ಗ್ರಹಣ ಅದನ್ರೀ…

ಗ್ರಹಣ ಅದನ್ರೀ…
ಸೂರ್ಯ ಹಾಗೂ ಚಂದ್ರ ಇವರ ನಡುವೆ ಸರಳ ರೇಖೆಯಲ್ಲಿ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಚಂದ್ರ ಗ್ರಹಣವಾಗುತ್ತದೆ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದು ಸೂರ್ಯನು ಕೆಲ ಕಾಲ ಮರೆಯಾಗುವುದು ಸೂರ್ಯಗ್ರಹಣ ಎಂದೆಲ್ಲ ನಾವು ಪ್ರೈಮರಿ ಶಾಲೆಯಲ್ಲಿದ್ದಾಗಿನಿಂದಲೇ ಓದುತ್ತ ಬಂದಿದ್ದೇವೆ. ಸಾಮಾನ್ಯವಾಗಿ ನಾವು ಗ್ರಹಣಗಳನ್ನು ಭಯಪೂರಿತ ಮನಸ್ಸುಗಳಿಂದಲೇ ಆಹ್ವಾನಿಸುತ್ತೇವೆ. ವಿಜ್ಞಾನಿಗಳು ಹಾಗೂ ಸತ್ಯಾನ್ವೇಷಕರು ಮಾತ್ರ ಇಂಥ ಘಟನೆಗಳನ್ನು ಅತ್ಯಂತ ಆಸಕ್ತಿಯಿಂದಲೇ ಆಹ್ವಾನಿಸುತ್ತಾರೆ.
ಸಣ್ಣವರಿದ್ದಾಗಿನಿಂದಲೂ ನಮಗೆ ಈ ಗ್ರಹಣಗಳೆಂದರೆ ಅಚ್ಚರಿಯ ಸಂಗತಿಗಳು. ಸೂರ್ಯಗ್ರಹಣಗಳಲ್ಲಿಯಂತೂ ನಿದ್ದೆಗೆಡುವ ಅವಶ್ಯಕತೆಯೆ ಇಲ್ಲವಲ್ಲ… ಆದರೆ ಬರಿಗಣ್ಣಿನಿಂದ ಆ ಮಹನೀಯನನ್ನು ನೋಡಬಾರದೆಂಬ ಕಟ್ಟಳೆಯಿರುವುದರಿಂದ ಮನೆಯಲ್ಲಯೇ ಇರುತ್ತಿದ್ದ ಗಾಜಿನ ತುಂಡುಗಳಿಗೆ ಚಿಮಣಿಯಿಂದ ಕಪ್ಪು ಕೂಡಿಸಿ ಎರಡು ದಿನ ಮೊದಲೇ ತಯಾರಿಸಿ ಇಟ್ಟುಕೊಂಡಿರುತ್ತಿದ್ದೆವು. ಮನೆಯಲ್ಲಿ ಯಾವುದೇ ಗುಬ್ಬಿ ಚಿಮಣಿಯ ಅಥವಾ ಕಂದೀಲಿನ ಅಥವಾ ಗೋಡೆಗೆ ಹಾಕಿದ್ದ ಫೋಟೋದ ಗ್ಲಾಸು ಒಡೆದಿಲ್ಲವಾದರೆ ಫೋಟೋ ಕಟ್ಟು ಹಾಕುವ ಅಂಗಡಿಯ ಹತ್ತಿರದ ಕಸದಲ್ಲಿ ನಮಗೆ ಬೇಕಾದ ರಸದ ಆನ್ವೇಷಣೆ ಮಾಡಲಾಗುತ್ತಿತ್ತು. ಆ ಮಸಿ ಹಿಡಿದ ಗಾಜಿನ ಮುಖಾಂತರವೇ ಗ್ರಹಣ ವೀಕ್ಷಣೆ ನಡೆಯುತ್ತಿತ್ತು. ಒಮ್ಮೊಮ್ಮೆ ಅಣ್ಣಂದಿರೋ, ಮಾಮಂದಿರೋ ಉಪಯೋಗಿಸುತ್ತಿದ್ದ ಕಪ್ಪು ಕನ್ನಡಕ ಅಥವಾ ಕರೆ ಚಶ್ಮಾ ಕೈಗೆ ಸಿಕ್ಕರಂತೂ ನಮ್ಮ ಆನಂದ ಅಪರಂಪಾರ! ಕೆಲವರು ಬುಟ್ಟಿಯಲ್ಲಿ ನೀರು ಹಾಕಿ ಅದರಲ್ಲಿ ಒನಕೆಯನ್ನು ನಿಲ್ಲಿಸುತ್ತಿದ್ದರು. ಅದು ಗ್ರಹಣ ಮುಗಿಯುವ ವರೆಗೂ ನಿಲ್ಲುತ್ತದೆ ಎಂಬ ವಿಶ್ವಾಸ. ಬಕೆಟ್ಟಿನ ನೀರಿನಲ್ಲಿಯೂ ಸೂರ್ಯನ ಬಿಂಬಕ್ಕೆ ಹಿಡಿದ ಗ್ರಹಣದ ವೀಕ್ಷಣೆ ನಡೆಯುತ್ತಿತ್ತು.
ಆಗಿನ್ನೂ ಗ್ರಹಣಗಳೆಂದರೆ ಮೂಢನಂಬಿಕೆ ಎಂದು ಯಾರೂ ವಾದ ಮಾಡುವಷ್ಟು ಬುದ್ಧಿವಂತರಾಗಿರಲಿಲ್ಲವೋ ಅಥವಾ ನಮ್ಮಂಥ ಮೂಢರ(!) ಸಂಖ್ಯೆಯೇ ಹೆಚ್ಚಿಗಿತ್ತೋ ಅರಿಯದು.. ಏನೇ ಇರಲಿ, ಗ್ರಹಣ ಪ್ರಾರಂಭವಾದ ಕೂಡಲೇ ಹಾಗೂ ಬಿಟ್ಟನಂತರದ ಬಾವಿಯ ದಂಡೆಯ ಮೇಲಿನ ತಣ್ಣೀರ ಸ್ನಾನ ಅಗದೀ ಖುಶಿ ಕೊಡುವ ಸಂಗತಿಯಾಗಿತ್ತು. ಇನ್ನು ಚಂದ್ರಗ್ರಹಣಗಳಲ್ಲಿ ಯಾವುದೇ ಗಾಜಿನ ತುಂಡುಗಳ ಹುಡುಕಾಟದ ತಾಪತ್ರಯವಿರದಿದ್ದರೂ ಅವು ರಾತ್ರಿ ಸಂಭವಿಸುತ್ತಿದ್ದರಿಂದ ಒಮ್ಮೊಮ್ಮೆ ನಿದ್ರೆಗೆಡಬೇಕಾಗುತ್ತಿದ್ದುದರಿಂದ ಸ್ವಲ್ಪ ತೊಂದರೆಯಾಗುತ್ತಿತ್ತು. ಆದರೂ ಓಕೆ.. ಅಷ್ಟೂ ಮಾಡದಿದ್ದರೆ ಹೇಗೆ! ಕಾಲ ಬದಲಾಗುತ್ತಿದ್ದಂತೆ ಈ ಗ್ರಹಣಗಳು ಕೇವಲ ಖಗೋಳದ ಆಗುಹೋಗುಗಳು… ಇದರಿಂದ ಯಾವುದೇ ಕೇಡುಗಳೂ ಸಂಭವಿಸಲಾರವು ಎಂಬ ನಂಬಿಕೆಗೆ ಆಧುನಿಕ ಸುಶಿಕ್ಷಿತ ಸಮಾಜ ಒತ್ತುನೀಡುತ್ತ ಬಂದಿತು.
ಸತ್ಯ ಎನ್ನುವುದು ಮರೆಯಲ್ಲಿದ್ದರೇನೇ ಚಂದ. ಎಂಬ ಮಾತು ನೂರಕ್ಕೆ ನೂರರಷ್ಟು ನಿಜ ಅಂತ ನನ್ನ ಭಾವನೆ. ಈ ಸತ್ಯದ ಅನಾವರಣವಾದಂತೆ ಸೃಷ್ಟಿಯ ಅದ್ಭುತಗಳು ಅಚ್ಚರಿ ತರುವುದಿಲ್ಲ… ಸಾಮಾನ್ಯವೆಂಬಂತಾಗಿಬಿಡುತ್ತವೆ! ಅದರ ಫಲವಾಗಿಯೇ ಇಂದು ನಾವು ಫೇಸ್ ಬುಕ್ಕಿನಲ್ಲಿ ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಗ್ರಹಣದ ಸಮಯದಲ್ಲಿ ತಯಾರಿಸುವುದೋ, ಅಥವಾ ತಿನ್ನುತ್ತಿರುವುದೋ ಫೋಟೋಗಳನ್ನು ಹಾಕಿ ತಾವು ಎಷ್ಟರಮಟ್ಟಿನ ಆಧುನಿಕರು ಎಂದೋ ಅಥವಾ ತಾವು ಮೂಢನಂಬಿಕೆಗಳ ದಾಸರಲ್ಲವೆಂದೋ ತೋರಿಸಿಕೊಂಡದ್ದನ್ನು ನೋಡುತ್ತೇವೆ. ಅದೆಲ್ಲಾ ಸರಿ, ಆದರೆ ಬಸಿರಿ ಹೆಣ್ಣುಮಕ್ಕಳು ಗ್ರಹಣಗಳನ್ನು ನೋಡಬಾರದೆಂಬ ನಿಯಮವನ್ನು ಮಾತ್ರ ಬೇಕೆಂದೇ ಉಲ್ಲಂಘಿಸಿದ ಒಂದೇ ಒಂದು ಉದಾಹರಣೆ ಇಲ್ಲಿಯವರೆಗೆ ನನ್ನ ಕಣ್ಣಿಗೆ ಬಿದ್ದಿಲ್ಲ!
. ಚಂದ್ರ ಬಿದಿಗೆಯವನೇ ಇರಲಿ, ಚತುರ್ದಶಿಯ ದಿನದವನೇ ಇರಲಿ, ಹುಣ್ಣಿಮೆಯವನೇ ಇರಲಿ, ಹೇಗೇ ಇದ್ದರೂ ಆತ ಸುಂದರನೆಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಚಂದ್ರನ ಮೇಲೆ ನಡೆದಾಡಿ ಅವನ ಮೈಮೇಲಿನ ಹಿಡಿ ಮಣ್ಣನ್ನು ತಂದು ಮ್ಯೂಜಿಯಂನಲ್ಲಿ ಇಟ್ಟರೂ ನಾವು ಅವನನ್ನು ನಪುಂಸಕ ಲಿಂಗವೆಂದು ಗ್ರಹಿಸುವುದಿಲ್ಲ! ಸೂರ್ಯ, ಶನಿಗಳಿಗೂ ಕೂಡ ಈ ಭಾಗ್ಯ ಒದಗಿಸಿದ್ದರೂ ಸೌಂದರ್ಯದ, ಪ್ರೇಮದ ಏಕೈಕ ಅಧಿದೇವತೆ ಈ ಚಂದ್ರಮ. ಈತ ನಮಗೆ ಅತ್ಯಂತ ಹತ್ತಿರದ ಸಂಬಂಧಿ. ಅಂದರೆ ಚಿಕ್ಕ ಮಕ್ಕಳಿದ್ದಾಗ ಈತ ನಮ್ಮ ಮಾಮ! ಅಮ್ಮನ ತಮ್ಮ! ವಯಸ್ಸಾದ ಅಜ್ಜನಿಗೂ ಚಿಕ್ಕಂದಿನಲ್ಲಿ ಊಟ ಮಾಡುವಾಗ ಈ ಮಾಮನೇ ಬೇಕಾಗಿದ್ದ… ನಮಗೂ.. ನಮ್ಮ ಮಕ್ಕಳಿಗೂ… ಮೊಮ್ಮಕ್ಕಳಿಗೂ.. ಈತನೇ ಮಾಮ! ಇಂದಿನ ಮಕ್ಕಳು ಟಿವಿ ಹಾಗೂ ಅದರ ನೂರಾರು ಚಾನೆಲ್ಲುಗಳು ಬಂದಂದಿನಿಂದ ಈ ಚಂದಮಾಮನ ಸುಖದಿಂದ ವಂಚಿತರಾಗಿವೆಯೋ ಎಂಬ ಮರುಕವೂ ನನಗೆ ಒಮ್ಮೊಮ್ಮೆ ಬಾರದಿಲ್ಲ. ನೀವು ನಂಬುತ್ತೀರೋ ಇಲ್ಲವೋ, ರಾಮಾಯಣ ನಡೆದದ್ದೇ ಈ ಚಂದ್ರನಿಂದಾಗಿ. ಹುಲುಮಾನವರಾದ ನಾವಷ್ಟೇ ಏಕೆ, ಶ್ರೀರಾಮನೂ ಕೂಡ ತನ್ನ ಬಾಲ್ಯದಲ್ಲಿ ಈ ಚಂದ್ರನನ್ನು ಬೇಡಿ ಅತ್ತಿದ್ದನಂತೆ! ಆಕಾಶದ ಚಂದ್ರನಿಗಾಗಿ ಭೂಮಿ ಆಕಾಶ ಒಂದು ಮಾಡಿದ ಮಗು ಶ್ರೀರಾಮನನ್ನು ಸಂತೈಸಲಾಗದೆ, ದಶರಥ ಮಹಾರಾಜ, ಮಂತ್ರಿ ಸುಮಂತ್ರ, ರಾಣಿಯರು, ದಾಸಿಯರು ಎಲ್ಲರೂ ಕಳವಳ ಪಡುತ್ತಿದ್ದಾಗ ಕೈಕೆಯ ಸೇವಕಿ ಮಂಥರೆ ತನ್ನ ಮಡಿಲ ಕನ್ನಡಿಯಲ್ಲಿ ಚಂದ್ರನ ಬಿಂಬವನ್ನು ತೋರಿ ಮಗುವಿನ ಮೊಗದ ತುಂಬ ನಗು ಹರಡುವಂತೆ ಮಾಡಿದಳಂತೆ. ಅದೇ ಸಂಭ್ರಮದಲ್ಲಿ ಆ ಮುದ್ದಾದ ಮಗುವನ್ನು ಎತ್ತಿಕೊಳ್ಳಹೋದಾಗ ಕೌಶಲ್ಯೆ “ದೂರ ಸರಿ, ಕುರೂಪಿ” ಎಂದದ್ದಕ್ಕೆ ಮನಸ್ಸಿನಲ್ಲಿಯೇ ಅವಮಾನ, ನಿರಾಶೆಗಳಿಂದ ನೊಂದ ಮಂಥರೆ ಆಗಲೇ ರಾಮಾಯಣದ ಅಡಿಗಲ್ಲಿರಿಸಿಯಾಗಿತ್ತು!
ಇನ್ನು ಕವಿಗಳಿಗೆ ಚಂದ್ರ ಪ್ರೇಮದ ಅಧಿದೇವತೆ. ಅವನ ಬೆಳದಿಂಗಳು ವಿರಹನಿವೇದನೆಗೂ ಸೈ, ಪ್ರೇಮ ನಿವೇದನೆಗೂ ಸೈ. ಪ್ರೇಮಲೋಕದಲ್ಲಿ ಓಲಾಡುವ ಪ್ರೇಮಕವಿಗಳು, ವರಕವಿಗಳು, ರಾಷ್ಟ್ರಕವಿಗಳು.. ಎಲ್ಲರಿಗೂ ಕೂಡ ಚಂದ್ರನಿಲ್ಲದೆ ಮಂಚವಿಲ್ಲ. ಅಷ್ಟೇ ಏಕೆ, ಸಿನಿಮಾ ಸಂಗೀತದಲ್ಲಿಯೂ ಚಂದ್ರನದೇ ಕಾರುಬಾರು. ಚಂದ್ರ, ಚಕೋರರು ವಚನಕಾರರಿಗೂ ಪ್ರೀತಿ, ಹರಿದಾಸರಿಗೂ ಪ್ರೀತಿ! ಈ ಚಂದ್ರಮ ಬರಿಯ ಸುಂದರನಷ್ಟೇ ಅಲ್ಲ, ರಸಿಕ ಶಿಖಾಮಣಿಯೂ ಕೂಡ. ಅಷ್ಟಲ್ಲದೆ, ತಾರೆಯಂಥ ಸುಂದರ ಹೆಂಡತಿಯಿದ್ದರೂ ರೋಹಿಣಿಯಂಥ ದೈವೀ ಸೌಂದರ್ಯಕ್ಕೆ ಮಾರುಹೋಗಿದ್ದನೇ? ಇರಲಿ, ಈಗ ವಿಷಯಕ್ಕೆ ಬರೋಣ…
ಖಗೋಳವಿಜ್ಞಾನಕ್ಕೂ ಜ್ಯೋತಿಷ್ಯ ಶಾಸ್ತ್ರಕ್ಕೂ ಇರುವ ವ್ಯತ್ಯಾಸವೇನು… ಈ ಪ್ರಶ್ನೆ ಚಿಕ್ಕವರಿಂದ ದೊಡ್ಡವರ ವರೆಗೂ ಕಾಡುತ್ತದೆ. ಕೆಲವು ವಿದ್ವಾಂಸರ ಪ್ರಕಾರ ಖಗೋಳ ವಿಜ್ಞಾನದಲ್ಲಿ ನಿಖರತೆ ಇರುತ್ತದೆ, ಜ್ಯೋತಿಷ್ಯಶಾಸ್ತ್ರದಲ್ಲಿ ಊಹೆಗಳಿರುತ್ತವೆ. ಆದರೆ ಊಹೆಗಳಿಂದಲೇ ನೂತನ ಆವಿಷ್ಕಾರಗಳನ್ನು ಕಂಡುಹಿಡಿಯಲಾಗಿರುವುದರಿಂದ ಜ್ಯೋತಿಷ್ಯವನ್ನು ಹಗುರವಾಗಿಯೂ ಗಣಿಸಲಾಗದು. ಇನ್ನು ಕೆಲವರು ಜ್ಯೋತಿಷ್ಯವನ್ನು ಕ್ಷುದ್ರವಿದ್ಯೆ ಎಂದೂ ಹೇಳುತ್ತಾರೆ. ಆದರೆ ಕೆಲವು ವಿಜ್ಞಾನಿಗಳು ವಿಜ್ಞಾನ, ಖಗೋಳ ವಿಜ್ಞಾನ ಹಾಗೂ ಜ್ಯೋತಿಷ್ಯವಿಜ್ಞಾನಗಳನ್ನು ಒಂದೇ ರೇಖೆಯಲ್ಲಿ ನೋಡಬಹುದು, ಕ್ಷುದ್ರ ವಿದ್ಯೆಯನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ ಅದರ ಸತ್ಯಾಸತ್ಯತೆಗಳನ್ನು ಕಂಡುಕೊಂಡ ಮೇಲೆ ಅದನ್ನು ವಿಜ್ಞಾನವೆಂದು ಪರಿಗಣಿಸಬಹುದು ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ.
ಆದರೆ ಒಂದಂತೂ ಸತ್ಯ. ಖಗೋಳದ ಈ ವೈಚಿತ್ರ್ಯಗಳು ನಮ್ಮನ್ನು ಕ್ಷಣಕ್ಷಣಕ್ಕೂ ದಂಗುಬಡಿಸುತ್ತವೆ. ಅದರಲ್ಲೂ ಇಂಥ ವೈಚಿತ್ರ್ಯಗಳ ಬಗ್ಗೆ ನಿಖರವಾಗಿ ಹೇಳುವ ನಮ್ಮ ಖಗೋಳವಿಜ್ಞಾನಿಗಳು ಕೂಡ ತಮ್ಮ ಜಾಣ್ಮೆಯಿಂದ ನಮ್ಮನ್ನು ದಂಗುಬಡಿಸುತ್ತಾರೆ. ಆದರೂ ಖಗೋಳವನ್ನು ನಂಬುವ ನಾವು ಜ್ಯೋತಿಷ್ಯವನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ. ಅದಕ್ಕೆ ಕಾರಣ ನಮ್ಮಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಅಲ್ಪಸ್ವಲ್ಪ ಈ ಶಾಸ್ತ್ರವನ್ನು ಓದಿ, ಕೇವಲ ಡಂಭಾಚಾರದಿಂದಲೇ ಹಣ ಗಳಿಸುವುದರಲ್ಲಿ ಆಸ್ಥೆಯನ್ನು ಹೊಂದಿರುವ ನಮ್ಮ ಜ್ಯೋತಿಷಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಇಂಥ ಢೋಂಗಿಗಳಿಂದಾಗಿ ನಮ್ಮ ಎಷ್ಟೋ ಪ್ರಕಾಂಡ ಜ್ಯೋತಿಷಿಗಳ ಬಗ್ಗೆಯೂ ನಮಗೆ ಆದರ ಹುಟ್ಟದಂತಾಗಿದೆ. ಖಗೋಳದ ಈ ಬದಲಾವಣೆಗಳು ನಮ್ಮ ನಿತ್ಯಜೀವನದ ಆಗುಹೋಗುಗಳ ಮೇಲೆ ಪರಿಣಾಮ ಬೀರುವುದನ್ನು ಕೆಲವರು ನಂಬುವರಾದರೂ ಇನ್ನು ಕೆಲವರು ಭಂಡ ದೈರ್ಯವನ್ನು ಹೊಂದಿದ್ದು ಅವುಗಳು ನಿರಾಧಾರವೆಂದೂ ಪ್ರತಿಪಾದಿಸುತ್ತಾರೆ. ಇದನ್ನು ಹೇಳಲು ಕಾರಣವೆಂದರೆ ಈ ವರ್ಷದ ಜನವರಿ 31 ನೇ ತಾರೀಖಿನಂದು ಸಂಭವಿಸಿದ ಚಂದ್ರಗ್ರಹಣ..
ಮೊನ್ನೆ ಮೊನ್ನೆ ನಡೆದ ಕೆಂಪು ಚಂದ್ರಗ್ರಹಣದ ನೆನಪು ಇನ್ನೂ ಎಲ್ಲರಲ್ಲೂ ಹಸಿರಾಗಿರಬಹುದು. ಇಲ್ಲಿ ಅಪರೂಪಕ್ಕೆ ಅಂದರೆ 152 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪದಲ್ಲಿ ಬಂದ ಪರಿಣಾಮವಾಗಿ ಈ ಗ್ರಹಣಗ್ರಸ್ತ ಚಂದ್ರ ಕೆಂಪು, ನೀಲಿ ಹಾಗೂ ತಾಮ್ರವರ್ಣಗಳಿಂದ ಕಂಗೊಳಿಸುವುದು ಕೂಡ ಅತ್ಯಂತ ಅಪರೂಪದ ದೃಶ್ಯವಾಗಿತ್ತು. ಅದಕ್ಕೇ ಆತನನ್ನು ರಕ್ತಚಂದ್ರ ಎಂದೇ ವರ್ಣಿಸಲಾಗಿದೆ. ಈ ಗ್ರಹಣವನ್ನು ಕೇವಲ ನಮ್ಮ ನಿಮ್ಮಂಥ ಸಾಮಾನ್ಯರು, ಪ್ರಕಾಂಡ ಜ್ಯೋತಿಷಿಗಳು, ವಿಜ್ಞಾನಿಗಳಷ್ಠೇ ಅಲ್ಲ, ಸಣ್ಣ ಪುಟ್ಟ ಜ್ಯೋತಿಷಿಗಳು ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿಯೂ ಎದುರು ನೋಡಿದರು. ಟಿವಿ ಚಾನೆಲ್ಲುಗಳಲ್ಲೂ ಕೂಡ ಇಂಥ ಜ್ಯೋತಿಷಿಗಳ ಬೋಧನೆ ಮೂರು ದಿನಗಟ್ಟಲೆ ನಡೆದಿತ್ತು. ಪ್ರತಿಯೊಬ್ಬರಿಗೂ ಗ್ರಹಣದ ಶುಭಾಶುಭ ಫಲಗಳ ಬಗ್ಗೆ ಕೊರೆದದ್ದೇ ಕೊರೆದದ್ದು! ಸಾಮಾನ್ಯವಾಗಿ ಜನರು ಶುಭಫಲಗಳನ್ನು ಮರೆತರೂ ಅಶುಭಫಲಗಳ ಹೆದರಿಕೆಯನ್ನು ಸುಲಭವಾಗಿ ಮರೆಯರು. ಅದರ ಉಪಯೋಗವನ್ನು ಈ ಜ್ಯೋತಿಷಿಗಳು ಚೆನ್ನಾಗಿಯೇ ಮಾಡಿಕೊಂಡರೇನೋ.
ನಮ್ಮ ಬಾಜೂ ಮನೀ ಪದ್ದಕ್ಕನಿಗೆ ಇಂಥದರಲ್ಲೆಲ್ಲ ವಿಶ್ವಾಸ ಬಹಳ. ದೇವರು, ದಿಂಡರು, ವೃತ, ನಿಯಮ, ಹಬ್ಬ ಹರಿದಿನ ಎಂದು ಮನೆಯಲ್ಲಿ ಯಾವಾಗಲೂ ನಡೆದೇ ಇರುತ್ತದೆ. ಈಗಲೀಗ ಆಕೆಯ ಈ ಸ್ವಭಾವವನ್ನು ತಿದ್ದಲಾಗದ ಗಂಡ-ಮಕ್ಕಳು ಅವಳ ದಾರಿಗೆ ಅವಳನ್ನು ಬಿಟ್ಟು ತಣ್ಣಗೆ ಕುಳಿತಿದ್ದಾರೆ. ನಮ್ಮ ಗುಂಡಾಭಟ್ಟ ಪದ್ದಕ್ಕನ ಅಗದೀ ಖಾಸ ಜ್ಯೋತಿಷಿ. ಅವರು ಹೇಳಿದಂತೆಯೇ ಎಲ್ಲವನ್ನು ನಡೆಸುವ ಪದ್ದಕ್ಕ ಇಂಥ ವಿಶೇಷಗಳಲ್ಲಿ ಕೂಡ ಅವರ ಮಾತನ್ನು ಮೀರಿ ಒಂದು ಹೆಜ್ಜೆ ಮುಂದಿಡಳು. ಈಗ ಒಂದು ತಿಂಗಳಿನಿಂದಲೇ ಪದ್ದಕ್ಕ ಅತ್ಯಂತ ಕಳವಳದಲ್ಲಿದ್ದಾಳೆ. ಅದಕ್ಕೆ ಕಾರಣ ಅವಳ ಜನ್ಮ ನಕ್ಷತ್ರ. ಅವಳದು ಆಶ್ಲೇಷಾ ನಕ್ಷತ್ರ. ಅದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ತೆಯಿಲ್ಲದ ಮನೆ ಎನ್ನುವುದೂ ನಿಮಗೆ ಗೊತ್ತಿರಬಹುದು, ಈ ನಕ್ಷತ್ರದಿಂದಾಗಿ ಅವಳಿಗೆ ವರ ಹುಡುಕುವಷ್ಟರಲ್ಲಿ ಅವಳ ಅಪ್ಪನ ನಾಲ್ಕೈದು ಜೋಡಿ ಚಪ್ಪಲಿ ಸವೆದಿದ್ದರೂ ಮದುವೆಯಾದಾಗ ಈ ನಕ್ಷತ್ರದಿಂದಾಗಿ ತನ್ನಷ್ಟು ಪುಣ್ಯವಂತೆಯೇ ಯಾರೂ ಇಲ್ಲವೆಂದು ಬೀಗುತ್ತಿದ್ದಳು ಪದ್ದಕ್ಕ. ಆದರೆ ಈಗ ಈ ಅತ್ಯಂತ ಖಗ್ರಾಸ ಐತಿಹಾಸಿಕ ಗ್ರಹಣ ತನ್ನ ನಕ್ಷತ್ರದ ಮೇಲೆಯೇ ಹಿಡಿಯುತ್ತದೆ ಎಂದಾಗ ಆಕೆಗೆ ಸಿಕ್ಕಾಪಟ್ಟೆ ಟೆನ್ಶನ್ ಆಗಿಬಿಟ್ಟಿತು! ಗುಂಡಾಭಟ್ಟರ ಹತ್ತಿರ ಇದರ ಪರಿಹಾರಕ್ಕಾಗಿ ಎಡತಾಕಿದ್ದಳು. ಈ ಗುಂಡಾಭಟ್ಟರಿಗೋ ದೂರದರ್ಶನದಲ್ಲಿ ಸಂದರ್ಶನ ನಡೆದಾಗಿನಿಂದ ಶುಕ್ರದೆಶೆ ತಿರುಗಿಬಿಟ್ಟಿತ್ತು. ಎಲ್ಲೆಲ್ಲಿಂದಲೋ ಜನರು ಹುಡುಕಿಕೊಂಡು ಬಂದರು. ರಶ್ ಹೆಚ್ಚಾಗಿದ್ದರಿಂದ ತಮಗೊಬ್ಬರಿಗೇ ಹ್ಯಾಂಡಲ್ ಮಾಡಲಾಗದೇ ಒಬ್ಬ ರಿಸೆಪ್ಶನಿಸ್ಟಳನ್ನೂ ಕೂಡ ನೇಮಿಸಿಕೊಂಡಿದ್ದರು. ತಮ್ಮ ಮೂರು ರೂಮಿನ ಮನೆಯನ್ನೇ ಆಫೀಸಾಗಿ ಪರಿವರ್ತಿಸಿಕೊಂಡಿದ್ದರು. ಒಂದು ರೂಮನ್ನು ತಮ್ಮ ಹೇಳಿಕೆಗಾಗಿ ಇಟ್ಟುಕೊಂಡರೆ, ಇನ್ನೊಂದು ಕ್ಯೂ ಹಚ್ಚಿಕೊಂಡು ಕಾಯುವವರಿಗಾಗಿ. ಇನ್ನೊಂದು ರೂಮಿನಲ್ಲಿ ಒಂದು ಕೌಂಟರಿನಲ್ಲಿ ರಿಸೆಪ್ಶನಿಸ್ಟ್ ಕುಳಿತಿದ್ದು ಕನ್ಸಲ್ಟೇಶನ್ ಫೀ ಕಲೆಕ್ಟ್ ಮಾಡುವುದು, ಅಲ್ಲಿಯೇ ದಾನದ ಸಾಮಾನುಗಳನ್ನು ಕೊಳ್ಳುವವರ ಲಿಸ್ಟ್ ಮಾಡಿ ಹಣ ವಸೂಲಿ ಮಾಡುವುದು, ಗ್ರಹಣದ ದಿನ ದಾನಕ್ಕೆ ಸಮಯವನ್ನು ಫಿಕ್ಸ್ ಮಾಡುವುದು ಇದರಲ್ಲಿ ನಿರತಳಾಗಿದ್ದಳು. . ಇರುವುದು ಹನ್ನೆರಡು ರಾಶಿ, ಇಪ್ಪತ್ತೇಳು ನಕ್ಷತ್ರ. ಪ್ರೊಬಬ್‍ಲಿಟಿ ಥಿಯರಿಯ ಪ್ರಕಾರ ಲೆಕ್ಕ ಹಾಕಿದರೆ ನಮ್ಮ 125 ಕೋಟಿ ಜನಸಂಖ್ಯೆಯ 1/12 ಜನರ ರಾಶಿ, 1/27 ನಕ್ಷತ್ರಗಳ ಜನರಿಗೆ ಇದು ಅತ್ಯಂತ ಅಶುಭ ಫಲಗಳನ್ನು ಕೊಡುವ ನಿರೀಕ್ಷೆ ಇತ್ತು. ಹೀಗಾಗಿ ಜನರು ಪರಿಹಾರಕ್ಕಾಗಿ ಅಡರಾಯಿಸಿದ್ದರು. ಭಟ್ಟರೂ ಅವರವರ ಕಿಸೆಯ ಯೋಗ್ಯತೆಯ ಅನುಸಾರವಾಗಿ ದಾನದ ಸಾಮಾನುಗಳ ಲಿಸ್ಟಿನ ರೇಟುಗಳನ್ನೂ ಫಿಕ್ಸ್ ಮಾಡಿದ್ದರು. ವಿಆಯ್‍ಪಿ ಲಿಸ್ಟಿನವರಿಗೆ ಸುಮಾರು ಒಂದು ಲಕ್ಷದ ವರೆಗೂ ವಸೂಲಿ ಮಾಡುತ್ತಲಿದ್ದರೆ, ಕಸಮುಸುರೆ ಮಾಡಿ ಹೊಟ್ಟೆ ಹೊರೆಯುತ್ತಿದ್ದ ಗಂಗವ್ವನಿಗೆ ಕೇವಲ ನೂರು ಗ್ರಾಂ ಎಳ್ಳು, ಅರ್ಧ ಕಿಲೋ ರೇಶನ್ ಅಕ್ಕಿ, ಹತ್ತು ರೂಪಾಯಿ ದಕ್ಷಿಣೆಯ ಮೇಲೆ ಬಗೆಹರಿದಿತ್ತು.
ಪಾಪ, ನಮ್ಮ ಪದ್ದಕ್ಕ ಇಂತು ಚಿಂತಾಕ್ರಾಂತಳಾಗಿ ಭಟ್ಟರ ಹತ್ತಿರ ಹೋಗಿದ್ದಳು. ಪದ್ದಕ್ಕ ಕಾಯಂ ಗಿರಾಕಿಯಲ್ಲವೇ.. ಹೀಗಾಗಿ ಆಕೆಗೆ ಎಲ್ಲದರಲ್ಲೂ ಕನ್ಸೆಶನ್.. ನೇರವಾಗಿ ಒಳಗೇ ಹೋಗಿದ್ದಳು. ಬಹಳ ಹೊತ್ತಿನ ವರೆಗೂ ಗುಣಿಸಿ, ಭಾಗಿಸಿ, ಕೂಡಿಸಿ, ಕಳೆದು ನಿಟ್ಟುಸಿರು ಬಿಟ್ಟು ಭಟ್ಟರು ಪದ್ದಕ್ಕನ ಕಡೆಗೆ ನೋಡಿದ್ದರು…
“ನೋಡ್ರಿ ಪದ್ದಕ್ಕಾ… ನೀವು ನನಗ ಅಕ್ಕ ಇದ್ದಂಗ. ನಿಮ್ಮ ಮುಂದ ಏನ ಮುಚ್ಚಿಡೂದು.. ಈ ಗ್ರಾಣೇನದಲಾ ಇದು ನಿಮ್ಮ ನಕ್ಷತ್ರದ ಮ್ಯಾಲೇ ಬಂದದ. ನಿಮ್ಮ ಸಾಹೇಬರ ಜೀವಕ್ಕ ಕಂಟಕ ಅದ. (ನಮ್ಮ ಹೆಣ್ಣುಮಕ್ಕಳು ಗಂಡನ ಜೀವಕ್ಕೇ ಧಕ್ಕೆ ಎಂದರೆ ಎಂದೂ ಸಹಿಸರು) ಅಂದ್ರ ನಿಮ್ಮ ತಾಳೀ ಭಾಗ್ಯದ ಮ್ಯಾಲೆ ಕಂಟಕ ಅದ..”
ಭಟ್ಟರ ದೃಷ್ಟಿ ಪದ್ದಕ್ಕನ ಆರುವರಿ ತೊಲೆಯ ರೋಪ್ ಚೈನಿನ ಮಾಂಗಲ್ಯದ ಮೇಲೆಯೇ ತೂಗುತ್ತಲಿತ್ತು! ಅದನ್ನು ಗಮನಿಸಿದ್ದ ಪದ್ದಕ್ಕ ಪಟ್ಟನೆ ಸೆರಗಿನಲ್ಲಿ ಮರೆಮಾಡಿಕೊಂಡಿದ್ದಳು!
“… ಈಗ ಕನಿಷ್ಟ ಎರಡು ಗುಂಜಿ ತೂಕದ ಎರಡು ತಾಳಿ, ಮೂರು ಗುಂಡು, ಕಾಲುಂಗುರಾ, ಅರಿಶಿಣಾ, ಕುಂಕುಮದ ಬಟ್ಟಲಾ, ಅವು ಹಿತ್ತಾಳಿವಿದ್ರೂ ನಡೀತದ.. ಹಣ್ಣು, ಹೂವು, ಖಣಾ ಹಿಂಗ ಮುತ್ತೈದಿತನದ ಸಾಮಾನಾ ದಾನಾ ಮಾಡಬೇಕು. ಅಲ್ಲದ ಅಕ್ಕಿ, ಬ್ಯಾಳಿ, ಬೆಲ್ಲಾ, ಗೋದಿ ಅಂತ ಸೀದಾನೂ , ಮ್ಯಾಲೆ ನಿಮ್ಮ ಯಥಾಶಕ್ತಿ ನೂರೋ ಎರಡ ನೂರೋ ದಕ್ಷಿಣೀ ಸಾಕು. ಒಂದ ಸಣ್ಣ ಶಾಂತಿ ಹೋಮಾ ಮಾಡಾಂವಿದ್ದೇನಿ ಅವತ್ತ ಗ್ರಹಣ ಹಿಡದಾಗನ… ನಮ್ಮ ಖಾಸ ಮಂದೀ ಸಲವಾಗಿ… ”
ಅಷ್ಟರಲ್ಲಿ ಭಟ್ಟರ ಹತ್ತು ವರ್ಷದ ಕಿರಿಯ ಮಗಳು ಅಪ್ಪನನ್ನು ಕರೆಯಲು ಬಂದಿದ್ದಳು..
“ಈಗ ಬರತೇನಂತ ಹೇಳು… ” ಎಂದು ಹೇಳಿ ಭಟ್ಟರು ತಮ್ಮ ಮಾತು ಮುಂದುವರೆಸಿದ್ದರು..
“ಪದ್ದಕ್ಕಾ, ಇದನೆಲ್ಲಾ ನಿಮಗ ಹೊರಗ ಹೋಗಿ ತೊಗೊಂಡ ಬರೋದೂ ಜರೂರಿಲ್ಲಾ… ಎಲ್ಲಾನೂ ನಮ್ಮ ಬಾಜೂ ರೂಮಿನ ಕೌಂಟರಿನ್ಯಾಗನ ಅಗದೀ ಕಡಿಮಿ ರೇಟಿನ್ಯಾಗ ಸಿಗತಾವು. ಗ್ರಹಣ ಹಿಡದದ್ದು ಸ್ನಾನಾ ಮಾಡಿ ಇಲ್ಲೆ ಬಂದಬಿಡ್ರಿ.. ನಿಮ್ಮದು ಆಶ್ಲೇಷಾ ನಕ್ಷತ್ರನ ಇರೋದರಿಂದ ನೀವು ದಾನಾ ಧರ್ಮಾ ಇದನೆಲ್ಲಾ ಅಗದೀ ಪಾಲಿಸಬೇಕಾಗತದ. ಸಾಹೇಬರ ಜೀವದಕಿಂತಾ ಹೆಚ್ಚಲ್ಲ ನೋಡ್ರಿ ಇದೆಲ್ಲಾ… ಅಲ್ಲದ ದೇವ್ರು ನಿಮಗ ಯಾತಕ್ಕ ಕಡಿಮೀ ಮಾಡ್ಯಾನ ಬಿಡ್ರೀ…”
“ಅಪ್ಪಾ, ಮತ್ತ ಅವ್ವಂದೂ ಆಶ್ಲೇಷಾ ನಕ್ಷತ್ರನ ಅದ ಅಂತ. ಅಕೀ ನಿನ್ನೆ ನಿನ್ನ ಕೇಳಿದಾಗ ನೀ ಅಕೀಗೆ “ಹುಚ್ಚಿ, ಇದನೆಲ್ಲಾ ನಂಬತಾರೇನು.. ಕೋಟ್ಯಾಂತರ ಮಂದೀದು ಆಶ್ಲೇಷಾ ನಕ್ಷತ್ರ ಇರತದ. ಅವ್ರೆಲ್ಲಾ ಕಂಟಕದಿಂದ ಸತ್ತರ ಅರ್ಧಕ್ಕರ್ಧಾ ಜನಸಂಖ್ಯಾನ ಖಾಲೀ ಆಗಿಹೋಗತದ! ” ಅಂತ ಹೇಳೀದಿ.. ಮತ್ತ ಪದ್ದಕ್ಕತ್ಯಾಗ ಹಿಂಗ ಯಾಕ ಹೇಳ್ಳೀಕ್ಕತ್ತೀ?”
ಪದ್ದಕ್ಕ ಭಟ್ಟರ ಮುಖ ನೋಡಿದ್ದಳು… ಭಟ್ಟರ ಮುಖದಲ್ಲಿ ಈಸ್ಟಮನ್ ಕಲರ್ಸ್ ಓಡಾಡಿದ್ದವು!
ಹೀಗೆ ಈ ಗ್ರಹಣಗಳ ಮೋಡಿ ಅನಂತ… ಪ್ರಶ್ನಾತೀತ!
************************************

Leave a Reply