ಹಚ್ಚ’ಗಿದ್ದಲ್ಲಿ ಮೇದು…’ಬೆಚ್ಚ’ಗಿದ್ದಲ್ಲಿ ಮಲಗಿ…

ಹಚ್ಚ’ಗಿದ್ದಲ್ಲಿ ಮೇದು…’ಬೆಚ್ಚ’ಗಿದ್ದಲ್ಲಿ ಮಲಗಿ…
ನಮ್ಮದು ಅತೀ ಚಿಕ್ಕ ಹಳ್ಳಿ… ಹಿರೇಕೇರೂರು ತಾಲೂಕಿನ ರಟ್ಟೀಹಳ್ಳಿ. ಆಗ ನಾವೂ ಚಿಕ್ಕವರೇ…ಇದ್ದುಳ್ಳವರ ಬೆರಳೆಣಿಕೆಯಷ್ಟು ಮನೆಗಳಲ್ಲಿ ಶೌಚಾಲಯಗಳು ಇದ್ದ ಕಾಲ. ಏನಾದರೂ ನೆಪ ಮಾಡಿಕೊಂಡು ಅಂಥ ಪರಿಚಯಸ್ಥರ ಮನೆಗೆ ಬೆಳಿಗ್ಗೆ ಭೇಟಿಕೊಡಲೇ ಬೇಕಾದ ಪರಿಸ್ಥಿತಿ ಅನೇಕರದು . ಅದು ಸಾಧ್ಯವಾಗುವದಿಲ್ಲ ಅಂದವರಿಗೆ ಬೆಳಿಗ್ಗೆ ಆರು ಗಂಟೆ ಆಗುವ ಮೊದಲೇ ಯಾರಾದರೂ ಒಬ್ಬಿಬ್ಬರು ಗೆಳತಿಯರೊಂದಿಗೆ ದೂರ ಹೊಲಗಳ ಬದುವೋ / ಮರ-ಗಿಡಗಳ ಮರೆಯನ್ನೋ ಹಿಡಿದು ಹೋಗಿ ಹಗುರಾಗಿ ಬರುವುದು. ಬಂದಮೇಲೆ “ಇದ್ದಿಲು/ ದೇಶೀ ದಂತ ಮಂಜನದಿಂದ ಹಲ್ಲುಜ್ಜುವುದು, ಆ ನಂತರ ಹಿಂದಿನ ದಿನವೇ ಮಾಡಿ ಉಳಿಸಿದ ಸಾರು, ಬಿಸಿ ಅನ್ನದ ಊಟ ಮಾಡಬೇಕು. ಆಗ ದಿನಕ್ಕೊಂದು ತರಹದ breakfast ಕಲ್ಪನೆ ಕನಸಲ್ಲೂ ಆಗದ ಮಾತು. ದೇವರ ಪೂಜೆ / ಅಡುಗೆ / ದೇವರ ನೈವೇದ್ಯ ಅಂತ ಕಾದರೆ ಊಟ ಮಧ್ಯಾಹ್ನ ಮೂರು ಮೀರುತಿತ್ತು. ಇಷ್ಟೆಲ್ಲಾ ಆದಮ್ಯಾಲೆ ಎರಡು/ ಮೂರು ಫರ್ಲಾಂಗ್ ದೂರದ ಬಾವಿಯಿಂದ ಇಪ್ಪತ್ತು / ಮೂವತ್ತು ಕೊಡ ನೀರು ಸೇದಿ ತಂದು ತುಂಬುವ ಕೆಲಸ. ಒಬ್ಬರು ಸೇದಿ ಕೊಟ್ರೆ ಇನ್ನಿಬ್ಬರು ಕೈ ಬದಲಾಯಿಸಿ ತಂದು ಹಂಡೆಗಳನ್ನ ತುಂಬಬೇಕು. ಆಮ್ಯಾಲೆ ಇದ್ರೆ ಸಾಲಿಗೆ ಹೋಗೋದು. ಸೂಟಿ ಇದ್ರೆ ಒಗೆಯಬೇಕಾದ ಅರಿವೆ( ಬಟ್ಟೆ) ಗಂಟು ಹೊತ್ತು ಕುಮದ್ವತಿ ನದಿ ಕಡೆ ಪಯಣ. ಅಲ್ಲಿಗೂ ಒಂದಿಬ್ಬರು ಗೆಳತಿಯರ ಕಂಪನಿ ಇರ್ತಿತ್ತು. ಬಟ್ಟೆ ಒಗೆದು ಕಲ್ಲುಗಳ ಮ್ಯಾಲೆ ಹರವಿ ಒಣಹಾಕಿ, ನೀರಾಗ ಆಡೋದು/ ಮನಿಯಿಂದ ತಂದ ಕುರುದಿನಿಸು, ಹುಣಿಸೇ ಚಿಗಳಿ, ನೆಲಗಡಲೆ ಬೀಜ
( snacks) ಹಂಚಿಕೊಂಡು ತಿನ್ನೋದು, ಕೈಕಾಲುಗಳನ್ನು ಸಣ್ಣ ಸಣ್ಣ ಕಲ್ಲುಗಳಿಂದ ಉಜ್ಜಿ, ಉಜ್ಜಿ ತಿಕ್ಕೋದು , ಬಟ್ಟೆ ಒಣಗಿದ ಮ್ಯಾಲೆ ಮಡಚಿ ಮನಿಗೆ ತರೋದು.
ಅಷ್ಟು ಹೊತ್ತಿಗೆ ಬಿಸಿ ಅಡಿಗೆಯಾಗಿ , ಹಿರಿಯರು ತಮ್ಮ ಊಟ ಮುಗಿಸಿ ನಮಗಾಗಿ ಕಾಯುತ್ತಿದ್ದರು. ಆಗ ಮಧ್ಯಾಹ್ನ ಮೂರು ಗಂಟೆ. ನಾಲ್ಕು ಗಂಟೆಗೆ ಒಂದು ಕಪ್ ಚಹಾ ಕುಡಿದ ಅಪ್ಪ, ಬಾಯಿತುಂಬಾ ತಂಬಾಕು ತುಂಬಿ, ಕೊಡಲಿ ಹಿಡಿದು ‘ಪರಶು’ ರಾಮನಾಗುತ್ತಿದ್ದ. ಎರಡು ಗಂಟೆ ಸತತ ಕಟ್ಟಿಗೆ ಕಡಿದು ರಾಶಿ ಒಟ್ಟಿ , ಇನ್ನಿಲ್ಲದಂತೆ ಬೆವರಿ ಆದಮೇಲೆ ಒಂದಿಷ್ಟು ರೆಸ್ಟಿನ ಚಿಂತೆ ಮಾಡುತ್ತಿದ್ದ. ನಮಗೆ ನಂತರ ಅವುಗಳನ್ನು ಸೌದೆ ಕೋಣೆಗೆ ಸಾಗಿಸುವ ಕೆಲಸ. ನಾವು ಚಿಕ್ಕವರು ಎರಡೂ ಕೈಗಳನ್ನು ಚಾಚಬೇಕು. ದೊಡ್ಡವರು ನಮ್ಮ ಶಕ್ತ್ಯಾನುಸಾರ ಕೈಗಳ ಮೇಲೆ ಕಡಿದ ಕಟ್ಟಿಗೆ ಪೇರಿಸಿದ ಮೇಲೆ
ನಾವು ಅವನ್ನು ಕೋಣೆಗೆ ಕೊಂಡೊಯ್ದು ಹಾಕಬೇಕು. ಇನ್ನೂ ಒಬ್ಬರು ಅವುಗಳನ್ನು
ಶಿಸ್ತಾಗಿ ರಾಶಿಯಾಗಿ ಪೇರಿಸಿಟ್ಟು ಹೆಚ್ಚು ಸ್ಥಳಾವಕಾಶ ಒದಗಿಸಲು ಪ್ರಯತ್ನಿಸುತ್ತಿರಬೇಕು . ಮಳೆಗಾಲಕ್ಕೆ ಆಗುವಷ್ಟು ಕಾಷ್ಠ ಸಂಗ್ರಹ ಆಗುವವರೆಗೂ ಇದೊಂದು ಕಡ್ಡಾಯದ ಯಮಶಾಸನ… ಹೆಚ್ಚು ಕಡಿಮೆಯಾದರೆ
ಪರಶುರಾಮ, ‘ ನರಸಿಂಹ ಅವತಾರ’ ತಾಳುತ್ತಿದ್ದ…ಆ ಕೆಲಸ ಮುಗಿಯುವ ಹೊತ್ತಿಗೆ ಎಳೆಯ ಕೈಗಳಿಗೆ ಕಟ್ಟಿಗೆ ಚುಚ್ಚಿ, ಒತ್ತಿ, ಹತ್ತಿ ಕೈಗಳು ಕೆಂಪಡರುತ್ತಿದ್ದವು.
ಒಮ್ಮೊಮ್ಮೆ ಸಣ್ಣಗೇ ರಕ್ತ ಜಿನುಗುವದೂ ಇತ್ತು .ಆಗ ಕೈಗಳನ್ನು ಊದಿಯೋ, ತಣ್ಣೀರು ಸುರಿದೋ, ಕೊಬ್ಬರಿ ಎಣ್ಣೆಯನ್ನು ಸವರಿಯೋ ನೋವಿಗೆ ಪರಿಹಾರ ಪಡೆಯುತ್ತಿದ್ದಂತೆ ನೆನಪು.
ಇಂಥ ಕೆಲಸಗಳು ಮುಗಿದಮೇಲೆ ಒಂದು ತಾಸು ಅದೂ ಇದೂ ಮಾಡುತ್ತಾ ಕಳೆದು ಹೋಗುತ್ತಿತ್ತು. ಮತ್ತೆ ಎಲ್ಲರದೂ ಸಂಜೆ ಭೇಟಿ, ಆಟ, ಹರಟೆ, ಮೋಜು, ಜಗಳ, ಗುಂಪುಗಾರಿಕೆ, ಅಷ್ಟಿಷ್ಟು ವಾದ, ಒಂದಷ್ಟು ರಾಜಿ, ಬಹಳಷ್ಟು ಪಾಲಕರ ಕಟಕಟೆಯಲ್ಲಿ ನ್ಯಾಯನಿರ್ಣಯ, ಇನ್ನೂ ಏನೇನೋ…
‌‌ಮನೆಗೆ ಹಿಂದಿರುಗಲು ಸಮಯ ನಮಗೆ ಎಂದಿಗೂ ಮಾನದಂಡ ವಾಗಿರಲೇಯಿಲ್ಲ. ಯಾರಾದರೂ ಜಗಳವಾಡಿ ರಾಜಿಯೇ ಆಗದಿದ್ದರೆ, ಅಭ್ಯಾಸ ಬಾಕಿ ಇದ್ದರೆ, ಯಾರಿಗೇನಾದರೂ ಆಕಸ್ಮಿಕವಾಗಿ ಆರೋಗ್ಯದ್ದೇನಾದರೂ ತೊಂದರೆ ಕಾರಣವಾದರೆ, ಪಾಲಕರು ಬಂದು ಛಡಿ ಪ್ರಯೋಗಿಸಿ ಎಳೆದು ಕರೆದುಕೊಂಡು ಹೋದರೆ… ಇಂಥ ಅತಿ ಗಂಭೀರ ಕಾರಣಗಳೇ ಬೇಕಾಗಿತ್ತು, ಮನೆಯ ನೆನಪಾಗಲು…
ರಟ್ಟೀಹಳ್ಳಿ ಚಿಕ್ಕದಾದ್ದರಿಂದ ಎಲ್ಲರದೂ ಒಂದೇ ರೀತಿಯ ಬದುಕು, ಎಲ್ಲರೂ ಪರಸ್ಪರ ಪರಿಚಿತರು.ಇದು ನಮ್ಮ ಮನೆ/ ಇದು ನಿಮ್ಮ ಮನೆ ಮಾತೇಯಿಲ್ಲ. ಹೀಗಾಗಿ ಮಕ್ಕಳು ಯಾವ ಸ್ನೇಹಿತರ ಮನೆಯಲ್ಲಿ ಇದ್ದರೂ ಉಂಡರೂ, ತಿಂದರೂ, ಮಲಗಿದರೂ ಆಕ್ಷೇಪಣೆಯಿರಲಿಲ್ಲ. ಮೊದಲೇ ಹೇಳಬೇಕಷ್ಟೇ, ಕಾಳಜಿಗಾಗಿ ಖಂಡಿತ ಅಲ್ಲ , ವ್ಯರ್ಥವಾಗಿ ಕಾಯಬಾರದು ಎಂಬ ಒಂದೇ ಕಾರಣಕ್ಕಾಗಿ…
ಅಭ್ಯಾಸದ ಬಗ್ಗೆ ಹೇಳದಿರುವದೇ ಲೇಸು.
ಶಾಲೆಗೂ/ ಮನೆಗೂ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಪರೀಕ್ಷೆಯ ಭಯವಿಲ್ಲ, ಅಂಕಗಳ ಆತಂಕವಿಲ್ಲ, ರ್ಯಾಂಕುಗಳ ಗುರಿಯಿಲ್ಲ, ಎಲ್ಲರೂ ಪಾಸು…ಆದರೆ ಶಿಕ್ಷಕವೃಂದ ಯಾವ ಗುರುಕುಲಕ್ಕೂ ಕಡಿಮೆಯಿರಲಿಲ್ಲ. ನೋಡಿದರೆ ತಾವಾಗಿಯೇ ಕೈಗಳು ಮುಗಿದುಕೊಳ್ಳುವಂಥ ವ್ಯಕ್ತಿತ್ವ. ಏಳನೇ ವರ್ಗದ ಪರೀಕ್ಷೆಗೆ ರಾಣಿಬೆನ್ನೂರಿಗೆ ಪರಿಚಯಸ್ಥರ ಮನೆಗೆ ಹೋಗಬೇಕಾಗುತ್ತಿತ್ತು , ನಮ್ಮಲ್ಲಿ ಪರೀಕ್ಷಾ ಕೇಂದ್ರವಿಲ್ಲದ ಕಾರಣಕ್ಕೆ…
ಆಗ ಮಾತ್ರ ಅವಲಕ್ಕಿ/ ಉಂಡಿಯಂಥ
ತಿನಿಸುಗಳ ತಯಾರಿ ನಮಗಾಗಿ.ಆ ಹತ್ತು ದಿನಗಳು ಕೊಟ್ಟ ಸಂತಸ, ಗೆಳತಿಯರ ಸಾಂಗತ್ಯ ನಂತರದ ‘ಹನಿಮೂನ್’ ನಲ್ಲೂ ಕಾಣಲಿಲ್ಲ ಎಂದರೆ ನಂಬಬೇಕು ನೀವುಗಳು…
ಉಫ್!!! ಒಮ್ಮೆ, ಕೇವಲ ಒಮ್ಮೆ, ಆ ದಿನಗಳು ಮತ್ತೊಮ್ಮೆ ನಮ್ಮವಾಗಬಾರದೇ!? ಕೇಳಿದ ಬೆಲೆ ಕೊಟ್ಟು ಖರೀದಿಸಿಯೇನು!!!
( ತುಂತುರು : ಇಲ್ಲಿ ನೀರು ಹಾಡು…
ಬಾಲ್ಯ ಕಾಂಡ: ಭಾಗ-೨.)
Leave a Reply