ಮನೋಭಾವ ಅಥವಾ ಮನೋವೃತ್ತಿ

ಮನೋಭಾವ ಅಥವಾ ಮನೋವೃತ್ತಿ
ಮನೋವೃತ್ತಿ ಅಥವಾ ಮನೋಭಾವ ಎಂದರೇನು? ಮನೋವೃತ್ತಿ ಎಂದರೆ ನಮ್ಮ ಆಂತರಿಕ ಭಾವನೆ. ಇದು ನಮ್ಮ ವರ್ತನೆಯಿಂದ ಅಭಿವ್ಯಕ್ತಿಗೊಳ್ಳುತ್ತದೆ. ಇದು ನಮ್ಮ ಜೀವನದ ಬಗೆಗಿನ ನಮ್ಮ ಧೋರಣೆ. ಸಾಮಾನ್ಯವಾಗಿ ಇದು ನಮ್ಮ ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಇತರರನ್ನು ನಮ್ಮೆಡೆಗೆ ಆಕರ್ಷಿಸುವ ಅಥವಾ ನಮ್ಮಿಂದ ದೂರಕ್ಕೆ ಸರಿಸುವಂಥ ಶಕ್ತಿ ಹೊಂದಿರುವ ಭಾವ.
ನಮ್ಮ ಮನೋಭಾವವು ಧನಾತ್ಮಕವಾಗಿದ್ದರೆ ಆದು ನಮ್ಮ ಪ್ರಗತಿ ಹಾಗೂ ವಿಕಾಸಕ್ಕೆ ಪೂರಕವಾಗುತ್ತದೆ. ಒಂದು ವೇಳೆ ನಮ್ಮದು ಕಠಿಣ ಮನೋಭಾವವಾಗಿದ್ದರೆ ಇದರಿಂದ ನಾವು ಜಟಿಲ ಮನೋಭಾವದವರಾಗಿ ಇತರರಿಗೊಂದು ಸವಾಲಾಗಿ ಉಳಿಯುತ್ತೇವೆ.
ಹಾಗಾದರೆ ನಮ್ಮ ಜೀವನದಲ್ಲಿ ಮನೋಭಾವ ಎನ್ನುವುದರ ಪ್ರಾಮುಖ್ಯತೆಯಾದರೂ ಏನು? ಈ ಜಟಿಲ ಮನೋಭಾವದವರು ನಿರಾಶಾವಾದಿಗಳಾದರೆ ಧನಾತ್ಮಕ ಮನೋಭಾವದವರು ಆಶಾವಾದಿಗಳು. ಇವರಿಬ್ಬರೂ ಬಾವಿಗೆ ಇಳಿಯುತ್ತಿರುವ ಕೊಡದಂತೆ. ನಿರಾಶಾವಾದಿಗಳಾದರೆ “ನನ್ನಂಥ ದುರ್ದೈವಿಯೇ ಇಲ್ಲ. ಬಾವಿಯಿಂದ ಹೊರಬರುತ್ತಿರುವಾಗ ಕುತ್ತಿಗೆತನಕ ಬಂದ ನೀರು ಮೇಲಕ್ಕೇರಿ ಬರುವಷ್ಟರಲ್ಲಿ ಅರ್ಧವಾಗಿರುತ್ತದೆ. ಇಷ್ಟು ಜಾಗ ಖಾಲಿಯಾಗಿರುತ್ತದೆಯಲ್ಲ” ಎಂದರೆ ಆಶಾವಾದಿಗಳು “ಈ ಜಗತ್ತಿನಲ್ಲಿ ನನ್ನಷ್ಟು ಸಂತಸ ಹೊಂದಿರುವವರೇ ಯಾರೂ ಇಲ್ಲ. ಈ ಬಾವಿಯಲ್ಲಿ ಇಳಿಯುವಾಗ ನಾನು ಖಾಲಿಯಾಗಿರುತ್ತೇನೆ. ಹೊರಬರುವಾಗ ತುಂಬಿಕೊಂಡಿರುತ್ತೇನೆ” ಎನ್ನುವ ಮನೋಭಾವದವರು.
ಒಬ್ಬ ನಿರಾಶಾವಾದಿಯು ಯಾವಾಗಲೂ ಒಂದು ವಸ್ತುವೇ ಇರಲಿ, ವ್ಯಕ್ತಿಯೇ ಇರಲಿ, ಅದರ ಋಣಾತ್ಮಕ ಬದಿಯ ಬಗ್ಗೆಯೇ ವಿಶ್ಲೇಷಿಸುತ್ತಾನೆ. ಅವನು ಕೇವಲ ಅದರ ಸಮಸ್ಯೆಗಳನ್ನು ಕುರಿತೇ ಆಲೋಚಿಸುತ್ತಾನೆ. ಆದರೆ ಆಶಾವಾದಿಗಳು ಎಲ್ಲದರಲ್ಲೂ ಧನಾತ್ಮಕತೆಯನ್ನೇ ಕಾಣುತ್ತಾರೆ. ಪ್ರತಿಯೊಂದು ಕಾರ್ಮೋಡದ ಹಿಂದೆಯೂ ಒಂದು ಬೆಳ್ಳಿ ಗೆರೆ ಇದ್ದೇ ಇರುತ್ತದೆಯೆಂಬುದು ಸುಳ್ಳಲ್ಲ ಅವರ ಪಾಲಿಗೆ.
ನಮ್ಮ ಜೀವನದ ಪ್ರತಿಯೊಂದು ಯಶಸ್ಸಿನ ಮೇಲೂ ಈ ನಮ್ಮ ಮನೋಭಾವವು ಅನೇಕ ರೀತಿಯಲ್ಲಿ ಪ್ರಭಾವ ಬೀರುತ್ತದೆ. ನಮ್ಮ ಜೀವನದ ಬಗೆಗಿನ ದೃಷ್ಟಿಕೋನದ ಮೇಲೆ ಕೂಡ ಇದರ ಪ್ರಭಾವ ವಿದೆ.
ನಮ್ಮ ಮನೋಭಾವವು ನಾವು ಜೀವನದ ಬಗೆಗೆ ಹೊಂದಬಹುದಾದ ದೃಷ್ಟಿ ಕೋನವನ್ನು ಕೂಡ ನಿರ್ಧರಿಸುತ್ತದೆ. ಅಷ್ಟೇ ಅಲ್ಲ, ನಾವು ಜೀವನದಿಂದ ಏನನ್ನು ಬಯಸುತ್ತೇವೆ, ನಾವು ಯಾವುದಾದರೂ ಒಂದು ಕಾರ್ಯಕ್ಕೆ ಕೈಹಾಕಲು ಸಿದ್ಧತೆ ನಡೆಸಿರುವೆವೋ ಅಥವಾ ಯಾವುದಾದರೂ ಕಾರ್ಯದಲ್ಲಿ ಹೀನಾಯವಾಗಿ ಸೋಲನ್ನನುಭವಿಸಲಿದ್ದೇವೆಯೋ ಎನ್ನುವುದನ್ನು ಕೂಡ ನಮ್ಮ ಈ ಮನೋವೃತ್ತಿಯೇ ನಿರ್ಧರಿಸುತ್ತದೆ. ಜೀವನದಲ್ಲಿ ಯಶಸ್ವಿಯಾಗುವುದನ್ನು ಅಥವಾ ಸೋಲನ್ನು ಅನುಭವಿಸುವುದನ್ನು ಕೂಡ ನಿರ್ಧರಿಸುವುದು ನಮ್ಮ ಮನೋಭಾವವೇ. ನಾವು ಆಶಾವಾದಿಗಳಾದಷ್ಟೂ ಯಶಸ್ಸು ನಮ್ಮ ಪಾಲಿಗೆ ಕಟ್ಟಿಟ್ಟ ಬುತ್ತಿ.
ಒಂದು ಕಾರ್ಯವನ್ನು ಪ್ರಾರಂಭಿಸುವಾಗಿನ ನಮ್ಮ ಮನೋಭಾವವು ಮುಂದೆ ಆಗಬಹುದಾದ ಪರಿಣಾಮಗಳ ಮೇಲೆ ಕೂಡ ಪ್ರಭಾವ ಬೀರುತ್ತದೆ. ನಮ್ಮ ಧೋರಣೆಯೇ ನಮ್ಮ ಸಮಸ್ಯೆಗಳನ್ನು ನಿವಾರಿಸುವ ಸಾಧನವಾಗಿದೆ. ಧನಾತ್ಮಕ ಮನೋಭಾವ ಹೊಂದಿರುವವರು ಯಾವಾಗಲೂ ತಮ್ಮೊಳಗಿನ ಪ್ರತಿಭೆಯನ್ನು ಹೊರಹೊಮ್ಮಿಸಲು ಅವಕಾಶವನ್ನು ಹುಡುಕುತ್ತಿರುತ್ತಾರೆ. ಅವರು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತಿರುವ ಗಾಳಿಪಟವಿದ್ದಂತೆ. ಕಟುವಿಮರ್ಶೆಯ ಬಿರುಗಾಳಿಯ ವಿರುದ್ಧ ಚಲಿಸುವಾಗ, ಸೋಲಿನ ಹೊಡೆತಕ್ಕೆ ಸಿಲುಕಿದಾಗ ಮನೋಭಾವ ಹೊಂದಿರುವ ಇವರು ಪರಿಸ್ಥಿತಿಗೆ ಬಾಗುವುದಿಲ್ಲ, ಇದನ್ನೇ ತಮ್ಮ ಯಶಸ್ಸಿಗೆ ಮೆಟ್ಟಿಲಾಗಿಸಿಕೊಂಡು ಮೆಟ್ಟಿ ನಿಲ್ಲುತ್ತಾರೆ. ಆ ವಿರೋಧಿ ಸನ್ನಿವೇಶಗಳನ್ನೇ ತಮಗೆ ಅನುಕೂಲಕರವಾಗಿಸಿಕೊಂಡು ಮುನ್ನಡೆವ ಯೋಗ್ಯತೆಯನ್ನು ಇವರು ಹೊಂದಿರುತ್ತಾರೆ. ಅನೇಕ ಸುಪ್ರಸಿದ್ಧ ಲೇಖಕರು ಸರಳುಗಳ ಹಿಂದೆ ಬಂಧಿತರಾಗಿದ್ದಾಗಲೇ ಅಪ್ರತಿಮ ಪುಸ್ತಕಗಳನ್ನು ಹೊರತಂದಿದ್ದಾರೆ. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರವರು ಮಗಳಿಗೆ ತಂದೆ ಬರೆದ ಪತ್ರಗಳು, ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ, ಡಿಸ್ಕವರಿ ಆಫ್ ಇಂಡಿಯಾ ಮುಂತಾದವನ್ನು ಬರೆದದ್ದು ಜೈಲಿನಲ್ಲಿಯೇ. ಡೆಫೋ ರಾಬಿನ್ಸನ್ ಕ್ರೂಸೋ ಬರೆದದ್ದು ಕೂಡ ಜೈಲಿನಲ್ಲೇ. ಜಾನ್ ಬನ್ಯನ್ ದ ಪಿಲ್ಗ್ರಿಮ್ಸ್ ಪ್ರೊಗ್ರೆಸ್ ಬರೆದದ್ದು ಬೆಡ್ ಫೋರ್ಡ್ ಜೈಲಿನಲ್ಲಿರುವಾಗಲೇ.
ನಾವು ನಮ್ಮ ದಿನವನ್ನು ಅತ್ಯಂತ ಉತ್ಸಾಹ ಹಾಗೂ ಆಸಕ್ತಿಗಳಿಂದ ಪ್ರಾರಂಭಿಸಿದಲ್ಲಿ ಅದು ಚೆನ್ನಾಗಿ ಕಳೆಯುವುದರಲ್ಲಿ ಸಂಶಯವಿಲ್ಲ. ನಮ್ಮಲ್ಲಿ ಧನಾತ್ಮಕ ಮನೋಭಾವವಿದ್ದಲ್ಲಿ ಮಾತ್ರ ನಮ್ಮ ಭವಿಷ್ಯವು ಉಜ್ವಲವಾಗಿರಲು ಸಾಧ್ಯ. ಅಷ್ಟೇ ಅಲ್ಲ, ನಮ್ಮ ವರ್ತಮಾನ ಕೂಡ ಅತ್ಯಂತ ಆಸಕ್ತಿದಾಯಕವಾಗಿರುತ್ತದೆ.
ನಾವು ಕಷ್ಟಗಳು ಎದುರಾದಾಗ ಇಡಿ ಜಗತ್ತಿನಲ್ಲಿ ನಾವೊಬ್ಬರೇ ಇಷ್ಟೊಂದು ಕಷ್ಟಗಳಿಗೆ ಗುರಿಯಾಗುತ್ತಿದ್ದೇವೆಂದು ನೊಂದುಕೊಳ್ಳುತ್ತೇವೆ. ಇಂಥ ಸಮಯದಲ್ಲಿ ಅನೇಕ ಮಹಾನುಭಾವರು ಕಷ್ಟಗಳನ್ನೇ ಏಣಿಯಾಗಿಸಿಕೊಂಡು ಉತ್ತುಂಗಕ್ಕೇರಿದರೆಂಬ ಸತ್ಯ ಕತೆಗಳು ನಮ್ಮಲ್ಲಿ ಧೈರ್ಯ ತುಂಬುತ್ತವೆ.
ಸಾಧಕರು ಸೋಲಿಗೆ ಹೆದರುವುದಿಲ್ಲ. ಸೋಲುಗಳೇ ಅವರ ಗೆಲುವಿನ ಮೆಟ್ಟಿಲಾಗುತ್ತವೆ. ನೀವು ಗೆದ್ದೇಗೆಲ್ಲುವಿರಿ ಎಂಬ ವಿಶ್ವಾಸ ನಿಮ್ಮಲ್ಲಿದ್ದರೆ ಸೋಲು ನಿಮ್ಮ ಹತ್ತಿರವೂ ಸುಳಿಯದು.
ಮಾಲತಿ ಮುದಕವಿ

Leave a Reply