ನನ್ನ ಮಾಲಿ ಸಹ ರಾಣಿಯ ಪದಕ ಧಾರಿ!

ನನ್ನ ಮಾಲಿ ಸಹ ರಾಣಿಯ ಪದಕ ಧಾರಿ!

”ನಮ್ಮ ಮನೆಗೆಲಸ ಮತ್ತು ತೋಟದ ಕೆಲಸ ಮಾಡಲು ಕೆಲಸಗಾರರು ಯಾರೂ ಸಿಗುತ್ತನೇ ಇಲ್ಲ,” ಎನ್ನುವ ಗೊಣಗು ಕೇಳಿಸದ ಊರು, ದೇಶ, ಕಾಲವೇ ಇಲ್ಲ. ಈಗಂತೂ ಕೊರೋನಾ ಮಾರಿಯ ಕಾಲದಲ್ಲಿ ಅದು ಇನ್ನೂ ಉಲ್ಬಣಗೊಳ್ಳುತ್ತಿದೆ, ನಮ್ಮ ಊರಾದ ಯು ಕೆ ದ ಡೋಂಕಾಸ್ಟರ್ ನಲ್ಲಿ ಸಹ. ಯಂತ್ರಗಳ ಸೌಲಭ್ಯವಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ನಮ್ಮ ಕೆಲಸ ಹೆಚ್ಚಾಗಿ ನಾವೇ ಮಾಡಿಕೊಳ್ಳುತ್ತೇವೆಯಾದರೂ ನನ್ನಂಥ ವಯಸ್ಸಾದವರ ಮನೆಯಲ್ಲಿ ಕಷ್ಟದಾಯಕ ತೋಟದ ಕೆಲಸಕ್ಕೆ ಸಹಾಯ ಬೇಕಲ್ಲ ಅಂತ ಗಾರ್ಡನರನ್ನು ಹುಡುಕುತ್ತಿದ್ದಾಗ ಸಿಕ್ಕವನು ಒಬ್ಬ ಪೋಲೀಸ! ಅಂದರೆ ಹೊಸದಾಗಿ ನಿವೃತ್ತನಾಗಿ ತನ್ನ ಹವ್ಯಾಸ ಮುಂದುವರಿಸಲು, ಹೊರಾವರಣದಲ್ಲಿ ಸಮಯ ಕಳೆಯಲು ಈತ ತಯಾರಾಗಿದ್ದ. ಈ ದೇಶದವರ ’ಡಿಗ್ನಿಟಿ ಆಫ್ ಲೇಬರ” ಮೆಚ್ಚಲೇ ಬೇಕು. ತಾವು ಎಂಥದೇ ಉದ್ಯೋಗ, ಅಂತಸ್ತು, ಆರ್ಥಿಕ ಸ್ಥಿತಿಯಲ್ಲಿದ್ದರೂ ಯಾವುದೇ ಕೆಲಸವನ್ನು ಮಾಡಲು – ಪ್ಲಮ್ಮಿಂಗ್ ಇರಲಿ, ಪೇಂಟಿಂಗ್ ಇರಲಿ ಎಲ್ಲ “ಡು ಇಟ್ ಯುವರ್ಸೆಲ್ಫ್” ಅಂತ – ತಾವೇ ಕೈ ಹಾಕುತ್ತಾರೆ, ಕಲಿಯುತ್ತಾರೆ. ಹಿಂದಕ್ಕೆ ನಾನೂ ಕೈ ಹಾಕಿದ್ದೆ – ತೋಟದಲ್ಲಿ ಮಶಿನಿಂದ ಹುಲ್ಲು ಕತ್ತರಿಸುವಾಗ ಸಿಕ್ಕಿಕೊಂಡಿದ್ದ ಬಳ್ಳಿಯನ್ನು ಬಿಡಿಸಲು ತಿರುಗುತ್ತಿರುವ ಲಾನ್ ಮೋವರ್ ಚಕ್ರಕ್ಕೇ! ಒಂದು ಬೊಟ್ಟಿನ ತುದಿ ಕಚಕ್! ಆ ಅಪಘಾತದ ನಂತರ ತೋಟಿಗನಿಗೆ ಮೊರೆ ಹೋದೆ. ಪೀಟರ್ ಆತನ ಹೆಸರು. ಆತನ ತೋಟದ ಕೆಲಸ ಚೊಕ್ಕ, ಚಂದ ಮತ್ತು ಅವನ ’ಕೂಲಿ’ ಸಹ ಅಗ್ಗವೇ ಅನ್ನ ಬಹುದು. ‘ಗೋಯಿಂಗ್ ರೇಟ್’ ಕೊಟ್ಟರೆ ಸಾಕು. ಚಿಕ್ಕಂದಿನಿಂದಲೂ ಆತನಿಗೆ ತೋಟ, ಹೂ ಹಣ್ಣುಗಳ ಪ್ರೀತಿ. ಮೊನ್ನೆ ತಾನೆ ಬಹಳಷ್ಟು ವರ್ಣನೆ ಕೇಳಿದ್ದೆನಾದರೂ ಮೊದಲ ಸಲ ಅತನ allotmentಗೆ ಹೋಗುವ ಅವಕಾಶ ಬಂದದ್ದು ಇತ್ತೀಚೆಗೆ. ಅಲಾಟ್ಮೆಂಟ್ ಅಂದರೆ ನಗರದ ಪ್ರಜೆಗಳು ಕೃಷಿ ಮಾಡಲು ಮ್ಯುನಿಸಿಪಾಲಟಿಯವರು ವಿತರಣೆ ಮಾಡಿದ ಭೂಮಿ ಆತ ಸಂಭಾಳಿಸುತ್ತಿದ್ದ ಒಂದಲ್ಲ ಮೂರು ತೋಟಗಳ ತುಂಬ ಬೆಳೆದ ಥರಥರಾವರಿ ಹೂ, ಹಣ್ಣು ಹಂಪಲು, ಗಡ್ಡೆಗಳನ್ನು ನೋಡಿ ಆಶ್ಚರ್ಯ ಪಟ್ಟೆ. ಇಡೀ ದಿನ ಹತ್ತಾರು ಬೇರೆಯವರ ತೋಟಗಳನ್ನು ಹಸನು ಮಾಡುತ್ತ ತನ್ನವನ್ನೂ ನೋಡಿಕೊಳ್ಳಲು ಹೇಗೆ ಸಮಯ ಸಿಗುತ್ತದೆ ಈತನಿಗೆ? ತಾನೇ ಬೆಳೆದು ತಿಂದು ಮಿಕ್ಕಿದ ಅಷ್ಟೂ ಹಣ್ಣು ತರಕಾರಿಯನ್ನು ಬೇರೆಯವರಿಗೆ ಹಂಚುತ್ತಾನೆ, ಒಂದು ಪೆನ್ನಿ ಸಹ ಕೇಳದೆ! ಆತ ಇಲ್ಲಿಯವರೆಗೆ ಬಚ್ಚಿಟ್ಟಿದ್ದ ಇನ್ನೊಂದು ರಹಸ್ಯವನ್ನೂ ಇತ್ತೀಚೆಗೆ ಅರಿತೆ: ಆತನಿಗೆ ಎಲಿಝಬೆತ್ ರಾಣಿ (ಬ್ರಿಟಿಶ್ ಸರಕಾರದಿಂದ) MBE ಪದಕ ಸಹ ಸಿಕ್ಕಿದೆ ಅಂತ! ನಮ್ಮ ಪದ್ಮಪ್ರಶಸ್ತಿಗೆ ಹೋಲುವ ಈ ಬಿರುದನ್ನು ಆತನ ಅಲಾಟ್ಮೆಂಟ್ ಇರುವ ನಮ್ಮೂರಿನ ಹೆಕ್ಸ್ ಥಾರ್ಪ್ ಅನ್ನುವ ಹಿಂದುಳಿದ (deprived) ಬಡಾವಣೆಯ ಸಮುದಾಯ ಸೇವೆಗೆ ಅದು ಲಭಿಸಿದೆಯಂತೆ. ಅಲ್ಲಿಯ ಶಾಲೆಯಲ್ಲಿ ಓದುವ ದಾರಿತಪ್ಪಿದ, ದುರಭ್ಯಾಸಕ್ಕೆ ಬಿದ್ದ ಮಕ್ಕಳ ಸುಧಾರಣೆ ಮತ್ತು ವೈಯಕ್ತಿಕ ಬೆಳವಣಿಗೆಗೆಂದು ಅವ್ರಿಂದ ತೋಟದ ಕೆಲಸ ಮಾಡಿಸಿ ಆತ್ಮವಿಶ್ವಾಸ ಮತ್ತು ಕೆರೆಕ್ಟರ್ ಬೆಳೆಸುವ ಚಟುವಟಿಕೆಗಳನ್ನು ರೂಪಿಸಿ, ಹುರಿದುಂಬಿಸಿ, ಆಟಗಳನ್ನಾಡಿಸಿ ಉತ್ತಮ ನಾಗರಿಕರಾಗಲು ನಿರಂತರವಾಗಿ ವರ್ಷಾನುಗಟ್ಟಲೆ ಮಾಡಿದ  ಸೇವೆಗೆ ಸಿಕ್ಕ ಪುರಸ್ಕಾರ. ಆತ ತನ್ನ ಹಲವಾರು ಪೋಲೀಸ್ ಪ್ರಶಸ್ತಿಗಳೊಂದಿಗೆ  ರಿಟೈರ್ಮೆಂಟ್ ವರ್ಷದಲ್ಲಿ ಇದನ್ನೂ ಗಿಟ್ಟಿಸಿಕೊಂಡನಂತೆ. ಇದನ್ನು ಹೇಳುತ್ತ ಬಕಿಂಗಮ್ ಪ್ಯಾಲಸ್ಸಿನಲ್ಲಿ ರಾಣಿ ತನ್ನ ಬ್ಲೇಜರಿಗೆ ಪಿನ್ ಹಾಕಿ ತಗಲಿಸಿದ ತನ್ನ ಮೆಡಲನ್ನು ತೋರಿಸಿದ. ನಮ್ಮ ನಾಡಿನ ಪದ್ಮ ಪ್ರಶಸ್ತಿಗಳು 1955 ಶುರುವಾಗಿದ್ದರೆ MBE ನೂರು ವರ್ಷಗಳ ಹಿಂದೆಯೇ (1917) ಸ್ಥಾಪಿತವಾಗಿದ್ದರಿಂದ Member of the Most Excellent Order of the British Empire ಅಂತ ಅದರ ಪೂರ್ತಿ ಹೆಸರು. ಅದನ್ನು ಸ್ಥಾಪಿಸಿದ ಐದನೆಯ ಜಾರ್ಜ್ ಸಮ್ರಾಟನ ಮುಖ ಅದರ ಮೇಲೆ. ಪೀಟರನ ತೋಟಗಳು ವಿವಿಧ ಬಣ್ಣದ ಡೇಲಿಯಾ, ಬೆಗೋನಿಯಾ ಗ್ಲಾಡಿಯೋಲಸ್ ಹೂಗಳಿಂದ ತುಂಬಿವೆ. ಪ್ರದರ್ಶನಗಳಲ್ಲಿ ಗೆದ್ದ ಸೌತೆ ಕಾಯಿ ಕುಂಬಳಕಾಯಿ, ಬಟಾಟೆ, ಟೊಮೆಟೋ- ಇವೆಲ್ಲ ನೋಡಿ ನನ್ನ ಕಣ್ಣು ಮನಸ್ಸುಗಳಿಗೆ ತೃಪ್ತಿಯಾಗಿತ್ತು. ಬಾಯೂರಿತ್ತಿದ್ದ ನನ್ನ ಬಾಯಿಯನ್ನು ತಣಿಸಲು ಹಲವಾರನ್ನು ಕಿತ್ತು ಕೊಟ್ಟು ತಿನಿಸಿದ ಸಹ!

ಆತನ ಮಾತು ತಾನು ಬೆಳೆಸುವ ಹಣ್ಣುಗಳಷ್ಟೇ ಸಿಹಿ. ಫೋನಿಸಿದರೆ ಉತ್ತರ ಪ್ರಾರಂಭವಾಗುವದು ’ಸರ್, ಗುಡ್ ಡೇ’ ಅಂತ ಸೌಜನ್ಯದಿಂದಲೇ. ನನ್ನ ಮನೆಯ ಆಸುಪಾಸಿನವರ ಮನೆಯಲ್ಲಿಯ ಸಣ್ಣ ಪುಟ್ಟ ರಿಪೇರಿ ಕೆಲಸ ಇತ್ಯಾದಿಗಳನ್ನು ಸಹ ಮಾಡಿಕೊಡುವುದು ಅತ್ಯಂತ ವಿನಯದ ಈಗಿನ ಮಹಾರಾಣಿಯ ’ಸೇವಾಸಕ್ತ” ಪ್ರಜೆಯೇ! ನಮ್ಮ ದೇಶದಲ್ಲಾಗಿದ್ದರೆ ಅದೆಷ್ಟು ಜನರ ಮನೆಯಲ್ಲಿ ಒಬ್ಬ ಪದ್ಮಪ್ರಶಸ್ತಿ ಭಾಜಕ ತೋಟಿಗನಾಗಿ ಕೆಲಸ ಮಾಡುವ ಸಾಧ್ಯತೆಯುಂಟು ಅಂತ ಬೆರಗಾಗಿದ್ದೇನೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಹತ್ತು ವರ್ಷಗಳ ಕೆಳಗೆ ನನ್ನಾಕೆಯ ಅಂತ್ಯ ಯಾತ್ರೆ ನಮ್ಮ ಮನೆಯ ತೋಟದಿಂದ ಆರಂಭವಾಗುವುದಿತ್ತು ಆ ದಿನ. ಅದರ ಪೂರ್ವಸಿದ್ಧತೆಯಲ್ಲಿ ಮಾಲಿ ಈ ಪೀಟರ್ ಹಾರ್ಟ್ ಶಾರ್ನ್  ಹಿಂದಿನ ತೋಟದ ತುಂಬ ಹೂಗಿಡಗಳಿಂದ ಅಲಂಕರಿಸಿದ್ದನ್ನು ಹೇಗೆ ಮರೆಯಲಿ? ನಮ್ಮೂರಿನ ’ಮರೆಯಲಾರದ ಮಹಾಶಯ’ರಲ್ಲಿ ಈತನು ಪ್ರಥಮ.

ಡಾ ಶ್ರೀವತ್ಸ ದೇಸಾಯಿ

ಡೋಂಕಾಸ್ಟರ್.

Leave a Reply