ಆಚರಣೆಯ ಅಳಸಿಂಗರು

ಆಚರಣೆಯ ಅಳಸಿಂಗರು

ಭಾರತ ಇದುವರೆಗೂ ಜಗತ್ತಿನಲ್ಲಿ ತನ್ನನ್ನು ಗುರ್ತಿಸಿಕೊಂಡಿರುವುದು ವಿಶ್ವಭ್ರಾತೃತ್ವ ಹಾಗೂ ತ್ಯಾಗ ಸೇವೆಗಳಿಂದ ದೇಶಕ್ಕಾಗಿ ಜನರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಸಹಸ್ರಾರು ಮಂದಿ ಇಲ್ಲಿ ಕಾಣಲು ಸಿಗುತ್ತಾರೆ. ಇಲ್ಲಿನ ಧರ್ಮ ಪ್ರತಿಯೊಬ್ಬರನ್ನೂ ಮೋಕ್ಷಕ್ಕೆ ಪ್ರೇರೇಪಿಸುತ್ತದೆ. ಈ ಪ್ರಪಂಚದ ಸತ್ಯ-ಅಸತ್ಯಗಳನ್ನು ಪರಿಚಯಿಸುತ್ತದೆ. ಭಾರತದಲ್ಲಿ ವಿಶೇಷವಾಗಿ ಋಷಿಗಳ ಮತ್ತು ಸಾಧುಸಂತರ ಪರಂಪರೆಯನ್ನು ಕಾಣುತ್ತೇವೆ. ಹಾಗಾಗಿ ಭಾರತದಲ್ಲಿ ಇಂದಿಗೂ ಅವತಾರ ಪುರುಷರು ಸಾಧು-ಸಂತರು, ಸ್ವಾರ್ಥರಹಿತ ಸಮಾಜ ಸೇವಕರು ದುಡಿಯುತ್ತಿದ್ದಾರೆ.
ಸ್ವತಂತ್ರ ಪೂರ್ವದಲ್ಲಿ ಸ್ವಾಮಿ ವಿವೇಕಾನಂದರ ಶಿಷ್ಯರಾಗಿ ಸ್ವಾಮಿಜೀಯವರು ಅಮೇರಿಕಾ ಹಾಗೂ ಇತರೆ ರಾಷ್ಟ್ರಗಳಲ್ಲಿ ಧರ್ಮ ಪ್ರಚಾರ ಮಾಡಲು ಮತ್ತು ಭಾರತದಲ್ಲಿ ಅವರ ಕಾರ್ಯಗಳು ಯಶಸ್ವಿಯಾಗಲು ಶ್ರೀರಾಮನ ಭಂಟ ಹನುಮಂತನಂತೆ ಕೆಲಸ ಮಾಡಿದ ಮಹಾಚೇತನ ಶ್ರೀ ಅಳಸಿಂಗ ಪೆರುಮಾಳರು.
ಒಂದು ಸಸಿ ಹೆಮ್ಮರವಾಗಿ ಬೆಳೆದು ಫಲವನ್ನು ಕೊಡಬೇಕಾದರೆ ಕಣ್ಣಿಗೆ ಕಾಣದಿರುವ ಭೂಮಿಯಲ್ಲಿ ಹುದುಗಿರುವ ಬೇರುಗಳ ಶ್ರಮ ಬಹಳ ಇರುತ್ತದೆ. ಹಾಗೆಯೇ ಇಡೀ ಜೀವನದಲ್ಲಿ ಕನಸು-ಮನಸ್ಸಿನಲ್ಲಿ ಕಿಂಚಿತ್ತು ಹೆಸರು ಕೀರ್ತಿಗಳನ್ನು ಅಪೇಕ್ಷಿಸದೆ ಸೇವೆಗೈದ, ಗೃಹಸ್ಥ, ಸಂತ ಶ್ರೀ ಅಳಸಿಂಗ ಪೆರುಮಾಳರು.
ಶ್ರೀ ರಾಮಕೃಷ್ಣ ಪರಮಹಂಸರ ತಂದೆ ಕ್ಷುದಿರಾಮ ಚಟ್ಟೋಪಾಧ್ಯಾಯರು ಶ್ರೀಮಂತರಾಗಲಿ, ಅಧಿಕಾರಿಗಳಾಗಲಿ ಅಥವಾ ಜನರ ಜಗಳಗಳನ್ನು ಇತ್ಯರ್ಥ ಮಾಡುವ ಮುಖಂಡರಾಗಲಿ ಆಗಿರಲಿಲ್ಲ. ಆದರೂ ಜನರು ಅವರನ್ನು ವಿಶೇಷವಾಗಿ ಗೌರವಿಸುತ್ತಿದ್ದರು. ಹಾಗೆಯೇ ಅಳಸಿಂಗ ಪೆರುಮಾಳರು ಚೆನ್ನೈ ಜನತೆಯ, ಯುವಕರ ಕಣ್ಮಣಿಯಾಗಿದ್ದರು. ಅವರು ಸಮಾಜದ ಪ್ರತಿಷ್ಠಿತ ಯಾವ ಹುದ್ದೆಗಳನ್ನಾಗಲಿ, ಶ್ರೀಮಂತಿಕೆಯಾಗಲಿ ಹೊಂದಿರದೆ ಒಬ್ಬ ಶಿಕ್ಷಕರಾಗಿದ್ದರು. ಭಾರತದಲ್ಲಿ ಬ್ರಿಟಿಷ್ ಅಧಿಕಾರ ಇರುವಂಥ ಸಂದರ್ಭ. ಅಂತಹ ಪರಿಸ್ಥಿತಿಯಲ್ಲೂ ಅವರ ಮಾತನ್ನು ಯಾರು ತೆಗೆದು ಹಾಕುತ್ತಿರಲಿಲ್ಲ. ಇಂಥ ಸಾಮಾನ್ಯ ಶಿಕ್ಷಕನಿಗೆ ಎಲ್ಲಿಂದ ಬಂತು ಈ ಸಾಮರ್ಥ್ಯ ಎಂಬ ಪ್ರಶ್ನೆ ಏಳಬಹುದು.
ಮೊದಲೇ ಹೇಳಿರುವಂತೆ ಅವರ ಸ್ವಾರ್ಥರಹಿತ ಬದುಕು ಹಾಗೂ ಸರ್ವಾತ್ಮಭಾವ. ಇವು ಅವರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು.
ಒಬ್ಬ ಶಿಕ್ಷಕನಾಗಬಹುದು, ರೈತನಾಗಿರಬಹುದು ಅಥವಾ ಮತ್ತೇನೋ ಆಗಿರಬಹುದು. ನಿಸ್ವಾರ್ಥ ಬದುಕು ಮತ್ತು ಸರ್ವಾತ್ಮ ಭಾವವನ್ನು ಮೈಗೂಡಿಸಿಕೊಂಡರೆ ಸಮಾಜ ಇಂದಿಗೂ ಅಂಥವರನ್ನು ಉನ್ನತ ಸ್ಥಾನದಲ್ಲಿಟ್ಟು ಗೌರವಿಸುವಂತಹ ಸ್ಥಿತಿಯಲ್ಲಿ ಇದೆ ಎಂದು ಹೇಳಬಹುದು. ಆದರೆ ಇಂದಿನ ಶಿಕ್ಷಕರಾಗಲಿ, ನಾಗರೀಕರಾಗಲಿ ಇಂಥಹ ಮೌಲ್ಯಗಳಲ್ಲಿ ನಂಬಿಕೆಯನ್ನೇ ಕಳೆದುಕೊಂಡು ಕುಳಿತಿದ್ದಾರೆ.
ಸ್ವಾಮಿ ವಿವೇಕಾನಂದರ ವಿಷಯ ಬಂದಾಗ ಕರ್ನಾಟಕದ ಜನತೆ ಬಹಳ ಹೆಮ್ಮೆಪಡಬೇಕು. ಕಾರಣ ಸ್ವಾಮಿಜೀಯವರು ಅಮೇರಿಕಾದ ಚಿಕ್ಯಾಗೋ ನಗರದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಹೋಗುವುದಕ್ಕೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು ಪ್ರೋತ್ಸಾಹಿಸಿದ್ದಲ್ಲದೆ ಸ್ವಲ್ಪ ಹಣವನ್ನು ನೀಡಿದ್ದರು. ಅತ್ತಕಡೆ ಚೆನ್ನೈನಿಂದಲೂ ಬಹಳ ಪ್ರೋತ್ಸಾಹ ಮತ್ತು ಹಣದ ಸಹಾಯವೂ ಆಯಿತು. ಚೆನ್ನೈಯಿನ ಎಲ್ಲ ಜವಾಬ್ದಾರಿಯನ್ನು ಹೊತ್ತವರು ಅಳಸಿಂಗ ಪೆರುಮಾಳರು. ಅವರು ಮೂಲತಃ ಕರ್ನಾಟಕದ ಚಿಕ್ಕಮಗಳೂರಿನವರು. ಆದ್ದರಿಂದ ಸ್ವಾಮಿ ವಿವೇಕಾನಂದರು ಕರ್ನಾಟಕವನ್ನು ‘ಈ ನಾಡು ನನ್ನ ಕಾರ್ಯಕ್ಕೆ ಪ್ರಥಮವಾಗುತ್ತದೆ’ ಎಂದು ಹೃದಯ ತುಂಬಿ ಹರಸಿದ್ದಾರೆ.
ಅಳಸಿಂಗರು ಶ್ರೀವೈಷ್ಣವ ಮತಕ್ಕೆ ಸೇರಿದವರು. ತಂದೆ ಮಂಡಯಂ ಚಕ್ರವರ್ತಿ ನರಸಿಂಹಾಚಾರ್ಯರು ಚಿಕ್ಕಮಗಳೂರಿನ ಪುರಸಭೆಯಲ್ಲಿ ಕೆಲಸದಲ್ಲಿದ್ದರು. ಅವರಿಗೆ ಮಕ್ಕಳಿರದ ಕಾರಣ ಬಾಬಾಬುಡನಗಿರಿಯಲ್ಲಿದ್ದ ಒಬ್ಬ ಸಾಧುವನ್ನು ಸಂಧಿಸಿ ಅವರ ಆಶೀರ್ವಾದ ಪಡೆದರು. ಅವರ ಆಶೀರ್ವಾದದಿಂದ ಜನಿಸಿದವರೇ ಅಳಸಿಂಗ ಪೆರುಮಾಳರು. 1865 ರಲ್ಲಿ ಜನಿಸಿದ ಅಳಸಿಂಗ ಪೆರುಮಾಳರ ಬಾಲ್ಯ ಮತ್ತು ಶಿಕ್ಷಣ ಅಲ್ಲೇ ಮುಗಿಯಿತು. ತಂದೆಯವರು ಇನ್ನೂ ಹೆಚ್ಚಿನ ಹುದ್ದೆಯನ್ನು ಚೆನ್ನೈನಲ್ಲಿ ಪಡೆದುಕೊಂಡರು. ಆಗ ಕುಟುಂಬ ಸಮೇತ ಹೋದರು. ಆದ್ದರಿಂದ ಅಳಸಿಂಗ ಪೆರುಮಾಳರ ಹೆಚ್ಚಿನ ವ್ಯಾಸಂಗವೆಲ್ಲ ಚೆನ್ನೈನಲ್ಲಿಯೇ ನಡೆಯಿತು. ಶಿಕ್ಷಣದಲ್ಲಿ ಬಿ.ಎ. ಮುಗಿಸಿ ಸ್ನಾತಕೋತ್ತರದಲ್ಲಿ ನ್ಯಾಯಶಾಸ್ತ್ರಕ್ಕೆ ಸೇರಿದರು, ಆದರೆ ಕಾರಣಾಂತರಗಳಿಂದ ಮುಂದುವರಿಸಲಾಗಲಿಲ್ಲ. ಅಳಸಿಂಗ ಪೆರುಮಾಳರಿಗೆ ವಿವಾಹವಾಗಿತ್ತು. ಹಣಕಾಸಿನ ತೊಂದರೆ ಹೆಚ್ಚಾಯಿತು. ಅನಿವಾರ್ಯವಾಗಿ ಕೆಲಸಕ್ಕೆ ಸೇರಬೇಕಾಯಿತು. ಅವರಿಗೆ ಸುಲಭವಾಗಿ ದೊರೆತದ್ದು ಕುಂಭಕೋಣಂನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ತಂದೆಯವರು ದೇಹತ್ಯಾಗ ಮಾಡಿದ ಮೇಲೆ ಚೆನ್ನೈನ ಪಚ್ಚೆಯಪ್ಪ ಶಾಲೆಯಲ್ಲಿ ಸೇರಿದರು. ಮನೆಯ ಜವಾಬ್ದಾರಿ ನಿರ್ವಹಿಸಲು ಸುಲಭವಾಯಿತು.
ಅಳಸಿಂಗ ಪೆರುಮಾಳರು ಶಾಲೆಯಲ್ಲಿ ಉತ್ತಮ ಶಿಕ್ಷಕರು ಎಂದು ಗುರುತಿಸಲ್ಪಟ್ಟಿದ್ದರು. ಆದರೆ ಅವರು ತಮ್ಮನ್ನು ಅಷ್ಟಕ್ಕೆ ಸೀಮಿತಗೊಳಿಕೊಂಡಿರಲಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಸದಾ ಶ್ರಮಿಸುತ್ತಿದ್ದರು. ಅವರ ಜೀವನದಲ್ಲಿ ಎಂದೂ ಅಸತ್ಯವನ್ನು ನುಡಿಯಲಿಲ್ಲ. ಇತರರಿಗೆ ನೋವನ್ನುಂಟುಮಾಡಲಿಲ್ಲ. ಸಹಾಯ ಬೇಡಿ ಬಂದವರಿಗೆ ಬರಿಗೈಯಲ್ಲಿ ವಾಪಸ್ಸು ಕಳುಹಿಸಲಿಲ್ಲ. ಇವು ಅವರ ಶ್ರೇಷ್ಠಗುನಗಳಾಗಿದ್ದವು. ಒಂದು ಸುಭಾಷಿತ
ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಮ್ |
ಅಶ್ವಮೇಧ ಸಹಸ್ರಾಚ್ಚ ಸತ್ಯಮೇವ ವಿಶಿಷ್ಟತೇ ||
ಸಹಸ್ರ ಅಶ್ವಮೇಧಯಾಗಗಳನ್ನೂ ಮತ್ತು ಸತ್ಯವನ್ನು ತಕ್ಕಡಿಯಲ್ಲಿ ತುಲನೆ ಮಾಡಿದರೆ ಸಾವಿರ ಅಶ್ವಮೇಧಯಾಗಗಳಿಗಿಂತಲೂ ಸತ್ಯವೇ ಹೆಚ್ಚು ಈ ಸುಭಾಷಿತದಂತೆ ಸತ್ಯವನ್ನೇ ಉಸಿರಾಗಿಸಿಕೊಂಡು ಬದುಕಿದವರು ಅಳಸಿಂಗ ಪೆರುಮಾಳರು.
ಭಾರತ ಆಗ ಬ್ರಿಟಿಷರ ವಶದಲ್ಲಿತ್ತು. ಜನರು ಸಂಸಾರ, ಹಣಗಳಿಸುವುದು, ಪಾಶ್ಚಿಮಾತ್ಯರ ಅನುಕರಣೆಯಲ್ಲಿ ಮೋಜುಗಳಲ್ಲಿ ಮುಳುಗಿದ್ದರು. ಅಳಸಿಂಗ ಪೆರುಮಾಳರು ಸೂಕ್ಷ್ಮಮತಿಗಳಾಗಿದ್ದು ಎಲ್ಲವನ್ನು ಅರ್ಥಮಾಡಿಕೊಂಡು ಭಾರತವನ್ನು ಸ್ವತಂತ್ರಗೊಳಿಸುವುದಕ್ಕಾಗಿ ಹಾಗೂ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ತವಕಿಸುತ್ತಿದ್ದರು.
ಅಂದಿನ ವಿದ್ಯಾವಂತರು ಧರ್ಮಾಚರಣೆಯನ್ನು ಕೇವಲ ತೋರಿಕೆಗೆ ಮಾಡುತ್ತಿದ್ದರು. ಹೆಚ್ಚಿನವರು ಇಲ್ಲಿನ ಧರ್ಮ ಸಂಸ್ಕೃತಿಗಳನ್ನು ಟೀಕಿಸುವುದನ್ನೇ ಬಂಡವಾಳವಾಗಿಸಿಕೊಂಡಿದ್ದರು. ಅಂಥವರ ಸಂಖ್ಯೆಗೆ ಇಂದು ಕೊರತೆಯಿಲ್ಲ. ಸುಲಭವಾಗಿ ಪ್ರಚಾರ ಬೇಕಾದರೆ ಅವರಿಗೆ ಉಳಿದಿರುವುದು ಒಂದೇ ದಾರಿ. ಒಳ್ಳೆಯದನ್ನು ಟೀಕಿಸುವುದು. ಅದರಿಂದ ನಾವೇನು ಆಶ್ಚರ್ಯಪಡಬೇಕಾಗಿಲ್ಲ. ಅಂಥ ಜನರು ಅಂದು-ಇಂದು-ಮುಂದು ಇರುತ್ತಾರೆ. ನಾವು ಮಾಡುವ ಕೆಲಸದಿಂದ ಹಿಮ್ಮುಖರಾಗಬಾರದು. ಅಳಸಿಂಗ ಪೆರುಮಾಳರು ದಬ್ಬಾಳಿಕೆ, ಭಾರತೀಯರ ನಿರ್ಲಕ್ಷತನ ಇವುಗಳನ್ನು ನೋಡಿ ಬಹಳ ಯಾತನೆಯನ್ನು ಅನುಭವಿಸುತ್ತಿದ್ದರು.
ಕ್ರೈಸ್ತ ಪಾದ್ರಿಗಳು ಯುವಕರನ್ನು ಮತ್ತು ಇತರ ಜನರನ್ನು ಆಕರ್ಷಿಸಲು ಎಲ್ಲಾ ರೀತಿಯ ಪ್ರಲೋಭಗಳನ್ನು ಒಡ್ಡುತ್ತಿದ್ದರು. ಹಲವಾರು ಯುವಕರು ಮತಾಂತರ ಹೊಂದುತ್ತಿದ್ದರು. ಅಳಸಿಂಗ ಪೆರುಮಾಳರು ತಮ್ಮ ಅಭಿಪ್ರಾಯಗಳಿಗೆ ಸ್ಪಂದಿಸುವಂತಹವರನ್ನು ಒಟ್ಟುಗೂಡಿಸಿಕೊಂಡು ಯುವಕರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ತಮ್ಮಿಂದ ಆಕರ್ಷಿತರಾಗಿ ಬರುವ ವಿದ್ಯಾರ್ಥಿಗಳಿಗೆ ಶಕ್ತಿ ಮೀರಿ ಪ್ರೋತ್ಸಾಹಿಸುತ್ತಿದ್ದರು. ಇಷ್ಟೆಲ್ಲ ಶ್ರಮವಹಿಸಿ ಹಗಲು ರಾತ್ರಿ ದುಡಿಯುತ್ತಿದ್ದರೂ ಅವರಿಗೆ ಸಮಾಧಾನವಿರಲಿಲ್ಲ. ಅವರು ಇಷ್ಟು ಕೆಲಸ ಮಾಡಿದರೂ ಯಾವ ರಾಜಕೀಯ ಪಕ್ಷದವರೆಂದು ಗುರ್ತಿಸಿಕೊಳ್ಳದೆ ಇದ್ದುದರಿಂದ ಬ್ರಿಟಿಷ್ ಅಧಿಕಾರಿಗಳು ಇವರ ಸಾತ್ವಿಕ ಸ್ವಭಾವಕ್ಕೆ ಆಕರ್ಷಿತರಾಗಿ ಅವರನ್ನು ಭೇಟಿಯಾಗಲು ಬರುತ್ತಿದ್ದರು.
ಅಳಸಿಂಗ ಪೆರುಮಾಳರ ಮನದಾಳದ ತುಡಿತದಿಂದ ಹಾಗೂ ದೇಶವನ್ನು ಪರಕೀಯರಿಂದ ಮುಕ್ತಗೊಳಿಸುವ ಪ್ರಯತ್ನ ಮತ್ತು ಪ್ರಾರ್ಥನೆಗೆ ಸ್ಪಂದಿಸಿದ ಪರಮಾತ್ಮ ಸಿಡಿಲ ಕಿಡಿಯಂತಹ ಗುರುವನ್ನು ಕಳುಹಿಸಿದನು. ಅವರೇ ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರು. ಅವರನ್ನು ಗುರುವಾಗಿ ಸ್ವೀಕರಿಸಿ ಅವರ ಮಾರ್ಗದರ್ಶನದಿಂದ ತಮ್ಮನ್ನು ಸಂಪೂರ್ಣವಾಗಿ ದೇಶಸೇವೆಗೆ ಸಮರ್ಪಿಸಿಕೊಂಡರು.

Leave a Reply