ಬಂಗಾಳದ ಬಿಸಿರಕ್ತದ ಕ್ರಾಂತಿಕಿಡಿಗಳು ಬಿನೋಯ್ ಬಾದಲ್ ದಿನೇಶ್

ಬಂಗಾಳದ ಬಿಸಿರಕ್ತದ ಕ್ರಾಂತಿಕಿಡಿಗಳು ಬಿನೋಯ್ ಬಾದಲ್ ದಿನೇಶ್

ಬಿನೋಯ್ ಬಾದಲ್ ದಿನೇಶ್: ಭಾರತ ಸ್ವಾತಂತ್ರ್ಯ ಸಮರದ ಪುಟಗಳನ್ನು ತೆರೆಯುತ್ತಾ ಹೋದಂತೆ ಅಲ್ಲಿ ಒಂದಕ್ಕಿಂತ ಒಂದು ರೋಚಕ ಅಧ್ಯಾಯವನ್ನು ಕಾಣುತ್ತ ಹೋಗಬಹುದು. ದೇಶವನ್ನು ದಾಸ್ಯದ ಕಪಿಮುಷ್ಟಿಯಿಂದ ರಕ್ಷಿಸಲು ಈ ದೇಶದ ಬಿಸಿರಕ್ತದ ಯುವಕರು ಜೀವ ನೀಡಲಿಕ್ಕೂ ಹಿಂದೇಟು ಹಾಕದ ಸ್ಪೂರ್ತಿದಾಯಕ ಸಾಹಸಗಾಥೆ ನಮಗಲ್ಲಿ ಸಿಗುತ್ತವೆ. ದೇಶದ ರಕ್ಷಣೆಯ ವಿಚಾರ ಬಂದಾಗ ರಕ್ತವೇನು, ಜೀವವನ್ನೂ ಕೊಟ್ಟೇವು ಎಂದಿದ್ದಷ್ಟೇ ಅಲ್ಲ, ಸ್ವಯಂ ತಮ್ಮನ್ನು ಅರ್ಪಿಸಿಕೊಂಡು ನಗುನಗುತ್ತಾ ನೇಣುಗಂಬವೇರಿದ ರೋಮಾಂಚಕಾರಿ ಸಾಹಸಗಳು ಸ್ವಾತಂತ್ರ್ಯ ಸಮರದ ಇತಿಹಾಸವನ್ನು ರಕ್ತರಂಜಿತವಾಗಿ, ವರ್ಣರಂಜಿತವಾಗಿ ಮಾಡಿವೆ. ಬಂಗಾಳದ ಈ ಮೂವರು ಬಿಸಿರಕ್ತದ ದೇಶಪ್ರೇಮಿ ತರುಣರು ಬಿನೋಯ್ ಬಸು, ಬಾದಲ್ ಗುಪ್ತಾ, ದಿನೇಶ್ ಗುಪ್ತಾ ಹಾಗೆ ಸ್ವಾತಂತ್ರ್ಯದ ಕನಸಿನಲ್ಲಿ ಕ್ರಾಂತಿಯ ಕಹಳೆ ಊದಿ ಸಾವಿನ ಕದ ತಟ್ಟಿದಾಗ ಅವರಿಗಿನ್ನೂ 22, 19, 18 ವರ್ಷಗಳಷ್ಟೇ. ಇವರು ನೇತಾಜಿ ಸುಭಾಷ್ ಚಂದ್ರ ಬೋಸರ ನೇತೃತ್ವದ ಕ್ರಾಂತಿಕಾರಿ ಸಂಘಟನೆ ‘ಬೆಂಗಾಲ್ ವಾಲಂಟಿಯರ್ಸ್’ ನ ಅಪ್ರತಿಮ ದೇಶಭಕ್ತ ಸದಸ್ಯರು. ಬ್ರಿಟಿಷರು ಹಾಗೂ ದೇಶಭಕ್ತರ ನಡುವಿನ ಮುಖ್ಯ ರಣಾಂಗಣವಾಗಿದ್ದ ಬಂಗಾಳದಲ್ಲಿ ಸೆರೆಸಿಕ್ಕುವ ಭಾರತೀಯ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಅಧಿಕಾರಿಗಳು ಅತ್ಯಂತ ಕ್ರೂರವಾಗಿ ಹಿಂಸಿಸುತ್ತಿದ್ದರು. ಅವರಿಗೆ ಮೈಯಲ್ಲಿ ರಕ್ತ ಸುರಿಯುವವರೆಗೆ ಹೊಡೆಯಲಾಗುತ್ತಿತ್ತು. ಅವರನ್ನು ಅಂಗವಿಕಲಗೊಳಿಸುವ, ಕಣ್ಣುಕೀಳುವ, ಜೀವಂತ ಶವವಾಗುವಂತೆ ಮಾಡುವ ಪೈಶಾಚಿಕ ಕೃತ್ಯಗಳನ್ನು ಬ್ರಿಟಿಷರು ನಡೆಸುತ್ತಿದ್ದರು. ಅಂತಹ ಬ್ರಿಟಿಷ್ ಅಧಿಕಾರಿಗಳಿಗೆ ಕ್ರಾಂತಿಯ ಮೂಲಕ ಉತ್ತರ ನೀಡಿ ಬ್ರಿಟಿಷರಿಗೆ ಬುದ್ಧಿ ಕಲಿಸುವ, ಜಗತ್ತಿನ ಗಮನ ಸೆಳೆಯುವ ಕೆಲಸವನ್ನು ಬೆಂಗಾಲ್ ವಾಲಂಟಿಯರ್ಸ್ ನ ತರುಣಪಡೆ ಮಾಡುತ್ತಿತ್ತು. ಭಾರತೀಯ ಕೈದಿಗಳನ್ನು ಅತ್ಯಂತ ಅಮಾನುಷವಾಗಿ, ಕ್ರೂರವಾಗಿ ಹಿಂಸಿಸುತ್ತಿದ್ದವರಲ್ಲಿ ಬಂಗಾಳದ ಕಾರಾಗೃಹ ಮುಖ್ಯಸ್ಥ ಕರ್ನಲ್ ಸಿಂಪ್ಸನ್ ಕುಖ್ಯಾತನಾಗಿದ್ದ. ರಾತ್ರೋರಾತ್ರಿ ದೇಶಭಕ್ತ ಕೈದಿಗಳನ್ನುಬಡಿದು ಸಾಯಿಸಿ ಶವವೂ ಸಿಗದಂತೆ ಮಾಡುವಲ್ಲಿ ಆತ ಪಳಗಿದ್ದ. ಆ ಕ್ರೂರಿಯನ್ನು ಕೊಲೆಗೈಯುವ ಹಾಗೂ ಬ್ರಿಟಿಷ್ ಆಡಳಿತದ ಮುಖ್ಯ ಕಚೇರಿಯಾಗಿದ್ದ ಡಾಲ್ ಹೌಸಿ ಸ್ಕ್ವೇರ್ ನ ‘ರೈಟರ್ಸ್ ಬಿಲ್ಡಿಂಗ್’ನಲ್ಲಿ ಬಾಂಬ್ ಎಸೆಯುವ ಕಾರ್ಯಕ್ಕೆ ಈ ಮೂವರು ಹದಿಹರೆಯದ ತರುಣರು ಸಿದ್ಧರಾದರು. 1930ರ ಡಿಸೆಂಬರ್ 8 ರಂದು ರೈಟರ್ಸ್ ಬಿಲ್ಡಿಂಗ್ ಗೆ ನುಗ್ಗಿದ ಈ ತರುಣರು ಸಿಂಪ್ಸನ್ ನನ್ನು ಹತ್ಯೆಗೈದು ಕ್ರಾಂತಿಯ ಕಹಳೆ ಮೊಳಗಿಸಿದರು. ಈ ಕೃತ್ಯದ ನಂತರ ಬಿನೋಯ್ ಮತ್ತು ಬಾದಲ್ ಅಲ್ಲೇ ಗುಂಡು ಹೊಡೆದುಕೊಂಡು ಮೃತ್ಯುವಶರಾದರೆ ದಿನೇಶ್ ನನ್ನು ಹಿಡಿದು ನೇಣಿಗೇರಿಸಲಾಯಿತು. ಇನ್ನೂ ಮೀಸೆ ಸರಿಯಾಗಿ ಮೂಡದ ಈ ಮೂವರು ತರುಣರ ಬಲಿದಾನ ಮುಂದೆ ಬಂಗಾಳದಲ್ಲಿ ಕ್ರಾಂತಿಯ ಹೊಸ ಅಲೆಯೆಬ್ಬಿಸಿ ಸೂರ್ಯ ಮುಳುಗದ ಸಾಮ್ರ್ಯಾಜ್ಯಕ್ಕೆ ದಿಟ್ಟ ಉತ್ತರ ನೀಡಿತು.

ದೇಶ ಸ್ವತಂತ್ರವಾದ ನಂತರ ಈ ಮೂವರು ತರುಣರ ಸ್ಮರಣೆಯಲ್ಲಿ ಅವರು ಕ್ರಾಂತಿಯ ಕಿಡಿ ಹಚ್ಚಿದ ರೈಟರ್ಸ್ ಬಿಲ್ಡಿಂಗ್ ಇರುವ ಕಲ್ಕತ್ತಾದ ಡಾಲ್ ಹೌಸಿ ಸ್ಕ್ವೇರ್ ಅನ್ನು ‘ಬಿ. ಬಿ. ಡಿ ಭಾಗ್’ (ಬಿನೋಯ್-ಬಾದಲ್-ದಿನೇಶ್ ) ಎಂದು ಮರುನಾಮಕರಣ ಮಾಡಿ ಗೌರವ ಸಮರ್ಪಿಸಲಾಯಿತು.

Leave a Reply