ನಾಮದ ಬಲವೊಂದಿದ್ದರೆ ಸಾಕೋ…

ನಾಮದ ಬಲವೊಂದಿದ್ದರೆ ಸಾಕೋ…

‘ಹೆಸರಿನಲ್ಲೇನಿದೆ’ – ಅಂದವನು ಶೇಕ್ಸ್ಪಿಯರ್…ಹೆಸರಿನಲ್ಲೇನಿಲ್ಲ?- ಇದು ನನ್ನ ಪ್ರಶ್ನೆ… ‘ ಹೆಸರಿಗೆ’ ‘ ಹೆಸರು’ ಎಂದು
‘ಹೆಸರಿ’ಟ್ಟು ಹೇಳ ‘ಹೆಸರಿಲ್ಲದೇ’ ಎಲ್ಲೋ ಮಾಯವಾದ ಆ ಮನುಷ್ಯ ಸಿಕ್ಕಿದ್ದರೆ ಝಾಡಿಸಿ ಅವನಿಂದಲೇ ಉತ್ತರ ಪಡೆಯಬಹುದಿತ್ತು.
‘ ನನ್ನ ಹೆಸರು ತಿಳಿಯಬೇಕೇ?’- ಹತ್ತನೇ ಪುಟ ನೋಡಿ ಎಂದು ಬರೆದು ಹತ್ತನೇ ಪುಟದಲ್ಲಿ ಪುನಃ
ಮೂವತ್ತನೇ ಪುಟ ನೋಡಿ ಎಂದು, ಅಲ್ಲಿ ಮತ್ತೊಂದು ಪುಟಸಂಖ್ಯೆ ಬರೆದು ಗೆಳೆಯ- ಗೆಳತಿಯರನ್ನು ಪುಸ್ತಕದ ಕೊನೆಯು ಬರುವವರೆಗೂ ಅಟ್ಟಾಡಿಸಿ ನಗುತ್ತಿದ್ದುದು ಎಲ್ಲರೂ ಬಲ್ಲ ಆಟ.
‌ ಆದರೆ ನನ್ನ ಹೆಸರು ಇನ್ನೂ ನನ್ನನ್ನೇ ಆಡಿಸುತ್ತಿರುವದು ಬಹು ಜನರಿಗೆ ಗೊತ್ತಿಲ್ಲ.
ನಾ ಹುಟ್ಟಿದ ಹನ್ನೊಂದನೇ ದಿನಕ್ಕೇನೇ ‘ ಶ್ರೀಮತಿ’ ಎಂದು ಹೆಸರಿಟ್ಟು
ನಮ್ಮವ್ವ ನನಗೊಂದು identity ಏನೋ ಕೊಟ್ಟಳು. ಆದರೆ ನನಗೆ ತಿಳುವಳಿಕೆ ಬಂದ ತಕ್ಷಣ ಎಲ್ರೂ ನಗುತ್ತಾ ಕೇಳುತ್ತಿದ್ದ ಪ್ರಶ್ನೆ,’ ನಿನ್ನ ಮದಿವ್ಯಾಗೇದೇನು? ನೀನು ಯಾರ ಶ್ರೀಮತಿ?”- ಸಾಲಿವೊಳಗ ನಮ್ಮ ಇಂಗ್ಲಿಷ್ ಮಾಸ್ತರ್ದು permanent question: ” Shrimati??? Prefix or Suffix ?( ಹೆಸರಿನ ಹಿಂದೋ? ಮುಂದೋ?).
“ನಾನು ಕುಮಾರಿ, ಶ್ರೀಮತಿ ಅಂತ ಹೇಳಬೇಕಾಗುತ್ತಿತ್ತು. ಮುಂದೆ BEd ಮಾಡಲಿಕ್ಕೆ ಕುಮಠಾದಾಗ ಇದ್ದಾಗ , ಧಾರವಾಡದಿಂದ ಮನಿಯಾರ್ಡರ್ ಬಂದಾಗೊಮ್ಮೆ ಗೊಂದಲ ಕಟ್ಟಿಟ್ಟ ಬುತ್ತಿ. ರೊಕ್ಕ ಕೊಡಬೇಕಾದಾಗೆಲ್ಲ post man ಅನ್ನುತ್ತಿದ್ದ;
” ಹೆಸರು ಹೇಳ್ರಿ madam.”
” ಶ್ರೀಮತಿ”
“ಆತು, ಮುಂದ ಹೇಳ್ರಿ…”
“ಹಂಚಿನಮನಿ”
” ಸರ್ ನೇಮ್ ಅಲ್ರೀ…ಶ್ರೀಮತಿ ಆದಮ್ಯಾಲ ಏನು ಬರೀಬೇಕು ಅದನ್ನ ಹೇಳ್ರೀ…”
“ಶ್ರೀಮತಿ, ಶ್ರೀಮತಿ ಹಂಚಿನಮನಿ”
“ಏನೇನ್ ಹೆಸರಿಟ್ಟು ತಲೀಕೆಡಸ್ತಾರ್ರೀ
ಈ ಜನ”- ಎಂದು ಗೊಣಗಿ, ಒಬ್ಬಿಬ್ಬರನ್ನು
ವಿಚಾರಿಸಿ ಹಣ ಕೊಟ್ಟು ಒಂದು ರೀತಿ
ಗುಮಾನಿಯಿಂದಲೇ ನನ್ನ ನೋಡ್ತಾ ಹೋಗ್ತಿದ್ದ… ಇಲಾಖೆಗೆ ಹಣದ ವಿಚಾರದಲ್ಲಿ ಯಾವುದೇ ದೂರು ಬರಲಿಲ್ಲವಾಗಿ ಅವನಿಗೆ ನಾನು ‘ನಾನೇ’
ಎಂದು ಕೊನೆಗೊಮ್ಮೆ ಖಚಿತವಾಯ್ತು ಅನ್ನುವ ಅಂದಾಜು ನನ್ನದು…
ಮುಂದೆ ಈ ‘ಶ್ರೀಮತಿ’ ಮದುವಿಯಾಗಿ ‘ಕೃಷ್ಣಾ ಕೌಲಗಿ’ ಆದಮ್ಯಾಲೂ ಹೆಸರಿನ ಪೆಡಂಭೂತ
ಬೆನ್ನು ಬಿಡದ ಬೇತಾಳವಾದದ್ದು ನನ್ನದಾವ ಕರ್ಮಕ್ಕೋ ಇವತ್ತಿಗೂ ಗೊತ್ತಿಲ್ಲ.’ ಕೃಷ್ಣಾ’ ನನ್ನವರ ಅಜ್ಜಿಯ ಹೆಸರಂತೆ. ಅವರ ನೆನಪಿಗಾಗಿ ನನಗಿಟ್ಟರು. ನೌಕರಿಗೆ ಸೇರಿದ ದಿನ ವೇತನ ಪಾವತಿಗೆ ನನಗೆ ಖಾತೆ ತೆಗೆಯಲು ಹೇಳಿದರು. ಎಲ್ಲಾ ವಿವರ ಕೊಟ್ಟೆ:
“ಖಾತೇದಾರರು ಯಾರು?”
“ನಾನೇ”
” ಅಲ್ಲ್ರೀ ಇಲ್ಲಿ “ಕೃಷ್ಣ” ಅಂತ ಇದೆ”
“ಅದು ನಾನೇ…ಅದು ಕೃಷ್ಣಾ”
” ಅದು ಗಂಡಸರ ಹೆಸರಲ್ವಾ?
” ಕೃಷ್ಣ” ಗಂಡಸರು…ನಾನು ‘ ಕೃಷ್ಣಾ’.”
“ನಾ ಕೇಳಿಲ್ಲ ಬಿಡ್ರಿ, ಮೊದಲನೇ ಸಲ ಇದು”.
ಅವರು ಕೇಳದಿದ್ದುದು ನನ್ನ ತಪ್ಪಾ?- ತಲೆ ಗಿರ್ರೆಂದಿತು.
” ನೆಹರೂರ ಎರಡನೇ ತಂಗಿ ಕೃಷ್ಣಾ ಹತೀಸಿಂಗ್. ಗಂಗೂಬಾಯಿ ಹಾನಗಲ್ ಅವರ ಮಗಳು ಕೃಷ್ಣಾ ಹಾನಗಲ್… ಸುಧಾ ನಾರಾಯಣ ಮೂರ್ತಿಯವರ
ಮಗಳು ಅಕ್ಷತಾ ಶುನಕ್ ತನ್ನ ಮಗಳಿಗೆ ಕೃಷ್ಣಾ ಅಂತಲೇ ಹೆಸರಿಟ್ಟಿದ್ದಾರೆ.”
ನನಗೂ ರೇಗಿತು,
” ಈssssಗರ ಕೇಳಿದ್ರಲ್ಲಾ…ಬರೀರಿ.”
ಎಂದು ಫೋಟೋ ಮುಖಕ್ಕೇ ಹಿಡಿದೆ. ಅಂತೂ ಕೆಲಸ ಮಾಡಿಕೊಟ್ಟ. ನಿಟ್ಟುಸಿರು ಬಿಟ್ಟೆ…
ಆದರೆ ಬೇತಾಳ ಇನ್ನೂ ಇಳಿದಿರಲಿಲ್ಲ. ಬೆನ್ನ ಮೇಲೇ ಇದ್ದ. ನನಗೆ ಬರೆಯುವ ಹವ್ಯಾಸ ಮೊದಲಿನಿಂದಲೂ ಇದ್ದು ಫೇಸ್ ಬುಕ್ಕಿನಲ್ಲಿ ಬರಹದಲ್ಲಿ ತೊಡಗಿಸಿಕೊಂಡೆ.
ಶುರು, comments ಗಳಲ್ಲಿ,
‘ಚನ್ನಾಗಿದೆ ಸರ್…’
‘ಅದ್ಭುತವಾಗಿ ಬರೀತೀರಾ ಸರ್’
‘ please , ನನ್ನ request accept ಮಾಡಿ ಸಾರ್’…
ಅಂತ ಓದಿದಾಗೊಮ್ಮೆ
‘ನಾನು ಅವನಲ್ಲ…’ ಅವಳು’- ಎಂದು ಬರೆಯಬೇಕಾಗಿ ಬರುತ್ತಿತ್ತು / ಈಗಲೂ ಬರುತ್ತಿದೆ. ಆದರೆ ನನ್ನ ಹೆಸರು ಅಪರೂಪದ್ದು ಎಂಬ ಹೆಮ್ಮೆಯೂ ಇದೆ.
‌ ಈಗೀಗ ಬೇಸರವಾಗುತ್ತಿಲ್ಲ.
ಯಾಕೆಂದರೆ ಈಗಿನ ಮಕ್ಕಳ ಚಿತ್ರ ವಿಚಿತ್ರ ಹೆಸರುಗಳನ್ನು ಕೇಳಿದಾಗ ನಮ್ಮದೂ ಹೆಚ್ಚು/ ಕಡಿಮೆ ಇಂಥದೇ ಪ್ರತಿಕ್ರಿಯೆ ಅವರಿಗಾಗಿ ಕಾದಿರುತ್ತದೆ ಎಂಬುದು ನನಗೆ ಅನುಭವವೇದ್ಯವಾಗಿದೆ…🤣🤣🤣

Leave a Reply