ಬದುಕು ಮತ್ತು ಜಗತ್ತು ನಾದಮಯವಾಗಬೇಕು

ಬದುಕು ಮತ್ತು ಜಗತ್ತು ನಾದಮಯವಾಗಬೇಕು
-ರಾಮಕೃಷ್ಣಾರ್ಪಣಾನಂದ
ಯಂತ್ರಮಯವಾಗಿರುವ ನಮ್ಮ ಬದುಕು ಸಹ ಯಾಂತ್ರಿಕವಾಗಿದೆ. ಏನೆಲ್ಲಾ ಸುಖ, ಸೌಲಭ್ಯಗಳು ಇದ್ದರೂ, ಇವುಗಳಿಂದ ಪರಿಹಾರ ಸಿಗಲಾರದಂತಹ ಒಂದಲ್ಲಾ ಒಂದು ತೊಂದರೆ, ತಾಪತ್ರಯ, ಮಾನಸಿಕ ಒತ್ತಡ ಅಥವಾ ಕ್ಲೇಶಗಳು ನಮ್ಮನ್ನು ಅನುಸರಿಸುತ್ತಿರುವ ನೆರಳಾಗಿ ಪ್ರತಿ ದಿನ, ಪ್ರತಿಕ್ಷಣವೂ ನಮ್ಮನ್ನು ಅನುಸರಿಸುತ್ತಿರುವ ನೆರಳಾಗಿ ಪ್ರತಿ ದಿನ, ಪ್ರತಿಕ್ಷಣವೂ ನಮ್ಮನ್ನು ಕಾಡುತ್ತಿರುತ್ತದೆ. ಇದರ ಪರಿಣಾಮವಾಗಿ ಸುಖ, ಸೌಲಭ್ಯಗಳು ಇದ್ದರೂ ಶಾಂತಿ ನೆಮ್ಮದಿಯ ಬದುಕು ದುರ್ಲಭವಾಗಿದೆ. ಅದಾಗ್ಯೂ, ಬಾಯಿಯಲ್ಲಿ ರಕ್ತಸ್ರಾವವಾಗುತ್ತಿದ್ದರೂ ಒಂಟೆ ಮುಳ್ಳನ್ನೇ ತಿನ್ನಲು ಹಂಬಲಿಸುವಂತೆ, ನಾವುಗಳು ತಿಳಿದೋ, ತಿಳಿಯದೆಯೋ ಯಾಂತ್ರಿಕ ಜಗತ್ತಿನ ಸುಖವೆಂಬ ಮರೀಚಿಕೆಯನ್ನು ಬೆಂಬತ್ತಿದ್ದೇವೆಯೇ ಹೊರತು, ಕೊಂಚವಾದರೂ ಅವುಗಳಿಂದ ವಿಮುಖರಾಗಿ ನಮ್ಮ ದೈನಂದಿನ ಜಂಜಾಟದ ಬದುಕಿಗೆ ಸೂಕ್ತ ಪರಿಹಾರವನ್ನು ಕಂಡುಕೊಂಡು ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ಪಡೆಯುವ ಪ್ರಯತ್ನವನ್ನು ಮಾಡುತ್ತಿಲ್ಲ. ಇಂಥ ಮನಸ್ಥಿತಿಗೆ ಸುಖವೇ, ಶಾಂತಿಯೆಂಬ ಭ್ರಮೆ ಅಥವಾ ಭಾವನೆ ಕಾರಣವಿರಬಹುದು.
ಬವಣೆಯಿಂದ ಕೂಡಿರುವ ಇಂದಿನ ನಮ್ಮ ಬದುಕಿಗೆ ನವಚೇತನವನ್ನು ನೀಡುವ ಅದ್ಭುತ ಶಕ್ತಿ ದೈವದ ಕೊಡುಗೆಯಾದ ಲಲಿತ ಕಲೆಗಳಲ್ಲಿ ಒಂದಾದ ಸಂಗೀತಕ್ಕಿದೆ. ಸಾಕ್ಷಾತ್ ಸರಸ್ವತಿ ಇದರ ಅಧಿದೇವತೆ. ಲಲಿತವೆಂದರೆ ಸುಂದರ ಅಥವಾ ಸುಮಧುರವಾದದು ಎಂದು ಅರ್ಥ. ಇದು (ಸಂಗೀತ) ನಮ್ಮ ಹೃನ್ಮನಗಳು ಅಪೇಕ್ಷಿಸುವ ಸಂತಸವನ್ನು ಕರುಣಿಸುತ್ತದೆ. ಹೃನ್ಮನಕ್ಕೆ ಮಾತ್ರ ವೇದ್ಯವಾಗುವ ಈ ಆನಂದ ನಮ್ಮ ಬದುಕಿನ ಬೇಸರ, ದುಃಖ, ದುಗುಡ, ದುಮ್ಮಾನ, ಗೊಂದಲ, ಗಡಿಬಿಡಿ ಮೊದಲಾದವುಗಳನ್ನು ನೀಗಿಸಿ, ಮುದುಡಿದ ಅಥವಾ ಕೆರಳಿದ ನಮ್ಮ ಮನಸ್ಸು, ಹೃದಯ ಮತ್ತು ಭಾವನೆಗಳನ್ನು ಸಾಂತ್ವನಗೊಳಿಸುತ್ತದೆ. ಈ ಕಾರಣದಿಂದಾಗಿಯೇ ಮನೋವೈದ್ಯರೂ ಕೂಡ ತಮ್ಮ ರೋಗಿಗಳಿಗೆ ಸುಮಧುರವಾದ, ಸುಶ್ರಾವ್ಯವಾದ ಸಂಗೀತವನ್ನು ಆಲಿಸುವಂತೆ ಸಲಹೆ ಮಾಡುತ್ತಾರೆ. ಸಂಗೀತದ ಮೂಲಕ ಶಾರೀರಿಕ ರೋಗಗಳನ್ನೂ ನಿವಾರಣೆ ಮಾಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮಾನಸಿಕ ಒತ್ತಡದಿಂದಾಗಿಯೇ ಬಹುತೇಕ ಶಾರೀರಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಿಗೆ ಸಂಗೀತದ ಮೂಲಕ ಪರಿಹಾರ ಕಂಡುಕೊಳ್ಳಬಹುದೆಂಬ ಅಂಶ ಬೆಳಕಿಗೆ ಬಂದಿದೆ. ದುಃಖತಪ್ತ ಹೃನ್ಮನವನ್ನು ಸಂಗೀತ ಸಂತೈಸುವುದರ ಜೊತೆಗೆ ನವೋಲ್ಲಾಸ ಮತ್ತು ಉತ್ಸಾಹವನ್ನು ಸೃಜಿಸುತ್ತದೆ. ಬೇಸರ ನೀಗಲು ಸಂಗೀತ ಉತ್ತಮ ಮನರಂಜನೆಯ ಮಾಧ್ಯಮವಾಗಿದೆ. ಸಂಗೀತ ಭಗವಂತನಿಗೆ ಪರಮಪ್ರಿಯವಾದರಿಂದ ಆತನನ್ನು ಒಲಿಸಿಕೊಳ್ಳಲು ಶ್ರೇಷ್ಠ ಸಾಧನವಾಗಿದೆ. ಸಂಗೀತ ದೇಶಭಕ್ತಿಗೆ ಇಂಬುಕೊಡುತ್ತದೆ. ಆನಪದ ಗೀತೆಯಂತೂ ಜನಸಾಮಾನ್ಯರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹೀಗೆಲ್ಲಾ ಸಂಗೀತ ನಮ್ಮೆಲ್ಲರ ಬದುಕಿನ ಉಸಿರಾಗಿದೆ. ಸಾಮಾನ್ಯವಾಗಿ ಹಸುಗೂಸಾಗಿರುವಾಗಲೇ ಎಲ್ಲರೂ ಸಂಗೀತ ಸುಧೆಯನ್ನು ಸವಿಯುತ್ತಾರೆ. ರಚ್ಚೆ ಹಿಡಿದ ಮಗು ತಾಯಿಯ ಜೋಗುಳ ಕೇಳುತ್ತಿದ್ದಂತೆ ಕಿಲಕಿಲನೆ ನಗಲು ಮೊದಲು ಮಾಡುತ್ತದೆ. ತಾಯಿಯ ಜೋಗುಳ ಕೇಳುತ್ತಾ ಶಾಂತವಾಗಿ ನಿದ್ರೆ ಹೋಗುತ್ತದೆ. ಮಕ್ಕಳೆ ಏಕೆ? ನಿದ್ರೆ ಬಾರದಾಗ ಸಣ್ಣಗೆ ಧ್ವನಿ ಮಾಡಿದ ಸಂಗೀತವನ್ನು ಆಲಿಸುತ್ತಿದ್ದರೆ ಶ್ರಮವಿಲ್ಲದೆ ದೊಡ್ಡವರಾದ ನಾವುಗಳೂ ಕೂಡ ನಿದ್ರಾವಶರಾಗಿ ಬಿಡುತ್ತೇವೆ. ಹೀಗೆ ನಮ್ಮ ಬದುಕಿನಲ್ಲಿ ಸಂಗೀತದ ಅವಶ್ಯಕತೆ ಮತ್ತು ಉಪಯೋಗಗಳು ಬಹಳ.
ಸಂಗೀತ ಸಂಸ್ಕೃತಿಯ ಒಂದು ಸುಸಂಸ್ಕೃತ ಕೊಡುಗೆಯಾಗಿರುವುದರಿಂದ ಪ್ರತಿಯೊಂದು ದೇಶವು ತಮ್ಮದೇ ಆದ ಸಂಗೀತದ ಸಮೃದ್ಧ ಸಂಪತ್ತನ್ನು ಹೊಂದಿದೆ. ವಿಶ್ವವ್ಯಾಪಿಯಾಗಿರುವುದು ಮಾತ್ರ ಪಾಶ್ಚಿಮಾತ್ಯರ ಪಾಪ್ ಸಂಗೀತ. ವಿಶ್ವದ ಎಲ್ಲಾ ಜನ ಅದರಲ್ಲೂ ಯುವಜನತೆ ಇದರ ಮೋಡಿಗೆ ಒಳಗಾಗಿದ್ದಾರೆ. ಮೋಜು, ಮನರಂಜನೆಗೆ ಇದರಲ್ಲಿ ವಿಪುಲವಾದ ಅವಕಾಶವಿರುವುದರಿಂದ ಇದಕ್ಕೆ ಕಾರಣವಿರಬಹುದು. ಅದೆಲ್ಲಾ ಏನೇ ಇರಲಿ. ಒಟ್ಟಿನಲ್ಲಿ ಈ ಸಂಗೀತ ವಿಶ್ವದ ಎಲ್ಲಾ ದೇಶಗಳನ್ನು ಒಗ್ಗೂಡಿಸಿ, ಜನರಲ್ಲಿ ಸ್ನೇಹ, ಸಾಮರಸ್ಯವನ್ನು ಮೂಡಿಸಿದೆ. ಎಲ್ಲಾ ದೇಶಗಳೂ ಸ್ನೇಹ, ಶಾಂತಿ, ಸೌಹಾರ್ದತೆಗಾಗಿ ವಿದೇಶಗಳಿಗೆ ಹೋಗಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿವೆ. ಸಂಗೀತ ಸಂಪತ್ತನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಪ್ರಾಚ್ಯ ಮತ್ತು ಪಾಶ್ಚಿಮಾತ್ಯ ಸಂಗೀತಗಳನ್ನು ಸಂಯೋಜಿಸುವ ಪ್ರಯತ್ನ ಮತ್ತು ಪ್ರಯೋಗಗಳು ನಡೆಯುತ್ತಿವೆ. ಹೀಗೆಲ್ಲಾ ಎಲ್ಲೆಯನ್ನೇ ಕಾಣದ ಸಂಗೀತ ಜನತೆಯನ್ನು ಒಗ್ಗೂಡಿಸುವ ವಿರಾಟ್ ಶಕ್ತಿಯಾಗಿದೆ.
ಸಹಸ್ರಾರು ವರ್ಷಗಳ ಹಿಂದೆಯೇ ಭಾರತೀಯ ಸಂಗೀತದ ಉಗಮವಾಯಿತು. ಇದು ಜನ್ಮತಳೆದು ಬೆಳವಣಿಗೆಯನ್ನು ಕಂಡದ್ದು ದೇವಾಲಯಗಳಲ್ಲಿ ಪ್ರಾರಂಭದಲ್ಲಿ ಇದರ ಉದ್ದೇಶ ಭಗವಂತನನ್ನು ಆರಾಧಿಸುವುದು (ಆದರೀಗ ಇದು ವಾಣಿಜ್ಯೋದ್ಯಮವಾಗಿರುವುದು ಖೇದಕರ ಸಂಗತಿ.) ಬರಬರುತ್ತಾ ಇದೊಂದು ಕಲೆಯಾಗಿ ರಾಜರ ಆಶ್ರಯ ಪಡೆದು ತನ್ನ ಸ್ಥಾನವನ್ನು ಸುಭದ್ರಪಡಿಸಿಕೊಂಡಿತು. ಶ್ರೇಷ್ಠ ಸಂಗೀತಗಾರರ ಸೃಷ್ಟಿಯಾಯಿತು. ಇವರಲ್ಲಿ ಕೆಲವರು ತಮ್ಮ ಅದ್ಭುತ ಸಾಧನೆ, ಪರಿಶ್ರಮಗಳಿಂದ ಖ್ಯಾತರಾಗಿ ಇಂದಿಗೂ ಸಹ ದಂತಕಥೆಯಾಗಿದ್ದಾರೆ. ಮಳೆ ಬಾರದಿದ್ದರೆ ಮೇಘರಾಗವನ್ನು ಹಾಡಿ ಮಳೆಯನ್ನು ಬರಿಸುತ್ತಿದ್ದರಂತೆ! ಕಲಹರಿ ರಾಗವನ್ನು ಹಾಡಿ ಕಲಹಗಳನ್ನು ದೂರ ಮಾಡುತ್ತಿದ್ದರಂತೆ, ದೀಪಿಕಾಮಾಲ ರಾಗವನ್ನು ಹಾಡಿ ದೀಪಗಳನ್ನು ಬೆಳಗಿಸುತ್ತಿದ್ದರಂತೆ.
ನಮ್ಮ ಭಾರತೀಯ ಸಂಗೀತದಲ್ಲಿ ಪ್ರಮುಖವಾದ ಕಂಠ ಪ್ರಧಾನವಾದ ಆಯಾಮ (ಪ್ರಕಾರ)ಗಳೆಂದರೆ, ಶಾಸ್ತ್ರೀಯವಾದ ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತ. ಹಿಂದೂಸ್ತಾನಿ ಉತ್ತರ ಭಾರತದ ಪ್ರಭಾವಕ್ಕೊಳಗಾದರೆ ಕರ್ನಾಟಕ ಸಂಗೀತ ದಕ್ಷಿಣ ಭಾರತದ ಪ್ರಭಾವಕ್ಕೊಳಗಾಗಿದೆ. ಇವುಗಳ ಪ್ರಭಾವದಿಂದ ಕಾಲಾನುಕ್ರಮದಲ್ಲಿ ಸುಗಮ ಸಂಗೀತ, ಜಾನಪದ ಸಂಗೀತ ಮತ್ತು ಸಿನಿಮಾ ಸಂಗೀತ ಮೊದಲಾದವುಗಳ ಸೃಷ್ಟಿಯಾಯಿತು. ಸಾತ್ವಿಕತೆಯ ಶಾಸ್ತ್ರೀಯ ಸಂಗೀತಕ್ಕೆ ಇತ್ತೀಚಿನ ದಿನಗಳಲ್ಲಿ ಒಲವು ಕಡಿಮೆಯಾಗುತ್ತಿರುವುದು. ಇವುಗಳ ಸ್ಥಾನವನ್ನು ಅಬ್ಬರದ ಹಾಗೂ ಸಾತ್ವಿಕತೆ ಲವಲೇಷವೂ ಇರದ ಹಾಗೂ ಮೈ ಮನಸ್ಸುಗಳನ್ನು ಪ್ರಚೋದಿಸುವ ಸಿನಿಮಾ ಮತ್ತು ಪಾಶ್ಚಿಮಾತ್ಯ ಸಂಗೀತಗಳು ಆಕ್ರಮಿಸಿಕೊಳ್ಳುತ್ತಿರುವುದು ಹಿತಕರವಾದ ಹಾಗೂ ಆರೋಗ್ಯಕರವಾದ ಬೆಳವಣಿಗೆಯಲ್ಲವೇನೋ ಎನಿಸುತ್ತದೆ. ಈ ಸಂಗೀತಗಳು ಮೋಜು, ಮನರಂಜನೆಯನ್ನು ನೀಡಬಹುದು. ಆದರೆ ರೋಗವನ್ನು ಅಥವಾ ಕೆರಳಿದ ಮನಸ್ಸನ್ನು ಶಮನಗೊಳಿಸುವುದಕ್ಕೆ ಬದಲಾಗಿ ಉಲ್ಬಣಗೊಳಿಸುತ್ತವೆ.
ಶೃತಿಯನ್ನೇ ಸಮೀಕರಿಸುವ ಓಂಕಾರ ನಾದಬ್ರಹ್ಮವೆನಿಸಿದೆ. ಆ, ಉ, ಮ ಗಳ ಸಂಯೋಜನೆಯಿಂದ ಹೊರಹೊಮ್ಮುವ ಓಂಕಾರ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ನೇರ ಪರಿಣಾಮವನ್ನುಂಟು ಮಾಡುತ್ತದೆ. ಕ್ರಮ ಮತ್ತು ಲಯಬದ್ಧವಾಗಿ ‘ಓಂ’ಕಾರ ಮಾಡುವುದರಿಂದ ಹೃನ್ಮನಗಳು ಅವ್ಯಕ್ತವಾದ ಆನಂದ ಮತ್ತು ಶಾಂತಿಯನ್ನು ಅನುಭವಿಸುವುದೇ ಅಲ್ಲದೆ ಶಾರೀರಿಕ ಮತ್ತು ಮಾನಸಿಕ ರೋಗಗಳಿಂದ ಮುಕ್ತರಾಗಬಹುದಾಗಿದೆ. ಪ್ರತಿದಿನ ಮುಂಜಾನೆ ಮತ್ತು ಮುಸ್ಸಂಜೆ ಕನಿಷ್ಠ ಹತ್ತು ಓಂಕಾರಗಳನ್ನು ಮಾಡುವುದು ಉತ್ತಮ ಅಭ್ಯಾಸ. ಶುಕಪಿಕಗಳ ಇಂಚರ, ದುಂಬಿಗಳ ಝೇಂಕಾರ, ನದಿಯ ನಿನಾದ, ಸುಳಿಗಾಳಿನಾದ, ವೇಣುಗಾನ, ಜಲಧಾರೆಯ ಶಂಖನಾದ, ಸಮುದ್ರದ ಓಂಕಾರ ಹೀಗೆ ಇಡೀ ಪ್ರಕೃತಿಯೇ ನಾದಮಯವಾಗಿದೆ. ಇಂತಹ ಪ್ರಕೃತಿಯಲ್ಲಿ ವಿಹರಿಸುವುದು ಅಥವಾ ವಿರಮಿಸುವುದು ಸ್ವರ್ಗೀಯ ಆನಂದ. ವೈವಿಧ್ಯಮಯವಾದ ವಾದ್ಯ ಸಂಗೀತಗಳಂತೂ ಅನೇಕ, ಮೃದಂಗ, ತಬಲಾ, ವೀಣೆ, ಪಿಟೀಲು, ಹಾರ್ಮೋನಿಯಂ, ಸಿತಾರ್, ಗಿಟಾರ್, ಮ್ಯಾಂಡೋಲಿನ್, ಜಲತರಂಗ, ಶಹನಾಯಿ, ಕೊಳಲು ಮೊದಲಾದ ವಾದ್ಯಗಳು ಹೊರಡಿಸುವ ನಾದ ಮಾಧುರ್ಯಗಳೊಂದೊಂದೂ ಅನುಪಮ ಅದ್ಭುತಗಳು. ಇವುಗಳನ್ನು ಆಸ್ವಾದಿಸದ ನರಜನ್ಮ ವ್ಯರ್ಥ. ಈ ವಾದ್ಯಗಳು ಕಂಠ ಸಂಗೀತಕ್ಕೆ ಪೂರಕವಾಗಿ ಹೊಂದಿಕೆಯಾಗುವುದೂ ಸಂಗೀತ ಲೋಕದ ಪವಾಡವೇ ಸರಿ. ಸಂಗೀತದ ಈ ಎಲ್ಲಾ ಸೆಲೆಗಳಿಗೆ ಸ,ರಿ,ಗ,ಮ,ಪ,ದ,ನಿ ಎಂಬ ಸಪ್ತ ಸ್ವರಗಳೇ ಮೂಲಾಧಾರ. ವಿಭಿನ್ನ ಸ್ವರೂಪದ ಸಂಗೀತಗಳು ಹಾಗೂ ಸ್ವರಗಳು ಸಾಮರಸ್ಯದಿಂದ ಒಂದಕ್ಕೊಂದು ಸೇರಿಕೊಂಡು ಶೃತಿ, ತಾಳ, ಮೇಳವಾಗಿ ಮೇಳೈಸಿ ಕರ್ಣಗಳ ಮೂಲಕ ಕೇಳುಗರ ಮನ ಮುಟ್ಟಿ, ಹೃದಯ ತಟ್ಟಿ, ಭಾವ ಸಮಾಧಿಯ ಸ್ತರಕ್ಕೇರಿಸಿ ದಿವ್ಯಾನುಭೂತಿಯ ಆನಂದವನ್ನು ನೀಡುವ ಸಂಗೀತ. ಸಾಮರಸ್ಯ ಬದುಕಿನ ರಹಸ್ಯವನ್ನು ಹಾಗೂ ಭಾವೈಕ್ಯತೆಯ ಉದಾತ್ತ ಭಾವನೆಗಳ ಸಂದೇಶವನ್ನು ಸಾರುತ್ತಿವೆ.
ನಮ್ಮ ಬದುಕು ಸುಂದರವಾಗಲು ಭವ್ಯ ಪರಂಪರೆಯ ಸಂಗೀತ ಸಂಪತ್ತನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದನ್ನು ಜವಾಬ್ದಾರಿಯಿಂದ ನಿರ್ವಹಿಸಿ, ಜಗತ್ತು ಮತ್ತು ನಮ್ಮ ಬದುಕನ್ನು ನಾದಮಯವಾಗಿಸುವ ಸಂಕಲ್ಪ ಮಾಡೋಣ.

Leave a Reply