ಹಾವೇರಿಯ ಹುಲಿ, ಹುತಾತ್ಮ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು

ಹಾವೇರಿಯ ಹುಲಿ, ಹುತಾತ್ಮ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು

ಮೆಣಸಿನಹಾಳ ತಿಮ್ಮನಗೌಡ: ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಬ್ರಿಟಿಷರ ವಿರುದ್ಧ ಕ್ರಾಂತಿ ಕಹಳೆ ಮೊಳಗಿಸಿ ಹುತಾತ್ಮನಾದ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು. ಇಂದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳದಲ್ಲಿ ಶ್ರೀಮಂತ ಪಾಟೀಲ ಕುಟುಂಬದಲ್ಲಿ ಜನಿಸಿದ ತಿಮ್ಮನಗೌಡ ಬ್ಯಾಡಗಿಗೆ ಸುಭಾಷಚಂದ್ರ ಬೋಸರು ಬಂದಾಗ ಸ್ವಾತಂತ್ರ್ಯಹೋರಾಟದ ಕುರಿತ ಅವರ ಭಾಷಣ ಕೇಳಿ ರೋಮಾಂಚಿತರಾಗಿ ತ್ಯಾಗ ಮತ್ತು ಬಲಿದಾನದ ದೀಕ್ಷೆತೊಟ್ಟು ತನ್ನ 21ರ ವಯಸ್ಸಿನಲ್ಲೇ ಕಾನೂನು ಭಂಗ ಚಳುವಳಿಗೆ ಧುಮುಕಿದರು. ಆ ಹೊತ್ತಿಗೆ ಬ್ರಿಟಿಷರ ದರ್ಪ ದೌರ್ಜನ್ಯಗಳು ಮಿತಿಮೀರಿದ್ದವು. ಸಾಮಾನ್ಯ ಬಡ ರೈತರನ್ನು ದುಪ್ಪಟ್ಟು ಕಂದಾಯಹಾಕಿ ಶೋಷಿಸಲಾಗುತ್ತಿತ್ತು. ಅದನ್ನು ಪ್ರತಿಭಟಿಸಿ ಶೋಷಣೆಯ ವಿರುದ್ಧ ದನಿಯೆತ್ತಿದ ತಿಮ್ಮನಗೌಡರನ್ನು ಬ್ರಿಟಿಷರು ಇನ್ನೂ ಅನೇಕ ಹೋರಾಟಗಾರರೊಂದಿಗೆ ಬಂಧಿಸಿ ಎರಡು ವರ್ಷಕಾಲ ಯರವಾಡ ಜೈಲಿನಲ್ಲಿ ಸೆರೆಯಲ್ಲಿಟ್ಟರು. ಅಲ್ಲಿ ತಿಮ್ಮನಗೌಡರು ಚರಖಾದಿಂದ ನೂಲುತೆಗೆಯುವುದನ್ನು ಕಲಿತರು. ಜೈಲಿನಿಂದ ಬಿಡುಗಡೆಗೊಂಡ ತಿಮ್ಮನಗೌಡರಿಗೆ ಅವರ ಊರಿನಲ್ಲಿ ಭವ್ಯಸ್ವಾಗತ ದೊರೆಯಿತು. ಜೈಲಿನಿಂದ ಬಂದ ಮೇಲೆ ಮತ್ತೆ ತಿಮ್ಮನಗೌಡರು ತಮ್ಮ ಕ್ರಾಂತಿ ಚಟುವಟಿಕೆಗಳನ್ನು ಮುಂದುವರೆಸಿದರು. ಬ್ರಿಟಿಷ್ ದೌರ್ಜನ್ಯದ ವಿರುದ್ಧ ತರುಣರ ಗುಂಪುಕಟ್ಟಿಕೊಂಡು ಊರೂರು ತಿರುಗಿ ಭಾಷಣ ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜನರನ್ನು ಬಡಿದೆಬ್ಬಿಸತೊಡಗಿದರು. ತಿಮ್ಮನಗೌಡರ ಹೋರಾಟ ಬ್ರಿಟಿಷರಿಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಬ್ರಿಟಿಷರು ಹೇಗಾದರೂ ಮಾಡಿ ತಿಮ್ಮನಗೌಡರನ್ನು ಬಂಧಿಸುವ ಪ್ರಯತ್ನ ಮಾಡಿದರು. ಆದರೆ ತಿಮ್ಮನಗೌಡರು ಪ್ರತಿಸಲವೂ ತಪ್ಪಿಸಿಕೊಂಡು ಪರಾರಿಯಾದರು. ತುಮ್ಮಿನಕಟ್ಟಿಯ ಸಂಗೂರಕರಿಯಪ್ಪ ಅವರ ಸಲಹೆಯ ಮೇರೆಗೆ ತಿಮ್ಮನಗೌಡರು ಸಶಸ್ತ್ರ ಹೋರಾಟ ಮತ್ತು ದೇಶಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧರಾದರು. ಆ ಹೊತ್ತಿಗಾಗಲೇ ಬ್ರಿಟಿಷರು ತಿಮ್ಮನಗೌಡರ ಮೇಲೆ ವಾರಂಟ್ ಜಾರಿ ಮಾಡಿದ್ದರು. ತಿಮ್ಮನಗೌಡರು ರಾತ್ರಿ ಹೊತ್ತು ತಮ್ಮ ಊರಿಗೆ ಹೋಗಿ, ತಮ್ಮ ಕಡೆಯಿಂದ ಬಡವರು ಪಡೆದಿದ್ದ ಬಡ್ಡಿ ಸಾಲವನ್ನು ಮನ್ನಾಮಾಡಿ, ಸಾಲಪತ್ರ ಹರಿದುಹಾಕಿದರಲ್ಲದೆ, ತಮ್ಮ ಹಿರಿಯರು ಒತ್ತೆ ಇರಿಸಿಕೊಂಡಿದ್ದ ಚಿನ್ನಾಭರಣಗಳನ್ನು ಬಡವರಿಗೆ ಹಿಂದಿರುಗಿಸಿದರು. ತಾಯಿ ಮತ್ತು ಹೆಂಡತಿಗೆ ಮನೆಯ ಜವಾಬ್ದಾರಿ ವಹಿಸಿಕೊಟ್ಟು ಊರಿಂದ ಹೊರಟ ಮೇಲೆ ಅವರ ಹೋರಾಟ ಇನ್ನೂ ತೀವ್ರಗತಿಯಲ್ಲಿ ಮುಂದುವರೆಯಿತು. ಬ್ರಿಟಿಷರನ್ನು ಹೇಗಾದರೂ ಬಗ್ಗುಬಡಿಯಲೇಬೇಕೆಂದು ತೀರ್ಮಾನಿಸಿದ್ದ ತಿಮ್ಮನಗೌಡ ಜಿಲ್ಲೆಯಾದ್ಯಂತ ಹಲವು ರೀತಿಯಲ್ಲಿ ಕ್ರಾಂತಿ ಚಟುವಟಿಕೆ ನಡೆಸಿ ಬ್ರಿಟಿಷರ ನಿದ್ದೆಗೆಡಿಸಿದರು. ಇವರನ್ನು ಹೇಗಾದರೂ ಮಾಡಿ ಹಿಡಿಯಲೇ ಬೇಕೆಂದು ಬ್ರಿಟಿಷರು ಆಸ್ಟ್ರೇಲಿಯನ್ ಸೈನಿಕರ ತಂಡವನ್ನು ತುಮ್ಮಿನಕಟ್ಟಿ- ಮೆಣಸಿಹಾಳದ ಮುತ್ತಿಗೆ ಹಾಕಲು ಕಳಿಸಿದ್ದೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಯ ಅಸ್ತ್ರವಾಗಿ ಪೊಲೀಸರು ತಿಮ್ಮನಗೌಡರ ತಾಯಿ ಮತ್ತು ಹೆಂಡತಿಯನ್ನು 4 ದಿನ ಜೈಲಿನಲ್ಲಿಟ್ಟರೂ ಅವರೂ ಸಹ ತಿಮ್ಮನಗೌಡರ ಇರುವಿಕೆಯ ಸುಳಿವು ನೀಡಲಿಲ್ಲ. ಇಡೀ ಕುಟುಂಬದ ದೇಶಪ್ರೇಮವನ್ನು ಕಂಡು ಸಿಟ್ಟಿಗೆದ್ದ ಬ್ರಿಟಿಷ್ ಕಲೆಕ್ಟರ್ ತಿಮ್ಮನಗೌಡರ 80 ಎಕರೆ ಜಮೀನಿನಲ್ಲಿದ್ದ ಬೆಳೆಯ ಮುಟ್ಟುಗೋಲಿಗೆ ಆದೇಶಿಸಿದ. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ತಿಮ್ಮನಗೌಡರು ತಮ್ಮ 40 ಎಕರೆ ಹೊಲದಲ್ಲಿದ್ದ ಬಿಳಿಜೋಳ ಮತ್ತು 40ಎಕರೆಯಲ್ಲಿದ್ದ ಹತ್ತಿಯನ್ನು ಹಳ್ಳಿಗರು ತೆಗೆದುಕೊಂಡು ಹೋಗುವಂತೆ ಯೋಜನೆ ಮಾಡಿ ಅದು ಸರಕಾರದಿಂದ ಮುಟ್ಟುಗೋಲಾಗದೇ ಜನರಿಗೆ ಸಲ್ಲುವಂತೆ ಮಾಡಿದರು. ತಿಮ್ಮನಗೌಡರ ಈ ಉಪಟಳದಿಂದ ರೋಸಿಹೋದ ಜಿಲ್ಲಾ ಕಲೆಕ್ಟರ್, ತಿಮ್ಮನಗೌಡರನ್ನು ಹಿಡಿದು ಕೊಟ್ಟವರಿಗೆ ಅಥವಾ ಹೆಣ ತಂದುಕೊಟ್ಟವರಿಗೆ 2 ಸಾವಿರ ರೂ. ಬಹುಮಾನ ಘೋಷಿಸಿದ್ದಲ್ಲದೆ, ಕಂಡಲ್ಲಿ ಗುಂಡಿಕ್ಕಲು ಆದೇಶಿಸಿದರು. 1943 ರ ಫೆಬ್ರವರಿ 10 ತಿಮ್ಮನಗೌಡರಿಗೆ ಕರಾಳದಿನವಾಯಿತು. ಅಂದು ರಾತ್ರಿ ಕುಪ್ಪೇಲೂರ ಚಾವಡಿಯಲ್ಲಿ ಹಫ್ತೇ ಹಣ ಲೂಟಿಮಾಡುವ ಕಾರ್ಯಕ್ರಮ ಅವರದಾಗಿತ್ತು. ಅಂದು ರಾತ್ರಿ 10ರ ಹೊತ್ತಿಗೆ ತಿಮ್ಮನಗೌಡರ ತಂಡ ಹಠಾತ್ತನೇ ಚಾವಡಿಗೆ ನುಗ್ಗಿತು. ತಿಮ್ಮನಗೌಡರು ಕೋಣೆಯಬೀಗ ಒಡೆಯಲು ಮುಂದಾಗುತ್ತಿದ್ದಂತೆ ಅವರಿಗೂ ಪೊಲೀಸರಿಗೂ ಘರ್ಷಣೆ ಆರಂಭವಾಯಿತು.ದುರದೃಷ್ಟವೆಂದರೆ ಈ ಘರ್ಷಣೆ ಕಾಲಕ್ಕೆ ತಿಮ್ಮನಗೌಡರ ಹೆಗಲಿನಲ್ಲಿದ್ದ ಚೀಲದಲ್ಲಿನ ಕೈಬಾಂಬ್ ಸ್ಫೋಟಗೊಂಡಿತು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವಿಪರೀತ ರಕ್ತಸ್ರಾವದಿಂದ ಅವರು ಬದುಕುಳಿಯವುದು ಅಸಾಧ್ಯವೆನ್ನಿಸಿದ ನಂತರ ಮೆಣಸಿನಹಾಳಕ್ಕೆ ತರುವ ಮಾರ್ಗದಲ್ಲೇ ತಿಮ್ಮನಗೌಡರು ವಿಧಿವಶವಾದರು. ತನ್ನ ಚಾಕಚಕ್ಯತೆಯಿಂದ ಮಿಡಿನಾಗರದಂತೆ ಮಿಂಚಿನಿಂದ ಓಡಿಮರೆಯಾಗಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ತಿಮ್ಮನಗೌಡ ಇತಿಹಾಸವಾದರು. ಶ್ರೀಮಂತ ಮನೆತನದಲ್ಲಿ ಹುಟ್ಟಿ ಏನೆಲ್ಲಾ ಸುಖ ಅನುಭವಿಸಬಹುದಾಗಿದ್ದ ತಿಮ್ಮನಗೌಡರು ದೇಶಕ್ಕಾಗಿ ಹೋರಾಡಿ ಅಮರರಾದರು. 2011 ರಲ್ಲಿ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ರಾಣೇಬೆನ್ನೂರಿನ ಮಿನಿವಿಧಾನಸೌಧದೆದುರು ಅವರ ಆಳೆತ್ತರದ ಕಂಚಿನ ಮೂರ್ತಿ ಸ್ಥಾಪಿಸಿ ಈ ನಾಡು ಕಂಡ ಧೀಮಂತ ಹೋರಾಟಗಾರ, ಅಪ್ರತಿಮ ದೇಶಭಕ್ತ ಮೆಣಸಿನಹಾಳ ತಿಮ್ಮನಗೌಡರಿಗೆ ಗೌರವ ಸಮರ್ಪಿಸಲಾಯಿತು.

Leave a Reply