ಮಕರ ಸಂಕ್ರಮಣ…ಈಗೆಲ್ಲಾ ಭಣಭಣ…

ಮಕರ ಸಂಕ್ರಮಣ…ಈಗೆಲ್ಲಾ ಭಣಭಣ…
‌‌‌‌
‌‌” ಇವತ್ತ ಪ್ರಾರ್ಥನಾ ಆದಮ್ಯಾಲ ಒಂದನೇಯ ಪೀರಿಯಡ್ ನಡಿಯೂದಿಲ್ಲ, ಎಲ್ಲಾರೂ ಆ ಪೀರಿಯಡ್ನ್ಯಾಗ ಹೆಚ್ಚು ಗದ್ದಲಾ ಮಾಡದ ಉಳಿದ ಎಲ್ಲಾರ್ಗೂ ಎಳ್ಳು ಕೊಡಬಹುದು. ಇಡೀ ದಿನ ಕಂಡ ಕಂಡಲ್ಲೆ ಅದೊಂದನ್ನsss ಮಾಡಕೋತ ತಿರಗ್ಬಾರ್ದಂತ ಈ ವ್ಯವಸ್ಥೆ ಮಾಡೇವಿ, ಸರೀಯಾಗಿ ಒಂದು ತಾಸಿಗೆ ಮೊದಲನೇ ಗಂಟೆ ಆಗ್ತದ ,ಆಗ ಎಲ್ಲಿದ್ರೂ ಬಂದು class ಸೇರ್ಕೋಬೇಕು.ಎರಡನೇ ಬೆಲ್ ಗೆ ಟೀಚರ್ ಒಳಗ ಬರೋದ್ರೊಳಗ ಒಬ್ಬನೇ ಒಬ್ಬ ವಿದ್ಯಾರ್ಥಿ ಹೊರಗ ಕಾಣೋ ಹಂಗಿಲ್ಲ.ತಿಳಿತಿಲ್ಲೋ?”- ಶಾಲೆಯೊಳಗ ಪ್ರತಿವರ್ಷ ಜನೆವರಿ ೧೫ ರ ಪ್ರಾರ್ಥನೆಯ ನಂತರದ ಕಡ್ಡಾಯ ಘೋಷಣೆಯಿದು. ಸಂಕ್ರಾಂತಿ ದಿವಸ ಎಲ್ಲ ಶಾಲೆಗಳಿಗೆ ರಜೆ ಘೋಷಣೆಯಾಗಿರ್ತಿತ್ತು.ಶಿಕ್ಷಕ- ಶಿಕ್ಷಕಿಯರಿಗೆ ಎಳ್ಳುಕೊಡಬೇಕೆಂಬ ಮಕ್ಕಳ ಉತ್ಸಾಹಕ್ಕೆ ಭಂಗ ಬರಬಾರದೆಂಬ ಕಾರಣಕ್ಕೆ ಮಾಡಿಕೊಂಡ ವ್ಯವಸ್ಥೆಯಿದಾಗಿತ್ತು.announcement ಒಂದು ತಾಸಿನದಾದರೂ, ಮಕ್ಕಳನ್ನೆಲ್ಲ
ಬೋನಿನೊಳಗೆ ಹಾಕಲು ಮತ್ತೂ ಅರ್ಧ ಗಂಟೆ ಹಿಡಿಯುತ್ತದೆಂಬುದು ಎಲ್ಲರಿಗೂ ಗೊತ್ತಿದ್ದ open Secret.
ಆ ಒಂದು ಗಂಟೆ ಶಾಲಾ ಆವರಣದಲ್ಲಿ ಹದಿನಾರಾಣೆ ‘ಮಕ್ಕಳ ರಾಜ್ಯ’.ಅವರಿಗೆ ಆಗ ಯಾವ ಟೀಚರ್ ಏನೂ ಮಾಡಲಾಗುವದಿಲ್ಲ ಎಂಬ ಖಾತ್ರಿ, ಖದರು.ಗುಂಪು ಗುಂಪಾಗಿ ಕೈಯಲ್ಲಿ ಎಳ್ಳು ಹಿಡಿದು ಅಲ್ಲಿ- ಇಲ್ಲಿ- ಎಲ್ಲೆಂದರಲ್ಲಿ
ಮಕ್ಕಳ ದಂಡೇ ದಂಡು.ಸೀನಿಯರ್ ಟೀಚರುಗಳಂತೂ ಮಕ್ಕಳ ಕೈಗೆ ಸಿಕ್ಕು ಬೀಳುವ ಮೊದಲೇ staff room ಗೆ ಕ್ಷೇಮವಾಗಿ ತಲುಪಿ ಕುರ್ಚಿಯಲ್ಲಿ ಕೂಡಲು ಒದ್ದಾಡುವದೂ ಇತ್ತು.ಮಕ್ಕಳು ಒಮ್ಮೆ ಸುತ್ತುಗಟ್ಟಿ ಮುತ್ತಿಗೆ ಹಾಕಿದರೆ ‘ಅಭಿಮನ್ಯು’ವಿನಂತೆ ಚಕ್ರವ್ಯೂಹ ಹೊಕ್ಕು ಸಿಕ್ಕು ಬಿದ್ದ ಪರಿಸ್ಥಿತಿ.
ಸರಿ, ಒಮ್ಮೆ ಎಳ್ಳುಕೊಡುವದು ಶುರುವಾಯಿತೋ,- ಶುರು, ಮಕ್ಕಳ ಸುನಾಮಿ.ಅಂದು ಯುನಿಫಾರ್ಮಗೆ ಸೂಟಿ, ಕಾರಣ ಕಣ್ಣಮುಂದೆ ಬಣ್ಣ ಬಣ್ಣದ ಪಾತರಗಿತ್ತಿಗಳು- ಕೈಯಲ್ಲಿ, ಕಾಗದದ ಪುಡಿಕೆಗಳಲ್ಲಿ, ಚಿಕ್ಕ ಚಿಕ್ಕ ಗಾಜಿನ ಕುಡಿಕೆಗಳಲ್ಲಿ,ಸ್ಟೀಲ್ ಡಬ್ಬಗಳಲ್ಲಿ, ವಿವಿಧ ಬಗೆಯ ಎಳ್ಳುಗಳನ್ನು ತುಂಬಿಕೊಂಡು ಕೊಡಲು ಕಾತರಿಸುವದನ್ನು ನೋಡುವದೇ ಒಂದು
ಮೋಜು.ಬೇಗ ಕೊಡಬೇಕು,ಮೊದಲು ಕೊಡಬೇಕು,ಆದಷ್ಟು ಹೆಚ್ಚು ಜನರಿಗೆ ಕೊಡಬೇಕು- ಏನೆಲ್ಲಾ ಕಾತುರ ಆ ಮಕ್ಕಳಿಗೆ.ಅತಿ ಚಿಕ್ಕ ಮಕ್ಕಳಂತೂ ನಾಲ್ಕೈದು ಕೈಯಲ್ಲಿ ಹಿಡಿದು,ಹೆಚ್ಚಾಯ್ತು ಎಂದು ಎರಡು ಡಬ್ಬಿಗೆ ಪರತ ಹಾಕಿಕೊಂಡು ಭಯ-ಭಕ್ತಿಯಿಂದ ಕೊಟ್ಟು ಮೇಜು/ ಕುರ್ಚಿ ತಲೆಗೆ ಬಡಿಯಬಹುದು ಎಂಬುದನ್ನೂ ಮರೆತು ಕಂಡಲ್ಲಿ ಕಾಲಿಗೆ ಬೀಳುತ್ತಿದ್ದರು. ಹದಿಹರೆಯದವರಿಗೆ ಶಿಕ್ಷಕರಿಗೆ ಆಪ್ತರಾಗುವ ಅವಕಾಶ. ಕೆಲವರು ಕೈ ಮುಗಿಯುವವರಾದರೆ, ಕೆಲವರು ಕೈಕುಲುಕುವವರು.ಎಲ್ಲವೂ ಅವರವರ ಭಾವಕ್ಕೆ…ಅವರವರ ಭಕುತಿಗೆ…ನಾವೆಲ್ಲ ಸಕ್ಕರೆಯ ಎಳ್ಳುಗಳನ್ನು ಸರಿಸಿ ಬದಿಗಿಟ್ಟು ಎಳ್ಳು ಬೆಲ್ಲ,ಕೊಬ್ಬರಿ,ಸೇಂಗಾದ ದೇಶೀ ಎಳ್ಳುಗಳನ್ನು ಬಾಯಿಗೆ ಎಸೆದುಕೊಳ್ಳುತ್ತ ಕಾರ್ಯಕ್ರಮದ ಮೋಜು ಒಂದು ಗಂಟೆ ಅನುಭವಿಸುತ್ತಿದ್ದೆವು.ಕೆಲ ಮಕ್ಕಳಂತೂ
ಸಾಲಿನಲ್ಲಿ ಕುಳಿತ ಶಿಕ್ಷಕಿಯರನ್ನು ನೋಡುತ್ತ ತಮ್ಮ ಕ್ಲಾಸಿಗೆ ಕಲಿಸದವರನ್ನು Skip ಮಾಡಿ ಮುಂದೆ ಮುಂದೆ ಹೋಗುತ್ತಿದ್ದುದನ್ನು ಕಂಡು ನಮ್ಮ ನಮ್ಮಲ್ಲಿಯೇ ಹುಸಿನಗು ನಕ್ಕು ನಂತರ ಮಜಾ ಉಡಾಯಿಸುವದೂ ಇತ್ತು.ಕೆಲ ಚಾಣಾಕ್ಷ/ಉಡಾಳ ಹುಡುಗರು ತಾವು ಕೊಡದೇ ನಾವು ಎಳ್ಳು ತಿರುಗಿ ಕೊಡುವಾಗ ಗದ್ದಲದಲ್ಲಿ ಮುಂದೆ ಬಂದು ಎಲ್ಲರಿಗಿಂತ ಹೆಚ್ಚಿನ ಪಾಲು ಪಡೆದು ಗೆಳೆಯರಿಗೆ ಮೊದಲೇ challenge ಮಾಡಿ ಗೆದ್ದಂತೆ ಅವರಿಗೆ ಅಣಕಿಸಿ ಬೀಗುವದೂ ಇರುತ್ತಿತ್ತು.ಅಲ್ಲಿ ಎಳ್ಳು ಪಡೆದ ಖುಶಿಗಿಂತ ಇತರರನ್ನು ಯಾಮಾರಿಸಿದ ಜಾಣತನದ ಹೆಮ್ಮೆಯೇ ಅಧಿಕ.ಅಷ್ಟು ಹೊತ್ತಿಗೆ ಮೊದಲ ಬೆಲ್ ಆಗಿ ನಾವೆಲ್ಲ ಕಣಕ್ಕಿಳಿದು, ಚದುರಿ ಅತ್ತಿತ್ತ ಹೋದ ದನಗಳನ್ನು ಒಂದು ಕಡೆ ತರಲು ಗುದ್ದಾಡುವ ದನಕಾಯುವವನಂತೆ
ಬಯಲಲ್ಲೆಲ್ಲ ಓಡಾಡಬೇಕಿತ್ತು.ಅದೂ ಸುಲಭವಾಗದೇ ‘ಓಡು- ಹಿಡಿ’ ಆಟವಾಗಿ ಅದರಲ್ಲೂ ಮಕ್ಕಳು ಆನಂದಿಸಿದರೆ, ನಮಗೆ 1500 mtr ಓಟ ಮಾಡಿ ಮುಗಿಸಿದ ಏದುಸಿರು…
ಮುಖ್ಯಾಧ್ಯಾಪಕರ ರಂಗಪ್ರವೇಶ ಪ್ರಕರಣದ ಕೊನೆಯ ಅಂಕ.ಅವರ ಅವಕೃಪೆಗೆ ಒಳಗಾಗುವಷ್ಟು ಧೈರ್ಯ ಇನ್ನೂ ಆಗಿನ‌ ಮಕ್ಕಳಿಗೆ ಇರಲಿಲ್ಲ. ಅಂತೂ ಮಾರ್ಜಿನ್ನಿನ ಅರ್ಧಗಂಟೆ ಮುಗಿಯುವದರಲ್ಲಿ ಎಲ್ಲಾ ಸುಖಾಂತವಾಗಿ ಮುಗಿದು ‘The end’
ಪರದೆಯ ಮೇಲೆ ಬರುತ್ತಿತ್ತು. ನಂತರ ಸಮಯ/ ಮೂಡು/ ಪಿರಿಯಡ್ off / ಅಂತೇನಾದರೂ ಸಿಕ್ಕರೆ ನಾವೆಲ್ಲಾ ಸಹೋದ್ಯೋಗಿಗಳು ಒಬ್ಬರಿಗೊಬ್ಬರು ಎಳ್ಳು ಕೊಟ್ಟುಕೊಂಡು,-
‘ ಎಳ್ಳು ಬೆಲ್ಲ ತೊಗೊಂಡು ಒಳ್ಳೇ ಮಾತಾಡೋಣ’-
‘ ತಿಳಗುಳ್ ಘ್ಯಾ…ಗೊಡ್ಗೊಡ್ ಬೋಲಾ’
‘ Take sweet… Be sweet…’
‘Happy Sankranti’…
-ಗಳ ವಿನಿಮಯ ಮಾಡಿಕೊಳ್ಳುತ್ತಿದ್ದೆವು.
ಆದರೆ ಆಗಿನ ಕಾಲದ ಮಕ್ಕಳ ಮನಸ್ಸುಗಳ ಮುಗ್ಧತೆ,ನೌಟಂಕಿ,ಸಂಭ್ರಮ,ಚಟುವಟಿಕೆ,ಪೈಪೋಟಿ,ಪಾರದರ್ಶಕತೆ,ನಿರ್ಮಲ ಮಂದಹಾಸ, ದಣಿವನ್ನೇ ಅರಿಯದ ನಿಲುವು, ಸಹಜ ಸುಂದರ ಪಕ್ಷಪಾತ,( ತಮಗೆ ಮಾತ್ರ ಕಲಿಸುವ teachers ಬಗ್ಗೆ,) ಇವುಗಳ ಮುಂದೆ ನಾವೆಂದಿಗೂ
ಸಪ್ಪೆ…ಸಪ್ಪೆ…
Leave a Reply