ಮುಂಗಾರು ಮಳೆ ಹನಿಗಳ ಲೀಲೆ

ಮುಂಗಾರು ಮಳೆ ಹನಿಗಳ ಲೀಲೆ…!
ಸುರಿವ ಮಳೆ ಕಂಡಾಗ ನೆನಪಿನ ಪರದೆಯಲ್ಲಿ ಬಾಲ್ಯ ಸುರುಳಿ ಬಿಚ್ಚಿಕೊಳ್ಳುತ್ತದೆ. ಮಲೆನಾಡಿನಲ್ಲಿ ಮಳೆಗಾಲವೆಂದರೆ ಪ್ರಕೃತಿಯ ಚಿತ್ರಣವೇ ಬೇರೆ. ಮುಗಿಲಿಗೆ ತೂತು ಬಿದ್ದಂತೆ ಸುರಿವ ಮಳೆ. ಭೋರೆಂದು ಬೀಸುವ ಗಾಳಿ ನೆಲ ನಡುಗಿಸುವ ಗುಡುಗು ಭಾನು ಭುವಿಯನ್ನು ಒಂದಾಗಿಸುವ ಕೋಲ್ಮಿಂಚು. ಪಕ್ಕನೆ ಸಿಡಿವ ಸಿಡಿಲು. ವಾರ ಪೂರ್ತಿ ಗೈರು ಹಾಜರಾಗುವ ದಿನಮಣಿ. ವಿದ್ಯುತ್‍ನ ಕಣ್ಣುಮುಚ್ಚಾಲೆಯಾಟ.
ಮುಂಗಾರು ಮಳೆ ಮನೆಯ ಸುತ್ತಲ ಕಾಡಿನ ಮರಗಳ ಮೇಲೆ, ಗಿರಿಗಳ ಮೇಲೆ ಬಿಡುವಿಲ್ಲದೇ ಸುರಿವಾಗ, ಮನೆ ಎದುರಿನ ಅಡಿಕೆ ತೋಟದ ಬಾಳೆ ಎಲೆಯ ಮೇಲೆ ಬೀಳುವ ಪಟ, ಪಟ ಹನಿಗಳ ಸದ್ದು ನಮ್ಮ ಹೊರಗಡೆ ಲೋಕವಿದೆ ಎನ್ನುವುದನ್ನ ಮರೆಸಿಬಿಡುತ್ತದೆ. ಅಂಗಳದ ಡೇರೆ ಹೂವಿನ ಪುಟ್ಟ ಎಲೆಗಳ ಮೇಲೆ ಸುರಿವ ಮುತ್ತಿನ ಹನಿಯ ಥಕಧಿಮಿತ, ಸುಂಯ್ಯನೆ ಬೀಸುವ ಗಾಳಿಗೆ ಓಲಾಡುವ ಆ ಹೂಗಳ ಅಂದ, ಕಣ್ಣಿಗೆ ಹಿತವೆನಿಸಿ ಮನಸ್ಸನ್ನು ಅರಳಿಸುತ್ತದೆ. ಆ ಹೊತ್ತಿಗೆ ಒಣಗಿದ ಮರದ ರಂಬೆ, ಕೊಂಬೆಗಳ ಮೇಲೆ ಅರಳುವ ಅಣಬೆಗಳು ಜೀವನ ಭರವಸೆಯ ಪ್ರತೀಕವಾಗಿ ಗೋಚರವಾಗುತ್ತದೆ. ಅವರೆವಿಗೂ ಅಲ್ಲೆಲ್ಲೋ ಅವಿತು ಕೂತ ಬೀಜಗಳೆಲ್ಲಾ ಮಳೆಯೆಂಬ ಮಾಂತ್ರಿಕನ ಮಾಯಾಜಾಲಕ್ಕೆ ಸಿಲುಕಿ ಪಟ, ಪಟನೆ ತಲೆಯೆತ್ತಿ ಬಣ್ಣ, ಬಣ್ಣದ ಹೂವನ್ನು ಅರಳಿಸಿ ತಮ್ಮ ಅಸ್ತಿತ್ವವನ್ನು ಜಗತ್ತಿಗೆಲ್ಲಾ ಸಾರುತ್ತವೆ.
ಗದ್ದೆ, ಬಯಲುಗಳಲ್ಲಿ ಭತ್ತದ ನಾಟಿ ಮಾಡುವಾಗ ಹಠ ಮಾಡುವ ಎತ್ತುಗಳನ್ನು ಚುರುಕುಗೊಳಿಸಲು ಹೋಯ್..! ಹೋಯ್…..! ಎನ್ನುವ ವಿಶಿಷ್ಠ ಸ್ವರ ತನ್ನ ಪ್ರತಿಧ್ವನಿಯಿಂದಾಗಿ ಇಡೀ ಗದ್ದೆ ಬಯಲನ್ನು ಚೇತೋಹಾರಿಯಾಗಿಸುತ್ತಿತ್ತು. ಇತ್ತ ಶಾಲೆಗೆ ಹೊರಟ ನಾವು ಮೊಳಕಾಲುದ್ದದ ನೀರಿನಲ್ಲಿ ಆಟವಾಡುತ್ತಾ,  ದೋಣಿ ಬಿಡುತ್ತಾ ಕಪ್ಪೆ ಓಡಿಸುತ್ತಾ, ಹಾದಿ ಹೊದ್ದಿನ ಕಾಡು ಹಣ್ಣುಗಳಿಗೊಂದು ಗತಿ ಕಾಣಿಸುತ್ತ ಕಾಳಿಗೆ ಹತ್ತಿದ ಜಿಗಣೆಯ ಗಮನವಿಲ್ಲದೇ ಶಾಲೆಗೆ ಅರೆಬರೆ ನೆನೆದುಕೊಂಡು ಹೋಗುತ್ತಿದ್ದುದು ಬೇರೆಯದೇ  ಕಥೆ. ಸುರಿವ ಮಳೆಯಲ್ಲಿ ಕೊಡೆಯನ್ನು ಚಕ್ರಗತಿಯಲ್ಲಿ ತಿರುಗಿಸುತ್ತಾ, ನೀರನ್ನು ಸುತ್ತಲಿದ್ದವರಿಗೆ ಎರಚುತ್ತಾ  ಗೆಳೆಯರನ್ನು ಗೋಳು ಹೊಯ್ದುಕೊಳ್ಳುವ ಪರಿ ಈಗ ನೆನಪಷ್ಟೇ. ಜೊತೆಗಾರರ ಕೊಡೆಗೆ ನಮ್ಮ ಕೊಡೆ ಕಡ್ಡಿಯ ತುದಿಯಿಂದ ಚುಚ್ಚಿ ‘ಗುನ್ನ’ ಎನ್ನುತ್ತಾ ರೇಗಿಸಿ, ಕೊಡೆಗಳನ್ನು ಜರಡಿಯಂತಾಗಿಸಿಕೊಂಡು ತಿಂದ ಒದೆಗಳಿಗೆ ಲೆಕ್ಕ ಇಟ್ಟವರ್ಯಾರು. ಬದುಕನ್ನು ಆ ಪರಿ ಸಂಭ್ರಮಿಸುವ ಪಾಠವನ್ನು ಪರಿಸರವೇ ಕಲಿಸಿತ್ತು.
ಸುಯ್ಯೋ ಎನ್ನುವ ಗಾಳಿ, ಶೀತಕ್ಕೆ ಗೇರುಬೀಜ, ಹಲಸಿನ ಬೀಜ ಸುಟ್ಟು ಬಚ್ಚಲ ಒಲೆಯ ಬಡಬಾಗ್ನಿಯ ಮುಂದೆ ಬೆಚ್ಚಗೆ ತಿನ್ನುತ್ತಾ ಕೂರುವ ಸೊಗಸು ಬರೆದು ವಿವರಿಸುವಂತಹದಲ್ಲ. ಸಂಜೆಯಾದೊಡನೆ ಜೀರುಂಡೆಯ ಸೋಭಾನದ ಸದ್ದು, ಕಪ್ಪೆ ಮಂಡಳಿಯ ವಟರ್… ವಟರ್… ಜೊತೆ ಸೇರಿ ಕಿವಿಯನ್ನು ತೂತು ಹೊಡೆಸುತ್ತಿದ್ದವು. ಪ್ರಕೃತಿಯ ಜೊತೆಗೆ ಸಹಜವಾಗಿ ಬೆಳೆದು ಬಂದ ಈ ಜೀವ ಸುರವ ಮಳೆಯಿಂದ ಅದೇನೋ ಒಂದು ಆನಂದ ತುಂಬಿಕೊಳ್ಳುತ್ತದೆ. ಹೀಗಾಗಿ ಮುಂಗಾರೆಂದರೆ ಸಂಭ್ರಮ.

ಹೊಸ್ಮನೆ ಮುತ್ತು.

 

Leave a Reply