ಕ್ರಾಂತಿಕಾರಿಗಳ ಒಡನಾಡಿ, ಕ್ರಾಂತಿಯ ಕಿಡಿ, ವೀರವನಿತೆ ದುರ್ಗಾ ಭಾಭಿ

ಕ್ರಾಂತಿಕಾರಿಗಳ ಒಡನಾಡಿ, ಕ್ರಾಂತಿಯ ಕಿಡಿ, ವೀರವನಿತೆ ದುರ್ಗಾ ಭಾಭಿ

ದುರ್ಗಾ ದೇವಿ ವೋಹ್ರಾ (ದುರ್ಗಾ ಭಾಭಿ) : ನೀವು ‘ಲೆಜೆಂಡ್ ಆ ಭಗತ್ ಸಿಂಗ್’ ಸಿನೆಮಾ ನೋಡಿದ್ದರೆ ಅದರಲ್ಲಿ ಬ್ರಿಟಿಷ್ ಅಧಿಕಾರಿ ಸೌಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್ ಲಾಹೋರ್ನಿಂದ ಕಲ್ಕತ್ತಾಗೆ ತಪ್ಪಿಸಿಕೊಂಡು ಹೋಗುವ ದೃಶ್ಯ ನೋಡಿರುತ್ತೀರಿ. ಬ್ರಿಟಿಷರು ಭಗತ್ ಸಿಂಗ್ ಗಾಗಿ ದೇಶಾದ್ಯಂತ ಕಟ್ಟೆಚ್ಚರದ ಹುಡುಕಾಟ ನಡೆಸಿದ್ದಾಗ ಅಲ್ಲಿಂದ ಕಲ್ಕತ್ತಾ ಗೆ ತಪ್ಪಿಸಿಕೊಂಡು ಹೋಗುವ ಐಡಿಯಾ ಕೊಟ್ಟು ಹಾಗೆ ತಪ್ಪಿಸಿಕೊಂಡು ಹೋಗಲು ಭಗತ್ ಸಿಂಗ್ ನ ಪತ್ನಿಯಂತೆ ವೇಷ ಧರಿಸಿ ಅವನಿಗೆ ಕಲ್ಕತ್ತಾ ತಲುಪಲು ನೆರವಾದವಳು ಈ ದುರ್ಗಾ ಭಾಭಿ. ಹೌದು ಕ್ರಾಂತಿಕಾರಿಗಳೆಲ್ಲರ ಪಾಲಿಗೆ ಆಕೆ ಪ್ರೀತಿಯ ‘ಭಾಭಿ’ ಆಗಿದ್ದಳು. ಮತ್ತೊಬ್ಬ ಕ್ರಾಂತಿಕಾರಿ ಪ್ರೊಫೆಸರ್ ಭಗವತೀ ಚರಣವೋಹ್ರಾ ಅವರ ಪತ್ನಿ ಈ ದುರ್ಗಾ. ಇಬ್ಬರೂ ‘ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ’ಯ ಸಕ್ರಿಯ ಸದಸ್ಯರು. ಕ್ರಾ೦ತಿಕಾರಿಗಳಿಗೆ ಸ೦ಬಂಧಿಸಿದ ಹಲವಾರು ಸಭೆ-ಚಟುವಟಿಕೆಗಳು ಇವರ ಮನೆಯಲ್ಲಿ ನಿರ೦ತರವಾಗಿ ನಡೆಯುತ್ತಿದ್ದವು. ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಖದೇವ್ , ರಾಜಗುರು ಹೀಗೆ ಎಲ್ಲಾ ಕ್ರಾಂತಿಕಾರಿಗಳೂ ಇವರ ಒಡನಾಡಿಗಳು. ಬ್ರಿಟಿಷರು ಪ್ರತಿಭಟನೆಯೊಂದರಲ್ಲಿ ಕ್ರಾಂತಿಸಿಂಹ ಲಾಲಾ ಲಜಪತರಾಯರನ್ನು ಅಮಾನುಷವಾಗಿ ಹೊಡೆದು ಕೊಂದಾಗ ಅದಕ್ಕೆ ಪ್ರತೀಕಾರವಾಗಿ ಬ್ರಿಟಿಷ್ ಆಧಿಕಾರಿ ಸ್ಕಾಟ್ ನ ಹತ್ಯೆಗೈಯಲು ‘ಮಾರ್ ಡಾಲಾ ಉಸೆ’ ಎಂದು ಘರ್ಜಿಸಿ ಕ್ರಾಂತಿಕಾರಿಗಳಲ್ಲಿ ಕಿಚ್ಚು ಹತ್ತಿಸಿದ ವೀರ ವನಿತೆ ಈ ದುರ್ಗಾ ಭಾಭಿ. ಪತಿ ಭಗವತೀ ಚರಣ ವೋಹ್ರಾರ ಜತೆ ಸೇರಿ ಬಾಂಬ್ ತಯಾರಿಸುವ ಗುಪ್ತ ಕಾರ್ಖಾನೆಯನ್ನೂ ನಡೆಸಿದಳು. ಆದರೆ ದುರದೃಷ್ಟವಶಾತ್ ಅಂತಹದೇ ಒಂದು ಬಾಂಬ್ ಪರೀಕ್ಷೆಯಲ್ಲಿ ನಿರತರಾಗಿದ್ದಾಗ ಪತಿ ಭಗವತೀ ಚರಣ ವೋಹ್ರಾ ಆಕಸ್ಮಿಕವಾಗಿ ಬಾಂಬ್ ಗೆ ಬಲಿಯಾಗಬೇಕಾಯಿತು. ಆದರೂ ದುರ್ಗಾ ಬಾಭಿ ಎದೆಗುಂದದೆ ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮ ಕ್ರಾಂತಿಕಾರಿ ಹೋರಾಟವನ್ನು ಮುಂದುವರೆಸಿದರು. ಭಗತ್ ಸಿಂಗ್, ಸುಖದೇವ್, ರಾಜಗುರು ಅವರಿಗೆ ಗಲ್ಲು ಶಿಕ್ಷೆ ಆದಾಗ ಭಾಭಿ ಕೇಸ್ ನಡೆಸಲಿಕ್ಕಾಗಿ ತನ್ನೆಲ್ಲಾ ಆಭರಣಗಳನ್ನು ಮಾರಿ ೩೦೦೦ ರೂ. ಹಣ ಹೊಂದಿಸಿ ಅವರನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದಳು. ಅಲ್ಲದೆ ಈ ದೇಶಭಕ್ತರ ಪರವಾಗಿ ಸಹಾನುಭೂತಿ ಮೂಡಿಸಲು, ದೇಶವನ್ನು ಬಡಿದೆಬ್ಬಿಸಲು ಹಲವು ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸಿದಳು. ಅವರನ್ನು ಉಳಿಸಿಕೊಳ್ಳಲು ವಿಫಲವಾದ ನಂತರವೂ ಅನೇಕ ಕ್ರಾಂತಿಕಾರಿಗಳಿಗೆ ಪ್ರೇರಣೆ ನೀಡಿದಳು. ಬ್ರಿಟಿಷರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಈ ವೀರನಾರಿ ತಾನೇ ಬ್ರಿಟಿಷ್ ಅಧಿಕಾರಿ ಹೇಯ್ಲ್ ನ ಹತ್ಯೆಗೆ ಎತ್ನಿಸಿ ಬ್ರಿಟಿಷರ ಸೆರೆಯಾದಳು. ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ತನ್ನ ಚಟುವಟಿಕೆಗಳನ್ನು ಮುಂದುವರೆಸಿದಳು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಲಕ್ನೋದಲ್ಲಿ ಬಡಮಕ್ಕಳಿಗಾಗಿ ಶಾಲೆ ತೆರೆದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದರು ದುರ್ಗಾ ಭಾಭಿ. ಉಪಕಾರ ಪ್ರಜ್ಞೆಯೇ ಇರದ ಈ ದೇಶದಲ್ಲಿ ದುರ್ಗಾ ಬಾಭಿ ಗಾಜಿಯಾಬಾದ್ ನಲ್ಲಿ ಕೊನೆಯವರೆಗೂ ಸಾಮಾನ್ಯರಾಗಿ ಅನಾಮಿಕಳಾಗಿ ಬದುಕಿದರು. ಅತ್ಯಂತ ದುಃಖದ, ನಾಚಿಕೆಯ ಸಂಗತಿ ಎಂದರೆ ದುರ್ಗಾ ಭಾಭಿ 1999 ವರೆಗೂ ಈ ನಮ್ಮೊಡನೆ ಬದುಕಿದ್ದರೂ ಈ ದೇಶ ಅವರನ್ನು ಗುರುತಿಸಲಿಲ್ಲ. ಇಂತಹ ಅಪ್ರತಿಮ ವೀರ ನಾರಿ, ಮಹೋನ್ನತ ದೇಶಾಭಿಮಾನಿ 1999 ರ ಅಕ್ಟೋಬರ್ 15 ರಂದು ನಮ್ಮನ್ನು ಅಗಲಿದರು. ದೇಶಕ್ಕಾಗಿ ತನ್ನ ಪತಿಯನ್ನು ಕೊಟ್ಟ, ತನ್ನೆಲ್ಲಾ ಆಸ್ತಿ ಪಾಸ್ತಿಗಳನ್ನೂ ಕೊಟ್ಟ, ಕೊನೆಗೆ ದೇಶಕ್ಕಾಗಿ ಪೂರ್ತಿ ಬದುಕನ್ನೇ ಕೊಟ್ಟ ಈ ಧೀಮಂತ ಸ್ತ್ರೀಯ ಸ್ಮರಣೆ ನಮ್ಮೆಲ್ಲರ ಕರ್ತವ್ಯ.

Leave a Reply