ಮಕ್ಕಳ ಮುಗ್ಧತೆ ಮಾಯವಾಗುತ್ತಿದೆಯೇ?

ಮಕ್ಕಳ ಮುಗ್ಧತೆ ಮಾಯವಾಗುತ್ತಿದೆಯೇ?
ಮಕ್ಕಳು  ದೇವರು ಎಂದೆನ್ನುವದೇ ಅವರಲ್ಲಿರುವ ಮುಗ್ಧತೆಯಿಂದಾಗಿ ಮಕ್ಕಳ ಮನಸ್ಸು ಹೂವಿನಂತಹುದು, ಅವರ ಭಾವನೆಗಳಿಗೆ ಸ್ಪಂದಿಸಿದಾಗ ಅವು ಅರಳುತ್ತವೆ. ಹಾಗಾಗದಾಗ ಬಾಡುತ್ತವೆ.
ಹಳೆಯ ಕಾಲದಲ್ಲಿ ಮಕ್ಕಳನ್ನು ಪಡೆಯುವುದಕ್ಕಾಗಿ ಘೋರ  ತಪಸ್ಸನ್ನಾಚರಿಸಿ, ದೇವರನ್ನು ಒಲಿಸಿ, ವರ ಪಡೆದು ಮಕ್ಕಳನ್ನು ಪಡೆಯುತ್ತಿದ್ದರು. ಆದರೆ ಇಂದು ದೇವರು ತಾನಾಗೇ  ಕೊಟ್ಟ  ಮಕ್ಕಳನ್ನು  ನೋಡಿಕೊಳ್ಳಲು ಬೇರೆಯವರನ್ನವಲಂಬಿಸಬೇಕಿರುವುದು ಎಂಥ ವಿಪರ್ಯಾಸವಲ್ಲವೇ? ಕೆಲವೇ ದಶಕಗಳ ಹಿಂದೆ ಮನೆತುಂಬ ಮಕ್ಕಳಿದ್ದರೂ, ಬಡತನವಿದ್ದರೂ ಅಂದಿನ ತಂದೆ-ತಾಯಿಗಳು ಎಂದಿಗೂ ಗೊಣಗಾಡದೇ, ಭಾರವೆನ್ನಿಸಿಕೊಳ್ಳದೇ ಜೋಪಾನ ಮಾಡುತ್ತಿದ್ದರು. ‘ಮಕ್ಕಳಿರಲವ್ವ ಮನೆತುಂಬ’, ‘ಅಷ್ಟಪುತ್ರ ಸೌಭಾಗ್ಯವತೀಭವ’ ಎಂಬ ಆಶೀರ್ವಾದಗಳಿಂದ ಹರಿಸಿ ಮನೆಯನ್ನು ನಂದಗೋಕುಲವನ್ನಾಗಿಸುತ್ತಿದ್ದರು.
ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮನೆಯ, ಮಕ್ಕಳ ಜವಾಬ್ದಾರಿಯನ್ನು ಆಯಾಗಳಿಗೆ ಒಪ್ಪಿಸಿ ತಾಯಿಯಾದವಳು ಹೊರಗೆ ದುಡಿಯುತ್ತಿರುವಳು. ಇಂದಿನ ಕಾಲಮಾನದಲ್ಲಿ ಅದು ಸಂಸಾರವನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡುವ ಅವಶ್ಯಕತೆಯೂ ಇದೆ. ಇಂದು ಮನೆಯಲ್ಲಿ ಮಕ್ಕಳು ಒಂದೋ, ಎರಡೋ ಅಷ್ಟೇ. ತಾಯ್ತಂದೆಗಳ ಡಬಲ್ ಇನ್ ಕಂ, ಭವ್ಯವಾದ ಬಿಕೋ ಎನ್ನುತ್ತಿರುವ ಬಂಗಲೆ ಅಥವಾ ಫ್ಲ್ಯಾಟ್ ನಲ್ಲಿ ಆಯಾಳ ಜೊತೆಗೆ ಏಕಾಂಗಿಯಾಗಿರುವುದು ಎಷ್ಟೊಂದು ಖೇದಕರವಲ್ಲವೇ? ಇಂದಿನ ಪ್ರಾಕ್ಟಿಕಲ್ ಪೇರೆಂಟ್ಸ್ ಕೂಡ ಸಾಕಷ್ಟು ದುಡಿದು ತಮ್ಮ ಕಾಲಕ್ಕೆ……. ಮಕ್ಕಳಿಗೆ……. ಮೊಮ್ಮಕ್ಕಳಿಗೆ……. ಅಂತೆಲ್ಲ ಆಸ್ತಿ ಅಂತಸ್ತುಗಳನ್ನು ಮಾಡುವಲ್ಲಿ ಹೆಣಗಾಡುತ್ತಿರುತ್ತಾರೆ. ಆದರೆ ಮಕ್ಕಳ ಇಂದಿನ ಅವಶ್ಯಕವಾದ ತಾವುಗಳು ಅವರಿಗೆ ಲಭ್ಯವಾಗದೇ, ತಮ್ಮ ಸಂಸ್ಕಾರಗಳನ್ನು ಅವರಲ್ಲಿ ಅರಳಿಸದೇ ಇಂಥ ಆಸ್ತಿಗಳನ್ನು ಅವರ ಕೈಯಲ್ಲಿಟ್ಟರೆ ಮಂಗನ ಕೈಯಲ್ಲಿ ಮಾಣಿಕ್ಯವಿಟ್ಟಂತೆಯೇ ಸರಿ.
ಬೆಳಗ್ಗೆಯಿಂದ ಸಂಜೆಯವರೆಗೂ ಆಯಾಳಿಗೆ ಮಕ್ಕಳನ್ನು ಒಪ್ಪಿಸಿ ಅಥವಾ ಬೇಬಿಸಿಟ್ಟಿಂಗ್ ನಲ್ಲಿ ಮಕ್ಕಳನ್ನು ಒಪ್ಪಿಸಿ ಸಾಯಂಕಾಲ ದುಡಿದು ಮನೆಗೆ ಬರುವ ತಾಯಿಗೆ ಮಗುವನ್ನು ನೋಡಿಕೊಳ್ಳುವ ತಾಳ್ಮೆಯಾದರೂ ಹೇಗೆ ಬರಬೇಕು. ಅಲ್ಲದೇ ಆಯಾ ಕೂಡ ಮಗುವಿನ ಬೇಕು-ಬೇಡಗಳನ್ನು ಪೂರೈಸುತ್ತಾಳಾದರೂ ಮಗುವಿನಲ್ಲಿ ಇಡೀ ದಿನ ತನ್ನದೇ ಸಂಸ್ಕಾರಗಳನ್ನು, ಕೀಳರಿಮೆಗಳನ್ನು ಬಿಂಬಿಸಿದಾಗ ಮಗು ಬೆಳೆದಂತೆಲ್ಲ ಅಭದ್ರತೆಯಿಂದ ನರುಳುವಂತಾದಾಗ ಎಷ್ಟು ದುಡ್ಡಿದ್ದೇನು ಪ್ರಯೋಜನೆ ಎಂದೆನಿಸುವುದಿಲ್ಲವೇ? ಇದನ್ನು ತಂದೆತಾಯಿಗಳು ಅರಿಯಬೇಕಾದದ್ದು ಅವಶ್ಯಕ.
ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುವ ಮಗು ಏಕಾಂಗಿತನವನ್ನು ಮರೆಯಲು ಟಿ.ವಿ.ಯನ್ನು ಅವಲಂಬಿಸುತ್ತಾ ಬೆಳೆಯುತ್ತದೆ. ಎಳೆಯ ಮನದ ಮೇಲೆ ಮೂಡುವ ಚಿತ್ರಗಳು ಕೊನೆಯವರೆಗೂ ಚಿತ್ತ ಭಿತ್ತಿಯ ಮೇಲೆ ಛಾಪನ್ನು ಒತ್ತುತ್ತಿರುತ್ತದೆ. ಇಂದಿನ ಟಿ.ವಿ. ಎಂಬ ರಾಕ್ಷಸ ತೋರಿಸುವ ಚಿತ್ರಗಳು, ಹಿಂಸೆ, ಮನಸ್ಸಿನ ತಲ್ಲಣಗಳು, ವಯಸ್ಸಿಗೂ ಮೀರಿದ ಅಸಹ್ಯಗಳು, ಅಪಸವ್ಯಗಳು ಮಗುವಿನ ಮುಗ್ಧತೆಯನ್ನು ಬೇಗನೆ ಕಳೆದು ಬಿಡುತ್ತವೆ. ಮೊದಲ ಐದು ವರ್ಷದ ಘಟ್ಟವು ಮಗುವಿನ ಮಾನಸಿಕ ಬೆಳವಣಿಗೆಗೆ ಮಹತ್ವವಾದದ್ದು. ಈಗ ಮಗುವಿನ ಒಡನಾಟ ತಂದೆತಾಯಿಗಳ ಜೊತೆಗೆ ಪ್ರೇಮಪೂರ್ವಕವಾಗಿದ್ದೇ ಆದರೆ ಮುಂದೆ ಈ ಬಂಧ ಗಾಢವಾಗಿರುತ್ತದೆ ಎಂದು ಹೇಳಬಹುದು.
ಮನುಷ್ಯನಿಗೆ ದುಡ್ಡು ಬೇಕು ನಿಜ. ಆದರೆ ದುಡ್ಡೇ ಸರ್ವಸ್ವವಲ್ಲ ಅಲ್ಲವೇ? ಆ ದುಡ್ಡಿಗೋಸ್ಕರ ತಮ್ಮದೇ ಸಂತಾನವನ್ನು ಬೇರೆಯವರಿಗೆ ಒಪ್ಪಿಸಿ ಅವರ ಸಂಸ್ಕಾರದಲ್ಲಿ ಬೆಳೆಸಲು ಆಸ್ಪದವೀಯುವುದು ಸರಿಯೇ? ಪ್ರೀತಿ ವಾತ್ಸಲ್ಯದ ಅವಶ್ಯವಿದ್ದಾಗ ಅವರಿಂದ ದೂರವಿದ್ದು ಮುಂದೆ ಮಕ್ಕಳು ಬೆಳೆದು ದೊಡ್ಡವರಾಗಿ ತಮ್ಮ ಗಮ್ಯವನ್ನು ತಾವು ನೋಡಿಕೊಂಡು ವೃದ್ಧಾವಸ್ಥೆಯಲ್ಲಿ ತಾಯ್ತಂದೆಗಳಿಗೆ ವೃದ್ಧಾಶ್ರಮಗಳ ಕಡೆಗೆ ಕೈತೋರಿದರೆ ಅದಕ್ಕೆ ಹೊಣೆ ಯಾರು?
ತಂದೆ ತಾಯಿಗಳು ನಿರ್ಮಿಸಿದ ಅಂತಸ್ತಿನ ಗೋಡೆಗಳು ಮಕ್ಕಳ ಮಧ್ಯದಲ್ಲಿ ಎದ್ದು ನಿಂತಿವೆ. ಪರಸ್ಪರರ ಮನೆಗೆ ಯಾವುದೇ ಆತಂಕವಿಲ್ಲದೇ, ಅಹಂಭಾವವಿಲ್ಲದೇ, ಮೇಲು ಕೀಳೆಂಬ ಭಾವವಿಲ್ಲದೇ, ಯಾವುದೇ ಜಾತಿಗಳ ಹಾವಳಿ ಇಲ್ಲದೇ ನಾವು ಗೆಳತಿಯರೊಂದಿಗೆ ಪರಸ್ಪರ ಆಡಿ ಅನುಭವಿಸಿದ ಬಾಲ್ಯದ ಸವಿ ಇಂದಿನ ಮಕ್ಕಳು ಅನುಭವಿಸಲಾರದೇ ಭಾವನಾತ್ಮಕವಾಗಿ ಸೊರಗುತ್ತಿವೆ. ಕೇವಲ ಟಿ.ವಿ., ಕಂಪ್ಯೂಟರ್ ಗೇಮ್ಸ್ ಗಳೇ ಇಂದಿನ ಮಕ್ಕಳ ಜೀವಾಳವಾಗಿವೆ. ಇದರಿಂದ ಮಕ್ಕಳ ಜನರಲ್ ನಾಲೆಡ್ಜ್ ಬೆಳೆಯುತ್ತದೆಯಾದರೂ ಆಂತರ್ಯದಲ್ಲಿ ಉತ್ಸಾಹದ ಚಿಲುಮೆ ಬಾಡಿ ಸೋರಿದರೇನುಪಯೋಗ?
ಮುಂದೆ ಸ್ಕೂಲು, ಹೊರೆಹೊರೆ ಹೋಂವರ್ಕ್ಸ್…… ಅಂತೆಲ್ಲ ನಳನಳಿಸಬೇಕಾದ ಮಗು ಎಳೆವಯಸ್ಸಿನಲ್ಲಿಯೇ ನಿಸ್ತೇಜತೆ ಹೊಂದುತ್ತಿದೆ. ಸಹಜವಾಗಿ ಅರಳಬೇಕಾದ ಮೊಗ್ಗು ಗಿಡದಲ್ಲಿಯೇ ಮುರುಟಿಕೊಂಡರೆಂಥ ನಷ್ಟವಲ್ಲವೇ?

Leave a Reply