ದೇಶಾಭಿಮಾನಿ ರಾಣಿ ಗಾಯಡಿನ್ ಲೂ

ದೇಶಾಭಿಮಾನಿ ರಾಣಿ ಗಾಯಡಿನ್ ಲೂ

ರಾಣಿ ಗಾಯಡಿನ್ ಲೂ: ಹೆಸರು ಕೇಳಿದರೆ ಇದು ಯಾರೋ ಬ್ರಿಟಿಷ್ ವ್ಯಕ್ತಿ ಅನ್ನಿಸಬಹುದು. ಆದರೆ ಈ ರಾಣಿ ಗಾಯಡಿನ್ ಲೂ ಈಶಾನ್ಯ ರಾಜ್ಯ ನಾಗಲ್ಯಾಂಡ್ ನ ಆಧ್ಯಾತ್ಮಿಕ ಹಾಗೂ ರಾಜಕೀಯ ಹೋರಾಟದ ನಾಯಕಿಯಾಗಿದ್ದ, ಬ್ರಿಟಿಷ್ ಆಡಳಿತದ ವಿರುದ್ಧ ಈಶಾನ್ಯ ರಾಜ್ಯದಲ್ಲಿ ದಂಗೆ ಎಬ್ಬಿಸಿದ ದಿಟ್ಟ ಮಹಿಳೆ. ತನ್ನ 12ನೇ ವಯಸ್ಸಿಗೇ ಹೋರಾಟಕ್ಕೆ ಧುಮುಕಿ 16ನೇ ವಯಸ್ಸಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದ, ಈಕೆಯ ಕೇವಲ 4 ವರ್ಷಗಳ ಹೋರಾಟದ ತಾಕತ್ತು ಎಂಥದ್ದು ಎಂದು ತಿಳಿದರೆ ಅಚ್ಚರಿ ಎನಿಸುತ್ತದೆ. ಬ್ರಿಟಿಷರ ವಿರುದ್ಧ ಹೋರಾಟ ಅಷ್ಟೇ ಅಲ್ಲದೇ ನಾಗಾ ಜನರಲ್ಲಿ ತಮ್ಮ ಸ್ವಧರ್ಮದ ಬಗ್ಗೆ ಕೀಳರಿಮೆ ಹೊಡೆದೋಡಿಸಿ ಅಭಿಮಾನ ಮೂಡುವಂತೆ ಮಾಡಿದರು. ಇವರಿಬ್ಬರೂ ಪ್ರತಿಯೊಂದು ವನವಾಸಿ ಸಮುದಾಯದ ಬಳಿ ತೆರಳಿ ಬ್ರಿಟಿಷರ ಕುತಂತ್ರದ ಕುರಿತು ಮುಗ್ಧ ಜನರಿಗೆ ತಿಳಿ ಹೇಳಿದರು. ಗಾಯಿಡಿನ್ ಲೂರಿಂದ ಆಕರ್ಷಿತರಾದ ವನವಾಸಿ ಮಹಿಳೆಯರು ಒಂದು ಸೇನಾ ಪಡೆಯನ್ನೇ ಕಟ್ಟಿದರು. ಇದರಿಂದ ಉತ್ಸಾಹಿತಳಾದ ಗಾಯಿಡಿನ್ ಲೂ ಅವರಿಗೆ ಸಾಂಪ್ರದಾಯಿಕ ಮದ್ದುಗುಂಡುಗಳ ತಯಾರಿಕೆ, ಬಂದೂಕು ತರಬೇತಿಯನ್ನು ಕೊಟ್ಟಳು. ಮುಂದೆ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧವನ್ನು ಮಾಡಿದಳು. ಇವಳ ರಣನೀತಿಯಿಂದ ಬ್ರಿಟಿಷರು ತತ್ತರಿಸಿಹೋಗಿದ್ದರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಈಕೆ ಬ್ರಿಟಿಷರ ತಂತ್ರಗಳನ್ನೆಲ್ಲಾ ಕ್ಷೀಣಿಸುವಂತೆ ಮಾಡಿದಳು. ಧರ್ಮ ರಕ್ಷಣೆ ಮತ್ತು ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸಿ ಎನ್ನುವ ವಿಷಯವಿಟ್ಟುಕೊಂಡು ಹೋರಾಟ ಮಾಡಿದಳು. ಇವಳಿಗೆ ಹೇಗಾದರು ಮಾಡಿ ಕಡಿವಾಣ ಹಾಕಬೇಕು ಎಂದು ನಿರ್ಧರಿಸಿದ ಬ್ರಿಟಿಷ ಸರಕಾರ ಆ ರಾಜ್ಯಗಳಿಗೆ ತನ್ನ ಸೈನ್ಯವನ್ನೇ ಕಳುಹಿಸಿಕೊಟ್ಟಿತು. ಅಷ್ಟೇ ಅಲ್ಲದೇ ಆ ಕಾಲದಲ್ಲಿಯೇ ಅವಳ ಸುಳಿವು ನೀಡಿದವರಿಗೆ 400ರೂ. ಬಹುಮಾನದ ಜೊತೆಗೆ ಸರಕಾರದ ಸುಂಕವನ್ನು ಮನ್ನಾ ಮಾಡುವದಾಗಿ ಆಮಿಷ ತೋರಿಸಿತು. ಬ್ರಿಟಿಷರು ಎಂದಿನಂತೆ ತಮ್ಮ ಕುತಂತ್ರ ಬುದ್ಧಿಯ ಮೂಲಕ ಗಾಯಿಡಿನ್ ಲೂ ಆಪ್ತರಿಗೆ ಆಮಿಷವೊಡ್ಡಿ ಅವಳ ಸುಳಿವು ಹಚ್ಚಿತು. ಇಬ್ಬರ ಮಧ್ಯೆ ದೊಡ್ಡ ಯುದ್ಧವೇ ನಡೆದುಹೋಯಿತು. ಕೊನೆಗೆ 1932ರ ಅಕ್ಟೋಬರ್ 12 ರಂದು ಗಾಯಿಡಿನ್ ಲೂ ಮೇಲೆ ವಿವಿಧ ಸುಳ್ಳು ಆರೋಪವನ್ನು ಹೊರಿಸಿ, ಸಂಬಂಧವೇ ಇಲ್ಲದ ಕೊಲೆ ಅರೋಪವನ್ನು ತಲೆಗೆ ಕಟ್ಟಿ ಬಂಧಿಸಲಾಯಿತು. ಜವಾಹರ್‌ಲಾಲ್ ನೆಹರೂ, ಸುಭಾಶ್ಚಂದ್ರ ಬೋಸ್‌ರವರು ಕೂಡ ಈಕೆಯ ಬಿಡುಗಡೆಗೆ ಪ್ರಯತ್ನಿಸಿದರು. ಆದರೆ ಬ್ರಿಟಿಷ ಸರಕಾರ ಇವಳನ್ನು ಬಿಟ್ಟರೆ ನಾಗಾ ಹೋರಾಟ ಅತ್ಯಂತ ದೊಡ್ಡ ಸ್ವರೂಪ ಪಡೆಯುತ್ತದೆ ಎಂದು, ಇವಳನ್ನು ಬಿಡುಗಡೆ ಮಾಡಲಿಲ್ಲ. ಇವಳಿಂದ ಇಡೀ ಈಶಾನ್ಯ ರಾಜ್ಯಗಳೇ ಸೆಟೆದು ನಿಲ್ಲುತ್ತವೆ ಎಂದು ಬ್ರಿಟಿಷರು ಮನಗಂಡಿದ್ದರು. ಸುದೀರ್ಘ 15 ವರ್ಷ ಜೈಲುವಾಸ ಅನುಭವಿಸಿದ ರಾಣಿ ಗಾಯಿಡಿನ್ ಲೂ 1947ರಲ್ಲಿ ಸ್ವತಂತ್ರದೊಂದಿಗೆ ಬಿಡುಗಡೆಯಾದಳು. ಸ್ವಾತಂತ್ರ್ಯಾ ನಂತರವೂ ಮತಾಂತರದ ವಿರುದ್ಧ ದಿಟ್ಟ ದನಿಯೆತ್ತಿದ ಗಾಯ್ಡಿನ್ ಲೂ ದೇಶಾದ್ಯಂತ ಸಂಚರಿಸಿ ನಾಗಾಗಳು ಭಾರತವಾಸಿಗಳು, ಭಾರತ ಮಾತೆಯ ಹೆಮ್ಮೆಯ ಪುತ್ರರು ಎಂದು ಇಡೀ ದೇಶಕ್ಕೆ ಸಾರಿ ಹೇಳಿದಳು. ಈ ಅಪ್ರತಿಮ ದೇಶಭಕ್ತೆ 1993ರ ಫೆಬ್ರವರಿ 17 ರಂದು ಸ್ವಗ್ರಾಮ ಲಂಗಕಾವ್ ನಲ್ಲಿ ಸ್ವರ್ಗಸ್ಥಳಾದಳು. ಭಾರತ ಸರಕಾರವು ಇವರ ಹೋರಾಟಕ್ಕೆ ಮೆಚ್ಚಿ ಸ್ವತಂತ್ರ ಹೋರಾಟಗಾರ್ತಿ ಎಂದು ತಾಮ್ರಪತ್ರ ನೀಡಿದೆ. ಹಾಗೂ ಅಂಚೆ ಇಲಾಖೆಯವರು ಗಾಯಿಡಿನ್ ಲೂ ರವರ ಭಾವಚಿತ್ರವಿರುವ ಅಂಚೆ ಚೀಟಿಗಳನ್ನು ಹೊರ ತಂದಿದೆ. ಭಾರತ ಸರಕಾರವು ಗಾಯಡಿನ್ ಲೂ ಹೆಸರಿನಲ್ಲಿ ‘ಸ್ತ್ರೀ ಶಕ್ತಿ ಪುರಸ್ಕಾರ’ ಪ್ರಾರಂಭಿಸಿದೆ. ಬಿ.ಬಿ.ಸಿ ಯವರು ಗಾಯಿಡಿನ್ ಲೂ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡಿದ್ದಾರೆ. ವಿವಿಧ ರಾಜ್ಯಗಳು ಕೂಡ ಪ್ರಶಸ್ತಿ ನೀಡಿ ಗೌರವಿಸಿವೆ. ಅಲ್ಲದೇ 1982 ರಲ್ಲಿ ಸರಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಗಾಯಿಡಿನ್ ಲೂ ರವರ ಸಮಗ್ರ ರಾಷ್ಟ್ರೀಯ ಕಲ್ಪನೆಯ ವಿಚಾರಗಳು, ಜೀವನದ ಹೋರಾಟ, ದೇಶಾಭಿಮಾನ ಇಂದಿಗೂ ಪ್ರಸ್ತುತವಾಗಿವೆ.

Leave a Reply