ಇನಿತೇನಿಲ್ಲವೊ ಈ ಚಳಿಗಾಲ

ಇನಿತೇನಿಲ್ಲವೊ ಈ ಚಳಿಗಾಲ
— ಶೈಲಜಾ ಹೂಗಾರ

ಇನ್ನೇನು ಕುಳಿರ್ಗಾಳಿ ಬೀಸುತಲಿದೆ ಅನ್ನುವಾಗಲೂ ಮಳೆಗಾಲದ ಹಸಿ ಹಸಿ ನೆನಪ ಮಳಿ ಹನಿಯುವುದು ನಿಂತಿರಲಿಲ್ಲ. ಹಳೆಯದರ ಹಳವಂಡ ಅಷ್ಟು ಬೇಗ ಹೋಗಲೊಲ್ಲದಲ್ಲ. ಆ ಗುಟುರುವ ಕಪ್ಪೆ, ಮಳೆಹನಿಗೆ ತೊಪ್ಪೆಯಾದ ಮನವೀಗ ಚಳಿಗೆ ನಿಧಾನವಾಗಿ ಹೇಗೆ ಹೊಂದಿಕೊಳ್ಳುವುದೆಂದು ಹಲವು ಹಾದಿ ಹೊಳಹು.

ಕನಸು ಕನವರಿಕೆಗಳಿಗೆಲ್ಲ ಪ್ರಶಸ್ತ ಸುದೀರ್ಘ ಕತ್ತಲು ಕಾಲ. ಅವುಗಳ ನನಸಿಗೆ ಇರುವ ಸಮಯ ಅತ್ಯಲ್ಪ ಎಂಬ ನೀತಿ ಸಾರಿಬಿಡುತ್ತದೆ ನಿಸರ್ಗ ಚಳಿಗಾಲದ ಹಗಲಿನಲೆ. ಮುಂದೆ ಇನ್ನೇನು ಆ ದಿನಕರನೇ ದಿನವೆಲ್ಲ ಎಂಬ ಭರವಸೆಯಲೂ ಕಣ್ಣ ಬೆಳಕು ಪ್ರಖರ. ಹೌದು ಅದಾಗಲೇ ಅಂಗಳದ ಬಟ್ಟಲುಹೂವಿನ ಮೇಲಿನ ಮಂಜು ದಿನಕರನ ಓರೆನೋಟಕೆ ಕರಗಿ ಅದರೊಡಲ ಮೇಲೆಲ್ಲ ನೀರ ಹನಿಗಳ ಸಿಂಗಾರ. ಮುಷ್ಟಿಯಷ್ಟೇ ಪುಟ್ಟ ಹಕ್ಕಿಗೆ ಇದನ್ನು ಸನಿಹದಿಂದ ಕಾಣುವಾಸೆ. ಸೂರ್ಯನ ಕಿರಣ ಚುಂಬಿಸಿ ತಾನೆ ತಾವರೆ ಅರಳಿತು? ಅವನ ಈ ಪ್ರೇಮ ಸ್ಪರ್ಶಕೆ ತಾನೆ ಹೃದಯವು ಅರಳಿತು….ಅವನ ಸುತ್ತಲೇ ಪ್ರೀತಿ. ಆದರೆ ನೋಡು ಆ ಕಡೆ ಊರಿಗೆಲ್ಲ ಹಂಚಿ ಉಳಿದಿದ್ದ ಕೊಡಾಕೂ ಕಂಜೂಸುತನ ಮಾಡ್ತೀದಿ. ಇದೇನೊ ಚೆಂದ ಹತ್ತಿರವಾಗು ಬಾ. ಬಿಸಿಯುಸಿರ ನೆಚ್ಚಿ ಕಾಯುತಿರುವೆ.

ಸಂಜೆದೀಪಗಳು ಈಗ
ಹೊತ್ತುವುದು ಬೇಗ

ಕಾಲಾಂತರದ ನಡುವಣ ದಿನಗಳಿವು
ಚಳಿಗಾಲದ ಬಣ್ಣಗೆಟ್ಟ ಎಲೆಗಳು
ಬೇಸಿಗೆಯ ತಿಳಿಹಸಿರು ಮರಗಳು
ವಲಸೆ ಹಕ್ಕಿಗಳು ರೆಕ್ಕೆಬಿಚ್ಚಿದ ದಿನಗಳು

ಇನ್ನೂ ಚಳಿ ಅಷ್ಟಿಲ್ಲ; ಎಲೆಯುದುರಿಯಾಗಿದೆ
ತುಸುವೆ ನಿಂತು ವಿರಮಿಸಿದೆಯೆ ಕಾಲ
ಬೆಚ್ಚನೆ ಒಲೆಯೆದುರಿನ ಮರುತಾಕು ಇದ್ದರೂ
ಇನಿತೇನಿಲ್ಲವೆನಿಸಿದೆ ಚಳಿಗಾಲ

Leave a Reply