ಕಡಲೂ ನಿನ್ನದೇ.. ಹಡಗೂ ನಿನ್ನದೇ… ಮುಳುಗದಿರಲಿ ಬದುಕು

ಕಡಲೂ ನಿನ್ನದೇ.. ಹಡಗೂ ನಿನ್ನದೇ… ಮುಳುಗದಿರಲಿ ಬದುಕು
ಬಹಳ ದಿನಗಳಿಂದ ಏನೂ ಬರೆದಿಲ್ಲ ಬರೆಯಲು ಮನಸ್ಸಾಗುತ್ತಿಲ್ಲ.  fb ತೆಗೆದರೆ ಸಾಕು ಮನ ಕಲಕುವ ಸುದ್ದಿಗಳು, ದೃಶ್ಯಗಳು… ಸಿದ್ಧಾರ್ಥ ಅವರ ನಿಧನದಿಂದಾದ ಕೆಟ್ಟ ಮೂಡು ಸರಿಹೋಯಿತು ಅನ್ನುವದರಲ್ಲಿ ಸುಷ್ಮಾ ಸ್ವಾರಾಜ ಅವರ ನಿಧನ. ಈ ಸುದ್ಧಿಯ ಹಿಂದೆಯೇ ಮಹಾ ಪ್ರಳಯದ ಭೀಕರತೆ. ಅದಕ್ಕೆ ಶಕ್ತಿಮೀರಿ ಸಹಾಯಕ್ಕಾಗಿ ಪ್ರಯತ್ನಿಸುತ್ತಿರುವ ಧಾರವಾಡ ಬಾಂಡ್ಸಗಳಂಥ ಹಾಗೂ ಇನ್ನಿತರ ಯುವ ಪಡೆಗಳ ನಿರಂತರ ಪ್ರಯತ್ನಗಳು ಹತಾಶ ಮನಸ್ಸುಗಳಿಗೆ ಮನಸ್ಸಿಗೆ ಧೈರ್ಯ, ಒಂದಿಷ್ಟು ಭರವಸೆಗಳನ್ನು ಕೊಡುತ್ತಿದ್ದಂತೆಯೇ ಅದಕ್ಕೆ ಸಡ್ಡು ಹೊಡೆದು ನಿಲ್ಲುವ ಪ್ರಕೃತಿ. ಅದರೆದುರು ಎಂಥ ಸಶಕ್ತರೂ ಅರೆಗಳಿಗೆ ದುರ್ಬಲವಾದರೆ ಆಶ್ಚರ್ಯವಿಲ್ಲ. ಎಲ್ಲಿ ನೋಡಿದರಲ್ಲಿ ಆಕ್ರಂದನ, ಅಳಲು, ಅಸಹಾಯಕತೆ..
ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ದೂರದ ಆಶೆಯಿದ್ದರೂ ನಂತರದ ಬದುಕುಕೂಡ ಸುಲಭವಾಗಿಲ್ಲ. ‘ಕುಂಬಾರನಿಗೆ ವರ್ಷ… ದೊಣ್ಣೆಗೆ ನಿಮಿಷ’ ಅಂದ ಹಾಗೆ ಕಟ್ಟುವದಕ್ಕೆ ಬೇಕಾದಷ್ಟು ಕಾಲ ಕೆಡುವದಕ್ಕೆ ಬೇಕಾಗಿಲ್ಲ. ಹೀಗಾಗಿ ಬದುಕು ಭರವಸೆಯದಲ್ಲ.. ಯಾರು ಯಾರಿಗೂ ಶಾಶ್ವತ ಸಹಾಯ ಮಾಡಲಾರರು. ಅವರಿಗೂ ಸ್ವಂತಕ್ಕೆ ಇರುವ ಇನ್ನಿತರ ಜವಾಬ್ದಾರಿಗಳಿಂದ ವಿಮುಖರಾಗುವ ಹಾಗೂ ಇರುವುದಿಲ್ಲ. ಅವರಿಗೂ ಅವರದೇ ವಿಷಯ ಪ್ರಾಶಸ್ಥಗಳಿರುತ್ತವೆ.. ಪ್ರವಾಹ ಪೀಡಿತರೂ ಸಹ ತಮ್ಮದು ಎನ್ನುವ ಎಲ್ಲವನ್ನೂ ಕಳೆದುಕೊಂಡು ಶಾರೀರಿಕ, ಆರ್ಥಿಕ, ಮಾನಸಿಕ ಕ್ಲೇಶಗಳಿಗೆ ಒಳಗಾಗಿರುವ ಕಾರಣದಿಂದ ತಾತ್ಕಾಲಿಕವಾಗಿ ಬುದ್ಧಿ ಕೆಲಸಮಾಡುವದಿಲ್ಲ. ಏನಾದರೂ ಮಾಡಬೇಕೆನ್ನುವವರಿಗೂ ತಲೆ ಓಡುವದೇಯಿಲ್ಲ. ಯಾವುದೋ ಒಂದು ರೀತಿಯ ಅವ್ಯಕ್ತ ಭಯ, ಅವಿಶ್ವಾಸ, ಕಾರಣವಿಲ್ಲದೇ ಶಂಕೆ ಅನುಮಾನಗಳಂಥ    panic attack    ಆದರೆ ಆಶ್ಚರ್ಯವಿಲ್ಲ.
ನಮ್ಮಂತೆ ಬಾಯಿಮಾತಿನಲ್ಲಿ ಚಡಪಡಿಸುವವರ ಸಂಖ್ಯೆಯ ಮುಂದೆ, ಬಂದದ್ದು ಬರಲಿ ಎಂದು ಎದೆ ತಟ್ಟಿ ನಿಲ್ಲುವವರ ಸಂಖ್ಯೆ ಕಡಿಮೆಯೇ.. ದಿನಗಳೆಯುತ್ತ ಹೋದಂತೆ ಒಮ್ಮೆ ಇದ್ದ ಭಾವನೆಗಳ ತೀವ್ರತೆ ಕಡಿಮೆಯಾಗುವ ಸಾಧ್ಯತೆಯೂ ಹೆಚ್ಚು…
ಮುಖ್ಯವಾಗಿ ಪರಿಹಾರೋಪಾಯಗಳಿಗೆ ಸಾಂಘಿಕ ಪ್ರಯತ್ನಗಳು ಬೇಕೇ ಬೇಕು… ಹತ್ತು ಜನ ಕೂಡಿದರೆ ಹತ್ತು ವಿಚಾರಗಳಿರುತ್ತವೆ, ಎಲ್ಲರಿಗೂ ತಮ್ಮ ಪ್ರಯತ್ನಕ್ಕೆ ಜನ ಮಾನ್ಯತೆ ಸಿಗಬೇಕೆಂಬುದೊಂದು ಕನಿಷ್ಠ ಬಯಕೆಯಿರುತ್ತದೆ. ಇದು ಖಂಡಿತಕ್ಕೂ ತಪ್ಪಲ್ಲ. ಅದು ಸ್ವಸಾಮಥ್ರ್ಯದ ಬೆಳವಣಿಗೆಗೆ ಪೂರಕವೂ ಹೌದು. ಎರಡು ಮೆಚ್ಚುಗೆಯ ಮಾತುಗಳು, ಬೆನ್ನು ಚಪ್ಪರಿಸುವಿಕೆ, ಸಾರ್ವಜನಿಕವಾಗಿ ಗುರುತಿಸಿಕೊಳ್ಳುವಿಕೆ ಇಂಥವರಿಗೆ ಬೇಕೆಬೇಕು. ಆದರೆ ಒಮ್ಮೆ ಜವಾಬ್ದಾರಿ ಹೆಗಲೇರಿಸಿಕೊಂಡಮೇಲೆ ಮೇಲಿನವುಗಳೆಲ್ಲ ಸಿಕ್ಕೇ ತೀರುವ ಭರವಸೆ, ವಚನಗಳನ್ನು ಯಾರೂ ಕೊಡಲಾರರು. ಅಂಥ ಸಂದರ್ಭಗಳಲ್ಲಿ ಮನಸ್ಸು ಹುಳಿಹುಳಿಯಾಗಬಾರದು ಎಂಬುವಷ್ಟಾದರೂ ಮನಸ್ಸು ದೃಡವಾಗಿಟ್ಟುಕೊಳ್ಳಬೇಕು. ಆಗ ಉಳಿದವರನ್ನು ದೂಷಿಸುವ, ಸ್ವಂತಕ್ಕೆ ಸಮರ್ಥಿಸಿಕೊಳ್ಳುವ ಸಾಧ್ಯತೆಗಳಿಂದ ದೂರ ಉಳಿಯಬಲ್ಲಷ್ಟು ವಿವೇಕಯುತ ಮನಸ್ಸು ಇಟ್ಟುಕೊಳ್ಳುವದು ಅನಿವಾರ್ಯ…..
ಮೇಲೆ ಬರೆದ ಮಾತೂಗಳೂ ಕೆಲಸ ಮಾಡುವವರನ್ನು ಧೈರ್ಯ ಗೆಡಿಸಲು ಖಂಡಿತ ಅಲ್ಲ. ಮಾಡಿದ ಉತ್ತಮ ಕೆಲಸಗಳ ಪ್ರಮಾಣ ಎಷ್ಟೇ ಕಡಿಮೆ ಇರಲಿ ಅದಕ್ಕೆ ಯಕ್ಕ ಪರಿಣಾಮ ಆಗೇ ಆಗಿರುತ್ತದೆ, ರಾಮ ಸೇತು ಬಂಧನದ ಕಾಲಕ್ಕೆ ಮಾಡಿದ ಅಳಿಲು ಸೇವೆಯಂತೆ.
ಸಂತ್ರಸ್ತರ ನೆರವಿಗೆ ನಿಂತ ಸಮಸ್ತರಿಗೂ ಎರಡೂ ಕೈಯತ್ತಿ ನಮಸ್ಕಾರ. ನಿಮ್ಮ ಸಹಾಯ, ಉದ್ದೇಶ, ಸಾಮಥ್ರ್ಯ ಎಲ್ಲವೂ ಫಲ ನೀಡಲಿ. ಈ ಉತ್ತಮ ಸಂಸ್ಕಾರ ನಿಮ್ಮ ಕೈ ಹಿಡಿಯುತ್ತದೆ. ಶೀಘ್ರವಾಗಿ ಸಮಸ್ಯೆಗಳು ಪರಿಹಾರ ಕಾಣಲಿ. ನಿಮ್ಮ ಸಹಾಯ ಸಾರ್ಥಕತೆ ಪಡೆಯಲಿ. ಇದು ನಮ್ಮಂಥ ಹಿರಿಯರ ಕೈಲಾಗದ, ಸುಮ್ಮನೇ ಕುಳಿತು ನೋಡಲು ಮನಸ್ಸೂ ಆಗದವರ ಹೃತ್ಪೂರ್ವಕ ಹಾರೈಕೆ… ಆಶಯ… ಆತ್ಮೀಯ ಬೆನ್ನು ಚಪ್ಪರಿಸುವಿಕೆ.
ಅಷ್ಟೇ.. ಮತ್ತೇನಿಲ್ಲ.

Leave a Reply