ಜಾನಪದ

ಜಾನಪದ
ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ.
ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗಿರ್ವಾಣಭಾರತೀ
ತಥೋಪಿ ಮಧುರಂ ಕಾವ್ಯಂ ತಸ್ಮಾಧಪಿ ಸುಭಾಷಿತಂ.
ಅಂದರೆ ಇಲ್ಲಿ ಇನ್ನೊಂದು ವಾಕ್ಯವನ್ನು ಸೇರಿಸಲಿಚ್ಛಿಸುತ್ತೇನೆ.
ತಸ್ಮಾದsಪಿ ಮಧುರಂ ಸುಲಲಿತಂ ಮನಮೋಹಕಂ ಜಾನಪದಂ!
ಜಾನಪದವು ಯಾರಿಂದ ಯಾವಾಗ ಹೇಳಲ್ಪಟ್ಟಿತು ಅಂತ ಹೇಳಲಿಕ್ಕೆ ಆಧಾರವಿಲ್ಲ. ಪರಂಪರಾನುಗತವಾಗಿ ಅನಾಮಧೇಯ ಅನಕ್ಷರರಿಂದ ಈ ಪದಗಳು ಹಾಡಲ್ಪಟ್ಟವು. ಅದಕ್ಕೆಂದೇ ಇವುಗಳಿಗೆ ಜಾನಪದವೆಂದು ಹೇಳುವರು.
ತಮ್ಮಲ್ಲಿಯ ಸಿಹಿಕಹಿಯ ಅನುಭವಗಳು ಹರಳುಗಟ್ಟಿ ಪದಗಳಾಗಿ ಹೊಮ್ಮಿ ಹಾಡುಗಳಾಗುತ್ತಿದ್ದವು. ಅಲ್ಲಿ ಕೇವಲ ಮನಸ್ಸಿನ ಉತ್ಕಟ ಭಾವನೆಗಳು ಸಮ್ಮಿಳಿತವಾಗಿರುತ್ತಿದ್ದವು. ಮನರಂಜನೆಗಾಗಿ ವಿವಿಧ ಪ್ರಕಾರಗಳು ಆಗ ಇರಲಿಲ್ಲ. ಮನಸ್ಸಿನಲ್ಲಿಯೇ ರೂಪುಗೊಂಡ ಭಾವನೆಗಳು ಹರಳುಗಟ್ಟಿ ಉಕ್ಕುತ್ತಿದ್ದವು. ತನ್ನಲ್ಲಿಯ ಒತ್ತೊತ್ತಾದ ಭಾವನೆಗಳನ್ನೇ ಹಾಡಾಗಿಸಿ ಅಂದಿನ ಸ್ತ್ರೀ ಬೀಸುತ್ತಿದ್ದಳು, ಕುಟ್ಟುತ್ತಿದ್ದಳು, ಬಾವಿಯಿಂದ ನೀರು ಸೇದುತ್ತಿದ್ದಳು. ದಣಿವನ್ನಾರಿಸಲು, ಬೇಸರಿಕೆ ನೀಗಲು ಇಲ್ಲವೇ ಮನಸ್ಸಿಗೆ ರಂಜನೆ ಪಡೆದುಕೊಳ್ಳಲು ಪದಕಟ್ಟಿ ಹಾಡುತ್ತಿದ್ದಳು. ಈಗಿನಂತೆ ಆಗ ಬಸ್ಸಿನ, ಕಾರಿನ ಅನುಕೂಲತೆ ಇರುತ್ತಿರಲಿಲ್ಲ. ಯಾವಾಗ ಬೇಕೆಂದಾಗ ತವರಿಗೆ ಹೋಗಲಾಗುತ್ತಿರಲಿಲ್ಲ. ತವರಿನ ನೆನಪಾದಾಗ “ತವರೂರ ನೆನೆದರೆ ತಂಗಳ ಬಿಸಿಯಾಯ್ತು, ತವರೂರ ದಾರಿ ಸನಿಯಾಯ್ತು” ಎಂದು ತನ್ನ ಆಡುಭಾಷೆಯಲ್ಲಿಯೇ ತವರ ಹಾದಿ ಪಕ್ಕದಲ್ಲೇ ಇದೇಯೇನೋ ಎಂಬಂತಾಗುತ್ತದೆ” ಎಂದು ತನ್ನ ಮನಸ್ಸಿನ ಭಾವನೆಗಳನ್ನು ಹೊರಹಾಕುತ್ತಿದ್ದಳು.
“ಅತ್ತೆಯಾ ಮನೆಯ್ಯಾಗ ಮುತ್ತಾಗಿ ಇರಬೇಕ
ಹೊತ್ತಾಗಿ ನೀಡಿದರೆ ಉಣಬೇಕ| ತವರವರ
ಉತ್ತಮ ಹೆಸರ ತರಬೇಕ|”
ತಾಯಿ ತನ್ನ ಮಕ್ಕಳಿಗೆ ಅತ್ತೆಯ ಮನೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಉಪದೇಶಿಸುತ್ತಾಳೆ. ಅತ್ತೆಯ ಮನೆಯಲ್ಲಿ ಕೆಲವೊಮ್ಮೆ ವೇಳೆ ಮಾಡಿ ಊಟಕ್ಕೆ ನೀಡಿದರೂ ಕೂಡ ಗೊಣಗಾಡದೇ ಇದ್ದು ತವರಿನವರ ಹೆಸರು ಕೀರ್ತಿಯನ್ನು ಬೆಳಗಿಸಬೇಕು. ಎಂಥಾ ಒಳ್ಳೆಯ ತಂದೆ-ತಾಯಿಗೆ ಹುಟ್ಟಿದ ಹುಡುಗಿ ಇವಳು. ಇಷ್ಟೊಂದು ಸಹನೆ ಇದೆ ಇವಳಲ್ಲಿ ಎಂದೆನಿಸಿ ಬಾಂಧವ್ಯವನ್ನು ಇನ್ನೂ ಗಟ್ಟಿಗೊಳಿಸಬೇಕು ಎಂದು ತಾಯಿ ಹೇಳುತ್ತಾಳೆ.
ಅದಕ್ಕಾಗಿಯೆ ಜಾನಪದ ಸಂಸ್ಕೃತಿಯನ್ನು ಬಾಂಧವ್ಯ ಸಂಸ್ಕೃತಿ ಎಂದೂ ಹೇಳಬಹುದು. ಜನರಾಡುವ ಆಡು ಮಾತುಗಳನ್ನೇ ಉಪಯೋಗಿಸಿಕೊಂಡು ಭಾವನೆಗಳ ಆಗರವಾಗಿರುವ ಇವು ಜಾನಪದಗಳು.
ತಾಯಿ ತನ್ನ ಮಗುವನ್ನು ವರ್ಣಿಸುವ ಪದಗಳು ಜಾನಪದದಲ್ಲಿ ಸಿಗುವಷ್ಟು ಹೇರಳವಾಗಿ ಮತ್ತೆಲ್ಲಿಯೂ ಸಿಗಲಿಕ್ಕಿಲ್ಲ.
ತೊಟ್ಟಿಲದಾಗೊಂದು ತೊಳೆದ ಮುತ್ತನು ಕಂಡೆ
ಹೊಟ್ಟೆ ಮೇಲಾಗಿ ಮಲಗ್ಯಾನ | ಕಂದಯ್ಯಗ
ಮುತ್ತಿನ ದಿಟ್ಟಿ ತೆಗೆದೇನ ||
ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ
ಎತ್ತಿಕೊಳ್ಳೆಂಬ ಹಠವಿಲ್ಲ | ನಿನ್ನಂಥ
ಮಕ್ಕಳಿರಲೆವ್ವ ಮನಿತುಂಬ.
ಮಗುವಿನ ಕುರಿತು ಆಕೆಯಲ್ಲಿ ಅಗಾಧ ಪ್ರೀತಿ ವಾತ್ಸಲ್ಯ ಅಂತಃಕರುಣೆ ಇರುತ್ತಿತ್ತು. ಮನರಂಜನೆಗಾಗಿ ವಿವಿಧ ಆಯಾಮಗಳಿರಲಿಲ್ಲವಾದ್ದರಿಂದ ಮಗುವಿನ ಆಟಪಾಠಗಳಲ್ಲೇ ಆಕೆ ಆನಂದವನ್ನು ಕಾಣುತ್ತಿದ್ದಳು. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ತನ್ನ ಮಗುವನ್ನು ವರ್ಣಿಸಲಿಕ್ಕಾಗಿ ಹಾಕೋ ಬೆಲೆಬಾಳುವ ಮುತ್ತಿಗೆ ಹೋಲಿಸುತ್ತಾಳೆ. ಎಷ್ಟೇ ಮಕ್ಕಳಾದರೂ ಬೇಸರಿಸದೆ ಇರಲು ಮಕ್ಕಳು ಮನೆ ತುಂಬ ಎಂದು ಸಂಭ್ರಮಿಸುತ್ತಾಳೆ. ಮಗುವಿನ ಅಳುವಿನಲ್ಲೂ ಆಕೆ ಪ್ರಾಸಗಳನ್ನು ಹೆಣೆದು ಮಗುವನ್ನು ವರ್ಣಿಸಲು ಹಿಂದೆ ಬೀಳುವುದಿಲ್ಲ.
ಹಾಲ ಬೇಡಿ ಅತ್ತಾನ ಕೋಲ ಬೇಡಿ ಕುಣಿದಾನ
ಮೊಸರ ಬೇಡಿ, ಕೆಸರ ತುಳಿದಾನ ! ಕಂದಯ್ಯನ
ಕುಶಲದ ಗೆಜ್ಜೆ ಕೆಸರಾsಗ |
ಮಗುವಿನ ಅಳುವಿನಲ್ಲಿ, ಆನಂದದಲ್ಲಿ, ತುಂಟತನದಲ್ಲೂ ಆಕೆಗೆ ಸಂಭ್ರಮವೇ. ಎಷ್ಟು ಸುಂದರವಾದ ಪದಗಳಲ್ಲಿ, ಆಡುಮಾತಲ್ಲೇ ಆದರೂ ಜೋಡಿಸಿ ಹೇಳಲಾಗಿದೆ. ಇವನ್ನೆಲ್ಲ ಯಾರು ಬರೆದಿದ್ದಾರೆ ಎಂದು ಗೊತ್ತಿಲ್ಲವಾದರೂ ಸಾಹಿತ್ಯದ ಜ್ಞಾನದ ಜೊತೆ ಜೊತೆಗೆ ಸಂಗೀತದ ಜ್ಞಾನವೂ ಅವರಿಗಿರಲೇಬೇಕು. ಧ್ವನಿಯಲ್ಲಿನ ಏರಿಳಿತದಷ್ಟೇ ಮಹತ್ವವು ಹಾಡಿನಲ್ಲಿರುವ ಪ್ರಾಸಕ್ಕೂ ಉಂಟು.
ಅತ್ತೆಮನೆಯಲ್ಲಿ ಅತ್ತೆಯ ಕಾಟ, ನಾದಿನಿಯರ ಪೀಡೆಗಳನ್ನೆಲ್ಲ ನುಂಗಿಕೊಂಡು ಇರುವಾಗ ಬಹಳ ದಿನದಿಂದ ಮಕ್ಕಳಾಗದೇ ಇದ್ದಾಗ ಅತ್ತೆ ಮಾವ ಮಗನಿಗೆ ಬೇರೆ ಮದುವೆ ಮಾಡಲು ಯೋಚಿಸಿದಾಗ ದುಃಖತಪ್ತಳಾಗಿ ಆಪ್ತಗೆಳತಿಗೆ ‘ಅತ್ತೆ ಮಾವ ಕೆರೆಗೆ ಹಾರ ಕೊಡುತ್ತಾರಂತೆ’ ಎಂದು ಹಾಡಿನಲ್ಲೇ ಹೇಳಿದಾಗ ಆ ಗೆಳತಿಯೂ ಕೂಡ ಅಷ್ಟೇ ಮಾರ್ಮಿಕವಾಗಿ ‘ಕೊಟ್ಟರೆ ಕೊಡಲೇಳು ಇಟ್ಟಾಂಗ ಇರಬೇಕು! ಎಂದು ಉತ್ತರಿಸುತ್ತಾಳೆ. ಅಂದರೆ ಅಲ್ಲಿ ಹೇಗಿದೆಯೋ ಹಾಗೇ ಹೊಂದಿಕೊಂಡು ಇರು ಎನ್ನುವ ಮಾತು ಹೇಳಿ ಗೆಳತಿಯಲ್ಲಿ ನಿರ್ಲಿಪ್ತತೆಯನ್ನು ಮೂಡಿಸುತ್ತಾಳೆ.
ನಾಗರೀಕತೆ ಜನಪದ ಸಮಾಜದ ತುತ್ತತುದಿ ಎಂದು ಹೇಳಬಹುದು. ಅಂಥ ವಿಕಸಿತ ಸಮಾಜದ ಅರಿವು ಜಾನಪದರಿಗೆ ಇದ್ದರೂ ಅದರ ಒಂದು ಭಾಗವಾಗದೆ ತಮ್ಮ ಪಾರಂಪರಿಕ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುವುದನ್ನು ಜನಪದ ಸಮಾಜದಲ್ಲಿ ನಾವು ಕಾಣುತ್ತೇವೆ.
ಪ್ರಾಚೀನ ಕಾಲದಲ್ಲಿ ಜಾನಪದದ ವಿದ್ಯಾಭ್ಯಾಸ ಕ್ರಮ ತಂದೆ-ಮಕ್ಕಳ ಬಾಂಧವ್ಯವನ್ನು ಪರಂಪರೆಯ ನಿರಂತರತೆಯನ್ನು ಕಾಪಾಡಿಕೊಳ್ಳೂವಂಥದ್ದಾಗಿತ್ತು. ಆದರೆ ಆಧುನಿಕ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ವಿದ್ಯೆ ಅನ್ವಯಿಕತೆಗೆ ಹೆಚ್ಚಿನ ಮಹತ್ವಕೊಡಲಾಗಿದೆ. ಇದರ ಮರಿಣಾಮ ತಂದೆ ಮಕ್ಕಳ ಬಾಂಧವ್ಯ ತಪ್ಪಿಸುತ್ತದೆ. ಈ ವಿದ್ಯೆ ರೈತರ ಮಕ್ಕಳನ್ನು ಗುಮಾಸ್ತರನ್ನಾಗಿ, ರೈತ ಯುವಕರನ್ನು ನ್ಯಾಯವಾದಿಗಳನ್ನಾಗಿಯೋ, ಕಮ್ಮಾರರ ಮಗನನ್ನು ಇಂಜನಿಯರ್ ರನ್ನಾಗಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುತ್ತವೆಯೇನೋ ನಿಜ. ಆದರೆ ಪರಂಪರಾನುಗತವಾಗಿ ಬಂದ ಉದ್ಯೋಗಗಳಲ್ಲಿ ಕೊರತೆ ಕಂಡು ಬರುತ್ತದೆ. ಹೀಗಾಗಿ ಜಾನಪದ ನಮಗೆ ಹತ್ತಿರವಾಗುತ್ತದೆ. ಜಾನಪದರ ಭಾಷೆ, ಶೈಲಿ ನಮ್ಮನ್ನು ಇನ್ನೂ ಹತ್ತಿರಕ್ಕೆಳೆದುಕೊಳ್ಳುತ್ತದೆ. ಅದಕ್ಕಾಗಿ ಡಿ.ವಿ.ಜಿ.ಯವರು ಒಂದು ಮಾತು ಹೇಳುತ್ತಾರೆ.
“ಹಿಂದಿನದು ಇಲ್ಲದಿದ್ದರೆ ಮುಂದಿನದಿಲ್ಲ
ಮುಂದಿನದು ಹಿಂದಿನದರ ಮುಂಬರಿತ”
ಎಷ್ಟು ಸತ್ಯವಲ್ಲವೇ?

 

Leave a Reply