ಗ್ರಂಥಾಲಯಗಳು

ಗ್ರಂಥಾಲಯಗಳು
ಇತ್ತೀಚಿಗೆ ಓದುಗರ ಸಂಖ್ಯೆಯಲ್ಲಿಯ ಈ ಇಳಿಕೆಗೆ ಕಾರಣವೇನು? ಇದಕ್ಕಾಗಿ ಯಾವುದೇ ಸರ್ವೆ, ಸಮೀಕ್ಷೆ ಮಾಡುವ ಅಗತ್ಯವಿಲ್ಲ. ಇದು ಅನುಭವಜನ್ಯವಾದ ಮಾತು.
ಮಕ್ಕಳಿಗೆ ಓದಿನ ಹವ್ಯಾಸ ಬೆಳೆಸಬೇಕಾದವರು ತಾಯಿ-ತಂದೆಯರು. ಮೊದಲಿನ ಕಾಲದಲ್ಲಿ ಅಜ್ಜ, ಅಜ್ಜಿಯರು ಮೊಮ್ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ರಾಮಾಯಣ, ಮಹಾಭಾರತಗಳ, ಇತರ ಪೌರಾಣಿಕ ಹಾಗೂ ಜಾನಪದ ಕಥೆಗಳನ್ನು ರಸವತ್ತಾಗಿ ಬಣ್ಣಿಸಿ, ಅವರಲ್ಲಿ ಕಥನಶ್ರವಣದ ಆಸಕ್ತಿಯನ್ನು ಬೆಳೆಸುತ್ತಿದ್ದರು. ದೊಡ್ಡವರಾದಂತೆ ಆ ಮಕ್ಕಳು ಓದು ಬರಹ ಕಲಿತು ಆ ಕತೆಗಳ ಬೇರುಗಳನ್ನು, ಟೊಂಗೆ-ಟಿಸಿಲುಗಳನ್ನು ಪುಸ್ತಕಗಳಲ್ಲಿ ಅರಸಿ, ಓದಿ, ರಸಾನುಭವದ ಮೊದಲ ಮೆಟ್ಟಿಲನ್ನು ಏರುತ್ತಿದ್ದರು. ತಂದೆ ತಾಯಿಯರು ಮಕ್ಕಳ ಓದಿಗೆ ಪೂರಕವಾಗಿ ಕಾಮಿಕ್ಸ್ ಗಳನ್ನೋ, ಪುರಾಣಕಥಾಸರಣಿಯ ಅಮರಚಿತ್ರಕಥಾ ಸರಣಿಗಳನ್ನೋ, ಭಾರತ ಭಾರತಿ ಪುಸ್ತಕ ಸಂಪದದಂಥ ಪುಸ್ತಕಗಳನ್ನೋ ತಂದುಕೊಟ್ಟು ಓದಿನಲ್ಲಿರುವ ಆಸಕ್ತಿಗೆ ನೀರೆರೆಯುತ್ತಿದ್ದರು. ಈಗ ಈ ಓದಿನ ಚಿತ್ರಣವೇ ಬದಲಾಗಿದೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿಯಿಲ್ಲ. ಪಾಲಕರಿಗೂ ಬೀಜರೂಪದಲ್ಲಿರುವ ಆ ಆಸಕ್ತಿಗೆ ನೀರೆರೆಯಲು ಪುರಸೊತ್ತಿಲ್ಲ!
ಹಾಗಾದರೆ ಈ ಅನಾಸಕ್ತಿಗೆ ಕಾರಣವೇನು? ಇಂದಿನ ಕಲಿಕಾ ಪದ್ಧತಿಯೇ? ಬೆನ್ನು ಬಾಗುವಂಥ ಪುಸ್ತಕಗಳ ಗಂಟು…. ಹೊರೆ ಹೊರೆ ಹೋಂ ವರ್ಕ್… ಮಕ್ಕಳ ವಯೋಮಾನಕ್ಕೆ ಮೀರಿದ ಕಲಿಕೆ…? ಈಗಿನ ಇಲೆಕ್ಟ್ರಾನಿಕ್ ಡಿವೈಸುಗಳು! ಇಷ್ಟು ದಿನಗಳಲ್ಲಿ ಆಕ್ರಮಿಸಿದ್ದ ಟಿವಿ, ಲ್ಯಾಪ್ಟಾಪ್ ಇವುಗಳ ಸ್ಥಾನವನ್ನು ಈಗ ಸ್ಮಾರ್ಟ್ ಫೋನ್ ಗಳು ಆಕ್ರಮಿಸಿವೆ. ಇದೆಲ್ಲವನ್ನೂ ದಾಟಿದ ಈ ಮೊಬೈಲ್ ಹವ್ಯಾಸ… ಇಂದು ಹವ್ಯಾಸದ ಮೇರೆಯನ್ನು ಮೀರಿ ಚಟವಾಗಿಹೋಗಿದೆ. ಐದು ನಿಮಿಷಗಳ ಅವಧಿಯಲ್ಲಿ ಮೂರು ಬಾರಿ ಏನಾದರೂ ಹೊಸ ಸಂದೇಶವಿದೆಯೇ ಎಂದು ಪರೀಕ್ಷಿಸುವ ಕಾತರ. ಗೂಗಲ್ನಲ್ಲಿ ಏನೇನೋ ತಡಕಾಡುವ ಆತುರ… ಹೀಗಾಗಿ ಓದಿನಲ್ಲಿಯ ಏಕಾಗ್ರತೆ ಕೂಡ ಇಲ್ಲವಾಗುತ್ತ ಹೊರಟಿದೆ. ಇದು ಮಕ್ಕಳಷ್ಟೇ ಅಲ್ಲ, ಹದಿಹರೆಯದ, ಹರೆಯದ, ಹಿರಿಯರ ಎಲ್ಲರ ಸಮಸ್ಯೆಯಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಮಕ್ಕಳು ಓದನ್ನು ಒಂದು ಹವ್ಯಾಸವಾಗಿ ಸ್ವೀಕರಿಸುವ ಮನೋವೃತ್ತಿಯನ್ನಂತೂ ತ್ಯಜಿಸುತ್ತಿದ್ದಾರೆ.
ದೊಡ್ಡವರೂ ಇದಕ್ಕೆ ಹೊರತಾಗಿಲ್ಲ. ಮೊದಲಾದರೆ ಪುಸ್ತಕಗಳನ್ನು ಕೊಂಡು ಓದಬೇಕಾಗುತ್ತಿತ್ತು. ಓದಿಯಾದಮೇಲೆ ಅವುಗಳನ್ನು ಇಡುವುದಕ್ಕೆಂದು ಸ್ಥಳಾವಕಾಶ ಮಾಡಬೇಕಿತ್ತು. ಗ್ರಂಥಾಲಯಗಳಿಂದ ಎರವಲು ತಂದರೆ ಸಮಯಕ್ಕೆ ಸರಿಯಾಗಿ ಹಿಂದಿರುಗಿಸಬೇಕಿತ್ತು. ಈಗ ನಮಗೆ ಬೇಕಿರುವ ಎಲ್ಲ ಮಾಹಿತಿಯನ್ನು ಅಂಗೈಯಲ್ಲಿಯೇ ಪಡೆಯುವ ಸರಳ ವಿಧಾನ ಸಿಕ್ಕುಬಿಟ್ಟಿದೆ! ಇವು ಸಾಹಿತ್ಯವನ್ನು ಹದಗೆಡಿಸುತ್ತಿವೆ.
ಇನ್ನು ಗ್ರಂಥಾಲಯಗಳ ವಿಷಯಕ್ಕೆ ಬಂದರೆ, ನಮ್ಮ ಜನರು ಗ್ರಂಥಾಲಯಗಳಿಗೆ ಭೆಟ್ಟಿ ಕೊಡುವುದು ಕೇವಲ ನಿವೃತ್ತರು, ನಿರುದ್ಯೋಗಿಗಳು ಎನ್ನುವ ಮನೋಭಾವ ಕೂಡ ಇದೆ. ಇದು ಬದಲಾಗಬೇಕು.
ಈ ಗ್ರಂಥಾಲಯಗಳ ವಿಷಯ ಬಂದಾಗ ನನಗೆ ನೆನಪಿಗೆ ಬರುವುದು ವಿದೇಶಗಳಲ್ಲಿಯ ಬೃಹತ್ ಗ್ರಂಥಾಲಯಗಳು. ಒಂದು ವಿಷಯದ ಬಗೆಗಿನ ಗ್ರಂಥಗಳು ನಮಗೆ ಬೇಕಾದರೆ, ಅಲ್ಲಿಯೇ ಇರುವ ಕಂಪ್ಯೂಟರಿನಲ್ಲಿ ಆ ಬಗ್ಗೆ ಪ್ರತಿಯೊಂದು ಮಾಹಿತಿ ಅಂದರೆ ಆ ವಿಷಯದ ಬಗ್ಗೆ ಎಷ್ಟು ಗ್ರಂಥಗಳಿವೆ, ಎಷ್ಟು ಜನ ಲೇಖಕರು ಇದೇ ವಿಷಯದ ಬಗ್ಗೆ ಬರೆದಿದ್ದಾರೆ, ಅವು ಎಷ್ಟನೇ ರ್ಯಾಕಿನಲ್ಲಿ ಲಭ್ಯ ಇಷ್ಟೆಲ್ಲ ದೊರೆಯುತ್ತದೆ. ಇನ್ನೂ ಒಂದು ವಿಶೇಷ ಎಂದರೆ ನಮಗೆ ಬೇಕಾದ ಮಾಹಿತಿ ಲಭ್ಯವಾದಲ್ಲಿ ಆ ಪುಟಗಳನ್ನು ಕಳುವಿನಿಂದ ಕಿತ್ತೊಯ್ಯಬೇಕಿಲ್ಲ! ಕಂಪ್ಯೂಟರ್ ಪ್ರಿಂಟ್ ಔಟ್ ಕೂಡ ಸಿಗುತ್ತವೆ. ಅಲ್ಲಿಯ ಪ್ರಸಿದ್ಧ ಪುಸ್ತಕ ಮಳಿಗೆ ಬಾರ್ನ್ಸ್ ಎಂಡ್ ನೋಬಲ್ಸ್ ಕೂಡ ಯಾವುದೇ ಗ್ರಂಥಾಲಯಕ್ಕೆ ಕಡಿಮೆ ಇಲ್ಲ. ಇಲ್ಲಿ ಕುಳಿತು ನಮಗೆ ಬೇಕಾದ ಪುಸ್ತಕಗಳನ್ನು ಓದಬಹುದು. ಆ ಅಂಗಡಿಯವರು ನಮ್ಮನ್ನು ಕೊಳ್ಳಲು ಆಗದವರೆಂದು ಕೀಳಾಗಿ ಕಾಣರು.
ಪುಸ್ತಕವನ್ನು ಕೊಂಡು ಓದುವವರು ಆಂದೂ ಕಡಿಮೆ. ಪುಸ್ತಕಗಳು ಅಚ್ಚಾಗುತ್ತಿರುವ ಸಂಖ್ಯೆಗೆ ಹೋಲಿಸಿದಲ್ಲಿ ಇಂದೂ ಕಡಿಮೆಯೇ.
ಒಬ್ಬ ಹೆಸರಾಂತ ವಿಮರ್ಶಾಲೇಖಕ ತಮ್ಮ ವಿಮರ್ಶೆಯ ಲೇಖನಗಳ ಸಂಕಲನದ ಮುದ್ರಣಕ್ಕೆ ತಗಲಬಹುದಾದ ವೆಚ್ಚದ ಬಗ್ಗೆ ವಿಚಾರಿಸಿದಾಗ ಸಾಲ ಮಾಡಿದರೆ ಮಾತ್ರ ಪ್ರಕಟಣೆ ಸಾಧ್ಯ ಎಂದು ಅವರಿಗೆ ಅರಿವಾಗಿತ್ತು. ಪ್ರತಿಗಳ ಮಾರಾಟದ ಸಮಸ್ಯೆಯ ಬಗ್ಗೆ ಲೇಖಕರು ತಿಳಿಸಿದಾಗ, ಅವರು,”ಸ್ವಾಮಿ, ನೀವು ಲೇಖಕರು. ನಿಮ್ಮ ಪುಸ್ತಕಗಳನ್ನು ನೀವೇ ಏಕೆ ಹೆಮ್ಮೆಯಿಂದ ಮಾರಾಟ ಮಾಡಬಾರದು?” ಎಂದು ಕೇಳಿದರಂತೆ. ಲೇಖಕರು ಹಾಗೆಯೇ ಮಾಡಿದಾಗ ನಷ್ಟ ವಂತೂ ಆಗಲಿಲ್ಲ ಎಂದು ಹೇಳಿದರು.
ಹಿಂದೆ ಮನೋಹರ ಗ್ರಂಥಮಾಲೆಯ ಶ್ರೀ ಜಿ ಬಿ ಜೋಶಿಯವರು ಜೋಳಿಗೆ ಯಲ್ಲಿ ಪುಸ್ತಕಗಳನ್ನು ಹೊತ್ತೊಯ್ದು ಮಾರುತ್ತಿದ್ದರಂತೆ.
ಇಲ್ಲಿ ಒಂದು ಹಳೆಯ ಮಾತು ನೆನಪಾಯಿತು. ಹಾವೇರಿಯಲ್ಲಿ ನಮ್ಮ ಅಜ್ಜನ ಮನೆ. ಅಜ್ಜನ ಗೆಳೆಯ ಹೆಸರಾಂತ ಲೇಖಕರಾದ ಗಳಗನಾಥರು. ಅವರೂ ಪುಸ್ತಕ ಪ್ರಕಟಿಸಿ ನಿತ್ಯದ ಖರ್ಚು ತೂಗಿಸಲು ಪಡಿಪಾಟಲು ಪಟ್ಟವರು. ಹಸಿಬೆಯಲ್ಲಿ ಪುಸ್ತಕಗಳನ್ನು ಹೊತ್ತು ಮಧ್ಯಾಹ್ನದ ಹೊತ್ತಿನಲ್ಲಿ ಒಮ್ಮೊಮ್ಮೆ ನೀರಡಿಸಿ ಅಜ್ಜನ ಮನೆಗೆ ಬರುತ್ತಿದ್ದರಂತೆ. ಒಂದು ತುಂಡು ಬೆಲ್ಲ, ಒಂದು ತಂಬಿಗೆ ತಣ್ಣೀರು. ಇಷ್ಟೇ ಅವರು ಬಯಸುತ್ತಿದ್ದುದು. ಅಜ್ಜ ಊಟಮಾಡಲು ಒತ್ತಾಯ ಮಾಡಿದರೆ, “ನಿನ್ನ ಮನೀಗೆ ನೀರ ಕುಡೀಲಿಕ್ಕೆ ನಾ ಬರಬೇಕಂತೀಯೋ ಬ್ಯಾಡಂತೀಯೋ?” ಎಂದು ಕೇಳುತ್ತಿದ್ದರಂತೆ.ಅವ್ವ ಅವರ ಈ ರೂಪವನ್ನು ಕಣ್ಣಾರೆ ಕಂಡವಳು. ಅವರ ಕಾದಂಬರಿಗಳನ್ನು ಅತ್ಯಂತ ಆಸ್ಥೆಯಿಂದ ಓದಿದವಳು.
ಇಂದು ಸಾಕ್ಷರತೆಯ ಪ್ರಮಾಣವು ಹೆಚ್ಚಿದೆಯಾದರೂ ಪುಸ್ತಕ ಕೊಂಡು ಓದುವ ಚಟವೂ ಹೆಚ್ಚಿಲ್ಲ. ವಾಚನಪ್ರಿಯತೆಯೂ ಹೆಚ್ಚಿಲ್ಲವೆಂದೆನ್ನಿಸುತ್ತದೆ.
ನಾವು ಜನಸಾಮಾನ್ಯರಲ್ಲಿ ಪುಸ್ತಕ ಪ್ರಿಯತೆಯ ಸಂಸ್ಕೃತಿಯನ್ನು ಹೆಚ್ಚಿಸಲು ದೃಢ ಸಂಕಲ್ಪ ಮಾಡಬೇಕು. ಮಕ್ಕಳಲ್ಲಿ ಈ ಹವ್ಯಾಸವನ್ನು ಬೆಳೆಸಲು ಪೋಷಕರು, ಸಾರ್ವಜನಿಕರು ಪ್ರೋತ್ಸಾಹಿಸಬೇಕು. ಸಾರ್ವಜನಿಕ ವೇದಿಕೆಗಳಲ್ಲಿ ಅತಿಥಿಗಳಿಗೆ ಹಾರತುರಾಯಿಗಳ ಹಾಗೂ ಶಾಲುಗಳ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡಬಹುದು. ಮಕ್ಕಳಿಗೆ ಜನ್ಮ ದಿನಗಳಂದು ಕೂಡ ಅವರ ವಯೋಮಾನಕ್ಕೆ ಹಾಗೂ ಉತ್ತಮ ಅಭಿರುಚಿಗೆ ತಕ್ಕ ಪುಸ್ತಕಗಳ ಉಡುಗೊರೆ ಕೊಡುವುದು ಉಚಿತವಲ್ಲವೆ?
ಓದುಗರನ್ನು ಆಕರ್ಷಿಸಲು ಕೂಡ ಕೆಲವೊಂದು ರೀತಿಯ ತಂತ್ರಗಳಿಗೆ ಮೊರೆ ಹೋಗಬೇಕಾಗುತ್ತದೆ. ಐಷಾರಾಮಿ ವಸ್ತುಗಳನ್ನು ಕೊಳ್ಳುವಲ್ಲಿ ಇರುವ ಆಸಕ್ತಿಯನ್ನು ಓದಿನತ್ತ ತಿರುಗಿಸಲು ಪ್ರಜ್ಞಾವಂತ ನಾಗರಿಕರು, ಶಿಕ್ಷಕರು, ಪೋಷಕರು ಮೊದಲ ಹೆಜ್ಜೆಯನ್ನು ಇರಿಸಬೇಕು.
ಈಗ ಎಪ್ರಿಲ್ 23 ನ್ನು ಪುಸ್ತಕ ದಿನಾಚರಣೆ ಯನ್ನಾಗಿ ಪ್ರಪಂಚದ ಎಲ್ಲೆಡೆಯೂ ಆಚರಿಸಲಾಗುತ್ತಿದೆ. ಈ ದಿನಾಚರಣೆಯ ಉದ್ದೇಶವೇ ಜನಸಾಮಾನ್ಯರಲ್ಲಿ ಪುಸ್ತಕ ಪ್ರಿಯತೆಯನ್ನು ಬೆಳೆಸುವುದು. ಪುಸ್ತಕ ದಿನಾಚರಣೆಯ ಪರಿಕಲ್ಪನೆ ಮೊಟ್ಟ ಮೊದಲು ಮೂಡಿದ್ದು ಸ್ಪೇನ್ ನಲ್ಲಿಯ ಪುಸ್ತಕ ವ್ಯಾಪಾರಿಗಳಲ್ಲಿ. ಜನರಲ್ಲಿ ಪುಸ್ತಕ ಓದಲು ಹವ್ಯಾಸ ಬೆಳೆಸುವದರ ಜೊತೆಗೆ ಪುಸ್ತಕ ಪ್ರಕಟಣೆಯ ಉದ್ಯಮ ವನ್ನು ಬೆಳೆಸುವುದೂ ಈ ಆಂದೋಲನದ ಗುರಿಯಾಗಿತ್ತು. ಆದರೆ ಯುನೆಸ್ಕೋ ಇನ್ನೂ ಒಂದು ಹೆಜ್ಜೆ ಮುಂದುವರಿದು, ಪುಸ್ತಕವನ್ನು ಜ್ಞಾನ ಪ್ರಸಾರದ ಸಾಧನವಾಗಿ ಮಾನ್ಯ ಮಾಡಿತು. ಜನರಲ್ಲಿ ಪುಸ್ತಕ ಮನಸ್ಕತೆ ಬೆಳೆಸುವ ಉದ್ದೇಶ ಹಾಗೂ ಪುಸ್ತಕ ಪ್ರಕಟಣೆಯ ಉದ್ಯಮವನ್ನು ಪ್ರೋತ್ಸಾಹಿಸುವ ಧ್ಯೇಯವನ್ನು ಹೊಂದಿ ಯುನೆಸ್ಕೋ ವಿಶ್ವ ಪುಸ್ತಕ ದಿನಾಚರಣೆಯ ಯೋಜನೆಯನ್ನು ಜಾರಿಗೆ ತಂದಿತು. 1995 ರ ಎಪ್ರಿಲ್ 23 ರಂದು ಮೊದಲ ಪುಸ್ತಕ ದಿನಾಚರಣೆ ವಿದ್ಯುಕ್ತವಾಗಿ ಜಾಗತಿಕ ಮಟ್ಟದಲ್ಲಿ ಆರಂಭಗೊಂಡಿತು. ಅದೇ ದಿನವನ್ನು ಆಯ್ದುಕೊಳ್ಳಲೂ ಕಾರಣವಿದೆ. ಅಂದು ಸ್ಪೇನ್ ನ ಪ್ರಸಿದ್ಧ ಸಾಹಿತಿ ಮಿಗೆಲ್ ಡೇ ಸರ್ವಾಟೆಸ್ ನ ಜನ್ಮದಿನ. ಅಲ್ಲದೆ, ಜಗದ್ವಿಖ್ಯಾತ ಸಾಹಿತಿಗಳಾದ ಶೇಕ್ಸ್ ಪಿಯರ್, ವ್ಲಾಡಿಮಿರ್ ನಬಾಕೋವ್ ಮುಂತಾದವರ ಹುಟ್ಟಿದ ಹಬ್ಬ ಅಥವಾ ಪುಣ್ಯ ತಿಥಿ ಕೂಡ 23ನೆಯ ಎಪ್ರಿಲ್ ದಂದೇ ಬರುತ್ತದೆ. ಪುಸ್ತಕ ಕೊಳ್ಳುವ, ಓದುವ, ಆ ಬಗ್ಗೆ ಚರ್ಚಿಸುವುದು ಅಂದಿನ ಮುಖ್ಯ ಕಾರ್ಯಕ್ರಮ.
ಒಟ್ಟಿನಲ್ಲಿ ಮೊಬೈಲ್ ಲೋಕದಲ್ಲಿ ಮೈಮರೆತ ಪೀಳಿಗೆಯನ್ನು ಪೇಪರ್ ಲೋಕಕ್ಕೆ ಮತ್ತೆ ತರುವುದೇ ಗುರಿಯಾಗಬೇಕಾಗಿದೆ.

Leave a Reply