ಸಾವಿನ ನಂತರದ ಗೌಪ್ಯತೆ

ಸಾವಿನ ನಂತರದ ಗೌಪ್ಯತೆ
ಆಂಗ್ಲ ದಿನಪತ್ರಿಕೆ “ದಿ ಹಿಂದೂ” ದಿನಪತ್ರಿಕೆಯಲ್ಲಿ ಪ್ರಕಟಿತ ಸುದ್ದಿ (೧೧ december ): ನ್ಯಾಯಮೂರ್ತಿಚಂದ್ರಚೂಡರು ಅಭಿಪ್ರಾಯ ಎಂದು ಹೇಳಲಾದ ಸುದ್ದಿ “Life with dignity” ಅದರ ಅಡಿಯಲ್ಲಿ
ಮದ್ರಾಸ್ ಹೈಕೋರ್ಟ್ ಪ್ರಕಾರ ದಿ. ಜಯಲಲಿತಾ ಅವರ ಆಧಾರ ಕಾರ್ಡ್ ಮತ್ತು ಬೆರಳಚ್ಚು ಗುರುತುಗಳ ಹಾಜರುಪಡಿಸುವ ಬಗ್ಗೆ ಪ್ರಶ್ನಿಸಿರುವ ವಿಷಯ ಸುಪ್ರೀಂಕೋರ್ಟ್ ಮುಂದೆ ಬಂದಾಗ “ಮರಣೋತ್ತರ ಗೌಪ್ಯತೆ ಮಾತು ಪ್ರೈವಸಿ ಬಗ್ಗೆ” ಚರ್ಚೆ ಆಗಬೇಕೆಂದು ಬಯಕೆ ವ್ಯಕ್ತಪಡಿಸಿದೆ.
ನನ್ನ ಪ್ರಕಾರ ಪಾರದರ್ಶಕತೆ ಮತ್ತು ಗೌಪ್ಯತೆ ಎರಡಕ್ಕೂ ಅದರದೇ ಆದ ಕಾರಣ ಲಕ್ಷ್ಮಣ ಗೆರೆಗಳಿವೆ. ಯಾರು ಬೇಕಾದರೂ, ಯಾವುದೇ ಸಮಯದಲ್ಲಿ ಎಂಥಹದೇ ವಿಷಯಗಳ ಬಗ್ಗೆ ಕೇಳುವ, ತಿಳಿದುಕೊಳ್ಳುವ ಹಕ್ಕು ಹೊಂದಿರಬೇಕೆ ಅಥವಾ ಬೇಡವೇ ಅನ್ನುವ ವಿಷಯವೇ ಇಲ್ಲಿ ಈಗ ಮಹತ್ವದ್ದು. ನಮ್ಮ ಸಂಪ್ರದಾಯದ ಪ್ರಕಾರ ಸತ್ತವರ ಬಗ್ಗೆ ಕೆಟ್ಟದ್ದು ಹೇಳುವುದಿಲ್ಲ ಮತ್ತು ಬರೆಯುವುದಿಲ್ಲ ಸತ್ತವರ ಬಗ್ಗೆ ಒಂದು ಸ್ವಾಭಾವಿಕ ಮೌನ ಕವಿದಿರುತ್ತದೆ. ನಮಗ್ಯಾಕೆ ಉಸಾಬರಿ, ಆದದ್ದು ಆಗಿ ಹೋತು ಅನ್ನುವ ಒಂದು ನಾಗರಿಕ ಸ್ಥಿತಿ.
ಟಿಪ್ಪು ಹಾಗಿದ್ದ, ಹೀಗಿದ್ದ ಶಿವಾಜಿ ಹಾಗಿದ್ದ ಹೀಗಿದ್ದ ಕ್ಲಿಯೋಪಾತ್ರ, ಪದ್ಮಾವತಿ ಹಾಗಿದ್ದಳು ಹೀಗಿದ್ದಳು ಅಂದ ಹಾಗೆ. ಸೀತೆಗಾಗಿ ರಾಮ ರಾವಣರ ಯುದ್ಧ, ದ್ರೌಪದಿಗಾಗಿ ಮಹಾಭಾರತದ ಕುರುಕ್ಷೇತ್ರ ಯುದ್ಧ ಆಯಿತೆ? ಅಥವಾ ಮತ್ತಾವುದೋ ಕಾರಣಗಳಾದ ಜನಾಂಗೀಯ, ಆರ್ಥಿಕ, ಮಹಿಳೆಗಾಗಿ ಆಯಿತಾ ಅಂತ ಯಾವನೊಬ್ಬ ಸಂಶೋಧಕ ಕ್ಯಾತೆ ತೆಗೆದರೆ ನಮ್ಮ ಸಾಂಸ್ಕೃತಿಕ ಮನೋಸ್ಥಿತಿ ಅದನ್ನು ಸ್ವೀಕರಿಸುವಂಥ ಸ್ಥಿತಿಯಲ್ಲಿ ಇದೆಯಾ ಅಂತ ಕೇಳಿಕೊಳ್ಳಬೇಕಾಗುತ್ತದೆ. ಈಗಾಗಲೇ ನಾಥುರಾಮ ಸಿದ್ಧಾಂತ ಪ್ರತಿಪಾದನೆ, ಗಾಂಧಿ, ನೆಹರು ಕುಟುಂಬಗಳ ಇತಿಹಾಸ ಜಾಲಾಡಿದ ಹಲವು ವದಂತಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಡ್ಡಾಡುತ್ತವೆ. ಗೋಬೇಲ್ ತತ್ವದ ಪ್ರಕಾರ ಅವೆಲ್ಲವೂ ನಿಜವಾಗಬಹುದು. ಹೀಗೆ ಗೌಪ್ಯತೆ, ಖಾಸಗೀತನ ಎಲ್ಲವೂ ಕಾಲಕ್ಷಣಿಕವಾದುವುಗಳು.
ಗೌಪ್ಯತೆ ಮತ್ತು ಖಾಸಗೀತನ ಎರಡೂ ಒಂದೇನಾ ಅಥವಾ ಬೇರೆಯಾ? ಗೌಪ್ಯತೆ ವಿಶಾಲತೆಯ ಆಯಾಮ ಹೊಂದಿದ್ದರೆ ಖಾಸಗೀತನ ಸೀಮಿತವಾದ ವ್ಯಕ್ತಿಗತ ಆಯಾಮ ಹೊಂದಿರುತ್ತದೆ. ಅದು ಆ ವ್ಯಕ್ತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತ ಅಂತಾನೂ ಹೇಳಲು ಆಗುವುದಿಲ್ಲ. ಅದು ಇಬ್ಬರ ಅಥವಾ ಹೆಚ್ಚಿನವರ ಖಾಸಗಿತನ ಒಳಗೊಂಡಿದ್ದರೆ ಆ ಖಾಸಗೀತನ ಒಬ್ಬರದೆ ಆಗಿ ಉಳಿಯದೆ ಅದರ ಗಡಿಗಳು ಬೇರೆಯಾಗುತ್ತವೆ. ಇಲ್ಲಿ ಬರುವ ಮುಖ್ಯ ವಿಷಯವೆಂದರೆ ವ್ಯಕ್ತಿಯ ಮರಣದನಂತರ ಈ ಖಾಸಗೀತನ ಮತ್ತು ಅದರ ಗೌಪ್ಯತೆ ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಅನ್ನುವುದು.
ಒಬ್ಬ ರಾಜಕೀಯ ಧುರೀಣ ಅಥವಾ ಧುರೀಣೆ ಅಥವಾ ಐತಿಹಾಸಿಕ ವ್ಯಕ್ತಿಯ ನಿಜವೋ ಸುಳ್ಳೋ ಎನ್ನಬಹುದಾದ ಚರಿತ್ರೆ ಇದರ ಬಗ್ಗೆ ತಿಳಿದುಕೊಳ್ಳುವ ಹಕ್ಕು ಗೌಪ್ಯತೆಯ ಅಥವಾ ಖಾಸಗೀತನದ ಉಲ್ಲಂಘನೆ ಆಗುತ್ತದೆ ಅನ್ನುವುದು ಸರಿಯೋ ತಪ್ಪೋ ಅನ್ನುವುದೇ ನ್ಯಾಯಾಲಯ, ಚರ್ಚೆ ಮುಖಾಂತರ ಬಯಸಿದ್ದು ಅನಿಸುತ್ತದೆ. ಇತ್ತೀಚಿನ ಲೇಟೆಸ್ಟ್ ಉದಾಹರಣೆ ಪದ್ಮಾವತ್ ಸಿನಿಮಾ ಅದು ನಿಜವೇ? ಒಬ್ಬ ಕವಿಯ ಅತಿರಂಜಿತ ವರ್ಣನೆ ಇಷ್ಟೆಲ್ಲ ಮಾಡಿತೆ? ಅಲ್ಲಾವುದ್ದೀನ್ ಖಿಲ್ಜಿ 17 ಬಾರಿ ದಾಳಿ ಯಾಕೆ ಮಾಡಿದ? ಏಕದಾರಿ ಪ್ರೇಮವೋ ಅಥವಾ.. ಮನುಷ್ಯ ಮೇಲಿಂದ ಮೇಲೆ ದಾಳಿ ಮಾಡಲು ಬಲವಾದ ಪ್ರೇರಣೆ ಏನು? ಹೀಗೆ ಗೌಪ್ಯತೆ ಅಥವಾ ಖಾಸಗೀತನದ ಹಲವಾರು ಸಾಧ್ಯತೆಗಳನ್ನು ವಿಚಾರಿಸಿದರೆ ಸಿಕ್ಕ ಸತ್ಯ ಅರಗಿಸಿಕೊಳ್ಳಲು ನಮ್ಮ ಸಮಾಜ ಸಶಕ್ತವಾಗಿದೆಯೇ? ಅದಕ್ಕಾಗಿಯೇ ಈ ಗೌಪ್ಯತೆಯ, ಖಾಸಗೀತನದ ಸಂಕೋಲೆಗಳು ಬೇಕಾಗುತ್ತವೆ. ಇಲ್ಲಿ ನೆನಪಾಗುವುದು ಜಿ.ಬಿ.ಜೋಶಿ ಅವರು ಬರೆದ ಜನಪ್ರಿಯ ನಾಟಕ “ಸತ್ತವರ ನೆರಳು” ನಂಬುಗೆ ಮತ್ತು ವಿಶ್ವಾಸಗಳ ಸುತ್ತ ಕಟ್ಟಿದ ವೃಂದಾವನದ ಸುತ್ತ, ಪ್ರದಕ್ಷಿಣೆ ಹಾಕುತ್ತ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಿರುವ ಭಕ್ತರಿಗೆ ಒಳಗೇನಿದೆ ಅನ್ನೋದೇ ಗೊತ್ತಿರುವುದಿಲ್ಲ. ಅದೇ ಸತ್ತವರ ಸುತ್ತ ಜನ ಇಟ್ಟ ಇಟ್ಟಿಗೆಯ ನಂಬಿಕೆ, ಶ್ರದ್ಧೆ ಅವರ ನೆರಳು ಕಾಡುವುದು. ಇಂದೂ ರಾಮಾಯಣದ ರಾವಣ ಒಬ್ಬ ಒಳ್ಳೆಯವ ಅಂತ ನಂಬುವ ಲಕ್ಷಾಂತರ ಜನ ಇದ್ದಾರೆ. ಹಿಟ್ಲರ್ ನಂಬಿದ ಸಿದ್ಧಾಂತಗಳ ಅನುಮೋದಿಸುವ ಜನರೂ ಇದ್ದಾರೆ. ಔರಂಗಜೇಬ್, ಅಕ್ಬರ್, ಟಿಪ್ಪು, ಬಿಜ್ಜಳ, ಬಸವಣ್ಣ, ಶಂಕರಾಚಾರ್ಯ, ಮಧ್ವಾಚಾರ್ಯ ಎಲ್ಲರ ಬಗ್ಗೆ ಹೇಳಬಹುದು. ಧರ್ಮಗಳ ಉಗಮ ಬೆಳವಣಿಗೆ, ಪ್ರಸಾರ, ಸಿದ್ಧಾಂತಗಳ ಪ್ರತಿಪಾದನೆ ಎಲ್ಲವೂ ಇತಿಹಾಸದ ಸಮಯದ ಸ್ತರಗಳಲ್ಲಿ ಹುದುಗಿ ಹೋಗಿರುತ್ತವೆ. ಸುಭಾಸ್ ಚಂದ್ರ ಬೋಸ್, ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಸಂಜಯ್, ಹೀಗೆ ಹತ್ತು ಹಲವು ಜನರ ಮರಣದ ಬಗ್ಗೆ ಹಲವಾರು ವದಂತಿ, ಆ ಆಯೋಗ ಈ ಆಯೋಗ ಅಂತ ರಚಿಸಿ ಪುಟಗಟ್ಟಲೆ ವರದಿ ನೀಡಿದರೂ ರಹಸ್ಯಗಳು ಬಗೆ ಹರಿಯುವುದಿಲ್ಲ ಅವು ಚಿದಂಬರ ರಹಸ್ಯಗಳೇ ಆಗಿ ಉಳಿಯುತ್ತವೆ.
ಅವುಗಳ ಉತ್ಖತನ ಮಾಡಿದಾಗ ಅವರವರ ಚಿಂತನೆ ಮತ್ತು ಧೋರಣೆಗಳ ಪ್ರಕಾರ ಮತ್ತು ಕಾಲಮಾನಕ್ಕೆ ತಕ್ಕಂತೆ ವಿವರಣೆ ನೀಡಬಹುದಾಗಿದ್ದು ಅದಕ್ಕೆ ಮುಕ್ತಾಯವೇ ಇಲ್ಲ. ಹೀಗಾಗಿ ಮರಣದ ನಂತರದ ಗೌಪ್ಯತೆ ಸಾಮಾಜಿಕ ಆರೋಗ್ಯದ ದೃಷ್ಟಿಯಲ್ಲಿ ಮುಖ್ಯ ಆಗುತ್ತದೆ. ಆದರೆ ಮುಖ್ಯ ಅನ್ನುವುದೂ ಕೂಡಾ ಕಾಲಮಾನಕ್ಕೆ ತಕ್ಕಂತೆ ಬೇರೆಯೇ. ಅದು ಮಹಾಭಾರತದ ಕರ್ಣನ ಹುಟ್ಟು ಆಗಿರಬಹುದು ಅಥವಾ ಸಮಕಾಲೀನ ಸನ್ನಿವೇಶದಲ್ಲಿ ಉತ್ತರಪ್ರದೇಶದ ಮಾಜಿ ಮಂತ್ರಿಗಳ ಮಗನ ಅಸ್ತಿತ್ವ 40 ವರ್ಷಗಳ ನಂತರ ಆ ಓಂ ಪರೀಕ್ಷೆ ಮೂಲಕ ಸ್ಥಾಪಿತವಾದದ್ದು ಇರಬಹುದು. ಎರಡೂ ಪ್ರಕರಣಗಳು ಗೌಪ್ಯತೆಯ ಸ್ವರೂಪ ಹೊಂದಿರುವವೇ. ಹೀಗೆ ಎಣಿಸುತ್ತ ಹೋದರೆ ದೊಡ್ಡ ದೊಡ್ಡವರ ಬುಡಕ್ಕೂ ಹೋಗುತ್ತವೆ. ಮನುಷ್ಯ ಸಂಬಂಧಗಳ ಸಂಕೀರ್ಣತೆ ಆಗುವುದು ಹೀಗೆ. ನಮ್ಮ ನಮ್ಮ ರೂಪ, ಸೌಂದರ್ಯ ಕೆಲವು ಗುಣಗಳು, ಕೆಲವು ರೋಗಗಳು ಎಲ್ಲವೂ ಗೌಪ್ಯವಾಗಿಯೇ ಜೀವತಂತುಗಳ ಮಾಲೆ ಅಂದರೆ ಆ ಓಂಗಳಲ್ಲಿ ಸುಪ್ತವಾಗಿರುತ್ತವೆ. ಅದಕ್ಕೆ ಹಿರಿಯರು ಹೇಳುವುದು “ನದಿ, ಸೌಂದರ್ಯ, ಹೆಣ್ಣು, ಕುದುರೆ, ಋಷಿ ಮೂಲಗಳನ್ನು ಹುಡುಕಲು ಹೋಗಬಾರದು ಅಂತ. ಇತಿಹಾಸ ಅಗೆಯುತ್ತ ಹೋದಂತೆ ಮಂದಹಾಸ ಮಂದವಾಗುತ್ತ ಗಂಭೀರ ಸ್ವರೂಪ ಪಡೆಯುತ್ತದೆ. ರಹಸ್ಯ, ಅಪರಾಧ್ ತಪ್ಪುಗಳು, ಅನ್ಯಾಯಗಲ ಪರಿಣಾಮಗಳ ಕರ್ಮ ಸಿದ್ಧಾಂತದ ಚಿತ್ರ ಮೂಡುವುದೇ, ಸಾವಿನ ನಂತರ. ಅದರ ಅರಿವಾಗುವುದು ಗರುಡ ಪುರಾಣ ಓದಿದವರಿಗೆ, ಕೇಳಿದವರಿಗೆ.

Courtesy : Samyukta Karnataka

Leave a Reply