ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪಾತ್ರ

ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪಾತ್ರ
ನಮ್ಮ ಭಾರತೀಯ ಚಿಂತನೆಯ ಮೂಲಾಧಾರ ವೇದ, ಉಪನಿಷತ್ತು, ಭಗವದ್ಗೀತೆಗಳು. ಇವುಗಳ ಪಾರಮ್ಯವನ್ನು ಒಪ್ಪಿಕೊಳ್ಳಲೀ ಒಪ್ಪಿಕೊಳ್ಳದಿರಲೀ ಅವು ಪ್ರತಿಪಾದಿಸುವ ಚಿಂತನೆಯ ಸಾರವನ್ನು ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳದಿರುವ ಭಾರತೀಯ ಚಿಂತನಾ ಪ್ರಕಾರ ಇಲ್ಲವೆಂದೇ ಹೇಳಬೇಕು.
ಶ್ರೀಮದ್ಭಗವದ್ಗೀತೆಯ ಜಗತ್ತಿನ ಅನೇಕ ಧರ್ಮಗ್ರಂಥಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿದೆಯಲ್ಲದೆ ನಮ್ಮ ಭಾರತೀಯರ ಪವಿತ್ರ ಗ್ರಂಥ. ಹಿಂದೂ ತತ್ವಶಾಸ್ತ್ರದ ಮತ್ತು ಆಚಾರಸಂಹಿತೆಯ ಅತ್ಯಂತ ಪ್ರಮಾಣೀಕೃತ ಮೂಲಗ್ರಂಥಗಳಲ್ಲಿ ಇದೂ ಒಂದು. ಭಗವಾನ್ ವಾಸುದೇವನೇ ಇದರ ಕರ್ತೃ.. ಅವನ ಬಾಯಿಯಿಂದಲೇ ಹೊರಟಂಥ ಆಣಿಮುತ್ತುಗಳನ್ನು ಸೇರಿಸಿದ ಮಣಿಮಾಲೆಯಿದು. ಗೀತೆಯು ಪಾರ್ಥನ ಹೃದಯವಾಗಿದೆ ಎಂದೇ ಭಗವಂತನು ಹೇಳುತ್ತಾನೆ. ಎಂದಮೇಲೆ ಇದು ಆದಿಕಾಲದಿಂದಲೂ ಧರ್ಮವನ್ನು ಮನಸಾ ಅವಲಂಬಿಸಿರುವವರ ಹೃದಯಸ್ಥ ಗೀತೆಯಾಗಿರುವುದರಲ್ಲಿ ಆಶ್ಚರ್ಯವೇನು? ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದಗಳೊಂದಿಗೇ ಇದನ್ನು ಪಂಚಮವೇದವೆಂದೂ ಕೂಡ ಕರೆಯುತ್ತಾರೆ. ಐದು ಸಾವಿರ ವರ್ಷಗಳ ನಂತರವೂ ಇಂಥದೊಂದು ಜೀವನಸಿದ್ಧಾಂತದ ಗೀತೆಯು ನಮಗೆ ಒದಗಿದೆಯೆಂದರೆ ನಾವು ಅದೃಷ್ಟವಂತರೇ.
ಗೀತೆಯ ಸಂದರ್ಭ ಮಹಾಭಾರತದ ಒಂದು ಸಣ್ಣ ಪ್ರಕರಣ. ಆದರೆ ಇದು ಮೇರುವಿನಂತೆ ಮಹಾಭಾರತವನ್ನು ಎತ್ತರಕ್ಕೇರಿಸಿದೆ ಎಂದು ಹೇಳಬಹುದು. ಈ ಭಗವದ್ಗೀತೆಯಿಲ್ಲದೇ ಹೋಗಿದ್ದರೆ ಮಹಾಭಾರತವು ಕೇವಲ ಒಂದು ದಾಯಾದಿಗಳ ರಾಜ್ಯದಾಹದ ಕಥೆಯಾಗುತ್ತಿತ್ತು. ಅದಕ್ಕೇ ಹಿಂದಿನವರು ಗೀತೆಯ ಬಗ್ಗೆ “ಭಾರತತೈಲಪೂರ್ಣಃ ಪ್ರಜ್ವಾಲಿತೋ ಜ್ಞಾನಮಯಪ್ರದೀಪಂ” ಎಂದು ಹೇಳಿದ್ದಾರೆ. ಇಡಿಯ ಮಹಾಭಾರತವು ಗೀತೆಯೆಂಬ ನಂದಾದೀವಿಗೆಯನ್ನು ಹೊತ್ತಿಸುವ ತೈಲವಂತೆ! ಯಾವುದೇ ಧರ್ಮಗುರುಗಳೇ ಇರಲಿ, ಅವರು ತಮ್ಮ ಒಂದು ತತ್ವಸಂಪ್ರದಾಯವನ್ನು ಸ್ಥಾಪಿಸಬೇಕೆಂದರೆ ಗೀತೆಗೆ ಭಾಷ್ಯವನ್ನು ಬರೆದು ತಾವು ಹೇಳುತ್ತಿರುವ ತತ್ವವು ಆಗಲೇ ಗೀತೆಯಲ್ಲಿ ಅಡಕಗೊಂಡಿದೆಯೆಂದು ತೋರಿಸಿದರೆ ಮಾತ್ರವೇ ಅವರ ತತ್ವಗಳು ಜನರಿಂದ ಸ್ವೀಕೃತಗೊಳ್ಳುವವು. ಅಷ್ಟೇ ಯಾಕೆ, ನಮ್ಮ ಸಂವಿಧಾನದ ಅನೇಕ ತತ್ವಗಳೂ ಕೂಡ ಗಿತೆಯ ಆದರ್ಶವನ್ನೇ ಅವಲಂಬಿಸಿವೆ.
ಕುರುಕ್ಷೇತ್ರದಲ್ಲಿ ಯುದ್ಧಕ್ಕಾಗಿ ಕೌರವ ಹಾಗೂ ಪಾಂಡವ ಎರಡೂ ಬಣದವರು ಸೇರಿದ್ದಾರೆ. ಎರಡೂ ಪಕ್ಷಗಳ ಜನರನ್ನು ಕಂಡೊಡನೆಯೇ ಅರ್ಜುನನ ಯುದ್ಧೋತ್ಸಾಹವು ಇಳಿದುಹೋಗುತ್ತದೆ. ನಾನು ಈ ರಾಜ್ಯವೈಭವದ ಆಶೆಗಾಗಿ ನನ್ನ ಹಿರಿಯರನ್ನು ಕೊಲ್ಲಬೇಕೇ? ನನ್ನ ಸೋದರರನ್ನು ಕೊಲ್ಲಬೇಕೆ? ನನ್ನ ದಾಯಾದಿಗಳನ್ನು ಕೊಲ್ಲಬೇಕೆ? ಎಲ್ಲರನ್ನೂ ಕೊಂದು ನಾನು ಯಾವ ಸಂತೋಷಕ್ಕಾಗಿ ನಾನು ಗೆಲುವನ್ನು ಪಡೆಯಬೇಕು? ಎಂದು ಯೋಚಿಸಿದ ಅವನ ಮನಸ್ಸಿನಲ್ಲಿ ವೇದನೆಯ ತರಂಗಗಳು ಏಳುತ್ತವೆ. ಆ ವೇದನೆಯ ತರಂಗಗಳೊಂದಿಗೇ ಪ್ರಾರಂಭವಾಗುತ್ತದೆ ಭಗವದ್ಗೀತೆ! ಅರ್ಜುನನ ಮನಸ್ಸಿನ ತಳಮಳಗಳು, ಹಾಗೂ ಆತನ ಸಂದೇಹಗಳ ನಿವಾರಣೆಯೇ ಶ್ರೀಕೃಷ್ಣನ ಮಾತುಗಳಲ್ಲಿ ಅಡಕವಾಗಿದೆ. ಇಲ್ಲಿ ಶ್ರೀಕೃಷ್ಣನು ಕೇವಲ ಅರ್ಜುನನ ಸಾರಥಿಯಾಗಿಯಲ್ಲ, ನಮ್ಮ ಜೀವನದ ಸಾರಥಿಯಾಗಿಯೂ ಕಾರ್ಯನಿರ್ವಹಿಸಿದ್ದಾನೆ. ಅರ್ಜುನನು ಮಾನವಜಾತಿಯ ಪ್ರತಿನಿಧಿಯಾಗಿದ್ದಾನೆ. ಅವನು ಒಂದು ನಿಮಿತ್ತಮಾತ್ರ. ಈ ಜಗತ್ತು ಸೃಷ್ಟಿಯಾದಾಗಿನಿಂದಲೂ ಮಾನವ ಅನೇಕ ದುಃಖಗಳಿಗೆ, ಕಷ್ಟ ಕೋಟಲೆಗಳಿಗೆ ಈಡಾಗುತ್ತಲೇ ಇದ್ದಾನೆ. ಅಂಥವರಿಗೆ ಅರ್ಜುನನ ಮೂಲಕ ಶ್ರೀಕೃಷ್ಣನಿಂದ ಸಂದೇಶವು ಸಿಕ್ಕಿದೆ. ಇಡಿಯ ಮಾನವ ಸಮಾಜವನ್ನೇ ಈ ಕಷ್ಟ-ಜಂಜಡಗಳಿಂದ ಎತ್ತುವುದಕ್ಕೆಂದೇ ಗೀತಾಚಾರ್ಯನು ಸೊಂಟಕಟ್ಟಿ ನಿಂತಂತಿದೆ. ಇಲ್ಲಿ ಬೋಧಿಸಲ್ಪಟ್ಟ ವಿಷಯಗಳು ನಮ್ಮ ನಿತ್ಯ ಜೀವನದಲ್ಲಿ ಸಾಮಾನ್ಯವಾಗಿಯೇ ಕಾಣುವಂಥವು.
ನಮ್ಮ ನಿತ್ಯ ಜೀವನವೇ ಒಂದು ಕುರುಕ್ಷೇತ್ರ. ನಾವೆಲ್ಲರೂ ಅರ್ಜುನನಂತೆ ಬಾಹ್ಯ ಶತ್ರುಗಳೊಂದಿಗೆ ಯುದ್ಧ ಮಾಡದಿದ್ದರೂ ವಿಭಿನ್ನ ಕಾರ್ಯ ಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸ್ಸಿನಲ್ಲಿ ಯಾವ ಯಾವ ರೀತಿಯ ಪ್ರಶ್ನೆಗಳೆದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಯಾವ ರೀತಿಯಲ್ಲಿ ಧರ್ಮ ಸಂಕಟಕ್ಕೊಳಗಾದನೋ ಅದೇ ರೀತಿಯ ಪ್ರಸಂಗಗಳನ್ನು ಅನುಭವಿಸಿದವರೇ. ಅಂತೆಯೇ ಗೋವಿಂದನೇ ನಮ್ಮ ಜೀವನದ ರಥಕ್ಕೂ ಕೂಡ ಸಾರಥಿಯೇ. ಕುರುಕ್ಷೇತ್ರದಲ್ಲಿ ಅಂಥದೊಂದು ಧರ್ಮಕ್ಷೇತ್ರವನ್ನು ನಮಗೆ ತೋರಿಸುವ ಪ್ರಯತ್ನ ನಮ್ಮ ಈ ಗೀತಾಚಾರ್ಯನದು.
ಉಪನಿಷತ್ತುಗಳಲ್ಲಿ ಇಲ್ಲದುದು ಇಲ್ಲಿ ಇಲ್ಲ. ಆದರೆ ಅವೇ ಉಪದೇಶಗಳು ಇಲ್ಲಿ ಸರಳೀಕರಣಗೊಂಡಿವೆ. ಉಪನಿಷತ್ತಿನಲ್ಲಿ ಭಕ್ತಿಗೆ ಜ್ಞಾನಮಾರ್ಗದಷ್ಟು ಪ್ರಾಧಾನ್ಯತೆಯಿಲ್ಲ. ಅಲ್ಲದೆ ಉಪನಿಷತ್ತುಗಳನ್ನು ಓದಲು ಎಲ್ಲರಿಗೂ ಮುಕ್ತ ಅವಕಾಶವಿರಲಿಲ್ಲ. ಆದರೆ ನಿತ್ಯ ಜೀವನದ ಕಷ್ಟ ನಷ್ಟಗಳಿಗೆ ಕುಗ್ಗದೆ ಅವುಗಳನ್ನು ಧೈರ್ಯದಿಂದ ಎದುರಿಸಿ ಹೋರಾಡಿ ಅವುಗಳನ್ನು ಜಯಿಸುವ ಕರ್ಮಯೋಗಿಗಳನ್ನು ಪ್ರೋತ್ಸಾಹಿಸುವಂಥ ಒಂದು ಮಾರ್ಗದರ್ಶನ ಜನರಿಗೆ ಅವಶ್ಯಕವಾಗಿತ್ತು. ನಮ್ಮ ಗೀತಾಚಾರ್ಯನು ಅಂಥದೊಂದು ಮಹತ್ಕಾರ್ಯವನ್ನು ಮಾಡಿದನು.
ಶ್ರೀಕೃಷ್ಣನದು ಸರ್ವೋತ್ತಮ ಮಾರ್ಗ. ಅವನು ಯಾರನ್ನೂ ದ್ವೇಷಿಸುವುದಿಲ್ಲ. ತನ್ನ ಮಾರ್ಗವೇ ಸತ್ಯ, ಉಳಿದದ್ದೆಲ್ಲವೂ ಮಿಥ್ಯವೆಂದೂ ಹೇಳುವುದಿಲ್ಲ. ಅವನ ಗುರಿ ಮಾನವಕೋಟಿಯ ಉದ್ಧಾರ ಮಾತ್ರ. ಏಣಿಯ ಬಗ್ಗೆ ಅವನಿಗೆ ಯಾವುದೇ ತಕರಾರಿಲ್ಲ. ಹೀಗಾಗಿಯೇ ಅವನು ಯಾವ ಮಾರ್ಗವನ್ನೂ ಖಂಡಿಸಿಲ್ಲ. ಮಾನವನ ವಿಕಾಸವೊಂದೇ ಅವನ ಮುಖ್ಯ ಗುರಿ. ದೇವರು ನಮ್ಮ ಕಷ್ಟಗಳನ್ನು ಪರಿಹರಿಸುವುದಿಲ್ಲ. ಯಾವುದೇ ಒಂದು ಪವಾಡವನ್ನು ಮಾಡುವುದಿಲ್ಲ. ನಾವು ತಾಗಿ, ಮಾಗಬೇಕು.. ಪೂರ್ಣಾಕಾರವಾಗಿ ಬೆಳೆಯಬೇಕು. ಒಮ್ಮೊಮ್ಮೆ ನಾವು ಕಷ್ಟಗಳಲ್ಲಿ ಅತಿಯಾಗಿ ಬೆಂದಾಗ “ದೇವರೆ. ನಿನ್ನನ್ನು ನಾನು ಇಷ್ಟು ನಿಷ್ಠೆಯಿಂದ ಪೂಜಿಸಿದರೂ ನನ್ನ ಮೇಲೆ ನಿನ್ನ ಕೃಪಾಕಟಾಕ್ಷವೇಕೆ ಇನ್ನೂ ಬೀಳದು!” ಎಂದು ಉದ್ಗರಿಸುತ್ತೇವೆ. ಆದರೆ ನಾವು ಮಿಡಿಯಾಗಿ, ಕಾಯಾಗಿ, ಹಣ್ಣಾಗಬೇಕು.. ಅಂದರೇ ನಮ್ಮ ಜೀವನವು ಪರಿಪೂರ್ಣವಾಗುತ್ತದೆ. ಇದೇ ಆ ಭಗವಂತನ ಉದ್ದೇಶ. ಇದು ಕೇವಲ ಜ್ಞಾನಿಗಳ ಕೈಯಳವೇನಲ್ಲ. ಎಂಥವರಿಗೂ ನೆರವಾಗುವ ಗ್ರಂಥ. ನಮ್ಮ ತಿಳುವಳಿಕೆಯಂತೆ ಇದು ಕೇವಲ ಕೈವಲ್ಯಸಾಧನವಲ್ಲ. ಇದು ಎಲ್ಲಾ ಜನರಿಗೂ ಎಲ್ಲಾ ಕಾಲಕ್ಕೂ ಸಲ್ಲುವ ಗ್ರಂಥ. ಇದನ್ನು ಕೇವಲ ಬಾಯಿಪಾಠ ಮಾಡಿದರೆ ಸಾಲದು. ಕಾಯಾ, ವಾಚಾ, ಮನಸಾ ಗೀತೆಯ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದನ್ನು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳಬೇಕು. ಗೀತೆಯ ಅಮೃತವು ನಮ್ಮ ಬಾಳಬಳ್ಳಿಯ ಬೇರನ್ನು ಪೋಷಿಸಬೇಕು.
ಈ ಭಗವದ್ಗೀತೆಯು ಅಷ್ಟು ಮಹತ್ವವನ್ನು ಪಡೆಯಲು ಅನೇಕ ಕಾರಣಗಳಿವೆ. ಇದು ಆತ್ಮಾವಲೋಕನಕ್ಕೆ ಸಹಕಾರಿಯಾಗಿರುವುದೂ ಇದನ್ನು ಮಹತ್ತಿಗೇರಿಸಿದೆ. ಆತ್ಮಾವಲೋಕನದಿಂದಾಗಿ ನಮಗೆ ನಮ್ಮ ತಪ್ಪುಗಳೂ ಕಣ್ಣಿಗೆ ಕಾಣುತ್ತವೆ. ಇದರಿಂದಾಗಿ ದ್ವೇಷ ಅಸೂಯೆಗಳು ಇಲ್ಲವಾಗುತ್ತವೆ. ಮನಸ್ಸು ಹೊಯ್ದಾಟವನ್ನು ಬಿಟ್ಟು ಶಾಂತವಾಗುತ್ತದೆ. ವಿವೇಚನಾ ಶಕ್ತಿಯು ಬೆಳೆಯುತ್ತದೆ. ಅಲ್ಲದೆ ಸಾಮಾಜಿಕ ಹಿತದೃಷ್ಟಿಯೂ ಇದರಲ್ಲಿ ಅಡಗಿದೆ. ಶ್ರದ್ಧಾ ಭಕ್ತಿಗಳು ಎಲ್ಲಿಂದ ಬಂದರೂ ಬೆಳಕಿನಂತೆ ಅವು ಗ್ರಾಹ್ಯವೇ.. ಎನ್ನುವ ಅವನು, ಈಶ್ವರನು ಒಬ್ಬ ವ್ಯಕ್ತಿಯಲ್ಲ.. ಅವನು ಒಂದು ಶಕ್ತಿ ಎಂದು ಹೇಳುತ್ತಾನೆ. ಅವನು ನಮ್ಮ ಹೃದಯದಲ್ಲಿ ಯಾವಾಗಲೂ ಸ್ಥಿತನಾಗಿರುತ್ತಾನೆ ಎಂದು ಹೇಳುತ್ತ, ಇವನೇ ಸಚ್ಚಿದಾನಂದ ರೂಪಿಯಾದ ಪುರುಷೋತ್ತಮ ಎಂದು ಹೇಳುತ್ತಾನೆ.
ಕೆಲವರಿಗೆ ಭಗವದ್ಗೀತೆಯು ಕೇವಲ ಸನ್ಯಾಸಿಗಳಿಗೆ ಮಾತ್ರ ಹೇಳಿದ್ದು ಎಂಬ ತಪ್ಪುಕಲ್ಪನೆಯಿದೆ. ಆದರೆ ಈ ಗೀತೆಯ ಸಂದರ್ಭವನ್ನು ನೋಡಿದರೆ ಆ ಭಾವನೆಯು ತಪ್ಪು ಎಂಬುದು ಅರಿವಾಗುತ್ತದೆ. ಯುದ್ಧದಿಂದ ವಿಮುಖನಾಗಿ ಸನ್ಯಾಸಿಯಾಗ ಹೊರಟಂಥ ಅರ್ಜುನನನ್ನು, ಮತ್ತೆ ಯುದ್ಧ ಮಾಡಲು ಪ್ರೇರೇಪಿಸಿದ ಉಪದೇಶವಿದು..
ಮಾಲತಿ ಮುದಕವಿ

Leave a Reply