ಮತ್ತೆ ಮಳೆ ಹುಯ್ಯುತಿದೆ..ಅದೇ ನೆನಪಾಗುತಿದೆ.

#ಮತ್ತೆ_ಮಳೆ_ಹುಯ್ಯುತಿದೆ_ನೆನಪಾಗುತಿದೆ…
ಮುಂಬಯಿ ಮಳೆ.. ಆಹಾ..ಅಯ್ಯೋ ಎರಡೂ!
****
ಗೋರೆಗಾಂವ್ ನ ನನ್ನಣ್ಣನ ಮನೆಗೆ ಮುಂಜಾನೆಯ ಒಂಬತ್ತಕ್ಕೆಲ್ಲ ಠಾಕೋಠೀಕ್ ಬಂದು ಬೆಲ್ ಒತ್ತುತ್ತಿದ್ದ ಮನೆಗೆಲಸದ ಜಾನಕಿಬಾಯಿ ಇನ್ನೂ ಪತ್ತೆ ಇರಲಿಲ್ಲ. ಹೇಗೆ ಬಂದಾಳು? ಹಿಂದಿನ ಸಂಜೆಯಿಂದಲೇ ಭೋರಿಡಿದು ಮಳೆ ಬಾರಿಸುತ್ತಿತ್ತು ಮುಗಿಲು. ಆದರೂ ಹತ್ತು ಹೊಡೆಯುವ ಹೊತ್ತಿಗೆ ಬಂದವಳು “ಬಗಾ ತಾಯೀ ಆಪಲ ಮುಂಬಯಿಚ ಪಾವೂಸ್ ಮ್ಹಣಜೆ ಸಾರಖ ವೇಡ್ಯಾಸಾರಖಚ ಕರತೇ. ಅಣಿ ಆತಾ ಲೋಕಲ್ ಆಲೀ ನಾಹೀ…” ಅನ್ನುತ್ತ ಮುಂಬಯಿ ಮಳೆ ಅಂದರೆ ಸದಾ ಹೀಗೆ ಹುಚ್ಚು ಹಿಡಿದಂತೆ ಆಡುತ್ತೆ, ಆಗ ಲೋಕಲ್ ಟ್ರೇನು ಸಮಯಕ್ಕೆ ಬರೋದಿಲ್ಲ.. ಅದಕ್ಕೆತಡವಾಯ್ತು”. ಅನ್ನುವುದನ್ನು ತನ್ನದೇ ಶಬ್ದಗಳಲ್ಲಿ ಹೇಳಿದಳು…

ನಾನು ಹದಿನೆಂಟನೆಯ ಫ್ಲೋರಿನ ಆ ಮನೆಯ ಕಿಟಕಿಯೊಳಗಿಂದ ಮೋಡಗಳೆಲ್ಲ ಒಡೆದು ಚೂರಾಗಿ ಚಿಮ್ಮಿದಂತೆ ದಬಾಯಿಸಿ ಸುರಿಯುತ್ತಿದ್ದ ಲಕ್ಷಗಟ್ಲೆ ಕೊಡ ನೀರನ್ನೇ ನೋಡುತ್ತ ಕೂತಿದ್ದೆ..
ನಿಜವಲ್ಲದೆ ಇನ್ನೇನು? ಅನಿಸಿತು ಅವಳ ಮಾತು. ಈ ಮುಂಬಯಿಕರ್ ಜನ ಮಾತ್ರ ಇಂಥ ಯಾವುದೇ ಪಾವೂಸ್ (ಮಳೆ)ಗೆ ಕಿಂಚಿತ್ತೂ ಬೆಚ್ಚದ, ಸೊಪ್ಪು ಹಾಕಲಾರದ ಗಟ್ಟಿಗರು.

ಹೌದು, ಮುಂಬಯಿಯಲ್ಲಿ ಆಕಾಶ ಒಡೆದು ಬಿದ್ದಂತೆ ಮಳೆ ಆಗುವುದು ವರ್ಷದ ಸುಮಾರು ಜುಲೈ ಸಮಯಕ್ಕೆ. ಒಂದೊಂದು ವರ್ಷ ಸ್ವಲ್ಪ ರಿಯಾಯಿತಿ ತೋರಿಸಿ ಕಡಿಮೆ ಕೊಡುವ ಮನಸ್ಸು ಅಲ್ಲಿನ ವರುಣನಿಗಿರುತ್ತೆ. ಅವನ ಆರ್ಭಟಗಳಿಗೆ ಸಂಪೂರ್ಣವಾಗಿ ಒಗ್ಗಿ ಹೋಗಿದ್ದಾರೆ ಅಲ್ಲಿನ ಜನ.

ಇಡೀ ವರ್ಷದ ಅಗಾಧ ಸೆಕೆ, ಧಗೆ, ಕೊಳೆ ಎಲ್ಲವನ್ನೂ ತನ್ನ ಧಾರೆಯೊಳಗೆ ವಾರಗಳ ಕಾಲ ಮುಳುಗಿಸಿಟ್ಟು ಕ್ಲೀನ್ ಮಾಡುವ ಹುಮ್ಮಸ್ಸು ಈ ಮನ್ಸೂನಿನ ಹುಚ್ಚು ಮಳೆಗೆ. ರಸ್ತೆಗಳ ಗುಂಡಿಗಳೊಳಗೆ ಸ್ವಚ್ಛಂದ ತುಂಬಿ ನಿಂತು, ತಗ್ಗುಮನೆಗಳ ಬಿಡಿ, ಎತ್ತರದ ಮಹಡಿಗಳನ್ನೂ ಹೊಕ್ಕು ಬೇಡ ಬರಬೇಡ ಅನ್ನುವ ಜನರ ತಕರಾರೊಂದನ್ನೂ ಲೆಕ್ಕಿಸದೆ ಒಳಗಿನ ಪೀಠೋಪಕರಣ, ಮಂಚ, ಹಾಸಿಗೆ, ಪಾತ್ರೆ ಪುಸ್ತಕಗಳಿಗೆ ಬಲವಂತದ ಸ್ನಾನ ಮಾಡಿಸುವ ಮಳೆಯ ನೀರಿಗೆ ಅಲ್ಲಿನ ಜೋಪಡಪಟ್ಟಿಗಳೆಂಬ ಕೊಳೆಗೇರಿ ಮನೆಗಳ ಮೇಲೆ ವಿಶೇಷ ಅಗ್ರಹ, ಅನುಗ್ರಹ ಸುರಿಯುವುದು ಖಚಿತ…ಆದರೆ ಅವರೆಲ್ಲ ಕಷ್ಟಗಳಿಗಂಜದ ಗುಂಡಿಗೆಯವರು.. ”ಕ್ಯಾ ಸಾಲಾ ಬಾರಿಶ್ ಇಸ್ ಬಾರ್ ತೋ ಕಮಾಲ ಹೀ ಕರ್ದಿಯಾ.. ದಿಮಾಗ್ ಫಿರ್ಗಯಾ ಇಸ್ಕಾ” ಎಂತ ಬೈದು, ಬೈದರೂ ಅದೇ ಮಳೆಯಲ್ಲಿ ನೆಂದು, ಅ ನೆನೆತದಲ್ಲೂ ದೈನಂದಿನ ತಮ್ಮ ಯಾವುದೇ ಕಾಯಕಕ್ಕೆ ವಿರಾಮ ಇಲ್ಲವೇ ಇಲ್ಲ..ನಿಂತೂ ನಿಲ್ಲದೆ ನಡೆಯುವುದಕ್ಕೇ ಮುಂಬಯಿ ಅಂತಾರೆ!!

ಒಂದಿನ, ಎರಡು ದಿನ ಹೆಚ್ಚೆಂದರೆ ನಾಲ್ಕು ದಿನ ಮನೆಯಲ್ಲಿ ಕೂತು ಶಾಲೆ ಕೊಟ್ಟ ರಜಾದ ಮಜೆ ತೊಗೊಂಡ ಮಕ್ಕಳಿನ್ನು ಎದ್ದು ಹೊರಡಲೇಬೇಕಿರುವ ದಿನಗಳು ಬಾರದೆ ಇಲ್ಲವಲ್ಲ. ಅಂಥ ಅವರಿಗಾಗಿ ಯಾವ ಸವಲತ್ತೂ ಇಲ್ಲವೆನ್ನುತ್ತ ಧಪಾರೆಂದು ಬಾರಿಸುವ ಮಳೆಯಲ್ಲೇ ರೈನ್ ಕೋಟೇರಿಸಿ, ಶಾಲಾಬ್ಯಾಗು ಬೆನ್ನಿಗೆ ಹೊರಿಸಿ, ಊಟದ ಡಬ್ಬಿ ಹಿಡಿದು ಸ್ಕೂಲ್ ಬಸ್ಸೇರುವ ಮಕ್ಕಳು ಬಲು ಬೇಗ ಮಳೆಯನ್ನು ಒಪ್ಪಿಕೊಂಡುಬಿಡ್ತಾರೆ. ಗಾಲಿಯನ್ನೇ ಮುಳುಗಿಸುವಷ್ಟು ಏರಿದ ರಸ್ತೆಯ ನೀರಿನಲ್ಲಿ ಡುಬುಕ್ ಡುಬಕ್ ಅನ್ನುತ್ತ ಹೊಯ್ದಾಡಿ ಕಡೆಗೂ ಒಮ್ಮೆ ಅವರವರ ಸ್ಟಾಪಿಗೆ ತಂದಿಳಿಸುವ ಸ್ಕೂಲ್ ಬಸ್ಸಿಗೆ ಒಳಗಿದ್ದ ಕೊನೆಯ ಮಗುವೂ ಇಳಿದು ಹೋದಾಗ ಮಹಾ ಯಜ್ಞವನ್ನು ಪೂರೈಸಿದ ಸುಖವಂತೆ…

ರಸ್ತೆ ನಡುವೆ, ಸಮುದ್ರದಂಚಿನಲ್ಲಿ, ಕೆರೆಯಾಗಿರುವ ಆಟದ ಮೈದಾನಗಳಲ್ಲಿ ಛತ್ರಿ ಹಿಡಿದು ನಿಂತ ಟಿವಿ ಮಾಧ್ಯಮದವರು, ಆಕಾಶವಾಣಿಯವರು, ಪತ್ರಿಕೆಗಳವರು ಮಳೆಯ ಸ್ವರೂಪ ವರ್ಣನೆಗೆ, ಅದು ನಡೆಸಿರುವ ಧಾಂಧಲೆಗೆ, ರೈನ್ ಕೋಟಿನಲ್ಲಿ ಮುಖ ಅಷ್ಟೇ ಕಂಡ ಬೈಕು, ಸ್ಕೂಟರ್ ಸವಾರರನ್ನು ಮಳೆಯ ಆರ್ಭಟಕ್ಕೆ ಅವರಿಗಾದ ತೊಂದರೆಗಳ ಬಗ್ಗೆ ಸತತ ಪ್ರಶ್ನೆಗಳನ್ನಿಡುತ್ತ ತಾವೂ ಮಳೆಯಲ್ಲಿ ಒದ್ದೆಮುದ್ದೆಯಾಗುತ್ತ , ‘ಇದು ಆಕಾಶ ಕಳಚಿಬಿದ್ದ ಮಳೆ, ಮೋಡ ಒಡೆದ ಮಳೆ..ಟೊರೆನ್ಶಿಯಲ್ ರೇನ್ ಫಾಲ್, ಕ್ಲೌಡ್ ಬರ್ಸ್ಟ್, ರೇನಿಂಗ್ ಕ್ಯಾಟ್ಸ್ ಅಂಡ್ ಡಾಗ್ಸ್’ ಎನ್ನುವ ಶಬ್ದ ವಿಶೇಷಣಗಳನ್ನು ಬಳಸುತ್ತ ನಗರಪಾಲಿಕೆ, ಪಿ ಡಬ್ಲೂಡಿ, ನಗರಾಡಳಿತ ಇಲಾಖೆಯ ಅಧಿಕಾರಿಗಳು ಮತ್ತು ಮಂತ್ರಿಗಳ ಜನ್ಮ ಜಾಲಾಡುತ್ತಾರೆ…ಯಾವುದೇ ಜನ್ಮ ಜಾಲಾಟವೂ ಯಾರ ಮೇಲೂ ಪರಿಣಾಮ ಬೀರದೆಂದು ತಿಳಿದಿದ್ದರೂ ಆ ಕಾರ್ಯಕ್ರಮ ಅತೋನಾತವಾಗಿ ನಡೆದುಬಿಟ್ಟಿರುತ್ತೆ.. ನೀರು ತುಂಬಿದ ಗುಂಡಿಗಳಲ್ಲೇ ಅವರಿವರನ್ನು ನಿಲ್ಲಿಸಿ ಅವರ ಅನುಭವ ಕೇಳಿ ಅದಕ್ಕಿನ್ನಷ್ಟು ಬಣ್ಣ ಬಳಿದು ಫೋಟೋ ವೀಡಿಯೋ ಸಮೇತ ಜಗತ್ತಿಗೆ ತಲುಪಿಸಿದರೆ ಅವರ ಜವಾಬ್ದಾರಿ ಮುಗೀತು…ಇಂಥ ಅವ್ಯವಸ್ಥೆ ಕರಾವಳಿಯ ಮಳೆಗಾಲದ, ವಿಶೇಷವಾಗಿ ಸಮುದ್ರದಂಚಿನ ಸಮಸ್ತ ಊರುಗಳಿಗೆ ಇತ್ತೀಚಿನ ವರ್ಷಗಳಲ್ಲಿ ಸಹಜ, ಹೌದಲ್ಲ?

ಮಹಡಿ ಮನೆಗಳ ಕಿಟಕಿಯಿಂದ ರಾಚುವ ಇಂಚರನ್ನು ಒರೆಸಿ ಹಾಕಿ ಟೀವಿಗಳಲ್ಲಿ ಮಳೆಯ ಅಬ್ಬರದತ್ತ ಕಣ್ಣಿಟ್ಟು ಕಾಣುತ್ತ ನೆಂದು ರಸ್ತೆ ದಾಟಲು ಒದ್ದಾಡುವ ಅವರಿವರೊಡನೆ ತಮ್ಮದೂ ಹಿಡಿಶಾಪಗಳನ್ನು ಬೆರೆಸುತ್ತ ಈ ಹಿಂದೆ ತಾವನುಭವಿಸಿದ ಇಂಥದೇ ಪೀಡೆಯ ನೆನಪನ್ನು ಇವತ್ತಿನದರೊಂದಿಗೆ ಹೋಲಿಸುತ್ತ, ಕೆಟ್ಟು ಹೋದ ಕಾಲದ ಬಗ್ಗೆ ಇನ್ನಷ್ಟು ವಿಶ್ಲೇಷಣೆ ಮಾಡುತ್ತ ಇಂಥ ಪರಿಸ್ಥಿತಿಗೆ ಕಾರಣಗಳನ್ನು ಹುಡುಕಹೋಗುತ್ತಾರೆ. ಕೊನೆಗೆ ಸೋತು ಕೈ ಚೆಲ್ಲಿ ‘ಪಾವೂಸ ಥಾಂಬಲ್ಯಾವರಚ ಬಘೂಯಾ..’ ( ಮಳೆ ನಿಂತ ಮೇಲೆಯೇ ನೋಡಿದ್ರಾಯ್ತು) ಅನ್ನುತ್ತ ತಮ್ಮ ಹಲವೆಂಟು ಕಾರ್ಯಕ್ರಮಗಳನ್ನು ಅನಿರ್ದಿಷ್ಟ ಕಾಲಕ್ಕೆ ಮುಂದೂಡುತ್ತಾರೆ.. ಇನ್ನು ಹಲವರು “ತ್ಯಾಚಾತ್ ಕಾಯ್ ? ಆಪಲ ಆಪಣ್ ಕರೂಯಾ?”( (ಮಳೆ ಇದ್ರೇನಾಯ್ತು ನಮ್ಮ ಕೆಲಸ ಮುಗ್ಸೋಣ) ಅನ್ನುವವರು.

ಮುಂಬಯಿಯ ನರನಾಡಿ, ರಕ್ತ ನಾಳಗಳಾಗಿ ಹರಿದಾಡುವ ರೈಲು, ಲೋಕಲ್, ಮೆಟ್ರೋ ಗಳಿಗೆಲ್ಲ ಕೊಂಚ ಅಲ್ಲಲ್ಲೇ ನಿಂತು ಸುಧಾರಿಸಿಕೊಳ್ಳುವ ಸಮಯ. ಉಸಿರು ಹೊರಹಾಕುತ್ತ ಠಸ್ಸೆಂದು ಎಂಜಿನ್ ಹೂಸು ಬಿಟ್ಟು ಕಣ್ಣು ಮಿಟುಕಿಸಿ ನಾನೀಗ ಚುಕುಬುಕು ಅನ್ನಲಾರೆ.. ಅನ್ನುತ್ತವೆ.. ‘ “ಚ್ಯಾಯಲಾ..( ಒಂದು ಮರಾಠೀ ಬೈಗಳು) ಸಗಳೇ ಲೋಕಲ್ ಠಪ್ಪ…” (ಎಲ್ಲಾ ಲೋಕಲ್ ರೈಲು ನಿಂತ್ಹೋತು) ಅನ್ನುತ್ತ ತಮ್ಮ ಬದುಕಿನ, ಅಂದಂದಿನ ಗಳಿಕೆಯ ಮೂಲವಾದ ತರಕಾರಿ, ಮೀನು, ಮೊಟ್ಟೆ, ಹಣ್ಣು, ಇನ್ನೇನೇನೋ ದಿನಬಳಕೆ ಸಾಮಾನಿನ ರಾಶಿ ಮನೆಯ ಮೂಲೆ ಹಿಡಿದು ಕೂತಿದ್ದನ್ನು ಕಾಣುತ್ತ ಕೊರಗುವ ರಸ್ತೆಬದಿ ಮಾರಾಟಗಾರರ ಪಡಿಪಾಟಲು. ಮುಂಬಯಿಯ ಮುಕ್ಕಾಲುಪಾಲು ಜನರ ಹೊಟ್ಟೆಗೆ ಆಹಾರ ಒದಗಿಸುವವರೇ ಇವರು. ಈ ನಗರದ ಬದುಕಿನ ಅತ್ಮಗಳಿವರು.

“ಅರೇ..ಶೂಟಿಂಗ್ ಕ್ಯಾನ್ಸಲ್…ಚಲೋ ಕಂಹೀ ಮಿಲ್ಕೇ ಟೈಮ್ ಪಾಸ್ ಕರೇಂಗೇ..” ಅಂತ ಬಾಟಲ್ ಓಪನ್- ಬಾಟಮ್ಸ್ ಅಪ್ ಚಾಲೇಂಜು ಹಾಕಿ ನಿರಂತರ ಮೊಬೈಲ್ ಮೂಲಕ ಒಬ್ಬರನ್ನೊಬ್ಬರು ಎಳೆದುಕೊಳ್ಳುವ ಟಿವಿ, ಸಿನಿಮಾ ತಾರೆಗಳ ಮುಖದೊಳಗೆ ಒಂದಿಷ್ಟು ವಿಶ್ರಾಂತಿ ಕಂಡ ಖುಶಿ.

ಗುಡುಗು, ಸಿಡಿಲುಗಳ ಲೆಕ್ಕಾಚಾರದೊಂದಿಗೆ ಸಮುದ್ರಕ್ಕೆ ಇನ್ನಷ್ಟು ನೀರು ತುಂಬಿಸುವ ಮಳೆಯನ್ನೇ ಹದಿನೈದಿಪ್ಪತ್ತು ಅಡಿಗಳೆತ್ತರಕ್ಕೆ ಎತ್ತಿ ಎತ್ತಿ ಬೀಚುಗಳಂಚಿನ ಬೆಂಚು, ಕಟ್ಟೆ, ಫೂಟ್ ಪಾತಗಳಿಗೆ ಬೀಸಿ ಬಡಿದರೆ ಸಮುದ್ರದ ಆ ಉಬ್ಬರದ ಅಬ್ಬರವನ್ನು ಕಂಡು ಸುಖಿಸುವ ಕೆಲವು ಜನ- ಹೆಚ್ಚಾಗಿ ಪ್ರವಾಸಿಗರು- ಅದಕ್ಕೆಂದೇ ಮೆರೀನ್ ಡ್ರೈವಿನಂಥ ಜಾಗಗಳಿಗೆ ಓಡುವುದಿದೆ.
ಇದೇ ಕಾರಣಕ್ಕೆ ಮಳೆಗಾಲದಲ್ಲಿನ ಮುಂಬಯಿ ಅಂದರೆ ನನಗೊಂದು ವಿಶೇಷ ಮೆಚ್ಚು..ಆ ಸಮಯದಲ್ಲಿ ಅಲ್ಲಿದ್ದರೆ ಇಂಥ ಸಾಗರಮೊರೆತದಾಟ ನೋಡಲು ಹೋಗದಿರಲಾರೆ. ಒಮ್ಮೆ ಹೀಗಾಯ್ತು. ನಾನಲ್ಲಿಗೆ ಹೋಗಿದ್ದ ಒಂದು ಮಧ್ಯಾಹ್ನದ ವರೆಗೂ ಸುಮ್ಮನಿದ್ದ ಆಕಾಶ ಮೂರು ಗಂಟೆಯಷ್ಟೊತ್ತಿಗೆ ತನ್ನ ನೀರ ಹೊಟ್ಟೆಯ ಕೊಡ ಒಡೆದು ಬೋರಲಾದಂತೆ ಒದ್ದೊದ್ದು ಬಾರಿಸಿತು. ಆಕಾಶದ ಮೋಡಗಳನ್ನು ಅಪ್ಪಿಕೊಳ್ಳುವ ಹುಮ್ಮಸ್ಸು ಹೊಕ್ಕಂತೆ ಕೆಳಗಿನ ಸಮುದ್ರ ಎದ್ದು ನೆಗೆಯಿತು.. ನೋಡ ನೋಡುವಷ್ಟರಲ್ಲಿ ಹದಿನೆಂಟಡಿ ಎತ್ತರದ ಬ್ರಹ್ಮಾಂಡದಂಥ ರಕ್ಕಸ ತೆರೆಗಳು ಉಕ್ಕಿ ಕಿವಿ ಗಡಚಿಕ್ಕುವ ಸದ್ದಿನೊಂದಿಗೆ ಮೆರೀನ್ ಡ್ರೈವ್ ನ ಮೈಲಿಗಟ್ಲೆಯುದ್ದದ ತಡೆಗೋಡೆಯನ್ನು ಹಾರಿ ಬಂದು ಎರಚಿದ ನೀರಿಗೆ ನನಗೆ ನಿಂತಲ್ಲೇ ಸಂಪೂರ್ಣ ಜಲಾಭಿಷೇಕ! ಒಂದು ಕ್ಷಣ ಸಾಗರವೇ ನನ್ನನ್ನು ಒಳಗೆಳೆದುಕೊಳ್ಳಲು ಬಂತೋ ಅನ್ನುವ ದಿಗಿಲು, ಭ್ರಮೆ ಮೂಡಿಸಿ ಕೈ ಕಾಲುಗಳೆಲ್ಲ ತತ್ತರಬಿತ್ತರ ಆಗುತ್ತ ಕಣ್ಣು ಮೂಗಲೆಲ್ಲ ಹೊಕ್ಕ ಉಪ್ಪು ನೀರು ಉಸಿರುಗಟ್ಟಿಸುತ್ತೇನೋ ಅನಿಸುವಾಗಲೇ ಬಂದಷ್ಟೇ ರುದ್ರ ರಭಸ ಜೋರಿನಲ್ಲಿ ಅಲ್ಲೇ ಕುಸಿದು ಕಳಕಳ ನೀರಿನ ಧಾರೆ ರಸ್ತೆ, ಫೂಟ್ಪಾಥು, ಕಲ್ಲುಗಿಲ್ಲು, ಅಲ್ಲಿದ್ದ ಗಿಡಮರದಂಥ ಸಮಗ್ರವನ್ನೂ ಹೊಚ್ಚಿ ಮುಚ್ಚಿತು.. ನಡುಗು ಹುಟ್ಟಿದ ನಮ್ಮ ದೇಹದಲ್ಲಿ ಕಂಪನ, ರೋಮಾಂಚನ.ಏನೋ ಅರಿಯದ ನವಿರು.

ಟ್ಯಾಕ್ಸಿ ಹಿಡಿದು ಮನೆಗೆ ಮರಳಿ ಬಂದು ಕಾಫಿ ಕುಡಿದು ಮಲಗಿದ ಮೇಲೆಯೂ ಅರಬ್ಬೀ ಸಮುದ್ರ ನನಗೆ ಎರಚಿದ ಜಲಾಭಿಷೇಕದ ಅನಿರ್ವವಚನೀಯತೆ ಕಡಿಮೆಯಾಗಲೇ ಇಲ್ಲ.. ಅದೊಂದು ಕಣ್ಮುಚ್ಚಿ ಒಳಗೊಳ್ಳಬೇಕಾದ ಸುಖವಾಗಿ ನಿರಂತರ ನನ್ನ ನೆನಪಿನಲ್ಲಿಳಿದಿದೆ.. ಇನ್ನೊಮ್ಮೆ, ಮತ್ತೊಮ್ಮೆ ಮಗುದೊಮ್ಮೆಗೂ ಮಳೆಗಾಲ…ಮುಂಬಯಿ ಮೆರೀನ್ ಡ್ರೈವಿನ ಆ ಜಲಾಭಿಷೇಕ ಬೇಕೆನಿಸಿ ಮನಸ್ಸು ಕಾಯತ್ತಿರುತ್ತೆ! ಹೋಗಬೇಕು..ಹೋಗುತ್ತೇನೆ. 😊

-ಜಯಶ್ರೀ ದೇಶಪಾಂಡೆ

Leave a Reply