ಗುರು ದೇವೋಭವ

ಗುರು ದೇವೋಭವ
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾರ್ಶನಿಕರು ಹೇಳಿದರು. ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ.
ಪ್ರತಿಯೊಬ್ಬರೂ ಜೀವನದಲ್ಲಿ ಅನೇಕ ಗುರುಗಳೊಂದಿಗೆ ಮುಖಾಮುಖಿ ಆಗುತ್ತಾರೆ. ಮೊದಲ ಗುರು ತಾಯಿ, ತಂದೆ… ನಂತರದ ಸ್ಥಾನವೇ ಶಾಲೆಯ ಗುರುಗಳು. ಶಾಲೆ, ಕಾಲೇಜು, ವಿಶ್ವ ವಿದ್ಯಾಲಯದ, ಒಟ್ಟಿನಲ್ಲಿ ನಾವು ಎಷ್ಟು ವರ್ಷಗಳ ವರೆಗೂ ಕಲಿಯುವೆವೋ ಅಷ್ಟೂ ಶಿಕ್ಷಣವನ್ನು ಮುಗಿಸುವವರೆಗಂತೂ ಸೈಯೇ.. ಅಲ್ಲದೆ ಜೀವನದ ವಿಶ್ವ ವಿದ್ಯಾಲಯದಲ್ಲಿಯೂ ಹೆಜ್ಜೆ ಹೆಜ್ಜೆಗೆ ಎದುರಾಗುವ ಅನೇಕ ಪರಿಸ್ಥಿತಿಗಳೂ ಕೂಡ ನಮಗೆ ಒಂದೊಂದು ಅನುಭವವನ್ನು ಕಲಿಸುವ ಗುರುವೇ ಆಗುತ್ತವೆ. ಅದು ಬೇರೆ ಮಾತು.
ಸಾಕಷ್ಟು ಗುರುಗಳು ನನ್ನ ಜೀವನದಲ್ಲಿ ಅನೇಕ ರೀತಿಯ ಪ್ರಭಾವ ಬೀರಿದ್ದಾರೆ. ಬಾಲ್ಯದ ಅಣ್ಣಿಗೇರಿ ಮಾಸ್ತರಿಂದ ಹಿಡಿದು ವಿಶ್ವ ವಿದ್ಯಾಲಯದ ಕಲಬುರ್ಗಿ ಸರ್ ವರೆಗೂ ನನ್ನ ಗುರುಪರಂಪರೆ ಇದೆ. ಅವರಲ್ಲಿ ನಾನು ಬಾಸೆಲ್ ಮಿಶನ್ ಹೈಸ್ಕೂಲ್ ನಲ್ಲಿ ಕಲಿಯುವಾಗ ನಮಗೆ ಇಂಗ್ಲಿಷ್ ಕಲಿಸುತ್ತಿದ್ದ ಎಜರಾ ಮೇಡಂ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ.
ಅವರ ಬಾಹ್ಯ ವ್ಯಕ್ತಿತ್ವದ ಬಗ್ಗೆ ಹೇಳಬೇಕೆಂದರೆ ಅವರ ಸುಂದರ ಮುಖದಲ್ಲಿ ಯಾವಾಗಲೂ ಮಿನುಗುತ್ತಿದ್ದ ಮುಗುಳ್ನಗೆ. ಅವರ ಮುಖದಲ್ಲಿ ಸಿಟ್ಟನ್ನೇ ನಾನು ಕಾಣಲಿಲ್ಲ… ಅವರು ನಮ್ಮ ಇಂಗ್ಲಿಷ್ ಟೀಚರು.
ಅವರ ಬಾಯಿಯಲ್ಲಿ ಕಬ್ಬಿಣದ ಕಡಲೆಯಾದಂಥ ಇಂಗ್ಲೀಷ್ ಅತ್ಯಂತ ಸುಲಲಿತವಾಗಿ, ನಿರರ್ಗಳವಾಗಿ ಹೊರಹೊಮ್ಮುತ್ತಿತ್ತು. ಶಿಕ್ಷಕರಾದವರು ಕೇವಲ ಜಾಣರಿಗಾಗಿ ಪಾಠ ಮಾಡಬಾರದು, ಕೇವಲ ದಡ್ಡರಿಗಾಗಿಯೂ ಪಾಠ ಮಾಡಬಾರದು. ಮೂರೂ ರೀತಿಯ ಮಕ್ಕಳನ್ನು ಸಂಭಾಳಿಸುವ ಜಾಣ್ಮೆ ಅವರಿಗಿರಬೇಕು ಎಂಬುದು ಶಿಕ್ಷಣ ಕ್ಷೇತ್ರದಲ್ಲಿ ಬೀಜಮಾತು. ಇದು ಅವರ ಬೋಧನೆಯಲ್ಲಿ ಎದ್ದು ಕಾಣುತ್ತಿತ್ತು. ಸಾಮಾನ್ಯವಾಗಿ ಮಕ್ಕಳು ಬೇಗ ಪಾಠ ತಿಳಿದರೂ ಗದ್ದಲ ಮಾಡುತ್ತಾರೆ, ಏನೂ ತಿಳಿಯದೆಹೋದರಂತೂ ಸೈಯೇ. ಆದರೆ ಎಜರಾ ಮೇಡಂ ಅವರ ಬೋಧನೆಯನ್ನು ಕ್ಲಾಸಿನಲ್ಲಿ ನಾವೆಲ್ಲ ಅತ್ಯಂತ ಶ್ರದ್ಧೆಯಿಂದ ಕೇಳುತ್ತಿದ್ದೆವು. ಅದಕ್ಕೆ ಕಾರಣ ಅವರ ಬೋಧನೆಯಷ್ಟೇ ಪ್ರಭಾವಶಾಲಿಯಾದ ಅವರ ಶಾಂತವಾದ ನಗುಮುಖ. ಅವರು ಯಾರಿಗೂ ಬೈದದ್ದನ್ನೇ ನಾನು ನೋಡಲಿಲ್ಲ. ತಪ್ಪು ಮಾಡಿದಾಗ ಅವರು ನಮ್ಮ ತಪ್ಪನ್ನು ಒಪ್ಪಿಕೊಳ್ಳುವಂತೆ ತಿಳಿಹೇಳುವ ಬಗೆ ನಾನು ಯಾರಲ್ಲೂ ಕಂಡಿಲ್ಲ. ಸ್ವತಃ ನಾನೇ ಟೀಚರಾದ ನಂತರವೂ ಕೂಡ ನಾನು ಎಷ್ಟೋ ಬಾರಿ ಸಹನೆ ಕಳೆದುಕೊಂಡದ್ದಿದೆ. ಅಂಥ ಸಮಯದಲ್ಲಿ ಅವರನ್ನು ನೆನಪಿಸಿಕೊಂಡು ಬಾರದ ನಗುವನ್ನು ಎಳೆತಂದದ್ದೂ ಇದೆ.
ಒಂದು ಬಾರಿ ಬೆಂಚಿನ ಮೇಲೆ ಡಿವೈಡರಿನಿಂದ ಒಂದು ಸುಂದರವಾದ ಚಿತ್ರವನ್ನು ಕೊರೆದಿದ್ದೆ. ನಾನು ಯಾವಾಗಲೂ ಮೊದಲ ಬೆಂಚೇ… ಮೇಡಂ ಎಂದಿನಂತೆ ಕ್ಲಾಸಿಗೆ ಬಂದವರು ನಾನು ಕೊರೆದ ಚಿತ್ರ ನೋಡಿದ್ದರು… ಮುಗುಳ್ನಗುವಿನಿಂದ “ಯಾರು ಬರೆದದ್ದು ಈ ಚಿತ್ರ?” ಎಂದು ನನ್ನತ್ತ ದೃಷ್ಟಿಸಿದ್ದರು. ನಾನು ಅವರು ನನ್ನನ್ನು ಹೊಗಳಬಹುದೆಂಬ ಹೆಮ್ಮೆ ಯಿಂದ ಎದ್ದು ನಿಂತು, “ನಾನೇ ಮೇಡಂ” ಎಂದಿದ್ದೆ! ನನಗೆ ಕ್ಲಾಸ್‍ನಲ್ಲಿಯೇ ಸುಂದರವಾಗಿ ಚಿತ್ರ ಬರೆಯುವೆನೆಂಬ ಹೆಮ್ಮೆ ಬೇರೆ!
“ನೀ ಚಿತ್ರ ಏನೋ ಛಂದ ತಗೀತೀ. ಆದರ ತೆಗೀಬೇಕಾದದ್ದು ಇಲ್ಲಿ ಅಲ್ಲ… ಪೇಪರ ಮೇಲಲ್ಲವಾ? ಬೆಂಚ್ ಮೇಲೆ ಹೀಗೆಲ್ಲ ಬರೆದರೆ ಛಂದವೇ? ಬೆಂಚ್ ಇರೂದ್ಯಾಕೆ? ಬುಕ್ಸ್ ಇಡೂದಕ್ಕಲ್ವಾ?”
ಎಂದಾಗ ನನಗೆ ತಟ್ಟನೆ ನನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದೆ. ನನ್ನ ಗಲ್ಲ ಸವರಿ ನಕ್ಕಿದ್ದರು! ಈ ವಾತ್ಸಲ್ಯದಲ್ಲಿ ತಾಯಿಯ ಮಮತೆ ಜಿನುಗುತ್ತಿತ್ತು.
ನಮ್ಮ ವಾರ್ಷಿಕ ಪರೀಕ್ಷಾ ಸಮಯ. ರಾತ್ರಿಯೆಲ್ಲಾ ನಿದ್ರೆಗೆಟ್ಟು ಓದಿದ್ದಕ್ಕೋ ಏನೋ, ನನಗೆ ಫಿಜಿಕ್ಸ್ ಪೇಪರಿನಂದು ವಿಪರೀತ ಜ್ವರ ಬಂದುಬಿಟ್ಟವು. ಪೇಪರ್ ಬರೆಯಲಿಕ್ಕೂ ಅಸಾಧ್ಯವಾಗಿಬಿಟ್ಟಿತು. ಬಿಕ್ಕಿ ಬಿಕ್ಕಿ ಅಳತೊಡಗಿದ್ದೆ. ಅವರೇ ಅಂದು ನಮ್ಮ ಹಾಲಿಗೆ ಇನ್ವಿಜಿಲೇಟರಾಗಿ ಬಂದಿದ್ದರು. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಅವರು ನನ್ನನ್ನು ವಿಶ್ರಾಂತಿಗಾಗಿ ಸ್ಟಾಫ್ ರೂಮಿಗೆ ಕರೆದೊಯ್ದು, ತಮ್ಮ ಮನೆಯಿಂದ ಚಹಾ, ಬಿಸ್ಕತ್ ತರಿಸಿ, ಗುಳಿಗೆಯೊಂದನ್ನು ನುಂಗಿಸಿ ನನಗೆ ಸ್ವಲ್ಪ ಅರಾಮೆನಿಸಿದಾಗ ಸಾಕಷ್ಟು ಸಮಯವನ್ನು ಬರೆಯಲು ಇತ್ತಿದ್ದರು. ಇದೆಲ್ಲಾ ನಾನು ಹೇಗೆ ಮರೆಯಲಿ?
ನಾನು ಅವರ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದುದರಿಂದ ಅವರು ಕೇಳುವ ಪ್ರಶ್ನೆಗಳಿಗೆ ತಟ್ಟನೆ ಉತ್ತರವನ್ನು ಹೇಳುತ್ತಿದ್ದುದರಿಂದ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ಇದೆಲ್ಲವನ್ನು ಕಾಮಣಿ ಕಣ್ಣುಗಳಿಂದ ನೋಡುವ ಕೆಲ ಹುಡಿಗೆಯರೂ ಇದ್ದರು.
ನಮ್ಮ ಅರೆವಾರ್ಷಿಕ ಪರೀಕ್ಷೆ ಅದೇತಾನೇ ಮುಗಿದಿತ್ತು. ಎಲ್ಲರೂ ತಮ್ಮ ತಮ್ಮ ವಿಷಯದ ಉತ್ತರ ಪತ್ರಿಕೆಗಳನ್ನು ಕೊಡುತ್ತಲಿದ್ದರು. ಅಂದು ಎಜರಾ ಮೇಡಂ ಕೂಡ ತಮ್ಮ ಪೇಪರ ಕೊಟ್ಟಿದ್ದರು. ಐವತ್ತಕ್ಕೆ ನಲವತ್ತೆಂಟು ಅಂಕಗಳನ್ನು ನಾನು ಪಡೆದಿದ್ದಲ್ಲದೆ, ಕ್ಲಾಸ್‍ಗೆ ಮೊದಲಿಗಳಾಗಿದ್ದೆ. ನಾನು ನನ್ನ ಅಂಕಗಳನ್ನು ಎಣಿಸಿರಲಿಲ್ಲ. ಆದರೆ ನನ್ನ ಉತ್ತರ ಪತ್ರಿಕೆಯನ್ನು ಕೇಳಿ ಪಡೆದುಕೊಂಡ ಕೆಲ ಗೆಳತಿಯರು ಅಂಕಗಳನ್ನು ಲೆಕ್ಕ ಹಾಕಿದಾಗ ನಲವತ್ತಾರು ಆಗಿದ್ದವು. ಅದರಿಂದಾಗಿ ಈಗ ನಾನು ಮೂರನೆ ನಂಬರಿಗೆ ಇಳಿಯುತ್ತಿದ್ದೆ. ಅವರೆಲ್ಲ ನನಗೆ “ಪಾರ್ಶ್ಯಾಲಿಟಿ ಮಾಡತಾರ ಮೇಡಂ. ಈಗ ಪೇಪರು ಕೈಗೆ ಬಂದದ್ದಕ್ಕ ಗೊತ್ತಾತು… ಇಲ್ಲದೇದ್ರ ಹಿಂಗ ಅನ್ಯಾಯ ನಡಕೋತನ ಇರತಿತ್ತು” ಎಂದಾಗ ನನಗೆ ಬಹಳ ನೋವೆನ್ನಿಸಿ ಆ ಪೇಪರ ತೆಗೆದುಕೊಂಡು ಮೇಡಂರವರನ್ನು ಭೆಟ್ಟಿ ಆಗಲು ಸ್ಟಾಫ್ ರೂಮಿಗೆ ಹೋಗಿದ್ದೆ.
“ಮೇಡಂ, ನನ್ನ ಅಂಕಗಳ ಬೇರೀಜು ತಪ್ಪಿದೆ” ಎಂದಾಗ ಉಳಿದ ಟೀಚರು ನನ್ನನ್ನು ತಮ್ಮ ತಮ್ಮಲ್ಲಿಯೇ ಬೈದಿದ್ದರು, “ಈ ಹುಡುಗಿಯರಿಗೆ ತೃಪ್ತಿ ಅನ್ನೋದೆ ಇರಂಗಿಲ್ಲಾ… ಅಕಿ ನನ್ನಷ್ಟ ಬರದರೂ ಅಕಿಗೆ ಹೆಚಗೀ ಮಾರ್ಕ್ಸ್ ಬಂದಾವ .. ನನಗ್ಯಾಕ ಕಡಿಮೀ ಅಂತ ಬರತಾರ…ತಲಿಬ್ಯಾನಿ ಇದೊಂದು!” ಎಂದು. ಆದರೆ ನಾನು “ಮೇಡಂ, ಕಡಿಮೀ ಅಲ್ರೀ.. ಕೌಂಟಿಂಗ್ದಾಗ ನನಗ ಎರಡ ಮಾರ್ಕ್ಸ್ ಹೆಚ್ಚಾಗ್ಯಾವರಿ.. ಈಗ ಎರಡನೇ ನಂಬರ್ ಬಂದಾಕಿ ಫಸ್ಟ್ ಬರತಾಳರಿ.. ಪಾಪ… ನನ್ನಿಂದ ಅಕೀ ನಂಬರ್ ತಪ್ಪತದರಿ.” ಎಂದಾಗ ಎಲ್ಲರಿಗೂ ಆಶ್ಚರ್ಯ ಆಗಿತ್ತು.
“ಇದು ನೋಡರಿ ಉಲ್ಟಾ ಕೇಸು! ಇರಲಿ ಬಿಡು… ಇದೇನ ಆಯ್ಏಇಸ್ ಪರೀಕ್ಷಾನ?”
ನಮ್ಮ ಗಣಿತದ ಟೀಚರು ಹೇಳಿದ್ದರು.
ನನ್ನ ಕಣ್ಣುಗಳಲ್ಲಿ ನೀರು ತುಂಬಿದ್ದವು. “ಮೇಡಂ, ನನ್ನ ನಂಬರ್ ಹೋದರ ನಡೀತದ. ಆದರ ನಿಮಗ ಯಾರೂ ಸುಮಸುಮ್ಮನ ಏನೂ ಅನಬಾರದು… ” ಎನ್ನುತ್ತ ಬಿಕ್ಕಳಿಸಿದ್ದೆ. ಎಲ್ಲರಿಗೂ ವಿಷಯ ಅರ್ಥವಾಗಿತ್ತು. ಅವರ ಕೈಗಳು ನನ್ನ ಕಣ್ಣೀರನ್ನು ಒರೆಸಿದ್ದವು. ಅಲ್ಲಿ ತಾಯ ಮಮತೆ ಕಂಡಿತ್ತು…
ನಾನು ಮುಂದೆ ಒಬ್ಬ ಉಪನ್ಯಾಸಕಿಯಾದಾಗಲೂ ಅವರ ಈ ಮಾದರಿಯನ್ನು ಎಂದೂ ಮರೆಯಲಿಲ್ಲ. ಶಿಕ್ಷಕರಾದವರು ಮಕ್ಕಳನ್ನು ಸಮಾನದೃಷ್ಟಿಯಿಂದ ನೋಡಬೇಕು. ತಾಯಿ ತನ್ನ ಎಲ್ಲಾ ಮಕ್ಕಳನ್ನೂ ಅಖಂಡವಾಗಿ ಪ್ರೀತಿಸಿ ಅವರ ಏಳ್ಗೆಗೆ ಶ್ರಮಿಸುವಂತೆಯೇ ಶಿಕ್ಷಕರೂ ಮನಸಾರೆ ಶ್ರಮಿಸಬೇಕು… ಬುದ್ದಿ ಹೇಳಿದರೂ ಮಕ್ಕಳಿಗೆ ನೋವಾಗುವಂತಲ್ಲ, ನವಿರಾಗಿ ಹೇಳಬೇಕು.. ಎಂದೆಲ್ಲ.
ಇಂಥವರು ನಮ್ಮ ಎಜರಾ ಟೀಚರು.
ನಾನು ಹೈಸ್ಕೂಲ್ ಶಿಕ್ಷಣ ಮುಗಿಸಿ ಅನೇಕ ದಶಕಗಳೇ
ಕಳೆದರೂ ಅವರ ಆ ವ್ಯಕ್ತಿತ್ವ ನನ್ನ ಮನಸ್ಸಿನ ಮೇಲೆ ಇನ್ನೂ ಅಚ್ಚಳಿಯದಂತಿದೆ. ಇದೋ ಅವರಿಗೆ ನನ್ನ ಪ್ರಾಂಜಲ ಮನದ ಶೃದ್ಧಾಂಜಲಿ.

Leave a Reply