ನವರಾತ್ರಿ

ನವರಾತ್ರಿ
ನವರಾತ್ರಿಯು ನಮ್ಮ ಭಾರತದಲ್ಲಿ ಎಲ್ಲ ಕಡೆಗೂ ಆಚರಿಸುವಂಥ ಹಬ್ಬ. ಕೆಲವರು  ವೆಂಕಟೇಶ ದೇವರ ಮದುವೆಯ ಒಂಬತ್ತು ದಿನಗಳ ಸಂಭ್ರಮವನ್ನು  ನವರಾತ್ರಿಯ ಹೆಸರಿನಲ್ಲಿ ಆಚರಿಸುತ್ತಾರೆ. ಘಟಸ್ಥಾಪನೆ ಮಾಡಿ, ತುಪ್ಪ ಹಾಗೂ ಎಣ್ಣೆಯ ಎರಡು ನಂದಾದೀಪಗಳನ್ನು ಒಂಬತ್ತು ದಿನಗಳ ವರೆಗೂ ಸತತವಾಗಿ ಉರಿಸುತ್ತಾರೆ. ಐದನೆಯ ದಿನದಿಂದ ಪುಸ್ತಕ ಪೂಜೆ ಎಂದು ಆಚರಿಸುತ್ತಾರೆ. ಮುಂದೆ ಅಷ್ಟಮಿಯಂದು ದುರ್ಗೆಯ ರೂಪವನ್ನು ಪೂಜಿಸಿದರೆ, ನವಮಿಯಂದು ಮಹಾನವಮಿ ಎಂದೂ, ದಶಮಿಯಂದು ವಿಜಯದಶಮಿಯಾಗಿಯೂ ಆಚರಿಸುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಮುಖ್ಯವಾಗಿ ಬಂಗಾಲದಲ್ಲಿ ದುರ್ಗಾ ಪೂಜೆಯ ಹೆಸರಿನಲ್ಲಿ ಈ ನವರಾತ್ರಿಯನ್ನು ಒಂಬತ್ತು ದಿನಗಳ ವರೆಗೆ ದೇವಿಯ ವಿಭಿನ್ನ ರೂಪಗಳನ್ನು ಒಂಭತ್ತು ಅವತಾರಗಳಾಗಿ ಪೂಜಿಸುತ್ತಾರೆ.
ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಪೂಜಿಸಲಾಗುತ್ತದೆ.
1. ಶೈಲ ಪುತ್ರಿ
2. ಬ್ರಹ್ಮಚಾರಿಣಿ
3. ಚಂದ್ರ ಘಂಟ ದೇವಿ
4. ಕೂಷ್ಮಾಂಡ ದೇವಿ
5. ಸ್ಕಂದ ಮಾತೆ
6. ಕಾತ್ಯಾಯಿನಿ
7. ಕಾಳ ರಾತ್ರಿ
8. ಮಹಾ ಗೌರಿ
9. ಸಿದ್ಧಿಧಾತ್ರಿ
ಇವು ಮಹಾದುರ್ಗೆಯ ನವ ಅವತಾರಗಳು. ಮೊದಲನೆಯದು–
1. ಶೈಲ ಪುತ್ರಿ
ನವರಾತ್ರಿಯ ಮೊದಲನೇ ದಿನವೇ ಪ್ರತಿಪದೆ. ಈ ದಿನ ಶೈಲಪುತ್ರಿಯ ರೂಪವನ್ನು ಪೂಜಿಸಲಾಗುತ್ತದೆ. ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು ಎಂದರ್ಥ, ಈಶ್ವರನ ಪತ್ನಿಯಾಗಿಯೂ ಶೈಲ ಪುತ್ರಿಯನ್ನು ಆರಾಧಿಸಲಾಗುತ್ತದೆ. ಇವಳನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಪತಿಯಾದ ಶಿವನನ್ನು ತಂದೆಯು ಅವಮಾನ ಮಾಡಿದ್ದಕ್ಕಾಗಿ ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈಯುತ್ತಾಳೆ. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆಯುತ್ತಾಳೆ. ಆದರೆ ಸತಿಯ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿ ಹೋಗುತ್ತಾನೆ. ದೇವಿ ಶೈಲ ಪುತ್ರಿಯು ಕಾಡಿಗೆ ಹೋಗಿ 16 ವರ್ಷ ಕಠಿಣ ತಪಸ್ಸಿನಲ್ಲಿ ತೊಡಗಿ ನಂತರ ಶಿವನನ್ನು ಪಡೆಯುತ್ತಾಳೆ.
2. ಬ್ರಹ್ಮಚಾರಿಣಿ
ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಪಾರ್ವತಿಯಾಗಿ ಪರ್ವತರಾಜನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿತು.
3. ಚಂದ್ರಘಂಟಾ ದೇವಿ
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ದುರ್ಗಾ ಮಾತೆಯ ರೌದ್ರ ಸ್ವರೂಪವೆಂಬುದಾಗಿಯೂ ಕರೆಯಲಾಗುತ್ತದೆ. ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯ ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲಳಾಗುತ್ತಾಳೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ.
ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿಯು ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ಸುಕುಮಾರ ರೂಪವನ್ನು ತಾಳಬೇಕೆಂದು ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.
4. ಕೂಷ್ಮಾಂಡ ದೇವಿ
ಚತುರ್ಥಿ ಅಥವಾ ಚವತಿಯ ದಿನದಂದು ದೇವಿಯು ಕೂಷ್ಮಾಂಡಿನಿಯ ಅವತಾರವೆತ್ತುತ್ತಾಳೆ. ಕೂಷ್ಮಾಂಡಿನಿಯನ್ನು ಈ ಭೂಮಿಯ ಸೃಷ್ಟಿಕರ್ತೆ ಎಂದು ಹೇಳಲಾಗುತ್ತದೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ.
ಸೃಷ್ಟಿಯ ಅಸ್ತಿತ್ವವೇ ಇಲ್ಲದೆ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್‌’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ.
5. ಸ್ಕಂದ ಮಾತೆ
ನವರಾತ್ರಿಯ ಪಂಚಮಿ
ಯ ದಿನದಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ ಅಥವಾ ಮುರುಗನ್‌. ಕಾರ್ತಿಕೇಯನ ತಾಯಿಯೇ ಸ್ಕಂದ ಮಾತೆ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ರೂಪದಲ್ಲಿ ಈ ದೇವಿಯು ಕಾಣಿಸಿಕೊಳ್ಳುತ್ತಾಳೆ.
6. ಕಾತ್ಯಾಯಿನಿ
ನವರಾತ್ರಿಯ ಆರನೇ ದಿನ ಕಾತ್ಯಾಯಿನಿಯನ್ನು ಆರಾಧಿಸಲಾಗುತ್ತದೆ. ಒಮ್ಮೆ ಕಾತ್ಯಾಯನ ಎನ್ನುವ ಋಷಿಯು ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ಆಶಿಸಿ ಭಕ್ತಿಯಿಂದ ತಪಸ್ಸನ್ನು ಮಾಡುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆಯು ಆಶೀರ್ವಾದ ಮಾಡುತ್ತಾಳೆ. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಡುತ್ತಾರೆ. ಕಾತ್ಯಾಯಿನಿಯು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ದುಷ್ಕೃತ್ಯ ಎಸಗುವ ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸುತ್ತಾಳೆ. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ.
7. ಕಾಳ ರಾತ್ರಿ
ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಪೂಜಿಸಲಾಗುವುದು. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುತ್ತಾಳೆ. ಹೆಸರೇ ಹೇಳುವಂತೆ ಇದು ತಾಯಿಯ ಕರ್ಗತ್ತಲು ಮತ್ತು ಸಮಯದ ರೂಪವಾಗಿದೆ.
ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ದುರ್ಗೆಯು ಕಾಲರಾತ್ರಿಯ ರೂಪ ಧಾರಣೆ ಮಾಡಿ, ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ. ಕಾಳರಾತ್ರಿಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುತ್ತಾಳೆ. ಕಾಲರಾತ್ರಿಯು ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವುದರಿಂದಾಗಿ ಆಕೆಯನ್ನು ಶುಭಂಕರಿ  ಎಂದು ಪರಿಗಣಿಸಲಾಗಿದೆ.
8. ಮಹಾ ಗೌರಿ
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16ನೇ ವಯಸ್ಸಿನ ಯೌವ್ವನೆಯಾಗಿ ಕಾಣಿಸಿಕೊಳ್ಳುತ್ತಾಳೆ. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿಯು ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುತ್ತಾಳೆ.
ತಾಯಿ ದುರ್ಗೆಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮರಳಿ ದೇವಲೋಕಕ್ಕೆ ಹೋಗಿ ಶಿವನನ್ನು ಮದುವೆಯಾಗಲು ಬಯಸುತ್ತಾಳೆ. ನಾರದರ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾಳೆ. ಆಕೆ ಸಂಪೂರ್ಣವಾಗಿ ತಪಸ್ಸಿನಲ್ಲಿ ಮಗ್ನವಾಗಿ ಆಹಾರ, ನೀರನ್ನು ತ್ಯಜಿಸಿರುವ ಸಮಯದಲ್ಲಿ ಆಕೆಯ ದೇಹದಲ್ಲಿ ಧೂಳು, ಕೊಳೆ ತುಂಬಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾವಿರಾರು ವರ್ಷಗಳ ತಪಸ್ಸಿನ ನಂತರ ಶಿವನು ಆಕೆಯಿಂದ ಪ್ರಭಾವಿತನಾಗಿ ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಹರಿಯಲು ಬಿಡುತ್ತಾನೆ. ಇದರಿಂದಾಗಿ ಗೌರಿಯು ಕಾಂತಿಯುತವಾಗಿ, ಶ್ವೇತವರ್ಣದಲ್ಲಿ ಧ್ಯಾನಾಸಕ್ತಳಾಗಿ ಕಾಣುತ್ತಾಳೆ.
9. ಸಿದ್ಧಿಧಾತ್ರಿ
ನವಮಿಯಂದು ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುತ್ತಾಳೆ. ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುತ್ತಾಳೆ. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ.
ಹೀಗೆ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುವಾಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ ಎಂದು ಹೇಳಲಾಗುತ್ತದೆ.
***

Leave a Reply