ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ

ನಿಜ. ಮದುವೆಗಳೇನೋ ಸ್ವರ್ಗ ದಲ್ಲೇ ನಡೆಯುತ್ತವೆ.. ಅಂದರೆ ದೇವರು ನಮ್ಮ ಜೊತೆಗಾರನನ್ನು ಅಲ್ಲಿಯೇ ಜೋಡಿಸಿಯೆ ಕಳಿಸಿದ್ದರೂ ಇಲ್ಲಿ ಅವನನ್ನು ಈ ಕೋಟಿಗಟ್ಟಲೆ ಜನರಲ್ಲಿ ಹುಡುಕುವ ಪ್ರಕ್ರಿಯೆ ನಡೆಯಬೇಕಲ್ಲ… ಅದೇ ಕಷ್ಟದ ಕೆಲಸ. ಜಾತಕ ಹೊಂದಿಸಿ, ಮನೆ ಮನೆತನಗಳನ್ನು ಪರೀಕ್ಷಿಸಿ ಮಾಡುವ ಮದುವೆಗಳೂ ಕೂಡ ಒಮ್ಮೊಮ್ಮೆ ತಪ್ಪು ಅಡ್ರೆಸ್ಗೆ ಹೋಗಿ ಮಿಸ್ಡ್ ಮೇಲ್ ಡೆಲಿವರಿ ಆಗುವುದುಂಟು. ಇದೊಂದು ಮಧುರ ಬಂಧ. ಇಲ್ಲಿ ಮನಸ್ಸುಗಳು ಹೊಂದಬೇಕೇ ಹೊರತು ಜಾತಕಗಳಲ್ಲ. ಅದನ್ನು ನಾವು ತಿಳಿಯುವ ಅಥವಾ ತಿಳಿಹೇಳುವ ಪ್ರಯತ್ನ ಮಾಡಬೇಕಲ್ಲ!
ಪುರಾಣ, ಇತಿಹಾಸದ ಪುಟಗಳಲ್ಲಿ  ನಾವು ಗಾಂಧರ್ವ ವಿವಾಹ, ಪ್ರೇಮ ವಿವಾಹ, ಸ್ವಯಂವರ ಎಂದು ಅನೇಕ ರೀತಿಯ ವಿವಾಹಗಳನ್ನು ಕಂಡಿದ್ದೇವೆ.  ಈಗಲೂ ಕೂಡ ಈ ಮದುವೆಗಳಲ್ಲಿ ಅನೇಕ ವಿಧಗಳಿವೆ. ಹಿರಿಯರು ನಿಶ್ಚಯಿಸಿದ ಮದುವೆ, ಲವ್ ಮ್ಯಾರೇಜ್ ಅಂದರೆ ಪ್ರೇಮವಿವಾಹ, ಅಂತರ್ಜಾತೀಯ ವಿವಾಹ, ಇಷ್ಟೇ ಅಲ್ಲ, ಅಂತರ್ಜಾಲ ವಿವಾಹ!
ಇದಾವ ರೀತಿಯ ವಿವಾಹವಪ್ಪ… ಎನ್ನದಿರಿ.. ಫೇಸ್ಬುಕ್ನಲ್ಲಿ ಅಥವಾ ವಾಟ್ಸಾಪ್ ಗ್ರುಪ್ ನಲ್ಲಿ ಪ್ರೀತಿ ಹುಟ್ಟಿ ಯಡವಟ್ಟು…. ಛೇ ಛೇ ವಿವಾಹ ಆಗೋದು. ಇದು ಕೇಳಲು ಇಂಪೇನೋ ಸರಿ… ಅಲ್ಲದೆ ಚಹಾ ಅವಲಕ್ಕಿ ಖರ್ಚಿಲ್ಲದೆ ಕನ್ಯಾ ಪರೀಕ್ಷೆ, ಹೋಳಿಗೆ ಯ ಖರ್ಚಿಲ್ಲದೇ ಆಗುವ ಸರಳ ವಿವಾಹ. ಆದರೆ ವಿವಾಹವಾದರೆ ಮುಗಿಯಲಿಲ್ಲ. ಅದು ಪ್ರಾರಂಭ ಎನ್ನುವುದು ಈಗಿನ ಯುವಜನಾಂಗಕ್ಕೆ ಅರಿವಿಲ್ಲ.
ಈಗ ಅಂತರ್ಜಾತೀಯ ವಿವಾಹವನ್ನೇ ತೆಗೆದುಕೊಳ್ಳೋಣ. ಆ ಜೋಡಿಗೆ ತಮ್ಮ ಬದುಕನ್ನು ತಮಗೆ ಸರಿ ಎನ್ನಿಸಿದಂತೆ ರೂಪಿಸಿಕೊಳ್ಳಲು ಹಕ್ಕಿಲ್ಲವೆ? ಇಲ್ಲವೆನ್ನುತ್ತಾರೆ ಪಾಲಕರು.. ಸಮಾಜ.. ಇದರಿಂದಾಗಿ ಆ ಜೋಡಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಾತೀಯತೆಯ ಭೂತಕ್ಕೆ ಮತ್ತಷ್ಟು ಆಜ್ಯ ಹಾಕಿದಂತಾಗುತ್ತಿದೆ. ಕೆಲವೊಮ್ಮೆ ಇದರಿಂದಾಗಿ ಎರಡೂ ಕೋಮಿನವರಲ್ಲಿ ಹೊಡೆದಾಟ, ಕೊಲೆ ಕೂಡ ನಡೆಯುತ್ತವೆ. ಆ ಜೋಡಿ ಅರಳುವ ಮುನ್ನವೇ ಮುರುಟಿದ್ದೂ ಉಂಟು.  ಸಮಾಜದಲ್ಲಿಯ ನೀತಿ ನಿಯಮಗಳು ಸಡಿಲಗೊಳ್ಳಬೇಕು. ಮನಸ್ಸುಗಳು ಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಂಡಲ್ಲಿ ಮಾತ್ರ ಆ ಜೋಡಿ ಸುಖವಾಗಿರಲು ಸಾಧ್ಯ.
ಇನ್ನು ಹಿರಿಯರು ನಿ‌ಶ್ಚಯಿಸಿದ ವಿವಾಹ. ಇವು ಹೆಚ್ಚು ಸೇಫ್ ಎನ್ನಬಹುದು. ಆದರೆ ಒಂದು ಭೆಟ್ಟಿಯಲ್ಲಿ ಹುಡುಗ ಅಥವಾ ಹುಡುಗಿಯ ಗುಣ, ಸ್ವಭಾವಗಳ ಪರಿಚಯ ಹೇಗಾಗಲು ಸಾಧ್ಯ? ಕೆಲವೊಮ್ಮೆ ರೂಪ ಲಾವಣ್ಯಗಳ ಥಳುಕಿಗೆ ಬಲಿಯಾಗಿಯೋ ಶ್ರೀಮಂತಿಕೆಗೆ ಮಾರುಹೋಗಿಯೋ  ವಿವಾಹವಾಗಿ ನಂತರ ಜೀವನವಿಡೀ ಗೋಳಾಡುವವರೂ ಇದ್ದಾರೆ. ಹಾಗೆಂದು ಎಲ್ಲರೂ ಹಾಗೇ ಎಂತಲ್ಲ. ಕೆಲವರಿಗೆ ಲಕ್ಕು ಚೆನ್ನಾಗಿದ್ದು ಸಂತೋಷವಾಗಿಯೂ ಇದ್ದಾರೆ.
ಇನ್ನೂ ಒಂದು ರೀತಿಯ ವಿವಾಹ ಇತ್ತೀಚೆಗೆ ತುಂಬಾ ಫೇಮಸ್ ಆಗಿದೆ. ಐಟಿ ಬೀಟೀ ಹುಡುಗ ಹುಡುಗಿಯರು ಈಗ ಆಫೀಸಿಗೆ ಅಂದರೆ ಕೆಲಸಕ್ಕೆ ಎಂಟರ್ ಆದಕೂಡಲೆ ಒಂದು ಮನೆ, ವೆಹಿಕಲ್ ಇವುಗಳ ವ್ಯವಸ್ಥೆ ಆದ ನಂತರ ಪಿಲಿಯನ್ ಸೀಟು ಭರ್ತಿ ಮಾಡುವ ಯೋಚನೆ ಮಾಡತೊಡಗುತ್ತಾರೆ. ಯಾವ ಹುಡುಗ ಹುಡುಗಿಯರು  ಮದುವೆಗೆ ಯೋಗ್ಯ ವಯಸ್ಸಿನವರಿದ್ದಾರೆ, ನೋಡಲೂ ತಕ್ಕ ಮಟ್ಟಿಗೆ ಇದ್ದರೂ ನಡೆದೀತು.. ಆದರೆ ಕೈತುಂಬಾ ಗಳಿಸುವುದು ಮಾತ್ರ ಕಂಪಲ್ಸರಿ.. ಏಕೆಂದರೆ ಮಕ್ಕಳು… ಅವರ ಶಿಕ್ಷಣ.. ಇದೆಲ್ಲಾ ದುಬಾರಿ ಆಗಿಬಿಟ್ಟಿದೆ.. ಎಂದೆಲ್ಲ ಯೋಚಿಸಿ ಬಲೆ ಸಿದ್ಧಗೊಳಿಸುತ್ತಾರೆ… (ಒಂದಿಷ್ಟು ಒರಟಾಗಿದ್ದರೆ ಕ್ಷಮಿಸಿ) ನಂತರ ಆಫರ್ ಮಾಡುವುದು. ಎಲ್ಲ ಸರಿಯಾದ ನಂತರ ಅಪ್ಪ ಅಮ್ಮನ ಕಿವಿಗೆ ಹಾಕುವುದು. ಮದುವೆ… ಇದು ಕೂಡ ಇತ್ತೀಚೆಗೆ ಬಹಳ ಜನಪ್ರಿಯವಾಗಿಬಿಟ್ಟಿದೆ.
ಇದಕ್ಕೆ ಕಾರಣವೂ ಇದೆ. ಈಗ ಹುಡುಗಿಯರ ಸಂಖ್ಯೆ ಕಡಿಮೆಯಾಗಿದೆ. Demand and supply ರೇಖೆಗಳಲ್ಲಿ ಅಸಮತೋಲನ ಬಂದಿದೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಗಂಡು ಹುಟ್ಟಿದರೆ ಪ್ಲಸ್, ಹೆಣ್ಣು ಹುಟ್ಟಿದರೆ ಮೈನಸ್ ಎನ್ನುವುದು ಸಾಮಾನ್ಯವಾಗಿತ್ತು. ಹೆಣ್ಣು ಹೆತ್ತವರು ಗಂಡಿನ ಮನೆಯ ಎಲ್ಲ ಸದಸ್ಯರ, ಅಷ್ಟೇ ಅಲ್ಲ, ಅವರ ಮನೆಯ ನಾಯಿ ಬೆಕ್ಕಿನ ನಖರೆ ಕೂಡ ಸಹಿಸಿಕೊಳ್ಳಬೇಕಾಗುತ್ತಿತ್ತು, ಮದುವೆಯಾಗುವವರೆಗೆ(!). ಕಾಲ ಬದಲಾದಂತೆ ಗಂಡಿನ ಸಂಖ್ಯೆ ಸರ್ ಪ್ಲಸ್ ಆದಂತೆ ಹುಡುಗಿಯರು ಹುಡುಗರ ಸ್ಥಾನ ಆಕ್ರಮಿಸಿದ್ದಾರೆ. ಈಗೆಲ್ಲಾ ಇಂಟರ್ವ್ಯೂ ಅಂದರೆ ವರಪರೀಕ್ಷೆಗಳಲ್ಲಿ, ನಿಮ್ಮ ಮನೆಯಲ್ಲಿ ವೇಸ್ಟ್ ಬಾಡಿ ಎಷ್ಟಿವೆ, ನಮ್ಮ ಮದುವೆಯ ನಂತರ ಅವು ನಮ್ಮಲ್ಲಿ ಬಂದುಇರಬಾರದು, ನಿಮ್ಮ ತಂದೆ ತಾಯಿಗೆ ಸ್ವಂತ ಮನೆಯಿರಬೇಕಾದದ್ದು ಕಡ್ಡಾಯ.. ಎಂದೆಲ್ಲ ಕರಾರುಗಳು! ಹೀಗೆಲ್ಲ ಅಪಮಾನ ಅನುಭವಿಸುವುದಕ್ಕಿಂತ ಅವರವರೇ ನಿಶ್ಚಯಿಸಿಕೊಳ್ಳುವುದೇ ಬೆಟರ್ರು. ಹೋಗಿ ನಾಲ್ಕು ಅಕ್ಷತೆ ಹಾಕಿಬಂದರಾಯಿತು ಎನ್ನುವ ಮಟ್ಟಕ್ಕೆ ನಿರಾಶರಾಗಿಬಿಟ್ಟಿದ್ದಾರೆ ಗಂಡು ಹೆತ್ತವರು.
ಒಟ್ಟಿನಲ್ಲಿ ವಿವಾಹ ಎನ್ನುವುದು ಅಂದೂ ಸಮಸ್ಯೆಯೇ.. ಇಂದೂ ಸಮಸ್ಯೆಯೇ.
ಮಾಲತಿ ಮುದಕವಿ

Leave a Reply