ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ

ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ…
ನಾ‌ನು ನನ್ನ ‘ ಮೊದಲ ಗಳಿಕೆ’ ಯ ಕೊಂಚ ಹಣವನ್ನು ಕೈಲಿ ಹಿಡಿದಾಗ ನನಗಿನ್ನೂ ಆಗ ಹತ್ತು ವರ್ಷ ಸಹಿತ ತುಂಬಿರಲಿಲ್ಲ. ಏಕೆ ಆಶ್ಚರ್ಯವಾಯಿತೇ?ನನಗೂ ಅದೇ ಆಗಿತ್ತು. ಆದರೆ ಆ ಹಣ, ಆ ಗಳಿಗೆ ಕೊಟ್ಟ ಕಣ್ಣಿನ ಮಿಂಚನ್ನು ಇಂದಿನ ಪರ್ಸು ತುಂಬುವ ಪೆನ್ಶನ್ಗೆ ಒಂದು ಬಾರಿ, ಕೇವಲ ಒಂದೇ ಒಂದು ಬಾರಿಯೂ ಕೊಡಲಾಗಿಲ್ಲ ಎಂಬುದು ಹದಿನಾರಾಣೆ ಸತ್ಯ.
ಇದು ನಿಮಗೆ ಸುಲಭವಾಗಿ ತಲೆಗಿಳಿದು ಅರ್ಥವಾಗಬೇಕೆಂದರೆ ನಾವೀಗ ಕನ್ನಡದ ಸಿನೆಮಾಗಳಾದ ‘ ತಿಥಿ’ ಸಂಸ್ಕಾರ, ಗುಲಾಬಿ ಟಾಕೀಜ’ ‘ ಭೂತಯ್ಯನ ಮಗ ಅಯ್ಯು’ ದಲ್ಲಿದ್ದಂಥ ಹಳ್ಳಿಯೊಂದಕ್ಕೆ ಹೋಗಬೇಕು.
‌‌‌‌‌
ಬೆಂಗಳೂರಿನ ಒಂದು ‘ಮಾಲ್ ಪ್ರದೇಶ’ ಇರಬಹುದಾದಷ್ಟು ಜಾಗದಲ್ಲಿ ನಮ್ಮ ಇಡೀ ಹಳ್ಳಿ ಮುಗಿಯುತ್ತಿತ್ತು.’ ಸಂಸ್ಕಾರ’ ಸಿನೆಮಾದ ಪ್ರಾಣೇಶಾಚಾರ್ಯರ ಅಗ್ರಹಾರದಂತೆ ಬ್ರಾಮ್ಹಣರ ಕೇರಿ. ನಮ್ಮಪ್ಪ ಮನೆಯ ಕುಟ್ಟಣೆಯಲ್ಲಿ ಎಲೆ ಅಡಿಕೆ ,ಜರದಾ ಕುಟ್ಟಿದರೆ, ಸಪ್ಪಳಕ್ಕೆ ಕನಿಷ್ಟ ನಾಲ್ಕೈದು ಕೈಗಳು ಕ್ಷಣಾರ್ಧದಲ್ಲಿ ಪಾಲು ಬೇಡುವಷ್ಟು ಮನೆಗಳು ಒಂದಕ್ಕೊಂದು ಸಮೀಪ. ಎಲ್ಲರ ಮನೆಗಳಲ್ಲೂ ಕೂಡು ಕುಟುಂಬ. ಅಜ್ಜಿ, ಅವ್ವ, ಅವರ ಕೈಕೆಳಗೆ ಸಹಾಯಕ್ಕೆ ಅಕ್ಕಂದಿರು ಇವರೆಲ್ಲರನ್ನು ದಾಟಿ ಯಾವ ಕೆಲಸವೂ ಚಿಕ್ಕವರಾದ
ನಮ್ಮವರೆಗೂ ಎಂದೂ ಬರುತ್ತಿರಲಿಲ್ಲ. ಹೀಗಾಗಿ ಆಟಗಳಲ್ಲಿಯಂತೆ ಮನೆಯಲ್ಲೂ ‘ ಹಾಲುಂಡಿ’ ಗಳು ನಾವು. ಊಟಕ್ಕುಂಟು ,ಲೆಕ್ಕಕ್ಕಿಲ್ಲ…
ಸಾಮಾನ್ಯವಾಗಿ ಬಹಳಷ್ಟು ಕಮತದ ಮನೆಗಳು ನಮ್ಮೂರಲ್ಲಿ. ಬೀಜಕ್ಕಾಗಿ ತೆಗೆದಿಟ್ಟ ಕಾಳುಗಳನ್ನು ಸ್ವಚ್ಛಗೊಳಿಸಿ ಚೀಲಗಳನ್ನು ತುಂಬಿ ಮೊದಲೇ ಬಿತ್ತನೆಗೆ ಸಿದ್ಧವಾಗಿಟ್ಟುಕೊಳ್ಳಬೇಕಿತ್ತು.
ಸೇಂಗಾ ಬಿತ್ತನೆಗೆ ನೆಲಗಡಲೆ ( ಸೇಂಗಾ) ಕಾಯಿಗಳನ್ನು ಮೊದಲೇ ಒಡೆದು, ಜೊಳ್ಳು ತೆಗೆದು, ಹುಳುಕು ಕಾಳುಗಳಿದ್ದರೆ ಬೇರ್ಪಡಿಸಿ
ತುಂಬುಗಾಳುಗಳನ್ನು ಆರಿಸಿ ಚೀಲ ತುಂಬಬೇಕು.ಇಂಥ ಕೆಲಸಕ್ಕೆ ನಮ್ಮ ವಾನರ ಸೇನೆಯ ಸಮೃದ್ಧ ಬಳಕೆಯಾಗುತ್ತಿತ್ತು. ಮನೆಯಲ್ಲೂ ತಕರಾರು ಇರುತ್ತಿರಲಿಲ್ಲ. ಮೂರು ಕಾರಣಗಳಿಗಾಗಿ. ಮಕ್ಕಳು ಬಿಸಿಲಲ್ಲಿ ಪಿರಿಪಿರಿ ತಿರುಗದೇ ಒಂದು ಕಡೆ ಇರುತ್ತಾರೆ. ಮನೆಯಲ್ಲಿ ಅನವಶ್ಯಕ ಗದ್ದಲ- ಗಲಾಟೆಗಳು ತಪ್ಪುತ್ತವೆ.
ಗೆಳತಿಯರೊಂದಿಗೆ ಒಟ್ಟಿಗೆ ಇರುವದರಿಂದ ಕಾಳಜಿಗೆ ಕಾರಣವಿಲ್ಲ ಎಂಬ ತಮ್ಮದೇ ಸಕಾರಣಗಳಿಂದಾಗಿ ನಮಗೆ ಪೂರ್ತಿ ಸ್ವಾತಂತ್ರ್ಯ ಸಿಗುತ್ತಿತ್ತು.
ನಮ್ಮನ್ನು ಒಂದುಕಡೆ ಪಡಸಾಲೆಯಲ್ಲಿ ಸಾಲಾಗಿ ಕೂಡಿಸಿ ನಮ್ಮೆದುರು ಸೇಂಗಾರಾಶಿ ಹಾಕುತ್ತಿದ್ದರು. ಮೊದಲು ಎರಡೂ ಕೈಗಳನ್ನು ಬಳಸಿ, ಕುಕ್ಕಿ ಕುಕ್ಕಿ, ಒಡೆದು ಸಿಪ್ಪೆ ಸಮೇತ ರಾಶಿ ಹಾಕುತ್ತಿದ್ದೆವು. ನಂತರ ಎರಡೂ ಕೈಗಳಿಂದ ತೇಲಿಸಿ ಸಿಪ್ಪೆಗಳನ್ನು ಬೇರ್ಪಡಿಸುವದು, ನಂತರ ಹುಳುಕು ಕಾಳು ,ಜೊಟ್ಟ,( ಪೊಳ್ಳು) ಹಾಗೂ ಸುಕ್ಕು ಹಿಡಿದ ಕಾಳುಗಳನ್ನು ಬೇರ್ಪಡಿಸುವದು, ತುಂಬಿದ ಕಾಳುಗಳನ್ನು ಬೇರ್ಪಡಿಸಿ ಚೀಲ ತುಂಬುವದು.ಎಲ್ಲ ಕೆಲಸಗಳನ್ನೂ ಬೇಸರವಿಲ್ಲದೇ ,ನಗುನಗುತ್ತ, ಇತರರೊಡನೆ ಸ್ಫರ್ಧೆಗಿಳಿದು ಮಾಡುತ್ತಿದ್ದ ಹಾಗೆ ನೆನಪು. ನಡುನಡುವೆ ಸಿಹಿಯಾದ ಚಿಕ್ಕ ಚಿಕ್ಕ ಸುಕ್ಕು ಕಾಳುಗಳನ್ನು ಬಾಯಿಗೆಸೆದುಕೊಳ್ಳುವ ಪುಕ್ಕಟೆ ಸೌಲಭ್ಯ ಬೇರೆ ದಕ್ಕುತ್ತಿತ್ತು. ಒಂದು ಕಾಲುಪಾವು ( ಸೇರು)ಕಾಳಿಗೆ ಎರಡಾಣೆಯಂತೆ ಸಿಗುತ್ತಿತ್ತು. ನಮ್ಮ ಜೊತೆಗೆ ಆ ಮನೆಯ ಎಲ್ಲರೂ ಸ್ವತಃ ಸೇರುತ್ತಿದ್ದುದರಿಂದ ನಮ್ಮಲ್ಲೂ ಯಾವುದೇ ಕೀಳರಿಮೆ,_(ಅದು ಏನೆಂದು ಗೊತ್ತಿರಲೂ ಇಲ್ಲ, ಆ ಮಾತು ಬೇರೆ_) ಎಂದೂ ಕಾಡಲಿಲ್ಲ. ಶುಕ್ರವಾರ ನಮ್ಮ ಊರ ಸಂತೆ. ಅಂದು, ಒಂದು, ಕೆಲವೊಮ್ಮೆ ಎರಡು ರೂಪಾಯಿಗಳು ಕೈ ಸೇರುತ್ತಿದ್ದವು. ಅಂಗೈಯ ಮೇಲಿನ ವಿದ್ಯಾರೇಖೆ, ಧನರೇಖೆ, ಆಯುಷ್ಯ ರೇಖೆಗಳನ್ನೆಲ್ಲ ಮುಚ್ಚಿಕೂತ ಆ ಚಿಲ್ಲರೆ ಪೈಸೆಗಳು ನಮ್ಮ ಕಣ್ಣುಗಳಲ್ಲಿ ತುಂಬುತ್ತಿದ್ದ ಬಣ್ಣಗಳಲ್ಲಿ, ಇಡೀ ಜಗತ್ತನ್ನೇ ವರ್ಣಮಯವಾಗಿಸಬಹುದಿತ್ತು. ಶುಕ್ರವಾರ ನಮ್ಮೂರ ಸಂತೆ, ಸಕ್ಕರೆಯ ಗಟ್ಟಿ ಪಾಕಕ್ಕೆ ಗುಲಾಬಿ ಬಣ್ಣ ಹಾಕಿ, ದೊಡ್ಡ ಕೋಲಿನ ತುದಿಗೆ ಅದನ್ನು ಸಿಲುಕಿಸಿ ಅದರಿಂದ ಮಕ್ಕಳಿಗೆ, ಸೈಕಲ್ಲು, ವಾಚು, ಉಂಗುರ, ಚಾಳೀಸುಗಳನ್ನು ಮಾಡಿಕೊಡುವ ಮಿಠಾಯಿವಾಲಾ ಬರುತ್ತಿದ್ದ. ಹಾಗೆಯೇ ಒಂದು ತಗಡಿನ ದೊಡ್ಡ ಡಬ್ಬಿಯಲ್ಲಿ ‘ ಅನೇಕ ಚಿತ್ರಗಳ ರೀಲ್ ಕೂಡಿಸಿದವನೊಬ್ಬ, ಅದರ ಮೇಲಿನ ಗಂಟೆಯನ್ನು ತಾಳಬದ್ಧವಾಗಿ ಬಾರಿಸುತ್ತಾ, ” ಮುಂಬೈ ಪಟ್ಣ ನೋಡಿ, ಕುತುಬ್ ಮಿನಾರ್ ನೊಡಿ, ಗೋಲ್ಗುಂಬಜ್ ನೋಡಿ ಎನ್ನುತ್ತಾ ರೀಲ್ ತಿರುಗಿಸಿ ತೋರಿಸುತ್ತಿದ್ದರೆ ನಮ್ಮ ಸಂಭ್ರಮ ಅನುಭವಿಸಲು ಅದೇ ಜಮಾನಾಕ್ಕೆ ಹೋಗಬೇಕು. ನಮ್ಮ ‘ಪಗಾರ ಬಟವಡೆ ‘ ಯಾದಮೇಲೆ ಗುಂಪುಗೂಡಿ ವಾರದ ಸಂತೆಯಲ್ಲಿ ಅಡ್ಡಾಡಿ budget ಮೀರದಂತೆ ಅದು ಇದು ಖರೀದಿಸಿ, ಅದು ಇದು ನೋಡಿ, ಒಂದು ದಿನದ ರಾಣಿಯಂತೆ( ಏಕ ದಿನ ಕೀ ರಾಣಿ) ಕಳೆದರೆ ಮುಂಬರುವ ದಿನಗಳ ಕೆಲಸಕ್ಕೆ ಗೊತ್ತಿಲ್ಲದೇ ಕಾಯುತ್ತಿದ್ದುದು ಇನ್ನೂ ಹಸಿ ಹಸಿ ನೆನಪು…ನನ್ನ ಕೊನೆಯ ತಂಗಿಯಂತೂ ಒಮ್ಮೆ ತನ್ನ ಎಲ್ಲಾ ನಾಣ್ಯಗಳನ್ನೂ ನನ್ನ ಅಕ್ಕನ ಐಡಿಯಾ ಮೇರೆಗೆ ಒಂದು ಮಣ್ಣಿನ ಗಡಿಗೆಯಲ್ಲಿ ಹಾಕಿ ನೆಲದಲ್ಲಿ ಹೂಳಿದ್ದಳು, ಯಾರಿಗೂ ಗೊತ್ತಾಗದಂತೆ. ತಿಂಗಳೆರಡು ಬಿಟ್ಟು ತೆಗೆದು ನೋಡಿದಾಗ ನೆಲದ ತಂಪಿಗೆ ,ಗಾಳಿಯೂ ಆಡದ ಕಾರಣಕ್ಕೆ, ಅವು ಉಬ್ಬಿಕೊಂಡು ಪದರು ಪದರಾಗಿ ( ಅಲ್ಯೂಮಿನಿಯಂ) ಮುಟ್ಟಿದರೆ ಪುಡಿಯಾಗಿ ಬಿಡುವಂತೆ ಆಗಿದ್ದವು… ಜಗತ್ತೇ ಮುಳುಗಿದಂತೆ ಅತ್ತ ಅವಳನ್ನು ಸಮಾಧಾನ ಪಡಿಸಲು ನಾವೆಲ್ಲರೂ ಸೇರಿ ‘ಚಂದಾ’ ಎತ್ತಿ ನಷ್ಟ ಭರಿಸಿಕೊಟ್ಟದ್ದು ಈ ಪುರಾಣದ ‘ಉಪಕಥೆ’…
‌‌ ಈ‌ಗ ಮನೆಯಲ್ಲಿ ಕುಳಿತು ಎಷ್ಟೋ ಸಾವಿರಗಳ ಪೆನ್ಶನ್ ಎಣಿಸುತ್ತೇವೆ. ಆದರೆ ಕಂಗಳಲ್ಲಿ ಕನಸುಗಳು ಅರಳುವದಿಲ್ಲ. ಹಣ ತುಂಬಿದ ಕೈಗಳಿಗೆ ರವಷ್ಟಾದರೂ ರೋಮಾಂಚನಗೊಳಿಸುವ
ಆಕರ್ಷಣೆಯಿಲ್ಲ. ಬದಲಿಗೆ ಇತಿಹಾಸದ ಪುಟ ಸೇರಿದ ಪುಟ್ಟ ಪುಟ್ಟ ತಾಮ್ರದ ಕಾಸುಗಳಿಗಾಗಿ, ಅವು ಕೊಟ್ಟ ‘ಒಂದು ಕಾಲದ ಸುಖದ ಗಳಿಗೆಗಳಿಗಾಗಿ’ ಮನ ಹಂಬಲಿಸುತ್ತದೆ. ‘ಇರುವದೆಲ್ಲವ ಬಿಟ್ಟು ಇರದಿರುವದರ ಕಡೆಗಿನ ‘ ತುಡಿತ ‘ ಅಂದರೆ ಇದೇ ಇರಬೇಕು…
Leave a Reply