ಹಲಗೆ ಹಣ್ಣು

ಹಲಗೆ ಹಣ್ಣು

ಬೇಸಿಗೆಯೆಂದರೆ ಮಲೆನಾಡಿನಲ್ಲಿ ಕಾಡುಹಣ್ಣುಗಳ ಸುಗ್ಗಿ, ನಾನಾ ತರಹದ ಹಣ್ಣುಗಳ ಖಜಾನೆ, ಮುಳ್ಳುಣ್ಣು, ಕೌಳಿಹಣ್ಣು, ಗುಡ್ಡೇಗೇರು, ಕಾಡುಮಾವು, ಕಾಕೇ ಹಣ್ಣು, ಬುಕ್ಕೆ, ನೇರಳೆ, ಹಲಸು, ತುಂಬ್ರಿ, ಸಂಪಿಗೆ ಹಣ್ಣು, ಕೇಪುಳ ಹಣ್ಣು, ನೆಲ್ಲಿ, ರಂಜಲು, ಪುನ್ನೇರಲು-ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಪ್ರಕೃತಿದತ್ತ ಹಣ್ಣುಗಳಿಗೆ ಅವುಗಳದ್ದೇ ಆದ ವಿಶಿಷ್ಟ ರುಚಿ, ವಿಶೇಷವಾದೊಂದು ಪರಿಮಳ, ಕೆಲವು ಸಿಹಿ, ಕೆಲವು ಹುಳಿ, ಅತ್ತ ಸಿಹಿಯೂ ಅಲ್ಲದ, ಇತ್ತ ಹುಳಿಯೂ ಅಲ್ಲದ ಮಿಶ್ರ ರುಚಿಯ ಹಣ್ಣೊಂದಿದೆ. ಅದು ಹಲಗೆ ಹಣ್ಣು. ಅದ್ಭುತ ರುಚಿ ಹೊಂದಿರುವ ಈ ಹಣ್ಣಿನ ಮೇಲೆ ಬೂದು ಬಣ್ಣದ ಮರಳಿನಂತಹ ಒರಟಾದ ತೆಳುಹೊದಿಕೆ ಇರುತ್ತದೆ. ಹಣ್ಣಿನ ಮೇಲ್ಮೈಯನ್ನು ಮೃದುವಾಗಿ ಉಜ್ಜಿದಾಗ ಕಡುಕೆಂಪುಬಣ್ಣದ ಒಳಮೈ ಕಾಣಿಸುತ್ತದೆ. ಇದನ್ನು ಬಾಯಲ್ಲಿಟ್ಟು ಚೀಪಿದಾಗ ಸಿಹಿ ಹಾಗೂ ಹುಳಿಯ ಮಿಶ್ರ ರುಚಿ ಅನುಭವಕ್ಕೆ ಬರುತ್ತದೆ. ಪೂರ್ಣ ಮಾಗದ ಹಣ್ಣು ಹುಳಿಯಾಗಿರುತ್ತದೆ. ಕಾಡು ಹಕ್ಕಿಗಳ ಪರಮ ಪ್ರೀತಿಯ ಹಣ್ಣು ಇದು. ಈ ಹಣ್ಣಿನ ಬೀಜವು ಎರಡೂ ಬದಿಯಲ್ಲಿಚೂಪಾಗಿದ್ದು, ಸುಮಾರು ಒಂದು ಇಂಚು ಉದ್ದವಾಗಿದ್ದು ಗದೆಯ ಮೇಲ್ಮೈಯಂತೆ ಏಣುಗಳನ್ನು ಹೊಂದಿದೆ. ಈ ಹಣ್ಣು ರುಚಿ ಎಂದು ಹೆಚ್ಚು ತಿನ್ನುವುದು ಉದರದ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಕೂಡಾ ಹಲಗೆ ಹಣ್ಣು ತನ್ನ ಔಷಧೀಯ ಗುಣದಿಂದಾಗಿ ಮನೆ ಮದ್ದಿನಲ್ಲಿ ಬಳಕೆಯಾಗುತ್ತದೆ. ಈ ಹಣ್ಣಿನ ಸಸ್ಯ ಬಳ್ಳಿ ರೂಪದಲ್ಲಿದ್ದು ಮತ್ತೊಂದು ಮರವನ್ನು ಆಶ್ರಯಿಸಿ ಪೊದೆಯಾಗಿ ಬೆಳೆಯುತ್ತದೆ. ಯಾವುದೇ ಆರೈಕೆ ಬೇಡದೇ ಸ್ವಾಭಾವಿಕವಾಗಿ ಬೆಳೆಯುವ ಈ ಕಾಡು ಹಣ್ಣುಗಳು ಹೆಚ್ಚು ರುಚಿಕರವೂ ಪುಷ್ಟಿಕರವೂ ಆಗಿರುವುದು ಕೂಡಾ ಅಷ್ಟೇ ವಿಶೇಷ. ವಿನಾಶದ ಅಂಚಿನಲ್ಲಿರುವ ಈ ಬಳ್ಳಿಯನ್ನು ಬೆಳೆಸಿ ಉಳಿಸುವ ಕೆಲಸವಾಗಬೇಕಿದೆ. ಈ ಬೇಸಿಗೆ ರಜೆಯಲ್ಲಿ ಕಾಡು ಸುತ್ತುವ ಸವಿಯಲು ಮಾತ್ರ ಮರೆಯಬೇಡಿ.

ಹೊಸ್ಮನೆ ಮುತ್ತು

Leave a Reply