ಕನ್ನಡ ನೆಲದ ಕ್ರಾಂತಿಯ ಕಿಡಿಗಳು : ವಿದುರಾಶ್ವತ್ಥದ ಬಲಿದಾನಿಗಳು

ಕನ್ನಡ ನೆಲದ ಕ್ರಾಂತಿಯ ಕಿಡಿಗಳು : ವಿದುರಾಶ್ವತ್ಥದ ಬಲಿದಾನಿಗಳು

ವಿದುರಾಶ್ವತ್ಥದ ಬಲಿದಾನಿಗಳು : ಸ್ವಾತಂತ್ರ್ಯ ಸಮರದಲ್ಲಿ ಕರ್ನಾಟಕದಲ್ಲಿ ನಡೆದ ಅತೀ ಭೀಕರ ಹತ್ಯಾಕಾಂಡಗಳಲ್ಲಿ ಒಂದಾದ ವಿದುರಾಶ್ವತ್ಥದ ಬಲಿದಾನ ಕರ್ನಾಟಕದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದೂ ಹೆಸರಾಗಿದೆ. ಒಬ್ಬ ಗರ್ಭಿಣಿಯೂ ಸೇರಿದಂತೆ 32 ಜನ ದೇಶಭಕ್ತರು ಬ್ರಿಟಿಷರ ಗುಂಡಿಗೆ ಬಲಿಯಾಗಿ ಪ್ರಾಣಾರ್ಪಣೆ ಮಾಡಿದ್ದು ಈ ನೆಲದ ಜನರ ಅಪ್ರತಿಮ ದೇಶಭಕ್ತಿಗೆ ಹಾಗೂ ಬ್ರಿಟಿಷ್ ಆಡಳಿತದ ಬರ್ಬರತೆಗೆ ಸಾಕ್ಷಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರ ವಿದುರಾಶ್ವತ್ಥ ದೇಶದ ಸ್ವಾತಂತ್ರ್ಯ ಹೋರಾಟಗಾರರ ಚಳುವಳಿಯ ಕೇಂದ್ರವಾಗಿತ್ತೆಂಬುದು ಗಮನಾರ್ಹ ಸಂಗತಿ. ಮಹಾಭಾರತ ಕಾಲದಲ್ಲಿ ವಿದುರ ನೆಟ್ಟಿದ್ದನೆಂದು ನಂಬಲಾಗುವ ಅಶ್ವತ್ಥ ವೃಕ್ಷ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರ ಪೈಶಾಚಿಕ ದೌರ್ಜನ್ಯಕ್ಕೂ ಸಾಕ್ಷಿಯಾಗಿದ್ದು ದುರಂತದ ಸಂಗತಿ. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿದ್ದ ಆಂದೋಲನದ ಬಿಸಿ ಕರ್ನಾಟಕಕ್ಕೂ ತಟ್ಟಿತ್ತು. 1938 ಏಪ್ರಿಲ್ 8 ರಿಂದ 10 ರವರೆಗೆ ಬ್ರಿಟಿಷರ ವಿರುದ್ಧ ಪ್ರತಿಭಟಿಸಲು ಕರ್ನಾಟಕದ ದೇಶಾಭಿಮಾನಿಗಳು ಮಂಡ್ಯದ ಶಿವಪುರದಲ್ಲಿ ಧ್ವಜ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಶಿವಪುರ ಧ್ವಜ ಸತ್ಯಾಗ್ರಹ ನಾಡಿನ ಹಲವೆಡೆಗಳಲ್ಲಿ ಹೋರಾಟದ ಕಹಳೆ ಮೊಳಗಿಸಿತು. ಇದರಿಂದ ಪ್ರಭಾವಿತರಾದ ಚಿಕ್ಕಬಳ್ಳಾಪುರದ ಸ್ವಾತಂತ್ರ್ಯ ಸೇನಾನಿಗಳು ವಿದುರಾಶ್ವತ್ಥವನ್ನು ಹೋರಾಟಕ್ಕೆ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ಆರಂಭಿಸಿದರು. 1938 ಏಪ್ರಿಲ್ 25 ರಂದು ವಿದುರಾಶ್ವತ್ಥದಲ್ಲಿ ಧ್ವಜ ಸತ್ಯಾಗ್ರಹಮಾಡುವ ನಿರ್ಧಾರ ಕೈಗೊಂಡರು. ಇದರ ಸುಳಿವನ್ನರಿತ ಕೋಲಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ತಾಲೂಕಿನಾದ್ಯಂತ 144 ವಿಧಿ ಹೊರಡಿಸಿ ಸಭೆ ಸಮಾರಂಭಗಳನ್ನು ನಡೆಸದಂತೆ ಸೂಚಿಸಿದರು. ಅದನ್ನು ಧಿಕ್ಕರಿಸಿ ಹೋರಾಟ ಮುಂದುವರಿದಾಗ ಪೋಲೀಸರು ಹಲವು ನಾಯಕರನ್ನು ಬಂಧಿಸಿದರು. ಈ ಸಂಗತಿ ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಒಂದೇ ದಿನದಲ್ಲಿ ವ್ಯಾಪಿಸಿ ಸ್ವಾತಂತ್ಯ್ರಸೇನಾನಿಗಳು, ದೇಶಾಭಿಮಾನಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಏಪ್ರಿಲ್ 25 ರಂದು ವಿದುರಾಶ್ವತ್ಥದಲ್ಲಿ ಜಮಾವಣೆಗೊಂಡರು. ಬ್ರಿಟಿಷರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಜನತೆ ಭಾರತ ಮಾತಾಕಿ ಜೈ ಎಂದು ಘೋಷಿಸುತ್ತಾ ಮುಂದಡಿಯಿಡುತ್ತಿದ್ದಂತೆ ಪೋಲೀಸರು ಲಾಠಿ ಪ್ರಹಾರ ಪ್ರಾರಂಭಿಸಿ ಅದನ್ನು ಪ್ರತಿಭಟಿಸಿದ ದೇಶಭಕ್ತ ಹೋರಾಟಗಾರರ ಮೇಲೆ ಏಕಾಏಕಿ ಬಂದೂಕಿನಿಂದ ಗುಂಡಿನ ಸುರಿಮಳೆಗೈಯಲು ಪ್ರಾರಂಭಿಸಿದರು. ಓಡಿಹೋಗುತ್ತಿದ್ದವರ ಮೇಲೆ ಕೂಡಾ ಗುಂಡು ಹಾರಿಸಲಾಯಿತು. ಈ ದುರ್ಘಟನೆಯಲ್ಲಿ ಇಡಗೂರು ಭೀಮಯ್ಯ, ಚೌಳೂರು ನರಸಪ್ಪ, ಗಜ್ಜನ್ನಗಾರಿನರಸಪ್ಪ, ಹನುಮಂತಪ್ಪ, ಕಾರಗೊಂಡಹಳ್ಳಿ ಮಲ್ಲಯ್ಯ, ನಾಮಾ  ಅಶ್ವತ್ಥನಾರಾಯಣ ಶೆಟ್ಟಿ, ವೆಂಕಟಗಿರಿಯಪ್ಪ, ನರಸಪ್ಪ, ಮರಳೂರು ಗೌರಮ್ಮ ಸೇರಿದಂತೆ ಮೂವತ್ತೆರಡು ದೇಶಭಕ್ತರು ಸ್ಥಳದಲ್ಲೇ ಪ್ರಾಣತೆತ್ತರೆ ನೂರಾರು ಜನರು ಗಾಯಗೊಂಡರು. ಪಂಜಾಬಿನ ಅಮೃತಸರದ ಜಲಿಯನ್ ವಾಲಾ ಭಾಗ್ ನಲ್ಲಿ ಜನರಲ್ ಡಯರ್ ನ ಕ್ರೌರ್ಯಕ್ಕೆ ಸಾವಿರಾರು ಜನ ಹತರಾದಂತೆ ಕರ್ನಾಟಕದ ವಿದುರಾಶ್ವತ್ಥದಲ್ಲಿ ನಡೆದ ಈ ಹತ್ಯಾಕಾಂಡ ಕೂಡಾ ಬ್ರಿಟಿಷರ ಬರ್ಬರತೆಗೆ, ಅಮಾನವೀಯ, ಪೈಶಾಚಿಕ ದೌರ್ಜನ್ಯಕ್ಕೆ ಉದಾಹರಣೆಯಾಗಿದೆ. ದೇಶಭಕ್ತರನ್ನು ಅಮಾನುಷವಾಗಿ ಗುಂಡು ಹೊಡೆದು ಬರ್ಬರವಾಗಿ ಕೊಂದು ಹಾಕಿದ ಈ ಹತ್ಯಾಕಾಂಡ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಗಾಂಧೀಜಿ, ಸರ್ದಾರ್ ಪಟೇಲ್, ಆಚಾರ್ಯ ಕೃಪಲಾನಿ ಮುಂತಾದ ನಾಯಕರು ಇಲ್ಲಿಗೆ ಭೇಟಿ ನೀಡಿ ಹುತಾತ್ಮರಿಗೆ ಶೃದ್ಧಾಂಜಲಿ ಅರ್ಪಿಸಿದ್ದರು. ಸ್ವಾತಂತ್ರ್ಯಾ ನಂತರ ದೇಶಭಕ್ತರು ಬ್ರಿಟಿಷರ ಗುಂಡಿಗೆ ಪ್ರಾಣತೆತ್ತ ಸ್ಥಳದಲ್ಲಿ ಸ್ಮಾರಕ ಹಾಗೂ ವೀರಸೌಧವನ್ನು ನಿರ್ಮಿಸಿ ಗೌರವ ಸಮರ್ಪಿಸಲಾಗಿದೆ.

ವಿದುರಾಶ್ವತ್ಥದಿಂದ ಸುಮಾರು 5-6 ಕಿಲೋಮೀಟರ್ ದೂರದ ನಾಗಸಂದ್ರದಲ್ಲಿ ಅಲ್ಲಿನದೇಶಪ್ರೇಮಿಗಳು, ರೈತಾಪಿ ವರ್ಗದವರು ಭಾರತಮಾತಾ ದೇವಸ್ಥಾನವನ್ನು ಕಟ್ಟಿದ್ದಾರೆ. ಪ್ರತಿಆಗಸ್ಟ್ ೧೫ ರಂದು ಅಲ್ಲಿ ವಿಶೇಷ ಪೂಜೋತ್ಸವಗಳು, ಹುತಾತ್ಮರ ಸ್ಮರಣೆಯ ಕಾರ್ಯಕ್ರಮಗಳುಜರುಗುತ್ತವೆ. ಕನ್ನಡ ನೆಲದಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಆ ಎಲ್ಲಾ ಹುತಾತ್ಮರಿಗೆಗೌರವ ನಮನ.

Leave a Reply