ಕೆಲವಮ್ಮೆ ‘ಹೊಳೆಯದಿರುವದೂ’ ಚಿನ್ನವೇ

ಕೆಲವಮ್ಮೆ ‘ಹೊಳೆಯದಿರುವದೂ’ ಚಿನ್ನವೇ…

ನಾವು ಈ ಮನೆಗೆ ಬಂದು ಮೂರು  ವರ್ಷಗಳಾಗಿದೆ… ಗಡಿಬಿಡಿಯಲ್ಲಿ shift   ಆದ ಕಾರಣ ಬಾಕಿ ಇದ್ದ ಕೆಲ ಚಿಕ್ಕ ಪುಟ್ಟ ಕೆಲಸಗಳಾಗಬೇಕಿತ್ತು.   Association  ನವರು  ಒಬ್ಬನನ್ನು  ಕರೆತಂದು ಇವನು ನಿಮ್ಮಲ್ಲ ಕೆಲಸ  ಮಾಡುತ್ತಾನೆ ಎಂದು ಪರಿಚಯಿಸಿ  ಹೊರಟು ಹೋದರು… ಅವನನ್ನು ನೋಡಿದಾಗ ನನಗೆ ತಟ್ಟನೇ ರವೀಂದ್ರನಾಥ ಟಾಗೋರರ ಕಕಾಬೂಲಿವಾಲಾ ನೆನಪಾದ …. ದೊಡ್ಡ ಆಕಾರ, ಸಡಿಲು ಬಟ್ಟೆ, ಮುಖ ಕಾಣದಷ್ಟು ಗಡ್ಡ, ಮೀಸೆ… ಸುಣ್ಣ ಬಣ್ಣದ ಕೆಲಸವಾದ್ದರಿಂದ ಆಗಲೇ ಸಾಕಷ್ಟು ಬಣ್ಣ ಬಣ್ಣಗಳಿಂದ ಮೂಲ ಬಣ್ಣವೇ ತಿಳಿಯದಂಥ ಬಟ್ಟೆ, ಮಿಶ್ರ ಬಣ್ಣದ ಪೆಂಡಿ ಪೆಂಡಿ ತಲೆಕೂದಲು… ನೋಡಿದಕೂಡಲೇ ಮನೆಯಲ್ಲಿಒಬ್ಬಳೇ ಇದ್ದ ನಾನು ಮಿನಿಯ ತಾಯಿ ಕಾಬೂಲಿವಾಲಾನ ದರ್ಶನವಾದಾಗ ಬೆಚ್ಚಿದಂತೆ ಬೆಚ್ಚಿದೆ.

ನನ್ನ ಒಳತೋಟಿ ಅರಿಯದ ಕೆಲಸದವ ಮೇಲೆ ಹೋಗಿ ಕೆಲಸ ಪ್ರಾರಂಭಿಸಿದ. ಸ್ವಲ್ಪವೂ ಸದ್ದಿಲ್ಲದೇ ಅರ್ಧ ದಿನ ಕಳೆದು ಅವನು ಊಟದ ಸಮಯದಲ್ಲಿ ಹೊರಟು ಹೋದ ಮೇಲೆಯೇ ನಾನು ನಿರಾಳವಾಗಿ ಒಂದೆಡೆ ಕುಳಿತಿದ್ದು… ಈ ಮೊದಲೇ ಹೇಳಿದಂತೆ ನಾಲ್ಕೈದು ದಿನದ ಕೆಲಸವಿದ್ದು ಮರುದಿನವೇ ಮನೆ ಮಂದಿಯಲ್ಲ ಅನಿವಾರ್ಯವಾಗಿ ಹೊರಗೆ ಹೋಗಲೇಬೇಕಾದ,  ಆದರೆ ಅವನಿಗೆ ರಜೆ ಹೇಳಲಾಗದ ಸಂದಿಗ್ಧ. ಕೆಲಸದವಳೂ ಮನೆಯಲ್ಲಿ ಒಬ್ಬಳೇ ಇರಲೇಬೇಕಾಗಿ ಬಂದ ಕಾರಣ ಹೆಚ್ಚು ಆತಂಕ… ಅವಳಿಗೆ ಯಾವುದೇ ಬಾಗಿಲು ಬಂದ್ ಮಾಡದೇ ಆದಷ್ಟೂ ಮೇಲಿನ ಕೆಲಸ ಬಿಟ್ಟು ಕೆಳಗಿನದೇ ಕೆಲಸ ಮಾಡಿಕೊಂಡಿರಲು ಹೇಳಿ ಮತ್ತೆ ಮತ್ತೆ ಎಚ್ಚರಿಸಿದ್ದಲ್ಲದೇ ಪಕ್ಕದ ಮನೆಯವರಿಗೆ ಆಗಾಗ ಸಾಧ್ಯವಾದರೆ ಬಂದು ಐದು ಹತ್ತು ನಿಮಿಷ ಅವಳೊಡನೇ ಇದ್ದು ಹೋಗಲು ಬಿನ್ನವಿಸಿಕೊಂಡದ್ದೂ ಆಯಿತು… ಕೋಣೆಯೊಳಗೆ ಅಜ್ಜಿ ಮಲಗಿದ್ದಾರೆ…. ಹೆಚ್ಚು ಸಪ್ಪಳ ವಾಗುವುದು ಬೇಡ ಎಂದು ಅವನಿಗೆ ಒಂದು ಪುಟ್ಟ ಸುಳ್ಳು ಹೇಳಲೂ ಸೂಚಿಸಲಾಯಿತು. ನಮ್ಮ ದೈವ ಕೆಲಸದವಳೂ ಎಲ್ಲದ್ಕೂ ಹೂಗುಟ್ಟಿ ನಮ್ಮನ್ನು ಕಳಿಸಿದಳು… ನಾವು ಸಾಯಂಕಾಲ ಮರಳಿ ಬಂದಾಗ ಎಲ್ಲ  ಯಥಾ ಸ್ಥಿತಿ ಇದ್ದುದನ್ನು ಕಂಡು ಎರಡುದಿನ ನಿರಾಳವಾಗಿ ಕಳೆದದ್ದರ ಬಗ್ಗೆ ಸಮಾಧಾನ…

ಮರುದಿನ ನಮ್ಮ ಕೆಲಸದವಳು ಹಿಂದಿನ ದಿನದ ವರದಿ ಒಪ್ಪಿಸಿದ ಮೇಲಂತೂ ನಮ್ಮ ಮೂರ್ಖತನಕ್ಕೆ ನಮಗೇ ನಾವೇ ನಾಚಿಕೆ….. ಇಡೀ ದಿನ ಒಂದು ಚೂರೂ ಸದ್ದಿ ಲ್ಲದೇ ಎಲ್ಲ ಸಾಮಾನುಗಳನ್ನು ತಾನೇ ಹೊಂದಿಸಿಕೊಂಡು ಕೆಲಸ ಮಾಡಿದ್ದು, ಹೊರಗೆ ಹೋಗುವಾಗ ಬಾಗಿಲು ಹಾಕಿಕೊಳ್ಳುವಂತೆ ನಿವೇದುಸಿಕೊಂಡದ್ದು, ಚಹ ಬೇಕೇ ಎಂಬ ಪ್ರಶ್ನೆಗೆ, ಬೇಡಮ್ಮಾ, ನಿಮ್ಮ ಕೆಲಸದಲ್ಲಿ ತೊಂದರೆ ಬೇಡ…. ನಾನು ಕುಡಿದೇ ಬಂದಿದ್ದೇನೆ… ಹೆಚ್ಚು ಕುಡಿಯುವ ಅಭ್ಯಾಸ  ಇಟ್ಟುಕೊಂಡಿಲ್ಲ ಅಂದದ್ದು ಕೆಲಸದ ಕೊನೆಗೆ ಆದಷ್ಟೂ ಜಾಗ    clean    ಮಾಡಿ ಸಾಮಾನುಗಳನ್ನು ಸುವ್ಯವಸ್ಥಿತವಾಗಿ ಹೊಂದಿಸಿದ್ದು ಒಂದೆರಡು ಬಾಟಲಿ ಕುಡಿಯುವ ನೀರು ಬಿಟ್ಟು ಯಾವುದಕ್ಕೂ ತೊಂದರೆ ಕೊಡದಿದ್ದುದು… ಹೆಚ್ಚು ಒಳ ಹೊರಗೆ ಅಡ್ಡಾಡದೇ ತಾನಾಯ್ತು, ತನ್ನ ಕೆಲಸವಾಯ್ತು ಅಂತಿದ್ದುದು… ಎಲ್ಲ ಹೇಳಿದಾಗ ಅಚ್ಚರಿಯು ಜೊತೆಗೆ  ಆನಂದ ಕೂಡ ಆದದ್ದು ಸುಳ್ಳಲ್ಲ…

ಮುಂದೆರಡು ದಿನ ನಾನೇ ಇದ್ದು ಕೆಲಸಮಾಡಿಸಿಕೊಂಡಾಗ  ಅವಳು ಹೇಳಿದ್ದು ಹದಿನಾರಾಣೆ ಸತ್ಯವೆಂದು ತಿಳಿಯಲು ಬಹಳಹೊತ್ತು ಹಿಡಿಯಲಿಲ್ಲ… ಕೆಲಸವೆಲ್ಲ ಮುಗಿಸಿ ಹೊರಟು ನಿಂತಾಗ ಮನೆಯ ಸದಸ್ಯನೊಬ್ಬನನ್ನು  ಕಳಿಸಿಕೊಟ್ಟಂಥ ಆತ್ಮೀಯತೆ ಇತ್ತು…… FACE IS THE INDEX OF MAN    ಅನ್ನುವದು ಸದಾ ನಿಜವಲ್ಲ…. ಹೊರಗೆ ಕಾಣುವ  ಆಧಾರದ ಮೇಲೆ  ವ್ಯಕ್ತಿತ್ವ ನಿರ್ಣಯ ಅಸಾಧ್ಯ… ಎಂಬುದನ್ನು ಅರ್ಥೈಸಿಕೊಂಡೆ… ಸೂಟು ಬೂಟು ಧರಿಸಿ, ಸುಳ್ಳು ನಯ ನಾಜೂಕಿನಿಂದ ಮರುಳು ಮಾಡಿ ಹಿತೈಷಿಗಳಂತೆ ಬಂದು ಎಷ್ಟೋ ಸಲ ವಂಚಿಸುವದನ್ನು ದಿನ ನಿತ್ಯ ನೋಡುವ, ಕೇಳುವ, ಓದುವ ನಾವು ಎಲ್ಲರನ್ನೂ ಅನುಮಾನಿಸುವ ಸ್ವಭಾವದರಾಗಿದ್ದರೆ ಯಾರನ್ನು ದೂಷಿಸಬೇಕು? ತಪ್ಪು ಯಾರದು?

Leave a Reply