ಹಿಂದೂ ಮುಸ್ಲಿಂ ಭ್ರಾತೃತ್ವದ ಮಾದರಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್

ಹಿಂದೂ ಮುಸ್ಲಿಂ ಭ್ರಾತೃತ್ವದ ಮಾದರಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್

ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್: ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರದ್ದು ಒಂದು ವಿಶೇಷ ಅಧ್ಯಾಯ. ಹಿಂದೂ ಮುಸ್ಲಿಂ ಭ್ರಾತೃತ್ವದ ಒಂದು ಅಪರೂಪದ ಉದಾಹರಣೆ ಈ ಇಬ್ಬರದು. ಇವರಿಬ್ಬರ ಮಧ್ಯೆ ಮತೀಯ ಸಂಘರ್ಷ ತಂದಿಡುವ ಬ್ರಿಟಿಷರ ಹುನ್ನಾರಕ್ಕೆ ದಿಟ್ಟ ಉತ್ತರವಾಗಿ ನೇಣಿಗೇರುವವರೆಗೂ ಒಂದಾಗಿ ರಾಷ್ಟ್ರೀಯ ಚಿಂತನೆಗೆ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ದೇಶಭಕ್ತರು. ತಮ್ಮ ತಮ್ಮ ಧರ್ಮಗಳಿಗೆ ಬದ್ಧ ರಾಗಿಯೂ ಈ ದೇಶಕ್ಕೆ ನಿಷ್ಠರಾಗಲು ಸಾಧ್ಯ ಎಂಬುದನ್ನು ಈ ದೇಶಭಕ್ತ ಜೋಡಿ ತೋರಿಸಿಕೊಟ್ಟಿದೆ ಹಾಗೂ ಇಂದಿನ ಪ್ರತ್ಯೇಕತಾವಾದಿಗಳಿಗೆ ಇವರ ಬದುಕು ಒಂದು ಪಾಠ. ಅಷ್ಫಾಕ್ ಉಲ್ಲಾ ಉತ್ತರಪ್ರದೇಶದ ಶಹಜಾನ್ ಪುರದ ಶ್ರೀಮಂತ ಕುಟುಂಬದ ಸುಶಿಕ್ಷಿತ ತರುಣ. ಪರಿವಾರದ ಹಲವಾರು ಬ್ರಿಟಿಷ್ ಸರ್ಕಾರದ ಉಚ್ಚ ಸ್ಥಾನಗಳಲ್ಲಿ ಕೆಲಸಮಾಡುತ್ತಿದ್ದರು. ಆದರೂ ದೇಶದೆಡೆಗೆ ಅಷ್ಫಾಕನಿಗಿದ್ದ ಅದಮ್ಯ ದೇಶಭಕ್ತಿ ಅವನನ್ನು ಮತ್ತೊಬ್ಬ ದೇಶಭಕ್ತ ಕ್ರಾಂತಿಕಾರಿ, ಕವಿ ರಾಮಪ್ರಸಾದ್ ಬಿಸ್ಮಿಲ್ಲಾನೆಡೆಗೆ ಕರೆತಂದಿತು. ರಾಮ್ ಪ್ರಸಾದ್ ಆರ್ಯಸಮಾಜಿ, ಆಷ್ಫಾಕ್ ನಾದರೂ ನಿಷ್ಠಾವಂತ ಮುಸ್ಲಿಂ. ರಾಮ್ ಪ್ರಸಾದ್ ಜೈಲಿನಲ್ಲೇ ಹೋಮ ಹವನ ಮಾಡಿದರೆ ಆಷ್ಫಾಕ್ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ. ಆದರೂ ಅವರಿಬ್ಬರೂ ಪರಸ್ಪರ ಸೋದರರಂತೆ ಇದ್ದರು. ಅವರಿಬ್ಬರನ್ನು ಬೇರೆ ಮಾಡುವ , ಅವರ ಮಧ್ಯೆ ಜಗಳ ತಂದುಹಾಕುವ ಬ್ರಿಟಿಷರ ಪ್ರಯತ್ನವೆಲ್ಲ ವಿಫಲವಾಯ್ತು. ಈ ಜೋಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿತ್ತು. ಇವರ ಕ್ರಾಂತಿಕಾರಿ ಚಟುವಟಿಕೆಗಳು ಬ್ರಿಟಿಷ್ ಸಾಮ್ರಾಜ್ಯದ ನಿದ್ದೆಗೆಡಿಸಿತ್ತು. ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಕೊನೆಗೂ ಸಿಕ್ಕಿಬಿದ್ದ ಈ ಜೋಡಿಗೆ ಡಿಸೆಂಬರ್ ೧೯,೧೯೨೭ ರಂದು ಗಲ್ಲು ಶಿಕ್ಷೆಯ ಭಾಗ್ಯ. ಅತ್ಯಂತ ಆನಂದದಿಂದ ಇಬ್ಬರೂ ಜತೆಯಾಗಿಯೇ ನೇಣುಗಂಬವೇರಿ ಭಾರತೀಯ ಯುವಕರಿಗೆ ಸ್ನೇಹ ಭ್ರಾತೃತ್ವದ ಅನುಪಮ ಉದಾಹರಣೆಯಾಗಿದೆ ಈ ದೇಶಭಕ್ತ ಜೋಡಿ. ಸ್ವತಃ ಕವಿಯೂ ಆಗಿದ್ದ ಅಷ್ಫಾಕ್ ತನ್ನ ಒಂದು ನೀಳ್ಗವಿತೆಯಲ್ಲಿ ಹೇಳುತ್ತಾನೆ: “ಜೀವನ ಮರಣಗಳೆಂಬುವುದು ನಿಜವಲ್ಲ ಎಂದು ಯುದ್ಧದ ನಡುವೆ ಅರ್ಜುನನಿಗೆ ಕೃಷ್ಣ ಹೇಳಲಿಲ್ಲವೇ? ಅಯ್ಯೋ, ಆ ಅರಿವು ಎಲ್ಲಿ ಹೋಯಿತು? ಒಮ್ಮೆ ಹೇಗೊ ಸಾವು ಬರಲಿದೆ. ಅದಕ್ಕೇಕೆ ಹೆದರೋಣ? ದೇಶದ ಭವಿಷ್ಯ ಉಜ್ವಲವಾಗಿ , ಸ್ವತಂತ್ರವಾಗಿರಲಿ. ನಮ್ಮದ್ದೇನು ಮಹಾ! ನಾವು ಇದ್ದರೇನು, ಇಲ್ಲದಿದ್ದರೇನು?”. ರಾಮ್ ಪ್ರಸಾದ್ – ಅಷ್ಫಾಕ್ ಉಲ್ಲಾ ಜೋಡಿಯ ನೆನಪು ನಮ್ಮೆಲ್ಲರಿಗೆ ಹೊಸ ಸ್ಫೂರ್ತಿ ತರಲಿ.

Leave a Reply