ಮಕ್ಕಳಿವರೇನಮ್ಮ…. ನಮ್ಮ?

ಮಕ್ಕಳಿವರೇನಮ್ಮ…. ನಮ್ಮ?
ನಾವು ಚಿಕ್ಕವರಿದ್ದಾಗ ಕೂಡು ಕುಟುಂಬಗಳೇ ಹೆಚ್ಚು. ಮನೆಯಲ್ಲಿ ಅಜ್ಜ, ಅಜ್ಜಿ, ಕಾಕಾ, ಕಾಕು, ಅತ್ತೆ… ಅಮ್ಮ ಅಪ್ಪನಂತೂ ಸೈಯೇ ಸೈ. ನಮ್ಮ ಬಾಲ್ಯದಲ್ಲಿ ನಮಗೆ ನಮ್ಮ ಪಾಲಕರು ಕೊಡುತ್ತಿದ್ದ ಮೊದಲ ಪಾಠ ಹಿರಿಯರನ್ನು ಗೌರವಿಸಿ ಎಂಬುದು. ಅಜ್ಜನಂತೆ ನಟನೆ ಮಾಡುತ್ತ ಕೆಮ್ಮಿದರೆ, ಅಜ್ಜಿಯಂತೆ ಸೀನಿದರೆ, ದೊಡ್ಡರಿಂದ ಬೈಸಿಕೊಳ್ಳುತ್ತಿದ್ದೆವು. ಅವರು ಒಳಗಿನಿಂದ ಕೂಗಿದರೆ ಇದ್ದಲ್ಲಿಂದ ಓಡಿ ಹೋಗಬೇಕು. ಇಲ್ಲವಾದರೆ ದೊಡ್ಡವರು ಬೈಯುತ್ತಿದ್ದರು. ಮನೆಯ ಎಲ್ಲ ನಿರ್ಣಯಗಳೂ ಅವರ ನೇತೃತ್ವದಲ್ಲಿಯೇ ನಡೆಯಬೇಕು. ಅವರ ಮಾತೇ ಅಂತಿಮ. ಅವರಿಗೆ ಎದುರಾಡುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ಈಗ ಕಾಲ ಬದಲಾಯಿತು. ವಿದ್ಯೆಯನ್ನು ಇತ್ತವರೇ ದೂರಾದರು. ಹೊಲ ಹಳ್ಳಿ ಮನೆಯಿಂದ ಕರುಳಕುಡಿಗಳು ದೂರಾದವು. ಸ್ವಾತಂತ್ರ್ಯ ಸಿಕ್ಕಿತು. ಹಿರಿಯರ ಮುಷ್ಟಿಯಿಂದ ಹೊರಬಂದವರು ಪೊರೆ ಬಿಚ್ಚಿ ಹಾವಾದರು.
ಹಿರಿಯ ಜೀವಗಳು ಕಿವಿ ಕೇಳದೆ ಒಂದು ಪ್ರಶ್ನೆಗೆ ಇನ್ನೊಂದು ಉತ್ತರ ಕೊಟ್ಟರೆ, ಟಿವಿ, ಮೊಬೈಲುಗಳ ಟೆಕ್ನಾಲಜಿಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರೆ ನಗುವ ತಿಳಿ ಹಾಸ್ಯದ ಸನ್ನಿವೇಶಗಳು ಬದಲಾದವು. ಈಗ ಅವರು ಪದೇ ಪದೆ ಅಪಹಾಸ್ಯಕ್ಕೊಳಗಾಗುವ, ಅವಮಾನದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಇಂದಿನ ಮಕ್ಕಳು ಅವರ ಬಗೆಗೆ ಒಂದು ತರದ ಅಸಡ್ಡೆಯ ಭಾವನೆಗಳನ್ನು ಹೊಂದಿರುವರೆಂಬ ಸಂಶಯ ಬರುತ್ತದೆ. ಮನೆಯಲ್ಲಿರಲಿ, ಹೊರಗಿರಲಿ.. ಮಾರುಕಟ್ಟೆ, ಬಸ್ಸು ಎಲ್ಲಿ ನೋಡಿದರೂ ಇದೇ ಹಣೆಬರಹ. ಅವರು ಒಬ್ಬರೇ ಹೊರಟರೆ ಅವರಿಗೆ ತೀರ ಹತ್ತಿರದಲ್ಲಿ ಟೂ ವ್ಹೀಲರ್ ಒಯ್ದು ಹೆದರಿಸುವುದು.. ಕಾಯಿಪಲ್ಯ ಮಾರುವವರು, ಹೂಹಣ್ಣು ಮಾರುವವರೂ ಒಂದು ರೀತಿಯ ಅಸಡ್ಡೆಯ ದೃಷ್ಟಿಯಿಂದ ನೋಡುವದು.. ಬಸ್ಸುಗಳಲ್ಲಿ ಕೂಡ ಅವರು ಇಳಿಯುವುದು ಸಾವಕಾಶವಾದರೂ ಬೈಯುವುದು.. ಇದೆಲ್ಲ ಸಹಜವಾಗಿದೆ. ಎಲ್ಲೋ ಕೆಲವರು ಒಳ್ಳೆಯವರೂ ಇರುತ್ತಾರೆ. ಇಲ್ಲವೆಂದೇನಲ್ಲ.
ಮನೆಯಲ್ಲಿ ಕೂಡ ಅವರ ಬಗ್ಗೆ ಹರೆಯದ ಮಕ್ಕಳು ತೋರುವ ಅಸಡ್ಡೆ, ಅಸಹನೆಗಳು ಅವರ ಜೀವನದ ಉತ್ಸಾಹಕ್ಕೇ ಕೊಡಲಿಯನ್ನು ಹಾಕಿವೆ. ಬರಿಯ ವೃದ್ಧರಷ್ಟೇ ಅಲ್ಲ, ತಮ್ಮನ್ನು ಈ ಭೂಮಿಗೆ ತಂದ ತಂದೆ ತಾಯಿ ಕೂಡ ಅವರ ದೃಷ್ಟಿಯಲ್ಲಿ ಗೌರವಕ್ಕೆ ಅರ್ಹರಲ್ಲ. ಅವರು ತಮ್ಮನ್ನು ಬೆಳೆಸಲು ಮಾಡಿದ ತ್ಯಾಗಕ್ಕೆ ಅವರ ದೃಷ್ಟಿಯಲ್ಲಿ ಏನೇನೂ ಬೆಲೆ ಇಲ್ಲ. ಇನ್ನೂ ಮುಂದೆ ಕೇಳಿ, ಈಗೀಗ ಮಕ್ಕಳಿಗೆ ಕನ್ಯೆ ನೋಡಲು ಹೋದರೆ ಅವರು ಕೇಳುವ ಪ್ರಶ್ನೆಗಳು ದಂಗು ಬಡಿಸುತ್ತವೆ. ಮೊದಲೆಲ್ಲ ಕನ್ಯೆ ಮಾತಾಡದೆ ಕೂಡ್ರುವುದು ಭೂಷಣವಾಗಿತ್ತು. ಅದು ಹಳೆಯ ಕಾಲ. ಇದು ಸಮಾನತೆಯ ಯುಗ. ಆದರೆ ಇತರರನ್ನು ಅವಹೇಳನ ಮಾಡುವ ಯುಗವೇನಲ್ಲವಲ್ಲ. ವರನ ತಂದೆ ತಾಯಿಯರು ಈಗ ವೇಸ್ಟ್ ಬಾಡಿ. ಜೊತೆಗೆ ವಧು ಮಾತಾಡುವ ಪ್ರೈವೇಟ್ ಮಾತುಗಳೂ ಕೂಡ ದಂಗು ಬಡಿಸುವಂಥವು. ನಿಮ್ಮದು ಸ್ವಂತ ಮನೆಯೇ? ಇದನ್ನು ಮಾರಿದರೆ ನಿನ್ನ ಪಾಲಿಗೆ ಹಣ ಎಷ್ಟು ಬಂದೀತು? ನಿಮ್ಮ ಮನೆಯಲ್ಲಿ ವೇಸ್ಟ್ ಬಾಡೀಸ್ ಎಷ್ಟಿವೆ? ಎಂದೆಲ್ಲ ಪ್ರಶ್ನೆಗಳು ಕಾಮನ್. ಅವರೆ ಅಲ್ಲವೆ ಈ ಮಕ್ಕಳನ್ನು ಭೂಮಿಗೆ ತಂದವರು? ಅವರ ಮನದಲ್ಲಿ ಜೀವನ ಪ್ರೀತಿಯನ್ನು ಹುಟ್ಟು ಹಾಕಿದವರು? ತಾವು ಪಟ್ಟ ಕಷ್ಟಗಳು ಮಕ್ಕಳಿಗೆ ಎದುರಾಗದಿರಲಿ ಎಂದು ಬೆವರು ಸುರಿಸಿ ಹಗಲು ರಾತ್ರಿ ದುಡಿದು ಹಣ್ಣಾದವರು? ತಮ್ಮ ಮಕ್ಕಳಿಗೆ ಅನಾರೋಗ್ಯವಾದಾಗ ದೇವರೆದುರು ಕೈಚಾಚಿದವರು, ಹಣೆ ಹಚ್ಚಿದವರು? ಮಕ್ಕಳು ತಪ್ಪು ದಾರಿಯಲ್ಲಿ ನಡೆವಾಗ ತಿದ್ದಿದವರು? ಅದಕ್ಕೂ ಕೂಡ ಮಕ್ಕಳು ಕೊಡುವ ಕಾರಣ ಹೇಸಿಗೆ ಹುಟ್ಟಿಸುವಂಥದು. ಅದಂತೂ ಅತ್ಯಂತ ಹೀನ ವಿಷಯ.
ಇವೆಲ್ಲ ತಲೆಮಾರಿನ ಅಂತರ ಎಂದೂ ಕೆಲವರು ಹೇಳಬಹುದು. ಆದರೆ ದೇವರ ಮೇಲಿನ ನಂಬಿಕೆ ಯನ್ನು ಮೂಢನಂಬಿಕೆ ಎಂದು ಕರೆಯುವ, ಗಂಡ ಹೆಂಡತಿ ಸಂಬಂಧವನ್ನು ಭಾವುಕತೆಯಿಂದ ವಾಸ್ತವ ಕ್ಕಿಳಿಸಿರುವ, ಕೊನೆಗೆ ಮಾನವೀಯ ಸಂಬಂಧಗಳನ್ನೇ ಅಲ್ಲಗಳೆಯುವ ಮಟ್ಟಿಗೆ ತಲೆಮಾರುಗಳು ಅಂತರವನ್ನು ಹುಟ್ಟು ಹಾಕುತ್ತಿವೆಯೇ? ನೀವು ನನಗೇನು ಮಾಡಿದ್ದೀರಿ ಎಂದು ಕೇಳುವ ಮಕ್ಕಳು ತಂದೆ ತಾಯಿಯರು ತಮ್ಮ ಬದುಕಿನ ಸುಖವನ್ನು ಕಡೆಗಣಿಸಿ ತಮ್ಮನ್ನು ಬೆಳೆಸಿದ್ದಾರೆ ಎನ್ನುವುದನ್ನೇಕೆ ಮರೆತಿದ್ದಾರೆ? ಇಂದು ತಾವು ಜೀವನದಲ್ಲಿ ಈ ಹಂತಕ್ಕೆ ಏರಲು ತಂದೆ ತಾಯಿಯರೇ ಕಾರಣ ಎನ್ನುವುದನ್ನು ಅರಿಯದೇ ಹೋದರೇ? ತಾವು ಒಂದು ಒಳ್ಳೆಯ ಉದ್ಯೋಗ ಪಡೆಯಲು, ಒಂದು ಒಳ್ಳೆಯ ಜೀವನವನ್ನು ನಡೆಸುವಂತಾಗಲು ಯಾರು ಕಾರಣರೆಂದು ಒಮ್ಮೆಯಾದರೂ ಯೋಚಿಸಿದರೇ?
ಕೆಲವು ಮಕ್ಕಳು ತಾವು ತಮ್ಮ ಮಕ್ಕಳನ್ನು ಬೆಳೆಸುವಾಗ ತಮ್ಮ ತಂದೆ ತಾಯಿ ತಮ್ಮ ಸಲುವಾಗಿ ಕಷ್ಟ ಪಟ್ಟುದನ್ನು ನೆನೆಯುವಷ್ಟಾದರೂ ಮಾನವೀಯ ಗುಣಗಳನ್ನು ಹೊಂದಿರುತ್ತಾರೆ. ಆದರೆ ಇಂಥವರ ಸಂಖ್ಯೆ ತೀರ ಕಡಿಮೆ. ನಾವೇ ಪಾಲಕರಾಗುವವರೆಗೂ ನಮಗೆ ಅರ್ಥವಾಗುವುದಿಲ್ಲ ಎಂದು ಹೆನ್ರಿ ವಾರ್ಡ್ ಹೇಳಿರುವನಲ್ಲವೇ?
ಪಾಲಕರು ಹಾಗೂ ಮಕ್ಕಳ ನಡುವಿನ ಸಂಬಂಧ ಎಷ್ಟು ಸರಳವೋ ಅಷ್ಟೇ ಸಂಕೀರ್ಣ ಕೂಡ. ತಾವು ಚಿಕ್ಕವರಿದ್ದಾಗ ತಂದೆ ತಾಯಿ ಮಕ್ಕಳಿಗೆ ಮಾಡುವುದು ಕರ್ತವ್ಯ ಎಂದು ಯೋಚಿಸುವವರು, ಅವರು ಎಷ್ಟೇ ಮಾಡಿದರೂ ಅದಕ್ಕೆ ಕರ್ತವ್ಯದ ಹಣೆಪಟ್ಟಿ ಹಚ್ಚುವವರು ಮುಂದೆ ತಾವು ದೊಡ್ಡವರಾದಂತೆ ಆ ಕರ್ತವ್ಯವನ್ನು ಹಿಂತಿರುಗಿಸುವುದರಲ್ಲೇಕೆ ಹಿಂದೆ ಬೀಳುತ್ತಾರೆ?
ವಯಸ್ಸಾಗುವುದು ಜೀವನದ ಸಹಜ ಕ್ರಿಯೆ. ಈ ಹಂತದಲ್ಲಿ ಸಮಸ್ಯೆಗಳು ಬಹಳ. ಆರೋಗ್ಯ ಸಮಸ್ಯೆ ಯೊಂದಿಗೆ ಆರ್ಥಿಕ ಸಮಸ್ಯೆಗಳಿದ್ದರಂತೂ ಜೀವನ ಮುಳ್ಳಿನ ಹಾಸಿಗೆ. ಅವಿಭಕ್ತ ಕುಟುಂಬಗಳಲ್ಲಿ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಎನ್ನಬಹುದಾದರೂ ಈಗ ಅವಿಭಕ್ತ ಕುಟುಂಬದ ವ್ಯಾಖ್ಯೆಯೇ ಬದಲಾಗುತ್ತ ನಡೆದಿದೆ. ಗಂಡ ಹೆಂಡತಿ ತಮ್ಮ ಮಕ್ಕಳೊಂದಿಗಿದ್ದಾರೆಂದರೆ ಅದೇ ಅವಿಭಕ್ತ ಕುಟುಂಬವೆನ್ನುವ ಸ್ಥಿತಿ ಬಂದಿದೆ. ಹೀಗಾಗಿ ಅನಾಥ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಈ ಪರಿಸ್ಥಿತಿಗೆ ಕಳಶವಿಟ್ಟಂತೆ ವೃದ್ಧಾಶ್ರಮಗಳ ಸಂಖ್ಯೆ ಏರುತ್ತಿದೆ. ಆರ್ಥಿಕವಾಗಿ ಸಶಕ್ತರಾದವರು ಮಕ್ಕಳಿಂದ ದೂರವಾದರೂ ಹೇಗೋ ವೃದ್ಧಾಶ್ರಮಗಳಲ್ಲಿ ತಮ್ಮ ವೃದ್ಧಾಪ್ಯವನ್ನು ಹೊಂದಿಕೊಂಡು ಕಳೆಯಬಲ್ಲರು. ಆದರ ಆರ್ಥಿಕವಾಗಿ ಅಶಕ್ತರಾದ ವೃದ್ಧರು ಬೀದಿಪಾಲಾಗಿದ್ದಾರೆ. ಭಾವನಾತ್ಮಕ ಸಂಬಂಧಗಳಿಗೆ ಬೆಲೆಯಿಲ್ಲದಾಗಿದೆ.
ಮಕ್ಕಳಿಂದ ತಂದೆ ತಾಯಿಯರಿಗೆ ಮುಪ್ಪಿನಲ್ಲಿ ಬೇಕಾದುದು ಒಂದು ಒಳ್ಳೆಯ ಮಾತು. ಆದಕ್ಕೂ ತತ್ತ್ವಾರ ಬಂದಿದೆ. ಇದಕ್ಕೆ ಒಂದೇ ಪರಿಹಾರವೆಂದರೆ ತಂದೆ ತಾಯಿಯರು ಮಕ್ಕಳ ಜೀವನಕ್ಕೆ ನೀಡಿದ ಕೊಡುಗೆಯನ್ನು ನೆನಪಿನಲ್ಲಿರಿಸಿಕೊಂಡು ಅದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವ,ಅವರ ಜೀವನದ ಸಂಧ್ಯೆಯಲ್ಲಿ ಅವರಿಗೆ ಆಸರೆಯಾಗುವ ಬಗ್ಗೆ ಯೋಚಿಸುವುದು. ಸತ್ತ ಮೇಲೆ ತಂದೆ ತಾಯಿಗಳಿಗೆ ಶ್ರಾದ್ಧ ಮಾಡಿ ಊರೂಟ ಹಾಕಿ ದಾನಧರ್ಮ ಮಾಡುವುದಕ್ಕಿಂತ ಇದ್ದಾಗ ಅವರ ಜೀವನ ಸುಗಮಗೊಳಿಸುವ ಬಗ್ಗೆ ಯೋಚಿಸಬೇಕು. ಅವರು ಅನುಭವಗಳ ಕುಲುಮೆಯಲ್ಲಿ ಬೆಂದು ಮಾಗಿ ಹಣ್ಣಾದವರು. ಕೊಳೆತು ನಾರುವ ಹಣ್ಣುಗಳಲ್ಲ ಎನ್ನುವುದನ್ನು ನೆನಪಿನಲ್ಲಿರಿಸಿಕೊಂಡು ಅವರಿಗೆ ಸಲ್ಲಬೇಕಾದ ಗೌರವಾದರಗಳನ್ನು ಕೊಟ್ಟರೆ ಅವರು ಮಾನಸಿಕವಾಗಿ ಕುಗ್ಗುವುದಿಲ್ಲ. ಅವರಿಗೆ ಬೇಕಾದುದು ಸುಖದ ಸುಪ್ಪತ್ತಿಗೆಯೇನಲ್ಲ, ಮಕ್ಕಳೊಡನೆ ಸಹಬಾಳ್ವೆ, ಮಕ್ಕಳ ಪ್ರೀತಿ ವಿಶ್ವಾಸ.

ಮಾಲತಿ ಮುದಕವಿ

Leave a Reply