ನನ್ನ ಮೆಚ್ಚಿನ ತ್ರಿ -ವೇಣಿ

ನನ್ನ ಮೆಚ್ಚಿನ ತ್ರಿ -ವೇಣಿ

ಕನ್ನಡ ಸಿನಿಮಾ ಪ್ರಪಂಚದಲ್ಲಿ ಕಲ್ಪನಾ ಎಂಬ ಮಿನುಗುತಾರೆಯನ್ನು ಸೃಷ್ಟಿ ಮಾಡಿದ್ದೇ  ಕನ್ನಡ ಸಾಹಿತ್ಯದ ಸಾರಸ್ವತ ಲೋಕದ ಮಿನುಗುತಾರೆ ನಮ್ಮ ತ್ರಿವೇಣಿಯವರು. …

ತ್ರಿವೇಣಿಯವರ ಲೇಖನಿಯ ಶಕ್ತಿಯೇ ಮನೋವಿಜ್ಞಾನ… ಅವರ ಶರಪಂಜರದ ಕಾವೇರಿ, ಬೆಕ್ಕಿನ ಕಣ್ಣಿನ ಕುಸುಮಾ… ಒಂದೇ, ಎರಡೇ ಎಲ್ಲದರಲ್ಲೂ ಮನಸ್ಸಿನ ಎಳೆಎಳೆಗಳನ್ನು ನವಿರಾಗಿ ಬಿಡಿಸುವ ನಯವಂತಿಕೆ ಅವರದು. ತ್ರಿವೇಣಿಯವರ ಕಥಾನಾಯಕಿಯರು ನೋವುಂಡವರು… ಜಗದ ರೀತಿಗೆ ವಿರುದ್ಧವಾಗಿ ಹೋರಾಡಿದವರು…
ಅವರ ಬೆಳ್ಳಿ ಮೋಡ. ಚಲನಚಿತ್ರವಾದ ಕಾದಂಬರಿ… ಇಲ್ಲಿ ಇಂದಿರಾಳ ಪಾತ್ರಕ್ಕೆ ಜೀವ ತುಂಬಿದವಳು ಕಲ್ಪನಾ ಎಂಬ ಮೇರು ನಟಿ.  ಒಂದು ಸಾಧಾರಣ ರೂಪಿನ ಹುಡುಗಿ.  ಇಲ್ಲಿ ಕಥಾನಾಯಕಿಯ ತಂದೆ ಒಬ್ಬ ಬಡವಿದ್ಯಾರ್ಥಿಯ ಓದಿಗೆ ಸಹಾಯ ಮಾಡುತ್ತಾರೆ. ಮುಂದೆ  ಆ ಹುಡುಗನ  ಜೊತೆ ಕಥಾನಾಯಕಿಯ ಮದುವೆ ಮಾಡಲು ನಿಶ್ಚಯಿಸುತ್ತಾರೆ. ಆದರೆ ಕಥಾನಾಯಕಿಗೆ ಒಬ್ಬ ಪುಟ್ಟ  ತಮ್ಮ ಬರುತ್ತಾನೆ. ತಾಯಿಯ ಮರಣದ ನಂತರ ಇಂದಿರೆ ತಾಯಿಯಾಗಿ ಮಗುವನ್ನು ನೋಡಿಕೊಳ್ಳುತ್ತಾಳೆ.  ಆ ದೊಡ್ಡ ಆಸ್ತಿಯು ಗಂಡು ಮಗುವಿಗೆ ಹೋಗುತ್ತದೆ ಎಂಬ ಕಾರಣದಿಂದ ಕಥಾನಾಯಕ ಮದುವೆ ಮುರಿಯುತ್ತಾನೆ… ಇಲ್ಲಿ ಇಂದಿರ ನಾಯಕನನ್ನು ಉಳಿಸಲು ತಾನೇ ಈ ಮದುವೆಯನ್ನು ಮುರಿದೆ ಎಂದು ಹೇಳುವಳಾದರೂ ಅವಳ ಮನೋವಿಪ್ಲವವನ್ನು ಆಕೆ ತಾವಿಬ್ಬರೂ ಒಂದು ಮರದ ಮೇಲೆ ಕೆತ್ತಿರಿಸಿದ ತಮ್ಮ ಹೆಸರಿಗೆ ಆವೇಶದಿಂದ ಕೊಡಲಿ ಏಟನ್ನು ಹಾಕುವ ದೃಶ್ಯ ಪುಟ್ಟಣ್ಣನವರ ಮೇರು ಕಲ್ಪನೆ! ಇದಕ್ಕೇ ಹೇಳಿರಬೇಕು ಸೋನೆ ಪೆ ಸುಹಾಗಾ ಎಂದು!

ತ್ರಿವೇಣಿರವರು  ಸೂಕ್ಷ್ಮ ಸಂವೇದನೆ ಹಾಗೂ ಸಾರ್ವಕಾಲಿಕತೆಯೇ ಅವರ ಕಾದಂಬರಿಗಳ  ಪ್ರಖ್ಯಾತಿಗೆ ಕಾರಣ ಎಂದು ಹೇಳಬಹುದು.
ಹೂವು ಹಣ್ಣು ಅನ್ನೋ ಕಾದಂಬರಿಯಲ್ಲಿ ಸಮಾಜ ಯಾವ ರೀತಿಯಲ್ಲಿ ಒಬ್ಬ ಹರೆಯದ, ಸುಂದರ ವಿಧವೆಯನ್ನು ವೇಶ್ಯೆಯನ್ನಾಗಿಸುತ್ತದೆ ಎಂಬ ಕಥಾವಸ್ತುವನ್ನು ಹೊಂದಿದ ಕಾದಂಬರಿ.  ಮಗಳ ಭವಿಷ್ಯವನ್ನು ರೂಪಿಸುವುದಕ್ಕಾಗಿ ಒಬ್ಬ ತಾಯಿ ಮಾಡಿದ ತ್ಯಾಗದ ಕಥೆ ಇದು.
ಬೆಕ್ಕಿನ ಕಣ್ಣು ಕಾದಂಬರಿಯಲ್ಲಿ ಮಲತಾಯಿಯ ಹಿಂಸೆಯು  ಮಗುವಿನ ಮೇಲೆ ಎಷ್ಟು ಪ್ರಭಾವ ಬೀರುತ್ತದೆ, ಹಾಗೂ ಅವಳ ಮೇಲೆ ಮಾಟ ಮದ್ದುಗಳ ಪರಿಣಾಮ, ಕೊನೆಗೆ ಮನೋವೈಜ್ಞಾನಿಕ ರೀತಿಯಲ್ಲಿ ಅವಳು ಗುಣವಾಗುವುದು ಇದೆಲ್ಲ ಅತ್ಯಂತ ಮಾರ್ಮಿಕವಾಗಿ ಚಿತ್ರಿತವಾಗಿದೆ.
ಇನ್ನು ಕಾಶಿಯಾತ್ರೆ. ಇದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಂಥ ಜನಪ್ರಿಯ ಕಾದಂಬರಿ. ಅಜ್ಜಿಯ ನಿಜವಾದ  ಕಾಶಿಯಾತ್ರೆಯ ಬಗ್ಗೆ ಇಲ್ಲಿ ಲೇಖಕಿ ಹೇಳುತ್ತಾರೆ.
ಸೋತು ಗೆದ್ದವಳು ಕಾದಂಬರಿಯಲ್ಲಿ ತ್ರಿವೇಣಿಯವರು ಆ ಕಾಲದಲ್ಲಿಯೇ ಎತ್ತಿದ ಪ್ರಶ್ನೆ- ಶೀಲದ ವಿಷಯದಲ್ಲಿ ಹೆಣ್ಣಿಗೊಂದು, ಗಂಡಿಗೊಂದು ಕಾನೂನೇಕೆ? ಎಂಬುದು. ಕಥಾನಾಯಕಿಯನ್ನು ಅವಸರವಾಗಿ ಮದುವೆ ಮಾಡಿಕೊಂಡು ಅವಳಿಗೆ ಸಕಲ ಸಂಸಾರಸುಖದ ಉತ್ತುಂಗದ ಪರಿಚಯ ಮಾಡಿಸಿದ ಕಥಾನಾಯಕ ಪರದೇಶಕ್ಕೆ ಹೊರಟುಹೋಗುತ್ತಾನೆ. ನಂತರದ ದಿನಗಳಲ್ಲಿ ಆಕೆ ಅನುಭವಿಸಿದ ವಿರಹವೇದನೆ.. ಅತ್ತೆಯ ಸಂಬಂಧಿಯೋರ್ವನೊಂದಿಗೆ ಅವಳು ಬೆಳೆಸಿದ ಆಕಸ್ಮಿಕ ಸಂಬಂಧ.. ಇದರಿಂದಾಗಿ ಆಕೆ ಅನುಭವಿಸುವ ತಿರಸ್ಕಾರ.. ಆದರೆ ಕಥಾನಾಯಕ ಮರಳಿಬಂದಾಗ, ಅವನು ತಾನೂ ಒಂದು ವಿಷಗಳಿಗೆಯಲ್ಲಿ ಅಲ್ಲಿಯ ಒಬ್ಬ ವಿದೇಶಿ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದು ಇಬ್ಬರೂ ಇಲ್ಲಿ ಸಮಾನ ತಪ್ಪಿತಸ್ಥರು ಎಂದು ಹೇಳಿ ಅವಳೊಂದಿಗೆ ಎಲ್ಲವನ್ನೂ ಮರೆತು ಬಾಳುವ ಕಥೆ.
ಅಪಸ್ವರ, ಅಪಜಯಗಳಲ್ಲಿ ಕೂಡ ಇಬ್ಬರು ಹೆಣ್ಣು ಮಕ್ಕಳನ್ನು ತುಲನಾತ್ಮಕವಾಗಿ ವಿಶ್ಲೇಷಣೆ ಮಾಡುವ ಅವರ ಪಾತ್ರ ಚಿತ್ರಣ ಬಹಳ ವಿಶೇಷ ಮಟ್ಟದ್ದು.
ನಮ್ಮದು ಟಿವಿ, ಸ್ಮಾರ್ಟ್ ಫೋನ್ಗಳಿಲ್ಲದ ಅಡೊಲೆಸೆಂಟ್ ಸ್ಟೇಜು. ಪುಸ್ತಕ ಲೋಕವೇ ನಮ್ಮ ಕಲ್ಪನಾ ಪ್ರಪಂಚವಾಗಿತ್ತು. ಹೃದಯಗೀತೆಯ ಪದ್ಮಿನಿಯ ಸ್ವಚ್ಛ ಪ್ರಣಯವೇ ನಮಗೆ ಮುದ ತರುವ ವಯಸ್ಸು.
ಒಟ್ಟಿನಲ್ಲಿ ತ್ರಿವೇಣಿ ಎನ್ನುವುದು ಎಲ್ಲ  ಕಾದಂಬರಿ ಪ್ರಿಯ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದ ಹೆಸರು. ಇದೊಂದು ನುಡಿನಮನ.

Leave a Reply