ಮೇರೀ ದೋಸ್ತೀ …ಮೇರಾ ಪ್ಯಾರ್

ಮೇರೀ ದೋಸ್ತೀ …ಮೇರಾ ಪ್ಯಾರ್…
HAPPY FRIENDSHIP DAY
” ಒಬ್ಬರೇ ಆದಷ್ಟೂ ಇರಬೇಡಿ. ಏನಾದರೂ ಕೆಲಸದಲ್ಲಿ ಸದಾ ತೊಡಗಿಕೊಂಡಿರಿ. ನಿಮ್ಮ ಸ್ನೇಹಿತೆಯರನ್ನು ಮನೆಗೆ ಕರೆಯಿರಿ ಇಲ್ಲವೇ ನೀವೇ ಅವರಲ್ಲಿಗೆ ಹೋಗಿ. ಮನಸ್ಸು ತುಂಬಾ ಭಾರವೆನಿಸಿದರೆ ನಿಮಗನಿಸಿದ್ದನ್ನೆಲ್ಲ ಒಂದು ಕಾಗದಕ್ಕಿಳಿಸಿ. ” _ಮನಸ್ಸು ಹಗುರವಾಗಿಸಿಕೊಳ್ಳಿ.
ಇದು ಬಹಳ ವರ್ಷಗಳ ಹಿಂದೆನನ್ನವರು ಏಕಾಏಕಿ ಹೃದಯಾಘಾತ ದಿಂದ ತೀರಿಹೋದ ನಂತರ Depression ಗೆ ಹೋಗುವ ಎಲ್ಲ ಲಕ್ಷಣಗಳು ಕಂಡು ಬಂದಾಗ ನಮ್ಮ ಕುಟುಂಬ ವೈದ್ಯರು ನನಗೆ ಕೊಟ್ಟ ಕೆಲವು ಸಲಹೆಗಳು. ಕಣ್ಣ ಮುಂದೆ ಅಸ್ಪಷ್ಟವಾದ ಹಲವಾರು ಮೈಲುದ್ದಗಳ ದಾರಿ, ಮನೆಯಲ್ಲಿ ಹದಿಮೂರರ ಒಳಗಿನ ಮೂರು ಮಕ್ಕಳು
ಎಂದಾದಾಗ ಆ ಮಾತುಗಳನ್ನು ಗಂಭೀರವಾಗಿ ಪಾಲಿಸುವದನ್ನು ಬಿಟ್ಟು ಬೇರೆ ಮಾರ್ಗವಿರಲೇಯಿಲ್ಲ ನನಗೆ. DO OR DIE ಪ್ರಸಂಗ.
‌‌‌‌ ‌ ‌ಹೀಗೆ ಪ್ರಾರಂಭವಾದ ಸ್ನೇಹಿತೆಯರ ಒಡನಾಟ ಅಂದಿಗಷ್ಟೇ ಅಲ್ಲದೇ ಮುಂದೆ ಎಂದೆಂದಿಗೂ ನನ್ನ ಬದುಕಿನ ಭಾಗವಾಗಿದ್ದು ನನ್ನ ಸುದೈವ. ನನ್ನ ಸ್ನೇಹಿತೆಯರಲ್ಲಿ ಹದಿನೆಂಟರಿಂದ ಎಂಬತ್ತರ ವಯಸ್ಸಿನ ಎಲ್ಲ ಹಂತಗಳ ಸ್ನೇಹಿತೆಯರಿದ್ದಾರೆ. ಎಲ್ಲರಿಂದಲೂ ನಾನು ಬದುಕು ಕಲಿತಿದ್ದೇನೆ. ಅವರು ಸುಖದಲ್ಲಿ ಬೆನ್ನು ತಟ್ಟಿದ್ದಾರೆ. ಕಷ್ಟದಲ್ಲಿ ಕಣ್ಣೊರಸಿದ್ದಾರೆ. ಅನಿವಾರ್ಯವೆಂದಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ತಪ್ಪುಗಳಾದಾಗ ಗದರಿಸಿ ಬುದ್ಧಿ ಹೇಳಿದ್ದಾರೆ. ಒಂದು ಫೋನ್ ಕರೆಗೆ ಇಂದಿಗೂ ತಕ್ಷಣ ಬಂದೊದಗುತ್ತಾರೆ.
“ಗೆಳೆತನವೆಂದರೆ ಒಂದು ವಿಶಾಲ ಆಲದ ಮರದಡಿ ವಿಶ್ರಮಿಸಿದಂತೆ” ಎಂಬುದೊಂದು ಕವಿವಾಣಿಯಿದೆ. ಓದಿದ್ದೆ, ಕಲಿಸಿದ್ದೆ, ಈಗ ಅದನ್ನೇ ಬದುಕುತ್ತಿದ್ದೇನೆ. ‌
‌‌‌‌ ‌ಈಗಿನ ಅವಧಿಯಲ್ಲೂ ಗೆಳತಿಯರೊಂದಿಗಿನ ಮಾತುಗಳೇ ನನ್ನಂಥವರಿಗೆ ಸಂಜೀವನಿ. ದಿನಾಲೂ ಒಬ್ಬರನ್ನು ನೆನಸಿಕೊಂಡು call ಮಾಡುತ್ತೇನೆ. ಇಲ್ಲವೇ ಅವರೇ ಮಾಡುತ್ತಾರೆ. ಹಳೆ, ಹೊಸ ಘಟನೆಗಳನ್ನು ಮೆಲುಕು ಹಾಕುತ್ತೇವೆ. ಕಳೆದ ದಿನಗಳ ನೆನಪುಗಳ ಅಖಂಡ ಮೆರವಣಿಗೆ ಸಾಗುತ್ತದೆ. ಮತ್ತೆ ಕೆಲವು ದಿನಗಳ ಮಟ್ಟಿಗೆ ‘ಆಹಾರಗ್ರಾಸ ‘ ಒದಗುತ್ತದೆ. ಕೋವಿಡ್ ಕಾಲದ ‘ಮನೆವಾಸ’ ಸಹ್ಯವಾಗುತ್ತದೆ.
‌‌‌ ‌ಜಗತ್ತು ಇಂದಿಗೂ ಸುಂದರವಾಗಿದೆ. ಬದುಕಿನ ಅಪಸವ್ಯಗಳೂ ಸಾಕಷ್ಟು ಇವೆ. ಅವೇ ಬದುಕಿನ ಸುಖಗಳ ಬೆಲೆಯನ್ನು ಹೆಚ್ಚು ಹೆಚ್ಚು ತಿಳಿಸುತ್ತವೆ, ಮೈಲುದ್ದದ ಬಿಸಿಲ‌ ನಡಿಗೆಯ ನಂತರವೇ ಮರದ ನೆರಳು ಸುಖದ ತಂಪನ್ನು ಇನ್ನೂ ಹೆಚ್ಚಿಸುವಂತೆ…
‌ ‌ಕೊರೋನಾ ಅಂಥದೇ ಒಂದು ಅಪಸವ್ಯ. ಕೆಲ ದಿನಗಳ ಕಠಿಣ ಪರೀಕ್ಷೆ .ಅದು ಒಮ್ಮೆ ಮುಗಿದರೆ ಅಲ್ಲಿಗೆ ಎಲ್ಲರ ಕಾಯುವಿಕೆ ಮುಗಿದಂತೆ. ಬದುಕಿನ ಹೊಸ ಹೊಸ ಪುಟಗಳು ತೆರೆದಂತೆ… ಕಾಯೋಣ,
” ಹೆಚ್ಚು ಹೆಚ್ಚು ಸುಂದರ ನಾಳೆಗಳಿಗಾಗಿ.”
Leave a Reply