ನಾನು ಧಾರವಾಡೀ..

ನಾನು ಧಾರವಾಡೀ..
ನಾವು ಧಾರವಾಡದವರು… ಬಹಳೇ ಧಾರಾಳಿಗಳು ಎಲ್ಲದರಲ್ಲೂ… ಅಂತೆಯೇ ಮಾತಿನಲ್ಲೂ… ಎತ್ತರದ ಧ್ವನಿಯಲ್ಲಿ, ಅಲ್ಪಪ್ರಾಣ, ಮಹಾ ಪ್ರಣಗಳಿಗೆ ಕಿಂಚಿತ್ತೂ ಲೋಪ ಬರದಂತೆ, ಗಂಡು ಕನ್ನಡದಲ್ಲಿ ಹರಟೆ ಹೊಡೆಯುವದೇ ನಮಗೆ ಹಬ್ಬ..
ನಾನಂತೂ ಶಿಕ್ಷಕಿ ಬೇರೆ. ಬಾಯಿ ತೆಗೆದರೆ ಕನಿಷ್ಠ ಒಂದು ಕೊಠಡಿಯಲ್ಲಿ ಕುಳಿತ ಐವತ್ತು ಹುಡುಗರು ಸದ್ದಿಲ್ಲದೇ ಕುಳಿತು ಕೇಳಬೇಕು, ಅಂಥ ದನಿ. ಅದು ಬೇಕೇಬೇಕು.. ಇಲ್ಲದಿದ್ದರೆ ಐವತ್ತು ಚಿಲ್ಲರೆ ಧ್ವನಿಗಳ ಸದ್ದು ಕೇಳಬೇಕಾಗುತ್ತದೆ… ಒಂದು ರೀತಿಯಲ್ಲಿ ನಮ್ಮ ದನಿಯೇ ನಮ್ಮ ( ಶಿಕ್ಷಕರ)identity..   ಇದು ಎಲ್ಲರಿಗೂ ಗೊತ್ತು.
ಹೀಗಾಗಿ ನನ್ನ ಧ್ವನಿ ಒಂದು ನಿರ್ದಿಷ್ಟ ಮಟ್ಟಕ್ಕೆ fix  ಆಗಿತ್ತು. ಧಾರವಾಡದಲ್ಲಿ ಇರುವವರೆಗೆ ಅದು ಸಮಸ್ಯೆಯೂ ಆಗಿರಲಿಲ್ಲ… 2006 ಬೆಂಗಳೂರಿಗೆ ವಲಸೆ ಬಂದಾಗ ಮೊದಲಸಲ ಅರಿವಾಯಿತು… ಬದಲಾವಣೆ ನಮ್ಮ ಮನೆ ಪೂರ್ತಿಯಾಗಿ ನಮ್ಮದಲ್ಲ. ಎಡೆಗೋಡೆ ಅರ್ಧ ಎಡಕ್ಕೆ ಇರುವವರದು. ಬಲಗಡೆಯದು ಬಲಗಡೆಯ ಮನೆಗೂ ಸೇರಿದ್ದು… ನಮ್ಮ ಛತ್ತು ಮೇಲಿನವರ ನೆಲ. ನಮ್ಮ ನೆಲ ಕೆಳಗಿನವರ ಛತ್ತು ಹೀಗಾಗಿ ಆಡುವ ಮಾತುಗಳೂ ಪೂರ್ತಿ ನಮ್ಮವಲ್ಲ. ಭಾಗಶಃ ಎಲ್ಲರವೂ.
ಹೀಗಾಗಿ ನಾನು ಬಾಯಿ ತೆಗೆಯುವ ಮೊದಲೇ ಮಕ್ಕಳು ‘ದನಿ ತಗ್ಗಿಸು’ ಎಂಬಂತೆ ಕೈಸನ್ನೆ ಮಾಡುತ್ತಿದ್ದರು. ಅವರಿಗೆ ನನ್ನಿಂದ ಮುಜುಗರಾಗುವುದು ನನಗೂ ಇಷ್ಟವಿರದ್ದರಿಂದ voice modulationಗೆ ನಾನೂ ತಯಾರಾಗಲೇಬೇಕಾಯಿತು.
ಹಾಗೆ ನಿರ್ಧರಿಸಿದ ದಿನವೇ ಧಾರವಾಡದಿಂದ ಒಂದು ಪೋನು ಬಂತು.. ಮೈಯೆಲ್ಲಾ ಎಚ್ಚರಿಟ್ಟುಕೊಂಡು ಜೇನು ಧ್ವನಿಯಲ್ಲಿ ‘ಹಲೋ’ ಎಂದೆ. ಆ ಕಡೆಯವರು ಸಂದೇಹದ ಧ್ವನಿಯಲ್ಲಿ ನಿಧಾನವಾಗಿ ‘ಟೀಚರ್ ಇದ್ದಾರಾ?’ ಅಂದರು.
‘ಹೇಳಿ, ಯಾರು ಬೇಕಾಗಿತ್ತು?’
ಧ್ವನಿಯ ನಿಯಂತ್ರಣ ಬಿಟ್ಟು ಕೊಡಲಿಲ್ಲ.
‘ಕೌಲಗಿ ಟೀಚರ್ ಬೇಕಿತ್ತು.’
ಧ್ವನಿಯ ಸುಳಿವು ಸಿಕ್ಕಿತೇನೋ.
ಯಾಕ ಶ್ರೀಮತಿ, ಆರಾಮಿಲ್ಲೇನು?’
ಗೆಳತಿಯ ಧ್ವನಿಯಲ್ಲಿ ಇನ್ನಿಲ್ಲದ ಆತಂಕ..
‘ಇಲ್ಲ, ನರಸತ್ತ ದನಿ ಬರಲಿಕ್ಹತ್ತದ. ನೀ ಮಾತಾಡ್ತಿ ಅನಿಸೇಒಲ್ಲದು’
‘ಏನಿಲ್ಲ, ನಾ ಇರೋಹಂಗ ಇದೇನಿ’
‘ಸುಳ್ಳು ಹೇಳಬ್ಯಾಡಾ. ನೀ ಆರಾಮ ತೊಗೋ. ನಾ ಆಮ್ಯಾಲ ಮಾಡ್ತೇನಿ.’
‘ಇಲ್ಲ ಮಾರಾಯ್ತಿ, ನನಗೇನೇನೂ ಆಗಿಲ್ಲ… ಹೇಳು… ಹೇಳು…’
ಹಿಂಗ ಸ್ವಲ್ಪು ಹಗ್ಗ ಜಗ್ಗಾಟ ಆತು ತಾಳ್ಮೆ ಹೋತು. ಆದದ್ದಾಗಲೀ ಅಂತ ನನ್ನ ಮಾಮೂಲಿ ದನಿ ಒಳಗೆ ಮಾತಾಡಿದ ಮ್ಯಾಲನ ಅವಳಿಗೆ ನಾ ಆರಾಮ ಇದ್ದದ್ದು ನಂಬಿಕೆಯಾದದ್ದು. ಈ ಮಾತಿಗೆ ಹದಿಮೂರು ವರ್ಷ ಆಗ್ಲಿಕ್ಕೆ ಬಂತು. ಈಗ ‘ವನವಾಸ’, ‘ಅಜ್ಞಾತವಾಸ’ ಎರಡೂ ಮುಗುದ್ವು…. ಈಗ ಯಾರದರ ಫೋನ್ ಬಂದ್ರ ಸ್ವಲ್ಪೂ ತ್ರಾಸಾಗುದಿಲ್ಲ. ಯಾಕಂದ್ರ ನನ್ನ ಧ್ವನಿಯ real volume ಉಳಿದವರಿಗೂ ರೂಢಿಯಾಗೇದ ಅಥವಾ ಮಾಡ್ಸೇನಿ ಅನ್ರಿ ಬೇಕಾರ…. ಮತ್ತ ಗೊತ್ತೂ ಆಗೇದ… ಬಾಯಿಷ್ಟ ಜೋರು ಧಾರವಾಡದ ಮಂದೀದು. ಮನಸ್ಸು ಧಾರವಾಡ ಫೇಡೆಗಿಂತಾನೂ sweet ಅಂತ.

Leave a Reply