ಹಾಗೇ ಸುಮ್ಮನೇ.. ಮನವೊಂದಿರಲಿ.. ಮಾರ್ಗವಿದ್ದೇ ಇದೆ..

ಹಾಗೇ ಸುಮ್ಮನೇ.. ಮನವೊಂದಿರಲಿ.. ಮಾರ್ಗವಿದ್ದೇ ಇದೆ..
ಅದು 1965-66 ಸಾಲಿನ ಶೈಕ್ಷಣಿಕ ವರ್ಷ. ಧಾರವಾಡಕ್ಕೆ ವಲಸೆ ಬಂದು ಒಂದು ವರ್ಷದ PUC ಮುಗಿದಿತ್ತು. ಆಗ PUC ಇದ್ದುದು ಒಂದೇ ವರ್ಷ. ಮುಂದೆ B.A. ಪದವಿಗೆ ಆಯ್ಕೆ ಮಾಡಬೇಕಾದ ವಿಷಯಗಳ ಚರ್ಚೆ ಮನೆಯಲ್ಲಿ ನಡೆದಿತ್ತು.. ನಾನು ಪಿಯುಸಿಗೆ Sociology ವಿಷಯದಲ್ಲಿ ಅತಿ ಹೇಚ್ಚು marks ಪಡೆದಿದ್ದುದರಿಂದ ಅದನ್ನು ಆಯ್ಕೆ ಮಾಡಿಕೊಂಡರೆ ಪದವಿ ಮುಗಿಯುವ ವವರೆಗೂ ಆ ವಿಷಯಕ್ಕಿದ್ದ Ensminger Scholarship ಸಿಗುವದದ್ದುದರಿಂದ ನಾನು excite ಆಗಿದ್ದೆ. ಆದರೆ ಅದೇ college ದಲ್ಲಿ ಲೆಕ್ಷರರ್ ಆಗಿದ್ದ ಅಣ್ಣ ನನ್ನ ಪೂರ್ತಿ education ಹೊಣೆ ಹೊತ್ತವನೂ ಆದ್ದರಿಂದ ಅವನ ಅಭಿಪ್ರಾಯಕ್ಕೆ ಸಹಜವಾಗಿಯೇ ಹೆಚ್ಚು ತೂಕವಿತ್ತು. ಅಲ್ಲದೇ ಮೊದಲೇ ಧಾರವಾಡಕ್ಕೆ ಬಂದ ಅವನ ಅನುಭವಕ್ಕೆ ಬೆಲೆಯೂ ಸ್ವಾಭಾವಿಕವಾಗಿ ಜಾಸ್ತಿಯಿತ್ತು. ಯಾವುದೋ ಒಂದು ವಿಷಯಕ್ಕೆ ಬಂದ scholarship ಆದರಿಸಿ ವಿಷಯಗಳ ಆಯ್ಕೆ ಮಾಡದೇ ಮುಂದೆಯೂ ಉಪಯೋಗಕ್ಕೆ ಬರುವ ವಿಷಯವನ್ನು ಆಯ್ಕೆ ಮಾಡುವದೇ ವಿವೇಕ ಎಂಬುದು ಅವನ ಪ್ರಾಮಾಣಿಕ ಅನಿಸಿಕೆಯಾಗಿತ್ತು… ಆಗ ಎಷ್ಟೇ ಜಾಣರಿರಲಿ ಹೆಣ್ಣು ಮಕ್ಕಳು ನೌಕರಿ ಮಾಡುವ ಆಯ್ಕೆ ಅಷ್ಟಾಗಿ ಇನ್ನೂ ಇರಲಿಲ್ಲ.. ಅತಿ ಮುಂದುವರೆದವರಲ್ಲಿ ಅಷ್ಟಿಷ್ಟು ಅವಕಾಶವಿದ್ದರೂ ಅದು ಮನೆಮಂದಿಯ ಅನುಮತಿಯಿಂದಲೇ ಹೊರತು ಮಹಿಳಾ ಸಮಾನತೆ, ಸಬಲೀಕರಣ, ಅಸ್ಮಿತೆಯಂಥ ಮಹಾಮಹಾ ಶಬ್ದಗಳ ಪರಿಚಯದಿಂದ ಆಗಿರಲಿಲ್ಲ.. ಬದುಕನ್ನು ಆಯ್ದಿಟ್ಟ ದಾರಿಯಲ್ಲಿ ಒಪ್ಪಿಕೊಂಡು ಎಲ್ಲರ ಮಾತುಗಳನ್ನು ಮನ್ನಿಸಿ ಕುಟುಂಬ ಸಾಮರಸ್ಯಕ್ಕೆ ಭಂಗ ಬರದಂತೆ ಬದುಕುವದೇ ಪದವಿಯಾಗಿತ್ತು. “ನೀನು ಭಾಷೆಗಳನ್ನು ಅಭ್ಯಸಿಸು. English Major/ Hindi minor ಇರಲಿ. ನೌಕರಿ ಮಾಡದಿದ್ದರೂ ಸ್ವಯಂ ವ್ಯಕ್ತಿತ್ವಕ್ಕೆ
ಭಾಷೆಗಳು ಭೂಷಣ. ನಾಳೆ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ out dated ಅನಿಸುವುದಿಲ್ಲ ಎಂದು ಅಣ್ಣ ಹೇಳಿದಾಗ ಬೆಚ್ಚು ಯೋಚಿಸದೇ ಹೂಗುಟ್ಟಿ ಅದರಂತೆಯೇ ಪದವಿಮುಗಿಸಿದೆ. ಆಗ ಅಭ್ಯಾಸಕ್ಕೆ ಇಷ್ಟು ವಿಷಯಗಳ ವೈವಿಧ್ಯವೂ ಇರಲಿಲ್ಲ. ಪ್ರೊಫೆಸರ್ ಆಗಲು BA/ BSc, bank/ LIC ಯಂಥ ನೌಕರಿಗಳಿಗೆ ವಾಣಿಜ್ಯ (commerce) ವಿಭಾಗ, ಹಣವಂತ ಜಾಣ, ಅದೂ ಮನೆಯಲ್ಲಿ ಹಿರಿಯ ಡಾಕ್ಟರ್ ಗಳಿದಗದರೂ ಅಪರೂಪಕ್ಕೆ MBBS. ಹೀಗೆ ಕೆಲವು ಸಿದ್ಧ ಮಾರ್ಗಗಳೇ ಜಾಸ್ತಿಯಾಗಿದ್ದ ಕಾಲಘಟ್ಟವದು.
ನಾನು ಹೇಳಹೊರಟಿದ್ದ ವಿಷಯಕ್ಕೆ ಈಗ ಬರುತ್ತೇನೆ. ನಾನು ಅತಿ ಜಾಣ ವಿದ್ಯಾರ್ಥಿನಿ ಅಲ್ಲದಿದ್ದರೂ ಪ್ರಾಮಾಣಿಕವಾಗಿ ಓದಿ ಬರೆದು ವರ್ಷ ವರ್ಷವೂ ಪಾಸಾಗಿ ಮೂರು ವರ್ಷಗಳ degree ಮುಗಿದ ಒಂದು ವರ್ಷದಲ್ಲೇ ಮದುವೆಯಾಗಿ ಹತ್ತು ವರ್ಷಗಳಲ್ಲಿ ಮೂರು ಮಕ್ಕಳಾಗಿ ನಾನೇನು ಓದಿದ್ದೆ? ಎಲ್ಲಿ? ಏಕೆ? ಎಂಬ ಎಲ್ಲ ಪೂರ್ವ ಶ್ರಮದ ವಿವರಗಳು ಸಂಪೂರ್ಣ ಹಿನ್ನೆಲೆಗೆ ಸರಿದಾಗ ನಡುನಡುವೆ ಚಾಟಿಯೇಟಿನಂತೆ ನನ್ನವರಿಗೆ ಎರಡು ಹೃದಯಾಘಾತ ಗಳಾಗಿದ್ದರಿಂದ, ಮುಂಜಾಗ್ರತೆ ಕ್ರಮವಾಗಿ ಕುಮಠಾದಲ್ಲಿ BEd ಮುಗಿಸಿ ಬಂದೆ. ಆಗ ನನ್ನ ಆಪದ್ಭಾಂಧವರಾಗಿ ಕೈ ಹಿಡಿದದ್ದು ನನ್ನವರು ನೌಕರಿ ಮಾಡುತ್ತಿದ್ದ K.E.B ಸಂಸ್ಥೆ ಹಾಗೂ ನನ್ನಣ್ಣನ ಆಶಯದ ಮೇರೆಗೆ ಆಯ್ದುಕೊಂಡ ಭಾಷಾ ವಿಷಯಗಳು. ನನಗೂ ನೌಕರಿ ಸಿಕ್ಕ ಮೇಲೆ ಅದಕ್ಕಾಗಿಯೇ ಕಾದವರಂತೆ ಒಂದು ವರ್ಷ ಮುಗಿದು job approval ಬಂದ ಒಂದೇ ವರ್ಷದಲ್ಲಿ ನನ್ನವರು ಇಲ್ಲವಾದರು. ನನ್ನ ಹಣೆ ಬರಹ ಬರೆದವರಿಗಿಂತ ಚನ್ನಾಗಿ “ ನನಗೇನು ಬೇಕಿತ್ತ?” ಎಂಬುದನ್ನು ಬೇರಾರು ಬಲ್ಲರು ! ಅದನ್ನು ಆಗಲೇ ತಿಳಿದು ನನ್ನ ಬದುಕಿಗೊಂದು ಶಾಶ್ವತ ಪರಿಹಾರವೊದಗಿಸಿದ ಆ ದೈವಕ್ಕೆ ನಾನು ಋಣಿ. ನಾನು ನಿವೃತ್ತಳಾಗಿ ಸರಿಯಾಗಿ ಹದಿನೈದು ವರ್ಷಗಳು ಸಂದಿವೆ. ಅಂದಿನ ನನ್ನ ಆಯ್ಕೆ ನನ್ನ ನಿವೃತ್ತಿ ನಂತರದ ವರ್ಷಗಳನ್ನು ಸಹನೀಯವಾಗಿಸಿವೆ. ಕನ್ನಡ ಹೊತಾಗದ ಬೆಂಗಳೂರಿನ ವಾತಾವರಣದಲ್ಲಿ ಎಲ್ಲರೊಂದಿಗೆ ಬೆರೆತು ಸಂವಹನ ನಡೆಸಲು ಪೂರಕವಾಗಿವೆ. ನಮ್ಮನೆಯಲ್ಲಿ ಶುದ್ಧ ಕನ್ನಡದ್ದೇ ವಾತಾವರಣವಿದ್ದರೂ ಪರದೇಶಗಳಲ್ಲಿ ಮಕ್ಕಳ ನೆರೆಹೊರೆಯವರೊಂದಿಗೆ ಭೇದವಿಲ್ಲದೇ ಇರಲು, ಮೊಮ್ಮಕ್ಕಳ ಸ್ನೇಹಿತರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು, ಬಿಡುವಿನ ವೇಳೇಯಲ್ಲಿ ಸಾಹಿತಿಗಳು ಸಾಹಿತ್ಯಾಸಕ್ತರ ಗುಂಪಿನಲ್ಲಿ ಗುರುತಿಸಿಕೊಳ್ಳಲು ಸಹಾಯಕವಾದದ್ದು ನನ್ನ ಭಾಷಾ ಆಯ್ಕೆಗಳೇ ಎಂಬುದನ್ನು ಹೇಗೆ ಮರೆಯಲಿ?
ಇದೆಲ್ಲ ಈಗೇಕೆ/ ಇಂದೇಕೆ? ಇದು ಫಲಿತಾಂಶದ ತಿಂಗಳು. ಮಕ್ಕಳು ಬೇರೆ ಬೇರೆ ಹಂತಗಳಲ್ಲಿ, ಬೇರೆ ಬೇರೆ ಶ್ರೇಣಿಗಳಲ್ಲಿ ಪಾಸಾಗುತ್ತಾರೆ. ಏನೇ results ಬರಲಿ ಅನೇಕ ಪರ್ಯಾಯ ಮಾರ್ಗಗಳಿರುತ್ತವೆ. ಅವರ performance ಹೇಗೇ ಇರಲಿ ಮಕ್ಕಳೋಂದಿಗೆ ಚರ್ಚಿಸಿ ಅವರಿಗೆ ನಿಮ್ಮ ಒತ್ತಡ ಹೇರದೇ ಅವರ ಆಯ್ಕೆಯ ಶಿಕ್ಷಣ ಕೊಡಿಸಿ. ಆದ್ಯತೆಗಳು ಬದಲಾಹುತ್ತಿರುತ್ತವೆ ಎಂಬುದಕ್ಕೆ ಜನಪ್ರಿಯತೆಯಲ್ಲಿ ಇಳಿಕೆಯಾಗುತ್ತಿರುವ ಇಂಜನಿಯರಿಂಗ್/ medical course ಗಳೇ ಸಾಕ್ಷಿ… ಮುಂದೇ ಏನೇ ಪರಿಸ್ಥಿತಿ ಬಂದರೂ ಅದನ್ನೆದುರಿಸುವಂತೆ ಮನಸ್ಸನ್ನು ಸಿದ್ಧ ಗೊಳಿಸುವದೇ ಈಗ ನಿಜವಾದ ಪದವಿಯಾಗಿದೆ. ಈಗಿನ ಮಕ್ಕಳು ಸುದೈವಿಗಳು. ಇನ್ನಿಲ್ಲದ ಅನುಕೂಲತೆಗಳು, ಪಾಲಕರ ಕಾಳಜಿ, ಏನು ಮಾಡಬೇಕೆಂದರೂ ಅಸಾಧ್ಯವಲ್ಲದ ಹಣಕಾಸಿನ ಸ್ಥಿತಿ ಶಿಕ್ಷಣಕ್ಕೆ ಪೂರಕ loan / scholarships ಗಳ ಅನುಕೂಲತೆ ಏನೆಲ್ಲ ಇವೆ. ಯಳಿದಂತೆ ಬೇಕಾದದ್ದು “ಮನಸ್ಸುಗಳು” ಮಾತ್ರ ಮಾರ್ಗಗಳು ಉದ್ದ ಗಲಕ್ಕೂ ಚಾಚಿಕೊಂಡಿವೆ. ‘ಕಾಲ’ದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದೇ ಇದೆ. ನಿರಾಶೆ ಬೇಡ.

Leave a Reply