ಮತ್ತೆ ಕಲ್ಲಾದಳು ಅಹಲ್ಯೆ!

ಮತ್ತೆ ಕಲ್ಲಾದಳು ಅಹಲ್ಯೆ!

ಅದು ಒಂದು ಆಶ್ರಮ ಎನ್ನುವುದು ದೂರದಿಂದಲೇ ವ್ಯಕ್ತವಾಗುತ್ತಲಿತ್ತು. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಹರಡಿದ ಹಸಿರು ಹೊದ್ದು ಮಲಗಿದ ಪರಿಸರ. ಅನೇಕ ಫಲಗಳನ್ನು ಹೊತ್ತು ಬಾಗಿದ ಮಾವು, ಹಲಸು, ದಾಳಿಂಬೆ, ಪೇರಲ ಮುಂತಾದ ವೃಕ್ಷಗಳಿಂದಾಗಿ ಅದು ಬೇಸಿಗೆ ಎಂದು ಹೇಳಬಹುದಾಗಿತ್ತಷ್ಟೇ.  ಇಲ್ಲವಾದರೆ ಆ ಕಡುಬೇಸಿಗೆಯ ಚಿಹ್ನೆಗಳಾವವೂ ಆ ತೋಟದಲ್ಲಿ ಗೋಚರಿಸುತ್ತಿರಲಿಲ್ಲ. ಅಷ್ಟೊಂದು ತಂಪಾಗಿದ್ದ ಪರಿಸರವದು. ಅದಕ್ಕೆ ಕಾರಣ ಮುನಿಪತ್ನಿ ಅಹಲ್ಯೆ. ಆಶ್ರಮದ ಮಕ್ಕಳಿಗೆ ಮಹರ್ಷಿ ಗೌತಮರು ಧರ್ಮ ಶಾಸ್ತ್ರ, ಧರ್ಮಸೂಕ್ಷ್ಮಗಳ ಪಾಠವನ್ನು ಹೇಳಿದರೆ ಮಾತೆ ಅಹಲ್ಯೆ ಪರಿಸರ ಸಂರಕ್ಷಣೆ, ಆಹಾರದ ಸ್ವಾವಲಂಬನೆಗಳ ಬಗ್ಗೆ ಪ್ರಾತ್ಯಕ್ಷಿಕೆಗಳನ್ನೇ ನೀಡುತ್ತಿದ್ದಳು! ಮಕ್ಕಳು ತಮ್ಮ ಬಿಡುವಿನ ಸಮಯವನ್ನು ಅಲ್ಲಿಯ ಗಿಡಮರಗಳ ಆರೈಕೆ, ಕೃಷಿ ಕಾರ್ಯ ಇವುಗಳಲ್ಲಿಯೇ ಕಳೆಯುತ್ತಿದ್ದರು. ಅಲ್ಲಿ ಬೆಳೆದ ಫಲಗಳನ್ನು ಅತ್ಯಂತ ಆನಂದದಿಂದ ಮೆಲ್ಲುತ್ತಿದ್ದರು.. ಅದರಲ್ಲಿ ಸ್ವಾವಲಂಬನೆಯ ಘಮಲೊಂದಿದ್ದುದೇ ಆ ಆನಂದಕ್ಕೆ ಕಾರಣವೇನೋ! ಬೆಳಿಗ್ಗೆ ತಮ್ಮ ಆಹ್ನೀಕವಾದೊಡನೆ ಗುರುಗಳಿಂದ ಪಾಠ ಪ್ರವಚನ. ಆನಂತರ ಅಹಲ್ಯೆಯು ಎಲ್ಲ ಮಕ್ಕಳಿಗೂ ರಾಗಿಯಂಥ ಏಕದಳ ಹಾಗೂ ಅನೇಕ ದ್ವಿದಳ ಧಾನ್ಯಗಳ ಮೊಳಕೆಬರಿಸಿದ  ಕೋಸುಂಬರಿ ಹಾಗೂ ತೋಟದಲ್ಲಿ ಬೆಳೆದ ಫಲಗಳನ್ನು ಉಪಯೋಗಿಸಿ ಮಾಡಿದ ರಸಾಯನವನ್ನು ಕೈಯಾರೆ ತಯಾರಿಸಿ ಬಡಿಸುತ್ತಿದ್ದಳು. ನಂತರ ಕೆಲ ಮಕ್ಕಳು ಸಮಿತ್ತುಗಳನ್ನು ಆಯಲು ಹೋದರೆ ಇನ್ನು ಕೆಲವರು ತೋಟದ ಕೃಷಿಯಲ್ಲಿ ನಿರತರಾಗುತ್ತಿದ್ದರು. ಅಹಲ್ಯೆಗೆ ಅಡಿಗೆಯ ಕಾರ್ಯದಲ್ಲೂ ಕೆಲ ಮಕ್ಕಳು ಸಹಾಯ ಮಾಡುತ್ತಿದ್ದರು.

ಊಟದ ನಂತರ ಅಹಲ್ಯೆಗೆ ವಿರಾಮ. ಉಳಿದಂತೆ ಮಕ್ಕಳೆಲ್ಚಿಕ್ಕ ಪುಟ್ಟ ಗುಂಪುಗಳನ್ನು ಮಾಡಿಕೊಂಡು ತಮ್ಮ ತಮ್ಮ ಹವ್ಯಾಸದ ಆಟಗಳಲ್ಲಿ ನಿರತರಾಗುತ್ತಿದ್ದರು.

ಅಂದೂ ಕೂಡ ಅಹಲ್ಯೆ ಪರ್ಣಕುಟಿಯ ಹೊರಗೆ ಮಾವಿನ ಮರದ ತಣ್ಣೆಳಲಲ್ಲಿ ಹರಡಿದ್ದ ಹುಲ್ಲಿನ ಚಾಪೆಯ ಮೇಲೆ ಮಲಗಿ ತನ್ನ ಮಧ್ಯಾಹ್ನದ ಸಣ್ಣ ನಿದ್ರೆಯನ್ನು ಮುಗಿಸಿ ಎದ್ದು ಕುಳಿತಿದ್ದಳು… ಅವಳ ಮುಖದ ಮೇಲಿನ ಪ್ರಸನ್ನ ಮುದ್ರೆ, ತೆಳುವಾದ ತುಟಿಗಳಲ್ಲಿ ಇಣಿಕುತ್ತಿದ್ದ ಮುಗುಳ್ನಗೆ ಅವಳು ಯಾವುದೋ ಒಂದು ಸುಂದರ ಕನಸಿನಿಂದ ಎಚ್ಚತ್ತಿದ್ದಾಳೆಂಬಂತಿದ್ದವು…

ನಿಜ… ಅವಳ ಕನಸಿನಲ್ಲಿ ಹದಿ ಹರೆಯದ ರಾಜಕುಮಾರನೊಬ್ಬ “ಅಮ್ಮಾ, ನಾ ಬಂದೆ!” ಎಂದು ಹೇಳಿ ಅವಳ ಬಳಿಸಾರಿ ಬಿಗಿದಪ್ಪಿಕೊಂಡಂತಾಗಿತ್ತು… ಅವನ ಮುಖ ಅತ್ಯಂತ ಪರಿಚಿತವಾಗಿದ್ದಂತಿದ್ದರೂ ಯಾರೆಂಬುದು ನೆನಪಿಗೆ ಬಾರದಾಗಿತ್ತು. ಆದರೂ ಅದು ತನ್ನ ಹೃದಯಕ್ಕೆ ಹತ್ತಿರವಾದ ಚೆಹರೆ ..

ದೂರದಲ್ಲಿ ಗೌತಮರು ಗಡಿಬಿಡಿಯಲ್ಲಿ ಇವಳತ್ತಲೇ ಬರುವುದನ್ನು ಕಂಡು ಅಹಲ್ಯೆಗೆ ಆಶ್ಚರ್ಯವಾಗಿತ್ತು.. ಇದೇನು? ಈಗ ಇವರದು ವಿಶ್ರಾಂತಿಯ ಸಮಯವಲ್ಲವೇ? ಹೊರಗೆ ಹೋಗಿದ್ದು ಯಾವಾಗ… ಇಷ್ಟೊಂದು ತರಾತುರಿಯಲ್ಲಿ ಬರುತ್ತಿರುವುದಾದರೂ ಯಾಕೆ? ಒಂದೂ ಅರ್ಥವಾಗಲಿಲ್ಲ.

“ಅಹಲ್ಯೇ, ನಿನಗೊಂದು ಸಂತಸದ ಸುದ್ದಿ. ಅನೇಕ ವರ್ಷಗಳ ನಂತರ ಇಂದು ಶ್ರೀರಾಮನು ನಮ್ಮ ಆಶ್ರಮಕ್ಕೆ ಆಗಮಿಸುತ್ಯಿದ್ದಾನೆ. ಇಂದು ಇಲ್ಲಿಯೇ ವಾಸ್ತವ್ಯವಂತೆ. ಈಗತಾನೇ ಅವನು ಕಳಿಸಿದ ದೂತನೋರ್ವನು ಸುದ್ದಿ ತಂದಿದ್ದಾನೆ….”

“ಹೌದೇ? ನನ್ನ ಕನಸಿನಲ್ಲಿ ಅಮ್ಮ ಎಂದು ಕರೆದ ರಾಜಕುವರನು ಅವನೇ? ಹಗಲುಗನಸು ನಿಜವಾಗದೆಂದು ಹೇಳುತ್ತಾರೆ! ಅದು ನನ್ನ ವಿಷಯದಲ್ಲಿ ಸುಳ್ಳಾಯಿತು! ”

ಅಹಲ್ಯೆ ಖುಶಿಯಲ್ಲಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡಿದ್ದಳು..

ಅಹಲ್ಯೆಗೆ ರಾಮನ ಮುಖ ಈಗ ನಿಚ್ಚಳವಾಗಿ ಕಂಡಿತ್ತು. ಅಂದು ಕಂಡ ರಾಮನೋ ಹದಿಹರೆಯದವ. ಅವನ ಮುಖದಲ್ಲಿ ಆ ಸುಕುಮಾರ ಸೌಂದರ್ಯದ ಜೊತೆಗೇ ಅದೇ ತಾನೇ ಮೂಡುತ್ತಿರುವ ಗಡ್ಡ ಮೀಸೆಗಳಿಂದಾಗಿ ಮುಖದಲ್ಲಿ ಒರಟುತನದ ಸೊಗಸೂ ಕಾಣುತ್ತಲಿತ್ತು. ಶ್ಯಾಮಲ ವರ್ಣದ ದುಂಡು ಮುಖದಲ್ಲಿ ಎದ್ದು ಕಾಣುತ್ತಿರುವ ಆತ್ಮವಿಶ್ವಾಸ ಹೊರ ಸೂಸುವ ಮಿಂಚಿನಂತೆ ಹೊಳೆವ ಆ ದೇದೀಪ್ಯಮಾನವಾದ ಕಣ್ಣುಗಳು! ಆರೂವರೆ ಅಡಿಗಳಷ್ಟು ಎತ್ತರದ ಬಲಿಷ್ಠ ಬಾಹುಗಳನ್ನು ಹೊಂದಿದ ಆ ಪುರುಷ ಸಿಂಹನ ಹೆಸರು ಶ್ರೀ ರಾಮ! ಅವನ ಬರವಿಗಾಗಿಯೇ ಕಾದಿದ್ದವಳಂತಿದ್ದೆನಲ್ಲವೇ… ! ಜೀವನದಲ್ಲಿ  ಆಸಕ್ತಿಯನ್ನೇ ಕಳೆದುಕೊಂಡು ಕಲ್ಲಾಗಿದ್ದವಳಲ್ಲಿ ಮರುಜೀವವನ್ನು  ತುಂಬಿದ ಆ ರಾಮ! ಗೌತಮರ ಮನಃಪರಿವರ್ತನೆ ಮಾಡಿದ್ದನಾತ. ತನ್ನದಲ್ಲದ ತಪ್ಪಿಗಾಗಿ ಹಲವಾರು ವರ್ಷಗಳ ಶಿಕ್ಷೆ ಅನುಭವಿಸಿದ ತಾನು ಅವನ ಸ್ಪರ್ಶದಿಂದಾಗಿ ಪುನರ್ಜನ್ಮ ಪಡೆದಿದ್ದೆ! ಅಂದಿನಿಂದ ತಮ್ಮ ದಾಂಪತ್ಯದಲ್ಲೂ ಹೊಸತನ ಇಣುಕಿತ್ತು. ಪತಿಯಾದ ಗೌತಮರು ತಮ್ಮ ಅವಸರದ ನಿರ್ಣಯದಿಂದುಂಟಾದ ಅಚಾತುರ್ಯಕ್ಕಾಗಿ ಪಶ್ಚಾತ್ತಾಪ ಪಟ್ಟರು. ನಂತರದ ದಿನಗಳಲ್ಲಿ ತಮ್ಮ ಜೀವನ ಸರಳವಾದ ರೀತಿಯಲ್ಲಿ ಮುಂದುವರೆದಿತ್ತು.

ಆದರೆ ತರುಣ ರಾಮನ ಜೀವನ ಅನೇಕ ತಿರುವುಗಳನ್ನು ಪಡೆದಿತ್ತು. ಶಿವಧನುಸ್ಸಿನ ಹೆದೆಯನ್ನು ಕಿವಿಯವರೆಗೆ ಎಳೆದು ಬಾಣ ಹೂಡುವ ಭರದಲ್ಲಿ ಧನುಸ್ಸೇ ಮುರಿದುಬಿದ್ದಿತ್ತು. ಸ್ವಯಂವರದ ನಿಯಮದಂತೆ ಮಿಥಿಲಾಪುರದ ರಾಜ ಜನಕನ ಸಾಕುಮಗಳು ಅಪ್ರತಿಮ ಸುಂದರಿಯಾದ ಸೀತೆಯೊಂದಿಗೆ ಅವನ ಮದುವೆಯಾಗಿತ್ತು. ರಾಜಧಾನಿಯಲ್ಲಿ  ಶ್ರೀ ರಾಮನ ಪಟ್ಟಾಭಿಷೇಕದ ಸಡಗರ ಪ್ರಾರಂಭವಾಗುವಷ್ಟರಲ್ಲಿಯೇ ಎಲ್ಲವೂ ವಿಷಾದದಲ್ಲಿ ಬದಲಾಗಿತ್ತು! ಎಳೆವರೆಯದ ರಾಮ, ಲಕ್ಷ್ಮಣರು ಹೊಸ ಮದುವಣಗಿತ್ತಿ ಸೀತೆಯೊಂದಿಗೆ ತಾಯಿಯ ಆಣತಿಯಂತೆ ವನವಾಸಕ್ಕೆ ತೆರಳಿದ್ದರು. ಅಲ್ಲಿಯೂ ಶಾಂತಿಯಿಂದಿರಗೊಡದ ವಿಧಿ  ರಾವಣನ ರೂಪದಲ್ಲಿ ಅವರಿಬ್ಬರನ್ನು ಬೇರ್ಪಡಿಸಿತ್ತು. ವಾನರ ಚಕ್ರವರ್ತಿ ಸುಗ್ರೀವ ಹಾಗೂ ಭಕ್ತನಾದ ಹನುಮಂತನ ಸಹಾಯದಿಂದ ರಾವಣ ಸಂಹಾರವಾಗಿತ್ತು.  ಶ್ರೀರಾಮಚಂದ್ರನಿಗೆ ಮತ್ತೆ ಪಟ್ಟಾಭಿಷೇಕವಾಗಿತ್ತು. ಸೀತೆ-ರಾಮರ ದಾಂಪತ್ಯದ ಕುಡಿಗಳು ಅರಳುವ ಸಮಯ. ಮತ್ತೆ ಬಿರುಗಾಳಿ ಎದ್ದಿತ್ತು ಅವರಿಬ್ಬರ ಜೀವನದಲ್ಲಿ. ಒಬ್ಬ ಯಕಃಶ್ಚಿತ್ ಅಗಸನ ಮಾತು ಶ್ರೀ ರಾಮನನ್ನು ಬೆಚ್ಚಿ ಬೀಳಿಸಿತ್ತು. ತಾನು ಜನಾನುರಾಗಿಯಾಗಿ, ಪ್ರಜಾಪ್ರಭುತ್ವ ನೀತಿಗಳನ್ನು ಅಳವಡಿಸಿಕೊಂಡೇ ರಾಜ್ಯವನ್ನಾಳಿದರೂ ಸಹ ಇಂಥ ಅಪವಾದಕ್ಕೊಳಗಾಗಿದ್ದುದಕ್ಕಾಗಿ ನೊಂದ ಆತ ತುಂಬು ಗರ್ಭಿಣಿಯಾದ ಸೀತೆಯನ್ನು ಅಡವಿಗೆ ಕಳಿಸಿದ.

ಆದರೆ ತಾನು ಸುಖವಾಗಿದ್ದನೆ? ಇಲ್ಲ… ಸೀತೆಯ ವಿರಹ, ತನ್ನ ನಿಷ್ಕಾರುಣ್ಯದ ವರ್ತನೆ ಅವನನ್ನು ನಿಮಿಷ ನಿಮಿಷಕ್ಕೂ ಘಾಸಿಗೊಳಿಸಿದವು. ಒಂಟಿತನ, ದುಃಖ-ದುಗುಡಗಳು ಅವನ ಮನಸ್ಸನ್ನು ಇರಿದವು. ಇದರಿಂದ ತಪ್ಪಿಸಿಕೊಳ್ಳಲು ಅವನು ನೆಮ್ಮದಿಯನ್ನರಸುತ್ತ ಋಷಿ ಮುನಿಗಳ ಆಶ್ರಮಗಳಿಗೆ, ಅವರ ದರ್ಶನಕ್ಕಾಗಿ ಹೊರಟಿದ್ದನು.

ಅಂದಿನ ಸಂಜೆ ಅಹಲ್ಯೆಗೆ ಮನೆಯ ಮಗ ಮನೆಗೆ ಬಂದ ಸಂಭ್ರಮ. “ನನ್ನ ಸೊಸೆ ಬರಲಿಲ್ಲವೇ ರಾಮ?” ಎಂಬಂತೆ ಆಕೆಯ ಕಂಗಳು ಅವನ ಅಕ್ಕಪಕ್ಕವನ್ನರಸಿದವು… ರಾಮನ ಮಾಸಿಹೋದ ಚೆಹರೆಯನ್ನು ನೋಡಿ ಆಕೆ ಕಾರಣವರಿಯದಿದ್ದರೂ ನೊಂದಳು. ಆದರೂ ಪತಿ ಪತ್ನಿಯರಿಬ್ಬರೂ ತುಂಬುಹೃದಯದಿಂದ ಸ್ವಾಗತಿಸಿದರು. ಆಶೀರ್ವಾದ ಮಾಡಿದರು. ಅಹಲ್ಯೆ ಅವನಿಗಾಗಿ ಸ್ವಾದಿಷ್ಟವಾದ ಅಡಿಗೆಯನ್ನು ತಯಾರಿಸಿದಳು. ರಾಮ ತನ್ನೆಲ್ಲ ದುಗುಡ ದುಮ್ಮಾನಗಳನ್ನು ಮರೆತು ಬಾಳೆಲೆಯಲ್ಲಿ ಬಡಿಸಿದ್ದ ಊಟವನ್ನು ಋಷಿಗಳ ಸಹಪಂಕ್ತಿಯಲ್ಲಿ ಮಾಡಿದನು…

ರಾತ್ರಿ ಅವನಿಗಾಗಿ ಶಿಷ್ಯರು ಒಣಹುಲ್ಲಿನ ಹಾಸಿಗೆಯನ್ನು ಸಿದ್ಧಪಡಿಸಿದ್ದರು. ಸೊಳ್ಳೆಗಳು ಬಾರದಂತೆ ಧೂಪದ ಹೊಗೆಯನ್ನು ಹಾಕಲಾಗಿತ್ತು. ಶ್ರೀ ರಾಮನು ಹಾಸಿಗೆಯಲ್ಲಿ ಒರಗುತ್ತಿದ್ದಂತೆ ಅಹಲ್ಯೆಯೂ ಕೂಡ ತನ್ನ ಅಡಿಗೆ ಮನೆಯ ಕೆಲಸ ಕಾರ್ಯಗಳನ್ನು ಮುಗಿಸಿಬಂದಿದ್ದಳು.

“ಹೇಳು ರಾಮಚಂದ್ರ, ನೀನು ನನ್ನ ಉದ್ಧಾರ ಮಾಡಿ ನಮ್ಮ ಸಂಸಾರವನ್ನು ನೇರ್ಪಡಿಸಿಹೋದ ನಂತರದ ಸುದ್ದಿ… ನಂತರ ಸೀತೆಯೊಂದಿಗೆ ವಿವಾಹವಾಗಿದ್ದೆಯೆಂಬ ಸುದ್ದಿ ಬಂದಿತ್ತು. ನಮಗೆ ಆಹ್ವಾನವೂ ಇತ್ತು… ಆದರೆ ಕಾರಣಾಂತರದಿಂದ ನಮಗೆ ಬರಲಾಗಲಿಲ್ಲ.. ನಂತರ ಮಹರ್ಷಿಗಳಿಂದ ನೀನು ವನವಾಸಕ್ಕೆ ಹೋದ ಸುದ್ದಿ, ಸೀತಾಪಹರಣ, ವಾಲಿ ಸಂಹಾರ ನಂತರದ ರಾವಣ ಸಂಹಾರಗಳ ಬಗ್ಗೆ ತಿಳಿದಿತ್ತು. ಸೀತಾಪಹರಣದ ಸುದ್ದಿ ತಿಳಿದಾಗಲಂತೂ ನನ್ನ ಮನಸ್ಸು ಮರಮರನೆ ಮರುಗಿತ್ತು… ನಿನ್ನಂಥ ಪುರುಷೋತ್ತಮನಿಗೂ ಈ ಕಷ್ಟಗಳು ಬಿಡಲಿಲ್ಲವೆ ಎಂದು… ಅದೆಲವೂ ತಿಳಿದ ವಿಷಯವೇ.. ಆದರೂ ನಿನ್ನ ಶೌರ್ಯದ ಬಗ್ಗೆ ನಿನ್ನ ಬಾಯಿಂದಲೇ ಕೇಳಬೇಕೆನ್ನಿಸಿದೆ… ನಿನ್ನ ಪತ್ನಿಯಾಗಿ ಎಲ್ಲ ಕಷ್ಟಗಳಲ್ಲೂ ನಿನಗೆ ಹೆಗಲೆಣೆಯಾಗಿ ನಿಂತ ಆ ನನ್ನ ಸೊಸೆಯ ಸುದ್ದಿಯೇನು? ಲಕ್ಷ್ಮಣ ಹೇಗಿರುವ? ”

ಶ್ರೀ ರಾಮ ಒಂದು ಕ್ಷಣ ಬೆಚ್ಚಿದ್ದ… ಆದರೂ ಸಾವರಿಸಿಕೊಂಡು ಅವಳ ಮಾತುಗಳಿಗೆ ಸ್ಪಂದಿಸಿದ್ದ. ತಾನು ವನವಾಸಕ್ಕೆ ಹೋದುದು, ಅಲ್ಲಿ ತಾವಿಬ್ಬರೂ ಕಳೆದ ಸುಖದ ದಿನಗಳು… ಆದರೆ ರಾವಣನಿಂದಾಗಿ ಬಂದೊದಗಿದ ಕಷ್ಟನಷ್ಟಗಳು! ಸೀತಾಪಹರಣಕ್ಕೆ ಶಿಕ್ಷೆಯಾಗಿ ಹನುಮಂತ ಹಾಗೂ ವಾನರಸೇನೆಯೊಂದಿಗೆ ರಾವಣನ ಸಂಹಾರ ಮಾಡಿದುದು.. ನಂತರದ ಸೀತೆಯ ಅಗ್ನಿಪರೀಕ್ಷೆ! ತನಗೆ ಅವಳ ಮೇಲೆ ಪರಿಪೂರ್ಣ ವಿಶ್ವಾಸವಿದ್ದರೂ ಜನರಿಗಾಗಿ ತಾನು ಅಂಥದೊಂದು ನಿರ್ಣಯ ತೆಗೆದುಕೊಳ್ಳಬೇಕಾಗಿ ಬಂದುದು… ಎಲ್ಲವನ್ನೂ ಹೇಳಿದ್ದನು! ಜೊತೆಗೇ ಈಗ ಸೀತೆ ತುಂಬು ಗರ್ಭಿಣಿಯಾಗಿರುವ ಸುದ್ದಿಯನ್ನೂ ಅರುಹಿದ್ದ!

“ಹೌದೇ? ಸೀತೆ ಗರ್ಭಿಣಿಯೇ? ರಾಜವೈದ್ಯರು ಅವಳಿ ಗಂಡುಮಕ್ಕಳು ಹುಟ್ಟಲಿರುವರೆಂದು ಹೇಳಿರುವರೇ? ಈಗ ನನ್ನ ಮನಸ್ಸು ಅತ್ಯಂತ  ಸಂತೋಷಿತವಾಗಿದೆ! ಅಷ್ಟೇ ಸಾಕು. ಈ ಮಕ್ಕಳಿಲ್ಲದ ಮಾತೃಹೃದಯವಿದೆಯಲ್ಲ, ಇದಕ್ಕೆ ಅಷ್ಟೇ ಸುಖ ಸಾಕು.”

“ಅಮ್ಮಾ, ಸುದ್ದಿ ಇನ್ನೂ ಮುಗಿದಿಲ್ಲ… ನಾನು ನಿಮ್ಮ ಕಣ್ಣುಗಳಲ್ಲಿ ತಪ್ಪಿತಸ್ಥ… ಸೀತೆಯ ವಿಷಯದಲ್ಲಿಯೂ ಅನ್ಯಾಯ ಮಾಡಿಬಿಟ್ಟೆ! ಆದರೆ, ಅದು ಆನಿವಾರ್ಯವಾಗಿತ್ತು. ಅಗಸನಂಥ ಒಬ್ಬ ಸಾಮಾನ್ಯ ಪ್ರಜೆಯ ದೃಷ್ಟಿಯಲ್ಲಿ ನಾನು ರಾಜನಾಗಲು ಯೋಗ್ಯತೆಯನ್ನು ಹೊಂದದೇಹೋದೆ. ನಾನು ಸೀಮಾ ಪುರುಷೋತ್ತಮನೆಂಬ ನನ್ನ ಬಿರುದನ್ನು ಉಳಿಸಿಕೊಳ್ಳಬೇಕಿತ್ತು. ಈ ರಾಜಪದವಿಯೆಂಬುದು ಸುಪ್ಪತ್ತಿಗೆಯಲ್ಲ,  ಅಮ್ಮಾ… ಅದೊಂದು ಮುಳ್ಳಿನ ಕಿರೀಟ. ಸೀತೆಯನ್ನು ಕಾಡಿಗಟ್ಟಿಬಿಟ್ಟೆ.. ಅವಳ ವಿಷಯದಲ್ಲಿ ಘೋರ ಪಾಪವನ್ನು ಎಸಗಿಬಿಟ್ಟೆ!!”

ಶ್ರೀ ರಾಮನು ತನ್ನ ಮನದ ದುಗುಡವನ್ನೆಲ್ಲ ಹೊರಹಾಕಿದ್ದ.. ಅಹಲ್ಯೆಯ ಮಡಿಲಲ್ಲಿ ಗತಿಸಿದ ಕೌಸಲ್ಯೆಯ ನೆರಳನ್ನು ಅನುಭವಿಸಿದ… ದುಃಖವನ್ನು ಹೇಳಿಕೊಂಡನಂತರ ಶಾಂತವಾದ ಸಾಗರದಂತೆ ನಿದ್ರೆಹೋಗಿದ್ದ.. ಅಹಲ್ಯೆ ಅವನ ಮೈಮೇಲೆ ತೆಳ್ಳನೆಯ ನಾರುಹೊದಿಕೆಯನ್ನು ಹೊದಿಸಿ, ಕಣ್ಣೀರು ತುಂಬಿಕೊಂಡು ಪರ್ಣಕುಟಿಯೊಳಗೆ ಹೋಗಿದ್ದಳು. ಅವಳ ಹೃದಯ ಶ್ರೀ ರಾಮ ಸೀತೆಯರಿಗಾಗಿ ಮರಮರನೆ ಮರುಗಿತ್ತು.. ಗರ್ಭಿಣಿ ಸೀತೆಗಾಗಿ ಇಡೀ ರಾತ್ರಿ ಕಣ್ಣೀರು ಸುರಿಸಿದ್ದಳು.

ಆಗಲೇ ಎಂದಿನಂತೆ ಕೋಳಿ ಕೂಗಿ ಬೆಳಗಾಗಿರುವ ಸೂಚನೆಯನ್ನಿತ್ತಿತ್ತು! ಪತಿಯ ನಿತ್ಯ ವಿಧಿ ಹಾಗೂ ಪೂಜೆಗಳಿಗೆ ವಿಳಂಬವಾದೀತೆಂದು ಗಡಬಡಿಸಿ ಎದ್ದಿದ್ದಳು! ಪತಿಯ ಚರಣಗಳಿಗೆ ವಂದಿಸಿ ತನ್ನ ನಿತ್ಯ ವಿಧಿಗಳನ್ನು ಮುಗಿಸಿ ಹೊರಬಂದಾಗ ಶ್ರೀ ರಾಮ ಆಗಸದೆಡೆಗೆ ನಿಟ್ಟಿಸುತ್ತ ಮಲಗಿದ್ದ.

“ರಾಮಾ, ನಿನ್ನ ಆಹ್ನೀಕಾದಿಗಳನ್ನು ಮುಗಿಸಿ ಬಾ… ಋಷಿವರ್ಯರು ಕೂಡ ನದಿಯ ಕಡೆಗೆ ಹೋಗಿ ಬರುವ ಸಮಯವಾಗಿದೆ. ನಾನು ಬೆಳಗಿನ ಫಲಾಹಾರದ ವ್ಯವಸ್ಥೆಯನ್ನು ಮಾಡುವೆ.”

ಎಂದು ಹೇಳಿ ಅಡುಗೆ ಮನೆಗೆ ಹೋಗಿದ್ದಳು. ಸ್ನಾನಾಹ್ನೀಕಗಳನ್ನು ಮುಗಿಸಿಬಂದಿದ್ದ ಪತಿ ಹಾಗೂ ಶ್ರೀ ರಾಮರಿಗೆ, ಮಿಕ್ಕೆಲ್ಲ ಶಿಷ್ಯರುಗಳಿಗೆ  ಫಲಾಹಾರವನ್ನಿತ್ತಿದ್ದಳು. ನಂತರ ರಾಮನ ಬಳಿ ಬಂದು,

“ರಾಮ, ಎಷ್ಟೋ ವರ್ಷಗಳಿಂದ ಕಲ್ಲಾಗಿದ್ದ ನನ್ನಲ್ಲಿ ನೀನು ಚಲನೆಯನ್ನಂಟುಮಾಡಿದೆ. ನನ್ನ ಆ ಪಾಷಾಣ ಜೀವನಕ್ಕೆ ಮುಕ್ತಿಯನ್ನು ಒದಗಿಸಿದೆ. ನನ್ನ ಪತಿ ಶಾಪವನ್ನಿತ್ತು ಹೊರದೂಡಿದನಂತರ ನನಗೆ ಆಶ್ರಯವನ್ನಿತ್ತ ಆ ಸ್ಥಳವನ್ನು  ನಿನ್ನೊಡನೆ ಮತ್ತೆ ಭೇಟಿಮಾಡುವ ಇಚ್ಛೆಯಾಗಿದೆ.. ನನ್ನೊಂದಿಗೆ ಬರುವೆಯಾ?”

ಎಂದು ಬಿನ್ನವಿಸಿಕೊಂಡಿದ್ದಳು. ಮಹರ್ಷಿ ಗೌತಮ ಹಾಗೂ ಶ್ರೀ ರಾಮ ಇಬ್ಬರೂ ಅವಳೊಂದಿಗೆ ಆ ಸ್ಥಳಕ್ಕೆ ಹೋಗಿದ್ದರು. ಪತಿಯ ಚರಣಗಳಿಗೆ ವಂದಿಸಿ, ಅವರು ತನ್ನ ತಪ್ಪುಗಳನ್ನು ಮನ್ನಿಸಿ, ಇಷ್ಟು ದಿನ ಸಹಬಾಳ್ವೆ ನಡೆಸಿದುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದಳು. ಪತ್ನಿಯ ಈ ರೀತಿ ಅವರಿಗೆ ಆಶ್ಚರ್ಯ ತಂದಿತ್ತು! ತಾನು ಶಿಲೆಯಾಗಿ ಕಳೆದ ಆ ಸ್ಥಳದಲ್ಲಿ ಹೋಗಿ ನಿಂತಳು.

“ಶ್ರೀ ರಾಮ, ಅಂದು ನಸುಕಿನಲ್ಲಿ ಇಂದ್ರನ ಮೋಸವನ್ನರಿಯದೆ ನನ್ನ ಪತಿಯ ರೂಪದಲ್ಲಿ ಬಂದಿದ್ದ ಆತನೊಂದಿಗೆ ರಮಿಸಿದೆ. ನನ್ನ ಪತಿಯ ಆಗಮನದ ಸುಳಿವು ದೊರೆತ ಆತ ಓಡಿ ಹೋಗಿದ್ದ! ಏನಾಯಿತೆಂಬುದು ನನ್ನ ಅರಿವಿಗೆ ಬರುವ ಮುನ್ನವೇ ನಾನು ಪತಿಯ ಶಾಪಕ್ಕೆ ಗುರಿಯಾದೆ. ಕಲ್ಲಾದೆ. ಆದರೆ ನನಗೆ ಪುರುಷೋತ್ತಮನಾದ ನಿನ್ನಿಂದ ಶಾಪವಿಮೋಚನೆಯಾಯ್ತು. ನನ್ನ ಜೀವನವನ್ನು ಮತ್ತೆ ನಂದನವನ್ನಾಗಿಸಿದೆ. ನಿನಗಿಂತ ಎಷ್ಟೋ ಪಟ್ಟು ಪರಮಜ್ಞಾನಿಗಳಾದ ನನ್ನ ಪತಿಗೂ ಕೂಡ ಅರಿಯದೆ ಮಾಡಿದ ಅಪರಾಧವು ಅಪರಾಧವೇ ಅಲ್ಲವೆಂದು ಹೇಳಿ ಅವರ ಮನವನ್ನು ತಿಳಿಗೊಳಿಸಿದೆ. ಆದರೆ ಅದೇ ಸ್ಥಾನದಲ್ಲಿ ನಿಂತ ನೀನು ಲೋಕಾಪವಾದಕ್ಕೆ ಹೆದರಿ ಸೀತೆಗೆ ಅಗ್ನಿ ಪರೀಕ್ಷೆಯನ್ನು ವಿಧಿಸಿದೆ. ಅದರಲ್ಲಿ ಅಪರಂಜಿಯಾಗಿ ಹೊರಹೊಮ್ಮಿದ ಸೀತೆಯನ್ನು ಸ್ವೀಕರಿಸಿದುದೂ ಆಯಿತು. ಆದರೆ ಈಗ ಯಕಃಶ್ಚಿತ್ ಅಗಸನ ಮಾತಿಗೆ ಹೆದರಿದೆಯಾ? ತುಂಬುಗರ್ಭಿಣಿಯಾದ ಸೀತೆಯನ್ನು ಕಾಡಿಗಟ್ಟಿದೆಯಲ್ಲ? ಇದು ನ್ಯಾಯವೇ? ಪತಿಧರ್ಮವನ್ನು ಕಡೆಗಣಿಸಿ ರಾಜಧರ್ಮವನ್ನು ಪಾಲಿಸಿದೆಯಲ್ಲ? ಇದು ಸೀತೆಗೆ ಎಸಗಿದ ಅನ್ಯಾಯವೆಂಬ ಮಾತು ನಿನ್ನನ್ನು ಒಂದೇ ಒಂದು ಕ್ಷಣವೂ ಬಾಧಿಸಲಿಲ್ಲವೆ? ನಾನು ಮೋಸ ಹೋಗಿದ್ದೆ.. ಆದರೆ ಆಗಬಾರದ್ದು ಆಗಿಯೇಹೋಗಿತ್ತು! ಸೀತೆ? ಆಕೆ ಯಾವುದೇ ರೀತಿಯಿಂದಲೂ ಅಪರಾಧಿಯಲ್ಲ… ಕೇವಲ ಅಪಹೃತಳಾಗಿ ಅಶೋಕವನದಲ್ಲಿ ಋಷಿ ಸದೃಶ ಜೀವನ ನಡೆಸಿದವಳಿಗೆ ಮಾತ್ರ ಇಂಥ ಘೋರ ಶಿಕ್ಷೆಯೇ? ಶ್ರೀ ರಾಮ, ಇದು ಇಡಿಯ ಸ್ತ್ರೀಕುಲಕ್ಕೇ ಆದ ಅನ್ಯಾಯ. ಇದು  ಶೋಷಣೆ.. ಸ್ತ್ರೀಯೆಂದರೆ ಪುರುಷನ ಕೈಯಲ್ಲಿಯ ಆಟದ ಬೊಂಬೆಯೇ,  ಆಟವಾಡುವ ತನಕ ಸುಖಿಸಿದ ಮಗು ತನಗೆ ಬೇಸರವಾದಾಗ ಮುರಿದೆಸೆಯಲು? ರಾಣಿಯಾದರೇನು, ಸಾಮಾನ್ಯ ಸ್ತ್ರೀಯಾದರೇನು… ಈ ಶೋಷಣೆಗೆ ಭೇದವೇ ಇಲ್ಲ! ಇದಕ್ಕೆ ಕೊನೆ ಯಾವಾಗ… ದೇವರೆ, ಇಂದು  ಇಂಥ ರಾಮನಿಂದ ನನ್ನ ಶಾಪವಿಮೋಚನೆಯಾದುದಕ್ಕೆ ನಾಚಿಕೆ ಪಡುತ್ತೇನೆ. ಪುರುಷ ಎಲ್ಲಾ ಕಾಲಕ್ಕೂ ಪುರುಷನೇ… ಇಂಥ ಶಿಕ್ಷೆಗಾಗಿಯೆ ಅವಳು ನಿನ್ನೊಡನೆ ಸಪ್ತಪದಿ ತುಳಿದಳೇ? ಅದಕ್ಕಾಗಿಯೇ ಅಗ್ನಿಯಲ್ಲಿ ದಿವ್ಯದಂತೆ ಹೊರಹೊಮ್ಮಿದಳೇ? ನನಗೆ ನೀನು ನೀಡಿದ ಮುಕ್ತಿ ಬೇಡ ಶ್ರೀ ರಾಮಾ… ನಡೆದ ಅನ್ಯಾಯಕ್ಕೆ ಪ್ರತಿಯಾಗಿ ಇಂದು ನನ್ನನ್ನು ನಾನೇ ಶಿಕ್ಷೆ ಗೊಳಪಡಿಸಿಕೊಳ್ಳುತ್ತೇನೆ. ನಾನು  ಸ್ವಇಚ್ಛೆಯಿಂದ ಕಲ್ಲಾಗಿಸೆಂದು ಆ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇನೆ…   ಇಂಥ  ಜಗದಲ್ಲಿ, ಸ್ತ್ರೀಯ ಮನೋಭಾವನೆಗಳಿಗೆ, ಸ್ಪಂದನೆಗೆ ಬೆಲೆಯಿಲ್ಲದಲ್ಲಿ ಬದುಕುವುದಕ್ಕಿಂತ ಶಿಲೆಯಾಗುವುದೇ ಲೇಸು..!”

ಅಹಲ್ಯೆ ಮತ್ತೆ ಕಲ್ಲಾದಳು!

 

 

Leave a Reply