ಕೌಲಗಿ ಸ್ವಾಮಿರಾಯರೂ…. ಮಾವಿನ ಹಣ್ಣಿನ ಸೀಕರಣೆಯೂ…

ಕೌಲಗಿ ಸ್ವಾಮಿರಾಯರೂ…. ಮಾವಿನ ಹಣ್ಣಿನ ಸೀಕರಣೆಯೂ…

ಇವತ್ತ ಧಾರವಾಡ bonds ದಾಗಿನ ಸೀಕರಣೆ post ಗಳು ಎಷ್ಟು ಸಿಹಿ ಮತ್ತ ಖಮ್ಮಗ ಇದ್ವು ಅಂದ್ರ ನಾನು ಪೂರಾ ಬೆಂಗಳೂರಿನ್ಯಾಗ ಇದ್ದದ್ದು ಮರೆತು ಹೆಂಬ್ಲಿ ಓಣಿಯ ನನ್ನ ಮನೆಗೆ Shift ಆಗಿಬಿಟ್ಟೆ. ಈಗ ಆ ಜಾಗದಲ್ಲಿ ಆಗಿದ್ದ ಮನೆಯಿಲ್ಲ RCC ಚಂದದ ಮನಿ ಆಗೇದ. ಆದ್ರ ಹೆಂಬ್ಲಿ ಓಣಿ ಅಂದ್ರ ಅದೊಂದು ನೆನಪಿನ ಮೆರವಣಿಗಿ…. ಒಂದು ಓಣಿಯ ಹೆಸರಲ್ಲ…. ಅದೂ ಎಂಥಾ ನೆನಪುಗಳು ಅಂದ್ರ ಇವತ್ತಿಗೂ. ಎಪ್ಪತ್ನಾಲ್ಕು ವರ್ಷ ನಡದಾವ ಅಂದ್ರೂ, ಇಪ್ಪತ್ನಾಲ್ಕರ ಕನಸುಗಳು. ಅವೂ ಬಹುರೂಪ ದರ್ಶಕದಾಗ ಹಾಕಿಟ್ಟ ಬಳೆಚೂರುಗಳಂತೆ ಒಂದು ಕೈ ಕುಲುಕಿಗೆ, ಒಂದು ಸಣ್ಣ ಕಂಪನಕ್ಕೆ ಚಿತ್ರವೇ ಬದಲು, ವರ್ಷದ ಮೊದಲ ಹಬ್ಬ ಸಂಕ್ರಾಂತಿಯಿಂದ ಹಿಡಿದು ಕಾರ್ತಿಕದ ತುಳಸಿ ಮದುವೆಯ ವರೆಗೂ ಬದಲಾಗುವ ಹಬ್ಬಗಳ ಹಿಂದೆ ಬದಲಾಗುವ ನೆನಪುಗಳು.

ನಮ್ಮವರಿಗೆ ನಾಟಕ ಮೊದಲ ಪ್ರೀತಿ, ನಂತರ ಮಕ್ಕಳು, ತದ ನಂತರ ಮಾವಿನ ಹಣ್ಣುಗಳು. ನನ್ನ ನಂಬರ್ ಎಷ್ಟು ಅನ್ನುವ ಗುಟ್ಟನ್ನು ಕೊನೇವರೆಗೂ ಬಿಟ್ಟುಕೊಡದ ಗಟ್ಟಿಗ. ಮೊದಲ ಹಣ್ಣಿನ ರಾಶಿ ಪೇಟೆಯಲ್ಲಿ ಕಂಡಿತೋ ಮುಗಿಯಿತು ಕಥೆ. ಇಡೀ ಜಗತ್ತು ಹಳದಿ Plan ಮಾಡಲ ಶುರು. ಸೀಕರಣೆ ಅಂದರೆ ಎರಡು ಜೀವ. ಮೂರು ಹೊಟ್ಟೆ. ಒಂಚೂರೂ ಗಡಿಬಡಿಸದೇ ಪಂಚೇದ್ರಿಯಗಳನ್ನು ಬಳಸಿ ಅಂದರೆ ಮುಟ್ಟಿ, ಮೂಸಿ, ಮತ್ತೆ ಮತ್ತೆ ತಿರುಗಿಸಿ ನೋಡಿ. ತುಂಡೊಂದು taste ನೋಡಿ, ಆಹಾ!!!! ಉದ್ಗಾರ ಬಂದರೆ ಅರ್ಧ ಯುದ್ಧ ಗೆದ್ದಂತೆ. ನಂತರ rate bargaining ಬಿಟ್ಟು ಹೋಗುವ ಹಂಗಾಮಿ ಗಿರಾಕಿಯಲ್ಲ ಎಂದು ತಿಳಿದ ಇವರ ಕಾಯಂ ಅಂಗಡಿಯವನೂ ಅವರಷ್ಟೇ ಜಿದ್ದಿನ ಆಸಾಮಿ, ಆಯ್ತು “ನೀ ಸ್ವಲ್ಪ ಸತ್ಹಂಗ ಮಾಡು, ನಾ ಇಷ್ಟ ಅತ್ಹಂಗ ಮಾಡ್ತೇನಿ” ನಾಟಕ ಆಗಿ, ಇವರು ಬಿಡಿಸಿದ್ಹಂಗ ಅವ ಬಿಟ್ಹಂಗ ಒಂದಿಷ್ಟು ಪ್ರಹಸನ ನಡೆದ್ರ ಖರೀದಿ ಕೊನೆಯ ಹಂತಕ್ಕ ಬಂದ್ಹಂಗ.

ಮನಿಗೆ ಹಣ್ಣು ಬಂದ ಮ್ಯಾಲ ಯುದ್ಧದ ದ್ವಿತಿಯ ಅಧ್ಯಾಯ. “ಬಿಲ್ಕುಲ್ ನೀರು ಹಾಕಿ ಸೀಕರಣೆ ಬೆಳದೊ ಹಂಗಿಲ್ಲ…. ಹಂಗೇನರ ಮಾಡ್ದಿ… ಒಂದು ಚಮಚ ರುಚಿ ನೋಡೋವಲ್ಲ ನಾನು” ಎಂನ ನಿರಂತರ ಧಮಕಿ. ಮೇಲೆ ಸರ್ಪಗಾವಲು ಅನುಮಾನ…. ಬಹಳಷ್ಟು ಸಲ ಗಲಾಟೆಗೆ ಜಪ್ಪಯ್ಯ ಅಂದ್ರೂ ನಾನು ಮಾವಿನ ಹಣ್ಣು ಕೈಲೆ ಮುಟ್ಟುತಿರಲಿಲ್ಲ. ಅವರೂ ‘ವಜ್ರಾದಪಿ ಕಠೋರಾಣಿ’ ಈ ವಿಷಯದಾಗ… (ಮಾಮೂಲು “ಮೃದೂನಿ ಕುಸುಮಾದಪಿ”).

ಸೀಕರಣಿ ಮಾಡೋ ಹಿಂದಿನ ದಿನ ನಾಲ್ಕು ಸಲ, ‘ಇವತ್ತ ರಾತ್ರಿ ಸ್ವಲ್ಪು ಕಡಿಮಿ ಊಟ ಮಾಡ್ಬೇಕು. ನಾಳೆ ಸೀಕರಣಿ ಊಟ’ ಅಂತ್ಹೇಳಿ ಹೊಟ್ಯಾಗ ಜಾಗ reservation ಮಾಡಿ ಇಡೋರು. ‘ಸೀಕರಣಿ  main ಇರಬೇಕು. ಚಪಾತಿ ತುಂಡು ಅದಕ್ಕ ಚಮಚಾದ ಕೆಲಸ ಮಾಡಬೇಕು. ಅನ್ನೋದು ಅವರ ಧ್ಯೇಯ ವಾಕ್ಯ.

ಒಂದೆರಡು ತಿಂಗಳು ಮ್ಯಾಲ ಮ್ಯಾಲ ಇಂಥ ಊಟ ಆದಮ್ಯಾಲ ಪರಿಸ್ಥಿತಿ ಸ್ವಲ್ಪು ಹಿಡಿತಕ್ಕ ಬಂದ ಲೆಕ್ಕ… ಅಲ್ಲಿಯ ತನಕ “ಯಾಕರ ಈ ದಏವರು ಮಾವಿನಹಣ್ಣು ಸೃಷ್ಟಿ ಮಾಡಿದ್ದಾನು” ಅಂದುಕೊಂಡದ್ದು ಅದೆಷ್ಟು ಸಲವೋ…

ಈಗಲೂ ಆ ಹೆಂಬ್ಲಿ ಓಣಿ ಇದೆ. ಅದೇ market  ಇದೆ. ಸಾಕಷ್ಟು ಮಾವಿನ ಹಣ್ಣಿನ ರಾಶಿಯಿದೆ. ಅವರಿಚ್ಚೆಯಂತೆ ಮಾಡಲು ನಾನಿದ್ದೇನೆ. ಆದರೆ ಕಾಡಲು ಅವರೇಯಿಲ್ಲ.

 

Leave a Reply