ಲಾಕ್‍ಡೌನ್‍ನಿಂದಾದ ಬದಲಾವಣೆಗಳು

ಲಾಕ್‍ಡೌನ್‍ನಿಂದಾದ ಬದಲಾವಣೆಗಳು
“ಆಂಟೀ, ನಾಳಿಗೆ ಅದೇನೋ ಲಾಕ್‍ಡೌನ್ ಅಂತಲ್ರೀ.. ರಸ್ತೇನ್ಯಾಗ ಹೊರಬಿದ್ರ ಪೋಲೀಸ್‍ನವ್ರು ತೊಗೊಂಡ ಹೋಗತಾರಂತಲ್ರೀ..”
ನಮ್ಮನೀ ಕೆಲಸದಾಕಿ ಹೇಳಿದ್ಲು.
“ಹೌದವಾ.. ನಾಳೀಗೊಂದ ದಿನಾ ಅಲ್ಲಾ.. ಇದು ಒಂದನೇ ತಾರೀಖಿನ ತನಾ ಮುಂದುವರೀತದಂತನಸತದ. ಕೆಲಸಕ್ಕ ಬರಬ್ಯಾಡಾ ನೀ ಈ ಲಾಕ್‍ಡೌನ್ ತೆರವಾಗೂ ತನಕಾ. ಇದು ಭಾಳ ಕೆಟ್ಟ ವೈರಸ್ ಅದ.”
“ಅದ ಹ್ಯಾಂಗ ಇರತದರಿ? ಸೊಳ್ಳಿ ಇದ್ದಂಗ ಇರತದೇನರಿ?”
“ಇಲ್ಲವಾ. ಅದು ಕಣ್ಣಿಗೆ ಕಾಣಂಗಿಲ್ಲಾ… ಉಗುಳಿದರ, ಸೀನಿದರ ಅದರ ಜೋಡೀ ಹಬ್ಬತದ… ಯಾರನೂ ಮುಟ್ಟಿಸಿಕೋಳೋದೂ, ಉಸರ ತಾಕಿಸ್ಕೊಳ್ಳೂದು ಮಾಡಬಾರದು” ಎಂದು ಹೇಳಿ ಅವಳ ಆ ತಿಂಗಳ ಪಗಾರ ಕೊಟ್ಟು ಕಳಿಸಿದೆ. ಹಾಗೆಯೇ ಭಕ್ರಿ ಮಾಡುವವರಿಗೂ ಬಾಯ್ ಹೇಳಿದ್ದಾಯ್ತು.
ಈಗ ನನ್ನ ಸ್ವಾವಲಂಬನೆ ಪ್ರಾರಂಭ ಆಗಿತ್ತು. ಮಾರನೆಯ ದಿನ.. ಹೊಸದಾಗಿ ಅಗಸ ಗೋಣಿ ಎತ್ತಿ ಎತ್ತಿ ಒಗದಾಂತ… ಕಸ, ನೆಲ, ಸ್ನಾನದ ನಂತರ ಬಟ್ಟೆ ಮಶಿನ್‍ಗೆ ಹಾಕುವುದು, ತಿನಸು, ಅಡಿಗೆ ಎಲ್ಲಾದರಾಗೂ ಉತ್ಸಾಹ…
“ನೋಡರಿ, ನಾವ ಮಾಡ್ಕೊಳ್ಳೂದ ಎಷ್ಟು ಛೊಲೋ ಇರತದ… ಯಾರದೂ ದಾರಿ ಕಾಯೋದ ಬ್ಯಾಡಾ.. ಅವರಕೆಲಸರೆ ಏನು, ಕಾಡೂ ದೇವರ ಕಾಟಾ ಕಳಧಂಗ… ಹೀಂಗ ಬಂದ್ರೂ ಅನ್ನೋದರಾಗನ ಹೊಂಟರss… ಸಂದಿ ಮೂಲೀ ಒಂದಿನಾನರೆ ಹೇಳಲಾರದ ಸ್ವಚ್ಛ ಮಾಡತಾರೇನು..”
ಎನ್ನುತ್ತಾ ತಿಕ್ಕಿದ್ದೇ ತಿಕ್ಕಿದ್ದು… ತೊಳೆದದ್ದೇ ತೊಳೆದದ್ದು! ನನ್ನ ಪತಿ ಮಹಾಶಯ “ಭಾಳ ತ್ರಾಸ ಮಾಡ್ಕೋಬ್ಯಾಡಾ… ಏನರೇ ಜ್ವರಾ, ಗಿರಾ ಬಂದ್ರ ಈ ದಿನದಾಗ ಯಾವ ಡಾಕ್ಟರ್ ಸೈತಾ ಸಿಗಂಗಿಲ್ಲಾ.. ನಾನೂ ಒಂದಷ್ಟು ಸಹಾಯ ಮಾಡತೇನಿ… ” ಎಂದರೂ ಕೇಳಲಿಲ್ಲ. ಎರಡೇ ದಿನಗಳಲ್ಲಿ ಮೈ ಕೈ ನೋವು ಪ್ರಾರಂಭ ಆಗಿತ್ತು.. ನಸಿನಸಿ ಜ್ವರವೂ ಕಾಣಿಸಿತ್ತು. ಶುಂಠಿ ಕಷಾಯ ಕುಡಿದಾಗ ಸ್ವಲ್ಪ ಆರಾಮೆನ್ನಿಸಿತ್ತು.
ಈಗ ನನ್ನವರೂ ನನಗೆ ತರಕಾರಿ ಹೆಚ್ಚಿಕೊಡುವ, ಒಂದೆರಡು ಬಾರಿ ಚಹಾ ಮಾಡುವ ಕೆಲಸಗಳನ್ನು ವಹಿಸಿಕೊಂಡರು. ಈಗ ಕಾಯಿಪಲ್ಯ ತೊಳೆಯುವ ಕೆಲಸವಂತೂ ಬಹಳ ಲೆಬೋರಿಯಸ್ ಆಗಿತ್ತು. ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ಇದಕ್ಕೇ ಮೀಸಲು. ಸೊಪ್ಪನ್ನು ತಿನ್ನುವ ಸೋಡಾ, ಉಪ್ಪುಗಳಿಂದ ತೊಳೆದರೆ ದಪ್ಪ ಸಿಪ್ಪೆಯ ಹಣ್ಣು, ಕಾಯಿಪಲ್ಲೆಗಳನ್ನು ಡೈಲ್ಯೂಟೆಡ್ ಡಿಶ್ ವಾಶಿಂಗ್ ಲಿಕ್ವಿಡ್‍ನಿಂದ ತೊಳೆಯುವುದು. ನಂತರ ಒರೆಸುವುದು! ಈ ಕೆಲಸವನ್ನು ಜಾಯಿಂಟ್ ವೆಂಚರ್‍ನಲ್ಲಿ ಮಾಡತೊಡಗಿದೆವು.
ಈಗ ಮನೆಯಲ್ಲಿ ವೈವಿಧ್ಯಮಯ ತಿನಿಸುಗಳು ತಯಾರಾಗತೊಡಗಿವೆ. ಅದಕ್ಕೆ ಪೂರಕವಾಗಿ ಫೇಸ್ಬುಕ್‍ನಲ್ಲಿ ಬರುವ ತರಹೇವಾರಿ ತಿಂಡಿ, ಊಟಗಳ ಫೋಟೋ, ರೆಸಿಪಿ…! ಬೆಳಿಗ್ಗೆ ತಿಂಡಿಗೊಂದು ತರಹದ್ದಾದರೆ ಊಟಕ್ಕೆ ಇನ್ನೊಂದು ತರಹ. ಬಿಸಿ ಬಿಸಿ ಭಕ್ರಿ, ಚಪಾತಿಗಳು ತಟ್ಟೆಗೇ ಸೀದಾ! ಹೀಗಾಗಿ ಊಟದಲ್ಲಿ ಆಸಕ್ತಿ ಹುಟ್ಟಿದೆ. ಮಧ್ಯಾಹ್ನ ಸ್ವಲ್ಪ ಕುರುಕಲು… ರಾತ್ರಿ ಊಟದಲ್ಲಿ ಇದರಿಂದಾಗಿ ಆಸಕ್ತಿ ಕಡಿಮೆ ಆಗಿದೆಯೆನ್ನಬಹುದು.
ಈಗ ನನಗೂ ಸಂದಿ ಮೂಲೆಗಳಲ್ಲಿ ಆಸಕ್ತಿ ಕಡಿಮೆಯಾಗಿದೆ. “ಪಾಪ, ಕೆಲಸದವರಿಗೆ ಅನ್ನೂದ ತಪ್ಪರೀ.. ನಮ್ಮದೊಂದ ಮನೀದನ ಕೆಲಸಾ ನಮಗ ಒಮ್ಮೊಮ್ಮೆ ಬ್ಯಾಸರಾಗತದ.. ಪಾಪ! ಅವರಿಗೆ ಇಂಥಾವು ಏಳೆಂಟು ಮನೀ ಕೆಲಸಾ… ಅದಕ್ಕನ ಹಂಗ ಬ್ಯಾಸರ ಮಾಡ್ಕೋತಾರ!” ಎನ್ನುವ ಜ್ಞಾನದ ಉದಯವೂ ಆಗಿದೆ.
ತರಕಾರಿಗಳನ್ನು ಕೊಳ್ಳುವಾಗ ಮೊದಲಿನ ಕೊಸರು, ಚೌಕಾಸಿ ಎಲ್ಲವೂ ಬಂದ್. ಪಾಪ, ಆ ಜನರು ಹೊತ್ತು ಮಾರಲು ಬರುತ್ತಾರೆ.. ಈಗ ಬಿಲ್ಡಿಂಗ್ ಕೆಲಸವಿಲ್ಲ, ಮನೆಗೆಲಸವಿಲ್ಲ.. ಸಾಕಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ.. ಅವರಿಗೆ ನಾವು ಕೈಯೆತ್ತಿ ಕೊಡಲಾಗದಿದ್ದರೂ ಹೀಗಾದರೂ ಸ್ವಲ್ಪ ಸಹಾಯ ಮಾಡಬಹುದಲ್ಲವೇ ಎಂಬ ಯೋಚನೆ. ಇನ್ನು ಪ್ರತಿ ದಿನ ಹೂವು ಮಾರುವ ನಮ್ಮ ಲಕ್ಷ್ಮಣ… ಅವನು ಯಾವಾಗಲೂ ಚೌಕಾಸಿಯವನಲ್ಲ.. ಅಕ್ಕಾ, ಇದು ದೇವ್ರಿಗೆ, ಇದು ನಿನಗೆ” ಎಂದು ಇನ್ನೊಂದು ಚೂರನ್ನು ಕೊಟ್ಟು ಹೋಗುವವ.. ಈಗ ಪಾಪ, ಹೂವಂತೂ ಯಾರೂ ಕೊಳ್ಳುವವರೇ ಇಲ್ಲ… ನಾನು ಹೂವು ತೆಗೆದುಕೊಂಡರೂ ತುಳಸಿಯ ಕಟ್ಟೆಗೆ ಹಾಕಿ ಬಿಡುವ ರೂಢಿ ಮಾಡಿದ್ದೇನೆ…
ಒಂದು ವಿಚಿತ್ರ ಎಂದರೆ ಈಗ ಭಿಕ್ಷೆ ಬೇಡುವವರೆ ಕಾಣುವುದಿಲ್ಲ. ಎಲ್ಲರೂ ದುಡಿಮೆಗೇ ಹತ್ತಿದ್ದಾರೆ. ಶಾಲೆ ಕಲಿಯುವ ಮಕ್ಕಳು ಕೂಡ ಹಣ್ಣು, ತರಕಾರಿ ಎಂದು ಮಾರಲು ಬರುತ್ತಾರೆ. ತೂಕ, ಅಳತೆ ಎಲ್ಲಾ ಅತ್ಯಂತ ಕರಾರುವಾಕ್ಕು. ನಮಗೂ ಮನೆ ಬಾಗಿಲಿಗೆ ವಸ್ತುಗಳು ಬರುತ್ತವೆ… ಅವರಿಗೂ ಲಾಭ…
ಈಗ ಮನೆ ಬಾಗಿಲಿಗೆ ಬರುವ ಇಸ್ತ್ರಿಯವ ಬರುವುದಿಲ್ಲ. ಹೀಗಾಗಿ ಅದೂ ನಮ್ಮ ಕೆಲಸವೇ ಆಗಿದೆ. ಬಟ್ಟೆಗಳು ಹೆಚ್ಚು ಹೊಲಸೂ ಆಗುವುದಿಲ್ಲ.. ಜೋಡಿಸುತ್ತ ಇಟ್ಟಾಗ ಮಾತ್ರ ಒಂದೇ ಬಾರಿಗೆ ಹೆಚ್ಚು ಎನ್ನಿಸಿತ್ತು. ನಮ್ಮವರು ಬೆನ್ನು ನೋವೆಂದಾಗ ನಾನೂ ಕೈ ಜೋಡಿಸುತ್ತೇನೆ. ಈಗ ಇಬ್ಬರೂ ಸಹಾಯ, ಸಹಕಾರಗಳಿಂದ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದೇವೆ. ಈಗ ಇಬ್ಬರಲ್ಲೂ ಭಿನ್ನಾಭಿಪ್ರಾಯಗಳೂ ಅತ್ಯಂತ ಕಡಿಮೆ ಆಗಿವೆ. ಈ ಸಮಯ ಒಬ್ಬರನ್ನೊಬ್ಬರು ಅರಿಯಲು, ಸಹಾನುಭೂತಿಯಿಂದ ವರ್ತಿಸಲು ಸಹಾಯವಾಗಿದೆ ಎಂದು ನನಗೆನ್ನಿಸುತ್ತದೆ.
ಸ್ವಲ್ಪ ತೊಂದರೆಯಾದದ್ದು ನಮ್ಮವರಿಗೆ. ಅವರಿಗೆ ಈ ವಯಸ್ಸಿನಲ್ಲಿ ಕೂಡ ತಲೆಕೂದಲಿನ ಬೆಳವಣಿಗೆ ಬಹಳ. ಈ ಎರಡೂವರೆ ತಿಂಗಳಿನಲ್ಲಿ ಅವರ ಕೂದಲು ಹೊರೆಯಾಗಿ ಬೆಳೆದಿತ್ತು. ಸಲೂನುಗಳೂ ಬಂದ್. ಅಲ್ಲದೆ ಸಲೂನುಗಳಿಂದಲೂ ಹರಡುವ ಸಮಸ್ಯೆ ಹೆಚ್ಚಾಗಿತ್ತಲ್ಲ! ನಾನೇ ಕತ್ತರಿಸುವುದಾಗಿ ಹೇಳಿದೆ. ಮೊದಮೊದಲು ಒಪ್ಪಲಿಲ್ಲ. ಫೇಸ್ಬುಕ್ ಪುಟದಲ್ಲಿ ಬರುತ್ತಿದ್ದ ಕಿವಿ ಕತ್ತರಿಸಿದ ಫೋಟೋ ಬಹುಶಃ ಅವರನ್ನು ಹೆದರುವಂತೆ ಮಾಡಿತ್ತೇನೋ! ನಂತರ ಒಂದು ದಿನ ಒಪ್ಪಿದ್ದರು. ಜೀವನದಲ್ಲಿ ಮೊದಲಬಾರಿಗೆ ಅದೂ ಆಯಿತು.. ಹೆಂಡತಿ ಜೇಬಿಗಷ್ಟೇ ಅಲ್ಲ, ತಲೆಗೂ ಕತ್ತರಿಹಾಕುವವಳು ಎಂಬುದು ಪ್ರೂವ್ ಆಯಿತು!
ನನಗೆ ಈಗ ಬರೆಯಲು, ಓದಲು ಹೆಚ್ಚಿನ ಸಮಯ ಸಿಗುತ್ತದೆ. ಅನೇಕ ರೀತಿಯ ಬರವಣಿಗೆಯಲ್ಲಿ ತೊಡಗಿದ್ದೇನೆ. ನನ್ನದೊಂದು ಹಾಸ್ಯ ಪ್ರಬಂಧ ಸಂಕಲನ ಪ್ರಿಂಟ್‍ಗೆ ಹೋಗಿದೆ. ಈಗ ಫೇಸ್ಬುಕ್ ಪುಟದಲ್ಲಿ ಅನೇಕ ಗುಂಪುಗಳಲ್ಲಿ ಬರೇಯುತ್ತೇನೆ. ಇಲ್ಲಿ ಬಂದ ಬಹಳಷ್ಟು ಲೇಖನಗಳನ್ನು ಓದುತ್ತೇನೆ. ಬಹಳ ಮೌಲಿಕ ಲೇಖನಗಳು ಇಲ್ಲಿ ಓದಲು ಸಿಗುತ್ತವೆ. ಒಬ್ಬ ಲೇಖಕಿ ನೂರಾರು ಸುಂದರ ಕಥೆಗಳನ್ನು ಒದಗಿಸಿದರೆ ಇನ್ನೊಬ್ಬರು ಎದ್ದಿರಾ, ಮಲಗಿದ್ರಾ ಎಂದು ನಮ್ಮನ್ನು ಮೌಲಿಕ ಚಿಂತನೆಗೆ ಹಚ್ಚುತ್ತಾರೆ.. ಈಗ ಅನೇಕ ರೀತಿಯ ಥೀಮ್‍ಗಳೂ ಪ್ರಾರಂಭ ಆಗಿವೆ.. ಸ್ವಲ್ಪ ಸಮಯ ಟಿವಿ ಸುದ್ದಿ, ಮಹಾಭಾರತ, ರಾಮಾಯಣ ವೀಕ್ಷಣೆಗೆ!
ಈಗ ಕೆಲಸದವರೂ ಬರುತ್ತಲಿದ್ದಾರೆ. ಅವರೂ ಮಾಸ್ಕ್ ಮತ್ತು ಸ್ವಚ್ಛತೆಯ ಕಡೆಗೆ ಗಮನ ವಹಿಸುತ್ತಿದ್ದಾರೆ. ಹೀಗೆಯೇ ನಡೆದಿದೆ ಜೀವನ…
ಆದರೆ, ಪ್ರತಿ ಸಾರಿಗೊಮ್ಮೆ ಈ ಕೈ ತೊಳೆಯುವ ಕೆಲಸ ಮಾತ್ರ ಬೇಸರವೆನ್ನಿಸಿದೆ…
**

Leave a Reply