ಪಶ್ಚಿಮ ಘಟ್ಟ ಸಂರಕ್ಷಣೆ

ಎತ್ತ ಸಾಗಿದೆ ಪಶ್ಚಿಮಘಟ್ಟ ಸಂರಕ್ಷಣೆ?
-ಪ್ರಸನ್ನ ಕರ್ಪೂರ 
ಪಶ್ಚಿಮ ಘಟ್ಟ ಸಂರಕ್ಷಣೆಗೆ ನಮ್ಮ ಕೇಂದ್ರ ಸರ್ಕಾರ ಕಸ್ತೂರಿರಂಗನ್ ಕಾರ್ಯಪಡೆ ನೇಮಿಸಿ ವರದಿ ಸಲ್ಲಿಸಲು ಸೂಚಿಸಿತ್ತು. ಜತೆಗೆ ಡಾ. ಮಾಧವ ಗಾಡ್ಗೀಳ ನೇತೃತ್ವದ ಸಮಿತಿಯನ್ನೂ ರಚಿಸಿ ವರದಿ ತಯಾರಿಕೆಗೆ ಸೂಚಿಸಿತು. ಎರಡೂ ಸಮಿತಿಗಳು ತಮ್ಮ ತಮ್ಮ ವರದಿ ನೀಡಿದ್ದವು. ಆದರೆ ಇದೀಗ ಕೇಂದ್ರ ಕಸ್ತೂರಿರಂಗನ್ ವರದಿ ಮಾನ್ಯತೆ ನೀಡಿ ಗಾಡ್ಗೀಳ ವರದಿಯನ್ನು ತಳ್ಳಿಹಾಕಿದೆ. ಹಾಗಾದರೆ ಏನಿದು ವರದಿ? ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕೊಟ್ಟ ಸಲಹೆ ಸೂಚನೆಗಳೇನು? ಇಲ್ಲಿದೆ ವಿಸ್ತøತ ವಿವರ.
ನಮ್ಮ ದೇಶದಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತಿದೆ. ಅಭಯಾರಣ್ಯಗಳಿವೆ. ಪರ್ವತ ಶ್ರೇಣಿಗಳಿವೆ. ನದಿ ಉಪನದಿಗಳಿವೆ. ಅಪಾರ ಸಸ್ಯ ಸಂಪತ್ತಿದೆ. ಸಕಾಲಕ್ಕೆ ಮಳೆ ಬೆಳೆ ಬರಬೇಕೆಂದರೆ ಜತೆಗೆ ಪರಿಸರ ಸಮತೋಲನ ಕಾಪಾಡಲು ಈ ಸಂಪತ್ತಿನ ರಕ್ಷಣೆ ಅತ್ಯವಶ್ಯ. ಪಶ್ಚಿಮ ಘಟ್ಟ ಅಪಾರ ಜೀವಸಂಕುಲ ಹಾಗೂ ಜೀವವೈಧ್ಯತೆಯ ಅಪರೂಪದ ತಾಣ.ವಿಶ್ವದ 193 ನೈಸರ್ಗಿಕ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ವ್ಯಾಪ್ತಿ ಹೊಂದಿರುವ ಈ ತಾಣದ ಪರಿಸರ ಅತೀ ಸೂಕ್ಷ್ಮ. ಆದರೆ ಬದಲಾದ ಸನ್ನಿವೇಶದಲ್ಲಿ ಅಭಿವೃದ್ಧಿಯ ನೆಪದಲ್ಲಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಉದ್ಯಮಗಳ ಸ್ಥಾಪನೆ ಜತೆಗೆ ತಲೆತಲಾಂತರದಿಂದ ವಾಸಿಸುತ್ತಿರುವ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆಯಿತು. ಇದಕ್ಕೆ ಅಷ್ಟೇ ದೊಡ್ಡ ಪ್ರಮಾಣದಲ್ಲಿ ವಿರೋಧವೂ ವ್ಯಕ್ತವಾಗಿದೆ. ಅರಣ್ಯ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಕಾಯ್ದೆ ಸೇರಿದಂತೆ ನೂರೆಂಟು ಕಾಯ್ದೆಗಳು ನಮ್ಮಲ್ಲಿ ಬಹಳಷ್ಟಿವೆ. ಆದರೆ ಇವೆಲ್ಲಾ ಬರೀ ಹಾಳೆಯ ಮೇಲಿವೆ. ಅನುಷ್ಠಾನದ ಮಾತೇ ಕೇಳಬೇಡಿ. ಪಶ್ಚಿಮಘಟ್ಟದಲ್ಲಿ ಅವ್ಯಾಹತವಾಗಿ ಪರಿಸರ ನಾಶ ಸಾಗುತ್ತ ಬಂದಿದೆ ಎನ್ನುವ ಕೂಗು ಬಲವಾಗುತ್ತ ಬಂದಿತು. ಆಗ ಎಚ್ಚೆತ್ತ ಸರ್ಕಾರ ಖ್ಯಾತ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವದ ಸಮಿತಿ ರಚನೆಗೆ ಮುಂದಾಯಿತು. ಇದಲ್ಲದೇ ಡಾ. ಮಾಧವ ಗಾಡ್ಗೀಳ ಅವರಿಗೂ ವರದಿ ನೀಡಲು ಹೇಳಿತು.
ಬೇಕಿದೆ ಪ್ರಾಮಾಣಿಕ ಅನುಷ್ಠಾನ
ಕಸ್ತೂರಿರಂಗನ್ ಹಾಗೂ ಡಾ. ಮಾಧವ ಗಾಡ್ಗೀಳ್ ನೀಡಿದ ಎರಡೂ ವರದಿಗಳು ಪಶ್ಚಿಮಘಟ್ಟಗಳ ಬಗ್ಗೆ ಸಮಗ್ರ ದೃಷ್ಟಿಕೋನ ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ವಿಶೇಷವಾಗಿ ಡಾ. ಮಾಧವ ಗಾಡ್ಗೀಳ ವರದಿ ಪಶ್ಚಿಮಘಟ್ಟಗಳ ರಕ್ಷಣೆಗೆ ಕೆಲ ಕಠಿಣ ಕ್ರಮ ಸೂಚಿಸಿತ್ತು ಎಂಬುದು ಇಲ್ಲಿ ಗಮನಾರ್ಹ ಅಂಶ. ಗಾಡ್ಗೀಳ ವರದಿ ಹೋಲಿಸಿದಲ್ಲಿ ಕಸ್ತೂರಿರಂಗನ್ ವರದಿ ಬಗ್ಗೆ ಕೆಲ ಆಕ್ಷೇಪಗಳು ಕೇಳಿ ಬಂದದ್ದೂ ಉಂಟು. ಇದಕ್ಕಿಂತ ಹೆಚ್ಚಾಗಿ ಮೊದಲಿನಿಂದಲೂ ಈ ಪಶ್ಚಿಮಘಟ್ಟ ವ್ಯಾಪ್ತಿ ಗುರುತಿಸುವುದೇ ಒಂದು ದೊಡ್ಡ ಸವಾಲಾಗಿತ್ತು. ಗೊಂದಲ ಸೃಷ್ಟಿಸಿತ್ತು. ಎಷ್ಟೋ ವರ್ಷ ಹಿಂದೆ ಯೋಜನಾ ಆಯೋಗ ನೀಡಿದ ವರದಿಯನ್ವಯ ಪಶ್ಚಿಮಘಟ್ಟಗಳ ವ್ಯಾಪ್ತಿ ನಿರ್ಧರಿಸಬೇಕಾದ ಅನಿವಾರ್ಯತೆ ನಮ್ಮದು. ಅಲ್ಲಿವರೆಗೆ ನಮ್ಮವರಿಗೆ ಯಾರಿಗೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಪುರಸೊತ್ತಿರಲಿಲ್ಲ. ಈ ಮಧ್ಯೆ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಹೊಸದಾದ ಕಾಯ್ದೆ ರೂಪಿಸುವ ಅಗತ್ಯವೂಇಲ್ಲ. ಇರುವ ಕಾಯ್ದೆಗಳು ಪ್ರಾಮಾಣಿಕವಾಗಿ ಅನುಷ್ಠಾನವಾದರೆ ಸಾಕು.
ವರದಿಯಲ್ಲಿ ವೈರುಧ್ಯ
ಒಂದೆಡೆ ಪರಿಸರ ಸಂರಕ್ಷಣೆಯ ಕೂಗು ಇನ್ನೊಂದೆಡೆ ಅಭಿವೃದ್ಧಿಯ ಜಪ. ಇದರ ಮಧ್ಯೆ ಸಿಲುಕಿದ ಸರ್ಕಾರ ಅನಿವಾರ್ಯತೆಯಿಂದಲೋ ಏನೋ ಹಲವೆಡೆ ಕಿರು ಜಲವಿದ್ಯುತ್ ಯೋಜನೆ, ವಿದ್ಯುತ್ ಸ್ಥಾವರಗಳ ನಿಮಾಣ, ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಅನುಮತಿ ಕೊಟ್ಟಿತು. ಇದರಿಂದ ವಿದ್ಯುತ್ ಉತ್ಪಾದನೆ ಎಂಬ ಸಬೂಬು ಕೊಟ್ಟರು ನಾವು ಕಳೆದುಕೊಂಡಿದ್ದು ಸಾಕಷ್ಟಿದೆ. ಅದರ ಬೆಲೆ ಕಟ್ಟಲಾಗದು. ನದಿ ತಿರುವು ಯೋಜನೆಗಳಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಖಚಿತ. ಜಲವಿದ್ಯುತ್ ಯೋಜನೆಗಳಿಂದ ಅರಣ್ಯನಾಶ ಖಚಿತ. ಆದರೆ ಕಸ್ತೂರಿರಂಗನ್ ವರದಿಯಲ್ಲಿ ಜಲಪೂರೈಕೆ ಯೋಜನೆಗೆ ಅವಕಾಶ ಇಟ್ಟಿದ್ದು ವಿಪರ್ಯಾಸದ ಸಂಗತಿ. ಅದೇ ಗಾಡ್ಗೀಳ ವರದಿಯಲ್ಲಿ ಇಂತಹ ಯೋಜನೆಗಳಿಗೆ ಸುತಾರಾಂ ಅವಕಾಶವಿಲ್ಲ. ಕಸ್ತೂರಿರಂಗನ್ ವರದಿಯನ್ವಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮಾದರಿಯ ಎಲ್ಲ ರೀತಿಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು. ಆದರೆ ನದಿ ತಿರುವು ಯೋಜನೆಗೆ ಅಸ್ತು ಎಂದಿರುವುದು ಪರಿಸರಾಸಕ್ತರ ವಿರೋಧಕ್ಕೆ ಕಾರಣವಾಗಿದೆ. ದಕ್ಷಿಣÀ ಕನ್ನಡ ಜಿಲ್ಲೆಯಲ್ಲಿ ಉದ್ದೇಶಿತ ಎತ್ತಿನಹೊಳೆ ಯೋಜನೆಗೆ ತೊಂದರೆಯಾಗಲಿಕ್ಕಿಲ್ಲ. ಇನ್ನು ಉತ್ತರ ಕನ್ನಡ ಜಿಲ್ಲೆ ಯೋಜನೆಗಳ ಜಿಲ್ಲೆ ಎಂದೇ ಖ್ಯಾತಿ ಪಡೆದಿದೆ. 1956 ರಿಂದ ಈವರೆಗೆ 61.860.85 ಹೆಕ್ಟೇರ್ ಅರಣ್ಯ ಭೂಮಿ ಈ ಯೋಜನೆಗಳ ಪಾಲಾಗಿದೆ. ಇದರಲ್ಲಿ ಜಲವಿದ್ಯುತ್ ಯೋಜನೆಗೆ ಅಗ್ರಪಾಲು. ಇದೀಗ ಕಸ್ತೂರಿರಂಗನ್ ವರದಿ ಶಿಫಾರಸಿನ್ವಯ ಜಲವಿದ್ಯುತ್ ಯೋಜನೆಗೆ ಅವಕಾಶ ಕೊಟ್ಟಿರುವುದು ಆತಂಕಕಾರಿ ವಿಷಯವಾಗಿದೆ.
ಕಸ್ತೂರಿರಂಗನ್ ವರದಿ
ಕಸ್ತೂರಿರಂಗನ್ ವರದಿಯನ್ವಯ ಪಶ್ಚಿಮಘಟ್ಟದ ಶೇ. 37 ರಷ್ಟು ಮಾತ್ರ ನಿರ್ಬಮಧಿತ ವಲಯ. ಉಳಿದ ಪ್ರದೇಶದಲ್ಲಿ ಸಾಂಸ್ಕøತಿಕ ಕ್ಷೇತ್ರ ಎಂದು ಪರಿಗಣಿಸಿ ಅಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಇದರಿಂದ ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಜತೆಗೆ ಮಹಾರಾಷ್ಟ್ಟರದ ಸಿಂಧದುರ್ಗ, ರತ್ನಾಗಿರಿ ಜಿಲ್ಲೆಗಳಲ್ಲಿ ಹರಿಯುವ ನದಿ ಪ್ರದೇಶವನ್ನು ಪಶ್ಚಿಮಘಟ್ಟ ಸೂಕ್ಷ್ಮವಲಯಪಟ್ಟಿಯಿಂದ ಹೊರಗಿಡಲು ಸೂಚಿಸಿರುವುದು ಹಲವು ಪರಿಸರತಜ್ಞರ ವಿರೋಧಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ-ಅಂಕೋಲಾ ಮತ್ತೆ ನನೆಗುದಿಗೆ ?
ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತು ಡಾ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ನೀಡಿದ ಶಿಫಾರಸುಗಳನ್ನು ಪರಿಸರ ಸಚಿವಾಲಯ ಒಪ್ಪಿರುವುದರಿಂದ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಕುರಿತು ಪುನಃ ಅನಿಶ್ಚಯ ಸ್ಥಿತಿ ತಲೆದೋರಿದಂತಾಗಿದೆ. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಬಗ್ಗೆ ಸಮಿತಿ ಖಚಿತವಾಗಿ ಏನನ್ನು ಹೇಳಿಲ್ಲದಿದ್ದರೂ ಪಶ್ಚಿಮ ಘಟ್ಟದ 60 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಅಪಾಯಕಾರಿ ಯೋಜನೆಗಳಿಗೆ ನಿರ್ಬಂಧ ವಿಧಿಸಿರುವುದು ಮತ್ತು ಯೋಜನೆಗಳಿಂದ ಅಮೂಲ್ಯ ಪ್ರಾಣಿ, ಪಕ್ಷಿ, ಜೀವವೈವಿದ್ಯತೆ ಹಾಗೂ ಸಸ್ಯನಾಶಕ್ಕೆ ಅವಕಾಶವಾಗುತ್ತಿರುವುದನ್ನು ಸಮಿತಿ ಉಲ್ಲೇಖಿಸಿದೆ. ಅಲ್ಲದೇ 2010 ರಲ್ಲಿ ಹುಬ್ಬಳ್ಳಿ ಅಂಕೋಲಾ ರೇಲ್ವೆ ಯೋಜನೆ ಅಧ್ಯಯನಕ್ಕೆ ನೇಮಕಗೊಂಡಿದ್ದ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಮಹಾನಿರ್ದೆಶಕ ಡಾ. ಪಿ.ಬಿ ಗಂಗೋಪಾಧ್ಯಾಯ ಸಮಿತಿ ನೀಡಿದ ವರದಿಯಲ್ಲಿ ರೈಲು ಮಾರ್ಗ ಹಾದು ಹೋಗುವ ಅರಣ್ಯ ಜೀವ ವೈವಿಧ್ಯತೆ ದೃಷ್ಟಿಯಿಂದ ಎಷ್ಟೊಂದು ಮಹತ್ವದ್ದೆಂದು ವಿವರಿಸಿದೆ.
ಸಸ್ಯ ಪ್ರಭೇದಕ್ಕೆ ಧಕ್ಕೆ
ಹುಲಿ, ಚಿರತೆ, ಕರಡಿ, ಕಾಡುಹಂದಿ, ಕಾಡು ನಾಯಿ, ಆನೆ ಸೇರಿದಂತೆ ತುಂಬಾ ಅಪರೂಪದ ಪ್ರಾಣಿ, ಪಕ್ಷಿ ಸಂಕುಲದ ಉಳಿವಿಗೆ ಈ ರೈಲು ಮಾರ್ಗದಿಂದ ಧಕ್ಕೆಯಾಗಲಿದೆ ಎಂದು ವಿವರಿಸಿ ವರದಿ ನೀಡಿತ್ತು. ಅಲ್ಲದೇ ಸಮಿತಿಯ ವರದಿಯಲ್ಲಿ ಯಲ್ಲಾಪುರ – ಕಿರವತ್ತಿ ನಡುವೆ “ಆನೆ ಪಥ”ವಿದ್ದು ಇಡೀ ಪಶ್ಚಿಮ ಘಟ್ಟದಲ್ಲಿ ಈ ಭಾಗದಲ್ಲಿ ಮಾತ್ರ ಆನೆಗಳ ಹಿಂಡು ಕಂಡು ಬಂದಿರುವುದಾಗಿ ಸಮಿತಿ ವರದಿಯಲ್ಲಿ ವಿವರಿಸಿತ್ತು. ಅಲ್ಲದೇ ಈ ರೈಲ್ವೇ ಮಾರ್ಗದಿಂದ ಅಪರೂಪದ್ದೆಂದು ಪರಿಗಣಿಸಲಾದ 426 ಸಸ್ಯ ಪ್ರಭೇದಗಳು ಮತ್ತು 20 ಪ್ರಾಣಿ ಸಂಕುಲಗಳು ಕಣ್ಮರೆಯಾಗುವ ಸಾಧ್ಯತೆಯನ್ನು ಸಮೀತಿ ವಿವರಿಸಿತ್ತು. ವಾರ್ಷಿಕ ಸರಾಸರಿ 3 ಸಾವಿರ ಮಿ.ಮೀ ಮಳೆ ಬೀಳುವ ನಿತ್ಯ ಹರಿದ್ವರ್ಣದ ಮತ್ತು ಅರೆ ಹರಿದ್ವರ್ಣದ ಕಾಡಿನ ನಡುವೆ ಉದ್ದೇಶಿತ ರೈಲು ಮಾರ್ಗ ಹಾದು ಹೋಗಲಿದೆ. ಇದರಿಂದ 4.1 ಲಕ್ಷ ಸಂಖ್ಯೆಯಲ್ಲಿ ಮರಗಳು ನೆಲಕ್ಕುರುಳಲಿವೆÉ. 1365 ಹೆಕ್ಟರ್ ಅರಣ್ಯ ಭೂಮಿ ಯೋಜನೆಯ ವ್ಯಾಪ್ತಿಗೆ ಸೇರಬೇಕಾಗುತ್ತದೆಂದು ವಿವರಿಸಿತ್ತು.
ಯೋಜನೆಗಿದೆ ಅವಕಾಶ
ಆದರೆ ಡಾ.ಟಿ.ವಿ. ರಾಮಚಂದ್ರ ಸಮಿತಿ ನೀಡಿದ ವರದಿಯಲ್ಲಿ 665 ಹೆ. ಅರಣ್ಯಭೂಮಿ ಯೋಜನೆಗೆ ಬಳಕೆಯಾಗುವುದಲ್ಲದೇ 2 ಲಕ್ಷಕಿಂತ ಕಡಿಮೆ ಸಂಖ್ಯೆಯಲ್ಲಿ ಮರಗಳನ್ನು ಕಡಿಯ ಬೇಕಾಗಬಹುದೆಂದು ವಿವರಿಸಿತ್ತು. ಅಲ್ಲದೇ ದೇಶದ ತುಂಬೆಲ್ಲ ಆನೆಗಳ ಹಿಂಡು ಇರುವುದರಿಂದ ಅಲ್ಲೇಲ್ಲ “ ಆನೆಗಳ ಪಥ” ದಲ್ಲಿ ಪರ್ಯಾಯ ಮಾರ್ಗ ರಚಿಸಿದಂತೆ ಇಲ್ಲಿಯೂ ರಚಿಸಿದರೆ ಆನೆಗಳ ಸಂಚಾರಕ್ಕೆ ತಡೆಯಾಗದೆಂದು ವಿವರಿಸಿತ್ತು. ಡಾ. ಗಂಗೋಪಾಧ್ಯಾಯ ಸಮಿತಿಯ ವರದಿಯಲ್ಲಿ ಮತ್ತು ಟಿ.ವಿ. ರಾಮಚಂದ್ರ ಸಮಿತಿ ನೀಡಿದ ವರದಿಯಲ್ಲಿ ವ್ಯತ್ಯಾಸಗಳಿರುವುದನ್ನು ಸಹಜವಾಗಿ ಮೇಲ್ನೋಟದಲ್ಲೇ ಗುರುತಿಸಬಹುದಾಗಿದೆ. ಪಶ್ಚಿಮ ಘಟ್ಟದ ಸೂಕ್ಷ್ಮತೆಗೆ ಧಕ್ಕೆಯಾಗದಂತೆ ಹುಬ್ಬಳ್ಳಿ- ಅಂಕೋಲಾ ರೇಲ್ವೆ ಮಾರ್ಗ ನಿರ್ಮಿಸಲು ಅವಕಾಶವಿದೆ. ದೇಶದ ಎಲ್ಲಾ ಭಾಗದಲ್ಲೂ ಪರಿಸರವಿದ್ದು ಅಲ್ಲೆಲ್ಲ ಯೋಜನೆಗಳು ಅನುಷ್ಠಾನಗೊಂಡಿರುವುದರಿಂದ ಅಲ್ಲಿ ಅಭಿವೃದ್ಧಿಯಾಗಿರುವುದನ್ನು ಕಾಣುತ್ತೇವೆ. ಪರಿಸರದ ಹೆಸರು ಹೇಳಿ ಹುಬ್ಬಳ್ಳಿ- ಅಂಕೋಲಾ ರೇಲ್ವೆ ಮಾರ್ಗ ನಿರ್ಮಾಣಗೊಳ್ಳದಿದ್ದರೆ ಇಡೀ ಉತ್ತರ ಕರ್ನಾಟಕದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಲಿದೆ ಎಂಬುದು ಅಷ್ಟೇ ಸತ್ಯ. ಕಿರವತ್ತಿ ಯಲ್ಲಾಪುರ ಭಾಗದಲ್ಲಿ ಆನೆಯ ಪಥವಿರಬಹುದಾದರೂ ಕಾಡುಪ್ರದೇಶ ತೀರ ಕಡಿಮೆ ಇರುವ ಅಂಶವನ್ನು ಎತ್ತಿ ಹೇಳಿದೆ. ಪರಿಸರ ಮಂತ್ರಾಲಯವು ಡಾ. ಟಿ.ವಿ. ರಾಮಚಂದ್ರ ಸಮಿತಿಯು ನೀಡಿದ ವರದಿಯಲ್ಲಿರುವ ವೈಜ್ಞಾನಿಕ ಸತ್ಯತೆಯನ್ನು ಮರೆಮಾಚಿ ಕೇವಲ ಡಾ. ಕಸ್ತೂರಿ ರಂಗನ್ ಮತ್ತು ಗಂಗೋಪಾಧ್ಯಾಯ ಸಮಿತಿಯ ವರದಿಯನ್ನಷ್ಟೇ ಪರಿಗಣಿಸಬಾರದು. ಈ ಭಾಗಕ್ಕೆ ಅನ್ಯಾಯವಾಗದಂತೆ ಯೋಜನೆಯನ್ನು ಜಾರಿಗೊಳಿಸಬೇಕು. ಅಲ್ಲದೇ ರೇಲ್ವೆ ಮಾರ್ಗವನ್ನು ರಚಿಸಬಾರದೆಂದು ಸಮಿತಿ ಹೇಳಲ್ಲವಾದ್ದರಿಂದ ರೇಲ್ವೆ ಮಾರ್ಗ ಅನುಷ್ಠಾನಗೊಳಿಸಲು ತೊಡಕಾಗದು .
ರಾಜ್ಯದ ನಿಲುವಿಗೆ ಜನರ ತಕರಾರು
ಪಶ್ಚಿಮ ಘಟ್ಟ ಸಾಲಿನ ಅರಣ್ಯ ಪ್ರದೇಶದ ಸಂರಕ್ಷಣೆ ಸಂಬಂಧ ಡಾ. ಕಸ್ತೂರಿರಂಗನ್ ವರದಿ ಜಾರಿ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಧಾರವು, ಮಲೆನಾಡು ಪ್ರದೇಶದ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಪರಿಸರ ಸಂರಕ್ಷಣೆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಸ್ತೂರಿ ರಂಗನ್ ಸಲ್ಲಿಸಿದ ವರದಿ ಮಲೆನಾಡು ಭಾಗದಲ್ಲಿ ಈಗಾಗಲೇ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ. ರಾಜ್ಯ ಸರಕಾರ ಕಿರು ಜಲ ವಿದ್ಯುತ್ ಯೋಜನೆ, ಮರಳು, ಕಲ್ಲು ಗಣಿಗಾರಿಕೆಗೆ ಮಾತ್ರ ಮುಕ್ತ ಅವಕಾಶ ನೀಡಬೇಕು ಎಂದು ನಿರ್ಣಯ ತೆಗೆದುಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಕೃಷಿ, ಮನೆಗಾಗಿ ಮಾಡಿದ ಒತ್ತುವರಿ ಪ್ರದೇಶ ತೆರವು ಸಮಸ್ಯೆಯಿಂದ ಕಂಗಾಲಾಗಿರುವ ಮಲೆನಾಡಿನ ಜನತೆಗೆ ರಾಜ್ಯ ಸರಕಾರ ನೆರವು ನೀಡಲು ಮುಂದಾಗದಿರುವುದು ಈಗ ಜನರ ಆಕ್ರೋಶಕ್ಕೆ ಗುರಿಯಾಗಿದೆ.ಕಸ್ತೂರಿ ರಂಗನ್ ವರದಿಗೆ ರಾಜ್ಯ ಸರಕಾರ ಭಾಗಶಃ ಒಪ್ಪಿಗೆ ನೀಡಿದೆ. ಇದಕ್ಕೆ ಪಶ್ಚಿಮಘಟ್ಟ ವ್ಯಾಪ್ತಿಯ ಜನರು ತಕರಾರು ಎತ್ತಿದ್ದಾರೆ.
ಪಶ್ಚಿಮಘಟ್ಟ ಹಾಗೂ ಈ ವ್ಯಾಪ್ತಿಯ ಜನಜೀವನಕ್ಕೆ ಮಾರಕ ಎಂಬ ಕಾರಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದ ಕಸ್ತೂರಿ ರಂಗನ್ ವರದಿಯನ್ನು ಸರಕಾರ ಒಪ್ಪಿಕೊಳ್ಳುವ ಜರೂರತ್ತು ಏನಿತ್ತು ? ಎಂಬುದು ಜನರ ಪ್ರಶ್ನೆಯಾಗಿದೆ. ಕಸ್ತೂರಿ ರಂಗನ್ ವರದಿ ಸರಕಾರಕ್ಕೆ ಹೆಚ್ಚು ಪೂರಕವಾಗಿದ್ದರಿಂದಲೇ ಒಪ್ಪಿಕೊಳ್ಳಲಾಗಿದೆ ಎಂಬ ಅಪವಾದವೂ ಕೇಳಿಬರುತ್ತಿದೆ.
ಪಶ್ಚಿಮಘಟ್ಟ ವ್ಯಾಪ್ತಿಯ ಲೋಕಸಭೆ ಕ್ಷೇತ್ರಗಳಲ್ಲಿ ಈ ಬಾರಿ ಕಸ್ತೂರಿ ರಂಗನ್ ವರದಿ ಕೂಡ ಪ್ರಮುಖ ಚರ್ಚೆಯ ವಿಷಯವಾಗಿತ್ತು. ಕಣದಲ್ಲಿದ್ದ ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು `ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ನೀಡುವುದಿಲ್ಲ’ ಎಂದೇ ಭರವಸೆ ನೀಡಿದ್ದರು. ಆಡಳಿತ ಪಕ್ಷ ಕಾಂಗ್ರೆಸ್ ಕೂಡ ಚುನಾವಣೆ ಮುಗಿಯುವವರೆಗೆ ಕಸ್ತೂರಿ ರಂಗನ್ ವರದಿ ಬಗ್ಗೆ ಮೌನ ವಹಿಸಿತ್ತು.
ಏ.28 2014 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ತಿದ್ದುಪಡಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರದಿಗೆ ಭಾಗಶಃ ಒಪ್ಪಿಗೆ ನೀಡುವ ಮೂಲಕ ರಾಜ್ಯ ಸರಕಾರ ಅಚ್ಚರಿ ಹೆಜ್ಜೆ ಇಟ್ಟಿದೆ. ಪಶ್ಚಿಮಘಟ್ಟದಲ್ಲಿ ನೆಲೆ ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ನಕ್ಸಲರೊಂದಿಗೆ ನೊಂದ ಜನ ಕೈಜೋಡಿಸಿದರೆ ಮಲೆನಾಡು ಮತ್ತಷ್ಟು ಪ್ರಕ್ಷುಬ್ಧಗೊಳ್ಳುವ ಅಪಾಯವಿದೆ ಎಂದು ಕೆಲವು ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸುತ್ತಾರೆ.
ಸಂಕಷ್ಟದ ಜೀವನ
ಪಶ್ಚಿಮಘಟ್ಟ ಸಾಲಿನ ಮಲೆನಾಡು ಭಾಗದ ಜನ ಜೀವನ ಕ್ರಮ ಅಂದಾಜಿಸದೆ ಕಾನೂನು ರಚನೆಯಾಗಿದ್ದು, ಬದುಕು ಕಳೆದುಕೊಳ್ಳುವಂತಹ ಸನ್ನಿವೇಶ ಸೃಸ್ಟಿಯಾಗಿದ್ದು, ಸರಕಾರ, ಜನರ ನಡುವೆ ಸಂಘರ್ಷಕ್ಕೆಡೆ ಮಾಡಲಿದೆ. ಅಡಕೆ, ಕಾಫಿ, ರಬ್ಬರ್ ದರ ಏರಿಕೆಯಾದ ಬಳಿಕ ಮಲೆನಾಡು ಭಾಗದ ಕೃಷಿ ಜೀವನ ಶೈಲಿಯಲ್ಲಿ ಬಾರೀ ಬದಲಾವಣೆ ಆಗಿದೆ. ಅಡಕೆ, ಬಾಳೆ, ರಬ್ಬರ್, ಕಾಫಿ ತೋಟ ಎಕರೆಗಟ್ಟಲೆ ವಿಸ್ತರಣೆಗೊಂಡಿದೆ. ಬದಲಾವಣೆ ದೆಸೆಯಿಂದ ಎಕರೆಗಟ್ಟಲೆ ಅರಣ್ಯ ಕೂಡ ನಾಶವಾಗಿದೆ. ಕೆಲ ರೈತರು ಅರಣ್ಯವನ್ನು ಸಂರಕ್ಷಣೆ ಮಾಡಿದ್ದಾರೆ. ಪಶ್ಚಿಮಘಟ್ಟ ಸಾಲಿನ ಅರಣ್ಯ ಸಂರಕ್ಷಣೆಗಾಗಿ ಜನರು ಜೀವನ ತ್ಯಾಗ ಮಾಡುವುದು ಅನಿವಾರ್ಯ ಎಂಬಂತೆ ಕಾನೂನು ರೂಪಿತಗೊಳ್ಳುತ್ತಿರುವುದು ಜನರನ್ನು ಸಂಕಷ್ಟಕ್ಕೆ ತಳ್ಳುವಂತೆ ಮಾಡಿದೆ.
ಕಲ್ಲು, ಮರಳು ಲಾಬಿ
ಪಶ್ಚಿಮಘಟ್ಟ ಸಾಲಿನ ಸೂಕ್ಷ್ಮ ಅರಣ್ಯ ಪ್ರದೇಶದ ಪರಿಸರದಲ್ಲಿ ಮರಳು, ಕಲ್ಲು ಗಣಿಗಾರಿಕೆಗೆ ಮುಕ್ತ ಅವಕಾಶ ನೀಡಬೇಕು ಎಂದು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿರುವುದು ಸರಿಯೇ ಎನ್ನುವ ಪ್ರಶ್ನೆ ಮಲೆನಾಡು ಭಾಗದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮನೆ, ಕೊಟ್ಟಿಗೆ, ಕಣ, ಹಿತ್ತಲು, ಚಪ್ಪರ, ಬ್ಯಾಣ, ಹಾಡ್ಯ, ಹಕ್ಕಲು, ಕುಮ್ಕಿ, ಸಾಗುವಳಿ ಪ್ರದೇಶದ ಪಕ್ಕದ ತಲೆಕಟ್ಟು ಹೆಸರಲ್ಲಿ ರೈತರ ಹಕ್ಕಿಗೆ ಒಳಪಟ್ಟ ಭೂಪ್ರದೇಶ ತೆರವು ಸಡಿಲಿಕೆಗೆ ರಾಜ್ಯ ಸರಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ಸಂದೇಹಕ್ಕೆ ಅವಕಾಶ ಮಾಡಿಕೊಟ್ಟಿದೆ. ಮರಳು,ಕಲ್ಲು ಗಣಿಗಾರಿಕೆ ಲಾಬಿಗೆ ಸರಕಾರ ಮಣಿದಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ಮೂಡಿದ್ದು , ಜನರ ಬದುಕಿನ ಸಂಬಂಧ ಸರಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ.
ಸರಕಾರಕ್ಕೆ ತಿಳಿದಿಲ್ಲವೇ ?
ಮಲೆನಾಡು ಜನರ ಬದುಕಿಗೆ ಅರಣ್ಯ ಪ್ರದೇಶದ ನೆರವು ಅನಿವಾರ್ಯ. ಕೃಷಿ ಚಟುವಟಿಕೆಗೆ ಪೂರಕವಾಗಿ ಬದುಕು ಸಾಗುವುದರಿಂದ ಮನೆ, ಜಾನುವಾರು ಕೊಟ್ಟಿಗೆ, ಗೊಬ್ಬರ ಗುಂಡಿ, ಸೌದೆ ಕೊಟ್ಟಿಗೆ, ಮುರಿನ ಕೊಟ್ಟಿಗೆ (ಮೇವು), ಗಾಡಿಕೊಟ್ಟಿಗೆ, ಬಚ್ಚಲು ಮನೆ, ಹಂದಿವಡ್ಡಿ, ಕೋಳಿವಡ್ಡಿ ನಿರ್ಮಾಣ, ಜೇನು ಸಂಗ್ರಹಣೆ, ಮೀನು, ಹಂದಿ ಬೇಟೆ, ಬಗನೆಕಳ್ಳು,ಅಕ್ಕಿ ಹೆಂಡ ತಯಾರಿಸುವುದು, ಆಲೆಮನೆ ಸಾರಾಯಿ, ಕಾಡಿನ ಹಣ್ಣಿನ ಹೆಂಡ ..ಹೀಗೆ ಅನೇಕ ಅಗತ್ಯಗಳಿಗೆ ಅರಣ್ಯ ಆವಲಂಬಿಸುವ ಮಲೆನಾಡು ಜನರ ಜೀವನ ಪದ್ಧತಿ ಕುರಿತು ಸರಕಾರ ಆಲೋಚಿಸದಿರುವುದು ಜನರ ಇಕ್ಕಟ್ಟಿಗೆ ಕಾರಣವಾಗಿದೆ. ಅರಣ್ಯ ಸಂರಕ್ಷಣೆ ಕಾಯಿದೆ, ಡಾ.ಕಸ್ತೂರಿ ರಂಗನ್, ಮಾಧವ ಗಾಡ್ಗೀಳ್ ವರದಿಯಲ್ಲಿ ಮಲೆನಾಡು ಜನರ ಬದುಕಿನ ರೀತಿ ರಿವಾಜು ಕುರಿತು ಯಾವುದೇ ಅಂಶಗಳು ದಾಖಲಾಗದಿರುವುದು ಅಚ್ಚರಿ ತಂದಿದೆ. ರಾಜ್ಯ ಸರಕಾರ ಈ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳದೆ ಮರಳು, ಕಲ್ಲು ಗಣಿಗಾರಿಕೆ, ಕಿರು ಜಲ ವಿದ್ಯುತ್ ಯೋಜನೆಗೆ ಮಾತ್ರ ಮುಕ್ತ ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿರುವುದು ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ವರದಿಯಲ್ಲಿ ಏನಿದೆ..?
ಕಸ್ತೂರಿ ರಂಗನ್ ಸಮಿತಿ ಗುರುತಿಸಿರುವ ಪಶ್ಚಿಮಘಟ್ಟ ವ್ಯಾಪ್ತಿಯ 59,940 ಸಾವಿರ ಚ.ಕಿ.ಮೀ (ಶೇ.36.49) ಪ್ರದೇಶ ಇಕೊ ಸೆನ್ಸಿಟಿವ್ ಏರಿಯಾ(ಇಎಸ್‍ಎ)ಕ್ಕೆ ಒಳಪಟ್ಟು ನಿರ್ಬಂಧಿತವಾಗುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. 20 ಸಾವಿರ ಚ.ಮೀ.ಗಿಂತ ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶವಿಲ್ಲ. ಇಎಸ್‍ಎನಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟ್, ಕಲ್ಲು, ಯಾವುದೇ ರಾಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ.
ವ್ಯಾಪ್ತಿ ಯಾವುದು?
ಗುಜರಾತ್‍ನ ತಪತಿ ನದಿ ಮೂಲದಿಂದ ಆರಂಭವಾಗುವ ಪಶ್ಚಿಮಘಟ್ಟ ಶ್ರೇಣಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡಿನ ಕನ್ಯಾಕುಮಾರಿವರೆಗೆ 1,64,280 ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಕರ್ನಾಟಕದಲ್ಲಿ ಬೆಳಗಾವಿ, ಉತ್ತರಕನ್ನಡ, ದಕ್ಷಿಣಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವು ತಾಲೂಕುಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಬರುತ್ತವೆ. ಕರ್ನಾಟಕದಲ್ಲಿ ಪಶ್ಚಿಮಘಟ್ಟದ ವ್ಯಾಪ್ತಿ 44,448ಚ.ಕಿ.ಮೀ. ಇದ್ದು, 20,668 ಚ.ಕಿ.ಮೀ ಇಎಸ್‍ಎ ವ್ಯಾಪ್ತಿಗೆ ಬರುತ್ತದೆ. ಇಎಸ್‍ಎ ವ್ಯಾಪ್ತಿಯ 1573 ಗ್ರಾಮಗಳನ್ನು 850ಕ್ಕೆ ಕಡಿತಗೊಳಿಸಬೇಕು ಎಂಬುದು ರಾಜ್ಯ ಸರಕಾರದ ಪ್ರಸ್ತಾವನೆ.

Leave a Reply