ಕಾಲಚಕ್ರ

ಕಾಲಚಕ್ರ
ಕಾಲಚಕ್ರವು ತಿರುಗುತ್ತಿರುವುದರಿಂದಲೇ ರಾತ್ರಿ ಹಗಲು, ಹುಣ್ಣಿಮೆ-ಅಮವಾಸ್ಯೆಗಳೆಲ್ಲ ಘಟಿಸುತ್ತಿರುವವು. ಕಾಲವೇ ಸ್ಥಗಿತವಾದರೆ……. ಆಗ ನಾವೆಲ್ಲ ಜೀವಿಸಿಯೂ ಸತ್ತಂತೆ ತಾನೇ. ಇರಲಿ ಯಾವಾಗಲೂ ಕಾಲವೂ ಬದಲಾಯಿಸುತ್ತಲೇ ಇರಬೇಕು, ಹಾಗೇ ಇದೆ. ಅದೇ ಪ್ರಕೃತಿಯ ಪರಿಭಾಷೆ. ನಿಂತ ನೀರಿಗಿಂತ ಹರಿವ ನೀರು ಹೆಚ್ಚು ಉಪಯುಕ್ತ, ಆಹ್ಲಾದಕರ, ಸತ್ವಯುತವಾದುದು, ಅಂತೆಯೇ ನಮ್ಮ ಜೀವನವೂ ಕೂಡ.
“ತಾತಸ್ಯ ಕೂಪೋ ಯಮಿತಿ ಭ್ರುವಾಣಾ
ಕ್ಷಾರಂ ಜಲಂ ಕಾ ಪುರುಷಾ ಪಿಬಂತಿ!”
ಅಜ್ಜ ತೋಡಿಸಿದ ಬಾವಿಯಲ್ಲಿ ಉಪ್ಪು ನೀರಾದರೂ ಒಣ ಅಭಿಮಾನದಿಂದ ಕುಡಿಯುವವನು ಮೂರ್ಖನೇ ಸರಿ ಎಂಬುದು ಸುಭಾಷಿತದ ತಾತ್ಪರ್ಯ.
‘ಅಜ್ಜ ನೆಟ್ಟ ಹುಣಸೇ ಮರವೆಂಬ ಪ್ರೀತಿಯಿಂದ ಅದಕ್ಕೆ ಉರುಲು ಹಾಕಿಕೊಂಡಂತೆ’ ಎಂಬುದು ಕನ್ನಡದಲ್ಲಿ ಒಂದು ಗಾದೆ ಮಾತು ಮೊದಲಾದರೆ ಸ್ತ್ರೀ ಹೊಸಿಲು ದಾಟಿ ಹೊರಬರದೇ ಮನೆಯ ನಾಲ್ಕು ಗೋಡೆಯಲ್ಲಿಯೇ ಬಂಧಿತಳು. ಆದರಿಂದು ಸ್ತ್ರೀ ಎಲ್ಲ ಫೀಲ್ಡ್ ನಲ್ಲೂ ಮುಂಚೂಣಿಯಲ್ಲಿದ್ದಾಳೆ. ಒಳಗೂ ಹೊರಗೂ ಕಾರ್ಯತತ್ಪರಳಾಗಿದ್ದಾಳೆ. ದೊಡ್ಡ ಇಂಡಸ್ಟ್ರೀಯನ್ನೇ ನಡೆಸುವವಳಾಗಿದ್ದಾಳೆ. ಅಧಿಕಾರದ ಉನ್ನತಿಗೇರಿ ಸೂಕ್ತವಾದ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಪಡೆದಿದ್ದಾಳೆ.
ಪುರುಷ ಪ್ರಧಾನ ಸಮಾಜವೆಂದು ಬಿಂಬಿತವಾದರೂ ಹೆಚ್ಚಿನ ಸಂದರ್ಭದಲ್ಲಿ ಸ್ತ್ರೀಯ ಮಾತನ್ನು ಪುರುಷ ಕೇಳಬೇಕಾಗಿದೆ. ಮೊದಲಾದರೆ ಮನೆಯ ಹೆಂಗಸರನ್ನೇನು ಕೇಳುವುದು ಎಂದು ಉಪೇಕ್ಷೆಯ ಭಾವ ಹೊಂದಿದ್ದ ಪುರುಷ ಇಂದು ಮಕ್ಕಳ ವಿದ್ಯಾಭ್ಯಾಸ, ಉಳಿತಾಯ ಯೋಜನೆ, ಮನೆಕಟ್ಟಿಸುವ ಮತ್ತೂ ಅನೇಕ ಮುಖ್ಯ ಮುಖ್ಯ ವಿಷಯಗಳಲ್ಲಿ ಪರಸ್ಪರ ವಿಚಾರ ವಿನಿಮಯ ಮಾಡಿ ಅಡಿ ಇಡುತ್ತಿದ್ದಾನೆ. ಅದಕ್ಕೆ ಹೆಣ್ಣುಮಕ್ಕಳಿಗೆ ದೊರಕುವ ಶಿಕ್ಷಣ ಸೌಲಭ್ಯವೂ ಒಂದು ಮುಖ್ಯವಾದ ಕಾರಣವಾಗಿರಬಹುದು.
ಜಾತಿ ಪದ್ಧತಿಯಲ್ಲೂ ಪ್ರೇಮವಿವಾಹದಿಂದ ಇತ್ತೀಚೆಗೆ ಸಡಿಲತೆ ಬಂದಿದೆ ಎಂದು ಹೇಳಬಹುದು. ಹುಡುಗ ಶಿಕ್ಷಿತನೂ, ಸುಸಂಸ್ಕೃತನೂ, ಒಳ್ಳೆಯ ಸಂಬಳ ತರುವ ನೌಕರಿ ಇದ್ದರೆ ಜಾತಿ ವಿಷಯ ಅಷ್ಟೊಂದು ಮೂಗು ತೂರಿಸಲಾರದು.
ಕೇವಲ ಮಡಿವಂತಿಕೆ, ಶಿಷ್ಟಾಚಾರ, ಆಚಾರ ವಿಚಾರವೆನ್ನುತ್ತಿದ್ದ ಮಧ್ಯಮ ವರ್ಗದಲ್ಲೂ ಈಗ ಆಧುನಿಕತೆಯ ಗಾಳಿ ಮೂಡಿದೆ. ಅಲ್ಲಿಯೂ ಕೆಲವೊಂದು ಸಂಪ್ರದಾಯಗಳು ಅಂದರೆ ಮುಟ್ಟಾಗಿ ಮೂರು ದಿನ ಹೊರಗೆ ಕೂಡುವುದು, ಶಾಲೆಯಲ್ಲಿ ಕೆಳಜಾತಿಯವರನ್ನು ಮುಟ್ಟಿ ಬಂದರೆ ಸ್ನಾನ ಮಾಡುವುದು…….. ಇತ್ಯಾದಿಗಳಿಗೆ ತಿಲಾಂಜಲಿ ಇಡಲಾಗಿದೆ. ಇದಕ್ಕೆಲ್ಲ ವಿಭಕ್ತ ಕುಟುಂಬಗಳೂ ಕಾರಣವಿರಬಹುದು.
ಅಂದಿನ ಮಕ್ಕಳಿಗೂ ಇಂದಿನ ಮಕ್ಕಳಿಗೂ ಅಜಗಜಾಂತರ. ಇಂದಿನ ಪೀಳಿಗೆ ವಿಪರೀತ ಜಾಣರೆಂದು ಹೇಳಬಹುದು. ಅವರು ಮಾತನಾಡುವುದೆಲ್ಲವೂ ವಾಸ್ತವತೆಯ ತಳಹದಿಯ ಮೇಲೆ. ವೈಜ್ಞಾನಿಕವಾಗಲೀ, ಯಂತ್ರಸಾಮಗ್ರಿಗಳ ಬಗ್ಗೆಯಾಗಲೀ, ಕಾರು, ಟೂವೀಲರ್ ಗಳ ಬಗ್ಗೆಯಾಗಲೀ, ಅತಿಶಯ ಜ್ಞಾನ ಹೊಂದಿ ನಿರರ್ಗಳವಾಗಿ ಮಾತನಾಡಬಲ್ಲರು. ಇದಕ್ಕೆಲ್ಲ ದೂರದರ್ಶನ, ಇಂಟರ್ ನೆಟ್ಟಿನ ಕೃಪೆಯೂ ಕಾರಣ ಅವರ ಬುದ್ಧಿಶಕ್ತಿ ವಿಸ್ತರಿಸಲು, ಪುಟ್ಟ ಕಾರ್ಟೂನ್ ಪಾತ್ರಗಳೂ ಚೆನ್ನಾಗಿ ಮನಗಾಣುವಂತೆ ವೈಜ್ಞಾನಿಕ ವಿಚಾರಗಳನ್ನು ಮಕ್ಕಳ ಮನದಲ್ಲಿ ಬಿಂಬಿಸುತ್ತವೆ.
ಬದಲಾವಣೆಯನ್ನು ನಿರ್ವಹಿಸುವ ಸವಾಲು ಹಾಗೂ ಆಧುನಿಕತೆಯೊಡನೆಯ ಸಂಘರ್ಷ ಎಲ್ಲ ಕಾಲದಲ್ಲೂ ಇದ್ದದ್ದೇ. ಆದರೆ ನಿಂತ ನೀರಾಗದೇ ಹರಿವ ತೊರೆಯಾಗಿ ಬದಲಾವಣೆಯನ್ನು ಆಸ್ವಾದಿಸುವುದೇ ಜೀವನ.
ಕಾಲ ಬದಲಾಗಿದೆ ಎಂಬುದು ನಿನ್ನೆ ಮೊನ್ನೆಯ ಮಾತಲ್ಲ. ಆಗಿನ ಕಾಲದಲ್ಲೂ ಈ ಮಾತನ್ನು ಹೇಳುವವರಿದ್ದರು. ಇಂದಿಗೂ ಇದ್ದಾರೆ. ಹಾಗೇ ನಾಳೆಗೂ ಇರುತ್ತಾರೆ. ಅಂದರೆ ಕಾಲ ಬದಲಾಗಿದೆ ಎನ್ನುವುದಕ್ಕಿಂತ ನಾವು ನಮ್ಮ ವಿಚಾರಗಳು ಬದಲಾಗಿವೆ ಎಂದರೆ ತಪ್ಪೇನಿಲ್ಲ. ಇಂದು ಜಗತ್ತು ಪುಟ್ಟ ಮನೆಯಂತಾಗಿದೆ. ಇಂದು ನಾವು ಜಗತ್ತಿನ ಯಾವುದೇ ಮೂಲೆಗೆ ಹೋಗಬಯಸಿದ್ದೇ ಆದರೆ ಕೆಲವೇ ಗಂಟೆಗಳ ಅಂತರದಲ್ಲಿ ಅಲ್ಲಿ ವಿಮಾನ, ಹೆಲಿಕಾಫ್ಟರ್ ಗಳ ಮೂಲಕ ಜಗತ್ತಿನಲ್ಲಿ ಎಲ್ಲೇ ಏನೇ ಘಟಿಸಿದರೂ ಕ್ಷಣಾರ್ಧದಲ್ಲಿ ನಾವು ಅದನ್ನು ತಿಳಿಯಬಹುದು. ಇಂದು ಕಾಲ ಶರವೇಗದಿಂದ ಓಡುತ್ತಿದೆ. ಆದರೆ ಒಂದು ಮಾತು ನಿಜ, ಅಂದಿನ ಜನರ ಮುಗ್ಧತೆ ಇಂದಿನ ಜನರಲ್ಲಿಲ್ಲ. ಅಂದಿನ ಪ್ರಾಮಾಣಿಕ, ಸತ್ಯಸಂಧತೆ, ಉಪಕಾರೀ ಮನೋಭಾವ ಆತ್ಮೀಯತೆ ಇಂದು ಕಡಿಮೆಯಾಗುತ್ತಿದೆಯೇನೋ ಎಂದೆನಿಸುವುದು. ಇಂದಿನ ವಿಘಟಿತ ಕುಟುಂಬದಲ್ಲಿ ವ್ಯಕ್ತಿ ಆತ್ಮಕೇಂದ್ರಿತನಾಗಿದ್ದಾನೆ. ಕಾಲ ಬದಲಾದರೂ ಪರಿಸರ ಬದಲಾಯಿಸಿದರೂ ಕೂಡ ನಮ್ಮ ಸಂಸ್ಕಾರ, ಸಂಸ್ಕೃತಿಯ ಬದಲಾಯಿಸದಿದ್ದರೆ ಅಷ್ಟು ಸಾಕು.
ಕಾಲ ಕೆಟ್ಟು ಹೋಗಿದೆ ಎಂಬ ಮಾತು ಎಲ್ಲೆಲ್ಲೂ ಕೇಳಿಬರುತ್ತದೆ. ಆದರೆ ಕಾಲವನ್ನು ಕೆಡಿಸಿರುವುದು ವಿಧ್ವಂಸಕ ವಿಚಾರಗಳಿಂದ, ವಿಜ್ಞಾನದ ಆವಿಷ್ಕಾರವಾಗಿರುವುದು ಮನುಷ್ಯನ ಉಪಯೋಗಕ್ಕಾಗಿ. ಆದರೆ ಅದನ್ನು ಯಾವುದಕ್ಕಾಗಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದನ್ನು ಸಾಬೀತುಪಡಿಸುವುದು ಅದರ ಪರಿಣಾಮ. ಧನಾತ್ಮಕವಾಗಿ ಉಪಯೋಗಿಸಿದರೆ ಅವನಿಗೆ ಅದರಿಂದ ಸಾಕಷ್ಟು ಪ್ರಯೋಜನ. ಆದರೆ ಋಣಾತ್ಮಕವಾಗಿ ಉಪಯೋಗಿಸಿದರೆ ಅದರಿಂದ ಮನುಕುಲದ ವಿನಾಶ ಕಟ್ಟಿಟ್ಟಬುತ್ತಿ.
ಇಂದು ಅವಿಭಕ್ತ ಕುಟುಂಬವು ಕಡಿಮೆಯಾಗಿ ವಿಭಕ್ತ ಕುಟುಂಬಗಳು ಬೆಳೆಯುತ್ತಿವೆ. ಮನೆಯಲ್ಲಿ ಒಂದೋ, ಎರಡೋ ಮಕ್ಕಳು. ಹೀಗಾಗಿ ಇಬ್ಬರೂ ತಾಯಿ ತಂದೆ ದುಡಿಯುತ್ತಿರುವುದರಿಂದ ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ಮಕ್ಕಳಿಗೆ ಬೇಕೆನಿಸಿದ್ದು ಬೆರಳ ತುದಿಯಲ್ಲಿಯೇ ದೊರಕುವಂತಾಗಿದೆ. ನಿಜವಾಗಿಯೂ ಇಂದಿನ ಪೀಳಿಗೆ ಎಲ್ಲದರಲ್ಲೂ ಮುಂದು. ಅವಕಾಶಗಳೂ ಹಾಗೇ ವಿಪುಲವಾಗಿವೆ. ಅವಿಭಕ್ತ ಕುಟುಂಬದಲ್ಲಿ ಆಗ ಉಸಿರುಗಟ್ಟಿಸುವ ವಾತಾವರಣ ಒಳಗಿಂದೊಳಗೇ ಕತ್ತಿಮಸೆಯುವ ಮನೋಭಾವ ಆದರೆ ವಿಭಕ್ತ ಕುಟುಂಬದಲ್ಲಿ ಅಂಥ ಮತ್ಸರ ಮಕ್ಕಳಿಗೆ ತಾಕಲಿಕ್ಕಿಲ್ಲ. ಹಾಗೇ ವೈಯಕ್ತಿಕ ಬೆಳವಣಿಗೆಗೆ ಸಹಾಯವಾಗಬಲ್ಲದು.
ಕಾಲವು ಬದಲಾಗುವ ಸನ್ನಿವೇಶದಲ್ಲಿ ಹಿರಿಯ ತಲೆಮಾರಿಗೂ ಇಂದಿನ ತಲೆಮಾರಿಗೂ ಅಂತರವಿರುವುದೇ ಆದರೆ ಅವರಲ್ಲಿಯ ತತ್ವವನ್ನು ಅರಿತು ನಡೆದಾಗ ಇಬ್ಬರಿಗೂ ಕ್ಷೇಮವಲ್ಲವೇ.

 

Leave a Reply