ ಥಾ ಛೋಟಾ ಸಾ… ಛೋಟಿ ಸಿ ಆಶಾ…

ದಿಲ್ ಥಾ ಛೋಟಾ ಸಾ… ಛೋಟಿ ಸಿ ಆಶಾ…
1970ರ ದಶಕ. ಮದುವೆಯಾಗಿ ಮೂರು ಮಕ್ಕಳಾಗಿದ್ದವು. ನನ್ನವರಿಗಾಗಲೇ ಹೃದಯಾಘಾತವಾಗಿತ್ತು. Doctor ಸಲಹೆಯ ಮೇರೆಗೆ ಹೆಚ್ಚು ಆಯಾಸ ಮಾಡಿಕೊಳ್ಳುವ ಹಾಗಿರಲಿಲ್ಲ. ಕರ್ನಾಟಕ ಹೈ ಸ್ಕೂಲ್ ಯಾವ ಕಡೆಯಿಂದ ಏರಿದರೂ ದಿಬ್ಬ ಹತ್ತಬೇಕಾಗುತ್ತಿತ್ತು. ಸೈಕಲ್ ಮೇಲೆ ಅಲ್ಲಿಯವರೆಗೆ ಹೋಗಿ ಒದ್ದಾಡುತ್ತಾ ಶಾಲೆ ತಲುಪಬೇಕಾಗಿತ್ತು. (ಕೊನೆಗೆ ಅನಿವಾರ್ಯವಾಗಿ ವಿದ್ಯಾರಣ್ಯ ಹೈಸ್ಕೂಲಿಗೆ ವರ್ಗ ಮಾಡಬೇಕಾಯಿತು) ನನಗೆ ವಿಪರೀತ ಹೆದರಿಕೆ. ಆದರೆ ಅನ್ನುವ ಹಾಗಿಲ್ಲ… ಬಿಡುವ ಹಾಗೂ ಇಲ್ಲ… ಒಂದು ರೀತಿಯ ಬಿಸಿತುಪ್ಪ . ನಾನು ಶಾಲೆಯಿಂದ ಬಂದಾಗ ಮನೆಯದುರು ಸಣ್ಣದೊಂದು ಗುಂಪು ಇದ್ದರೂ ಏನೇನೋ ಊಹಿಸಿಕೊಂಡು ಎದೆ ಧಸ್ ಎನ್ನುತ್ತಿತ್ತು. ಏಳುವುದು ಸ್ವಲ್ಪ ತಡವಾದರೂ ವಿಚಲಿತಳಾಗಿಬಿಡುತ್ತಿದ್ದೆ.
ಹಾಗೆಂದು ಅವರ ಆರೋಗ್ಯ ಕುರಿತಾದ ಚರ್ಚೆ ಮಾಡುವುದು ಅವರಿಗೆಂದೂ ಸೇರುತ್ತಿರಲಿಲ್ಲ. ನನಗೆ ಒಂದು ರೀತಿಯ Tension ನ್ನು ಸದಾ.. ನನಗೋ ಅವರೊಂದು ಲೂನಾ ಆದರೂ ತೆಗೆದುಕೊಳ್ಳಲಿ ಎಂಬ ಆಸೆ. ಆದರೆ ಪಗಾರ ನಾಲ್ಕಂಕಿಯೂ ಇಲ್ಲದ ದಿನಗಳವು. ಅಡಚಣೆಗೆ ಮಾಧ್ಯಮಿಕ ಶಿಕ್ಷಕರ ಸಹಕಾರ ಸಂಘದಿಂದ ಸಾಲ ಪಡೆವ ಸೌಲಭ್ಯವಿತ್ತು. ಆದರೆ ನಂತರ ಐದು ಜನರ ಸಂಸಾರ ತೂಗಿಸಿಕೊಂಡು ಅಷ್ಟು ಸಾಲ ಮರುಪಾವತಿಸುವದೂ ಸುಲಭದ ಮಾತಾಗಿರಲಿಲ್ಲ. ಅಂತೂ ಅವರ ಲೂನಾದ ಕನಸು, ಕನಸಾಗಿಯೇ ಮುಂದುವರೆಯಿತು. ನಾನು ಕುಮಟಾದಲ್ಲಿ BEd ಮುಗಿಸಿಬಂದು ನೌಕರಿಗೆ ಸೇರಿಕೊಂಡ ಮೇಲೆ ನಮ್ಮ ಕನಸುಗಳು ಬಣ್ಣ ಕಟ್ಟತೊಡಗಿದವು. ಆರೋಗ್ಯ ಪರಿಸ್ಥಿತಿ ಹೆಚ್ಚು ಬಿಗಡಾಯಿಸಿ ನಡೆಯುವುದು ಹೆಚ್ಚು ತ್ರಾಸದಾಯಕ ಅನಿಸಿದಾಗ ನಾನು ಗಾಡಿ ಖರೀದಿಸಲು ಆಗ್ರಹ ಪಡಿಸ ತೊಡಗಿದೆ. ಮುಂಬೈಗೆ ಒಮ್ಮೆ ಹೋಗಿ ಬಂದ ಮೇಲೆ ಆಗಬಹುದಾದ ಖರ್ಚು-ವೆಚ್ಚ ನೋಡಿ ನಂತರ ಗಾಡಿ ಎಂದು ಅವರು ಹಠ ಹಿಡಿದಾಗ ನಾನೇನು ಮಾಡುವ ಹಾಗೆ ಇರಲೇಯಿಲ್ಲ. ಒಪ್ಪಲೇಬೇಕಾದ ಅನಿವಾರ್ಯತೆ.
ನಾವು ಒಂದು ಬಗೆದರೆ ದೈವ ಇನ್ನೊಂದು ಬಗೆಯಿತು.. ಮುಂಬೈಗೆ ಹೋದವರು ಮರಳಿ ಬರಲಿಲ್ಲ ಕೊನೆಗೂ ಅವರ ಪುಟ್ಟ ಕನಸು ಕನಸಾಗಿಯೇ ಉಳಿಯಿತು.
ಆ ಮಾತಿಗೆ 35ವರ್ಷ ಪರಿಸ್ಥಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿದೆ. ಮಕ್ಕಳು ಶ್ರದ್ಧೆಯಿಂದ ಓದಿ ಅತ್ಯುತ್ತಮ ನೌಕರಿಯಲ್ಲಿದ್ದಾರೆ. ಎಲ್ಲರೂ ಎರಡೆರಡು ಕಾರುಗಳನ್ನಿಟ್ಟುಕೊಂಡಿದ್ದಾರೆ. ದೇಶ-ವಿದೇಶ ಎಗ್ಗಿಲ್ಲದೇ ಸುತ್ತಿದ್ದಾರೆ ನನ್ನನ್ನೂ ಸಾಕು ಸಾಕೆನಿಸುವಷ್ಟು ಸುತ್ತಿಸಿದ್ದಾರೆ. ಆದರೆ ಯಾವುದೇ ಒಂದು ಗಾಡಿಯ ಮೇಲೆ ಅವರ ವಯಸ್ಸಿನವರು ಕಂಡರೆ ನನ್ನವರ ಅಪೂರ್ಣ ಕನಸು ಕಣ್ಣು ತುಂಬಿ ಬಿಡುತ್ತದೆ. ಮಕ್ಕಳ high end ಕಾರುಗಳಲ್ಲಿ ತೇಲಿದಂತೆ ಹೋಗುವಾಗಲೆಲ್ಲ ನನ್ನವರು ಎದುಸಿರು ಬಿಡುತ್ತಾ ಕರ್ನಾಟಕ ಹೈ ಸ್ಕೂಲ್ ದಿಬ್ಬ ಏರುತ್ತಿರುವ ದೃಶ್ಯ ನೆನಪಾಗಿ ಸಂಕಟವಾಗುತ್ತದೆ.
ನಾವೇನೂ ಅಸಾಧ್ಯವೆನಿಸ ಬಹುದಾದ ಕನಸು ಕಂಡಿರಲಿಲ್ಲ. ನಾವು ಬೇಡಿದ್ದು ಒಂದಿಷ್ಟು ಕಾಲಾವಕಾಶ. ಒಂದು ಅತಿ ಸಾಧಾ ಅನ್ನಿಸುವಂಥ ಪುಟ್ಟ ಕನಸು. ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನೇ ಕಂಡಿದ್ದ ಜೀವವೊಂದು ಮುಂದಿಟ್ಟ ಪುಟ್ಟದೊಂದು ಆಸೆ..
ನನಗೆ ಈಗ ಬದುಕಿನ ಬಗ್ಗೆ ಪ್ರಶ್ನೆಗಳಿಲ್ಲ ಗೊಂದಲಗಳಿಲ್ಲ. ತಕರಾರುಗಳಂತೂ ಮೊದಲೇ ಇಲ್ಲ. ನಿರೀಕ್ಷಿಸಿದ್ದಕ್ಕಿಂತ ಹೆಚ್ಛೇ ದೊರೆತಿದೆ. ಅದಕ್ಕಾಗಿ ದೈವಕ್ಕೆ ನಾನು ಜೀವನಪರ್ಯಂತ ಋಣಿ. ಆದರೆ ಇದರಲ್ಲಿ ಸ್ವಲ್ಪ ಕಡಿತ ಮಾಡಿಯಾದರೂ ನನ್ನವರ ಪುಟ್ಟ ಬಯಕೆ ಈಡೇರಿಸಿದ್ದರೆ ಎಂಬ ಮಾತು ಮಾತ್ರ ನಾನಿರುವವರೆಗೂ ನನ್ನನ್ನು ಬಿಡುವಂತೆ ಕಾಣುವುದಿಲ್ಲ…..

Leave a Reply