ನೀವು ನಿವೃತ್ತಿಯ ಅಂಚಿನಲ್ಲಿದ್ದೀರಾ?

ನೀವು ನಿವೃತ್ತಿಯ ಅಂಚಿನಲ್ಲಿದ್ದೀರಾ?

“ಹೌದರೀ. ನಾ ಮುಂದಿನ ತಿಂಗಳದಾಗನ  ರಿಟಾಯರ್ ಆಗಾಂವಿದ್ದೇನೀ… ಎಲ್ಲಾರೂ ಒಂದಲ್ಲಾ ಒಂದಿನಾ ಆಗsಬೇಕಲ್ರೀ…..”
ನನಗೆ ಗೊತ್ತಿದೆ, ನೀವು ತಿಳಿದದ್ದು ಯಾವ ಅರ್ಥದಲ್ಲಿ ಎಂದು. ಆದರೆ ನನ್ನ ಪ್ರಶ್ನೆಯ ಅರ್ಥ… “ನೀವು ನಿವೃತ್ತಿ ಗಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೀರಾ?” ಎಂದು. ನೀವು ನಿಮ್ಮ ಮುಂದಿನ ಜೀವನದ ಬಗ್ಗೆ ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ? ನಂತರದ ಜೀವನದ ಸಾಂಸಾರಿಕ, ಮಾನಸಿಕ ಹಾಗೂ ಆರ್ಥಿಕ ಏರುಪೇರುಗಳಿಗೆ ಸಿದ್ಧತೆ ಮಾಡಿಕೊಂಡಿದ್ದೀರಾ ಎಂಬುದು. ಇದೆಂಥ ವಿಚಿತ್ರ? ಇದಕ್ಕಾಗಿ ಸಿದ್ಧತೆ ಎನ್ನುವುದು ಇದೆಯೇ? ಎಂದೂ ಕೆಲವರು ಕೇಳಿಯಾರು. ಆದರೆ ಇದು ನಿಜಕ್ಕೂ ವಿಚಿತ್ರ ಪ್ರಶ್ನೆಯೇ ಅಲ್ಲ.
ಬಹಳ ಜನರು ಅರುವತ್ತು ಆಗುವುದನ್ನೇ ಕಾಯುತ್ತಿರುತ್ತಾರೆ. ತಮಗೆ ಗ್ರಾಚುಯಿಟಿ, ಪಿ ಎಫ್., ಬಾಕಿ ರಜೆಯ ಎನ್ಕ್ಯಾಶ್ ಮೆಂಟ್ ಅಂತೆಲ್ಲ ಎಷ್ಟು ಹಣ ಬಂದೀತು.. ಅದನ್ನು ಹೇಗೆ ಉಪಯೋಗಿಸಬಹುದು, ಆಗಿನ್ನೂ ಮನೆಯ ಇಎಮ್ಆಯ್ ಕಂತು ಮುಗಿದ ಖುಶಿ.. ಈಗ ಹೆಂಡತಿಗೆ ಒಡವೆ, ಮೊಮ್ಮಕ್ಕಳಿಗೆ. ಸೊಸೆಯರು, ಮಕ್ಕಳಿಗೆ ಅವರ ಆಶೆಯ ವಸ್ತುಗಳನ್ನು ಕೊಡಿಸಿ ಹೇಗೆ ಖುಶಿ ಪಡಿಸಬಹುದು, ಬಹಳಷ್ಟು ಜನ ಗಂಡಸರು ಮನೆಯ ಸದಸ್ಯರ ಮುಖದ ಮೇಲೆ ನಗುವನ್ನು ಕಾಣಲೆಂದೆ ದುಡಿಯುತ್ತಾರೆ, ಹಣ ಗಳಿಸುತ್ತಾರೆ.. ಹೆಂಗಸರು ಕೂಡ ಇದಕ್ಕೆ ಹೊರತಾಗಿಲ್ಲ. ಅವರೂ ಕೂಡ ಗಂಡ ಹಾಗೂ ಮಕ್ಕಳಿಗೆ ಅವರವರ ಇಷ್ಟದ ವಸ್ತುಗಳನ್ನು ಕೊಡಿಸಿ ಅವರ ಒಂದು ನಗೆಯನ್ನು ಕಂಡು ತೃಪ್ತಿ ಪಟ್ಟುಕೊಳ್ಳುವವರು. ಹೀಗೆ ನಿವೃತ್ತಿಗಾಗಿ ಕಾಯ್ದುಕುಳಿತಿರುತ್ತಾರೆ. ಮನೆಯಲ್ಲಿ ಆರಾಮವಾಗಿರಬಹುದೆಂದೂ ವಿಚಾರ ಮಾಡಿರುತ್ತಾರೆ. ಆದರೆ ನಿವೃತ್ತಿಯ ನಂತರದ ಕೆಲವೇ ದಿನಗಳಲ್ಲಿ ಮತ್ತೆ ಕೆಲಸದ ಹುಡುಕಾಟ ನಡೆಸುತ್ತಾರೆ. ಅದಕ್ಕೆ ಅವರ ಉತ್ತರವೂ ಸಿದ್ಧ ವಾಗಿರುತ್ತದೆ. ಮನೆಯಲ್ಲಿ ಖಾಲಿ ಕುಳಿತುಕೊಳ್ಳಲು ಬೇಜಾರು ಎಂದು. ಅದೂ ಕೂಡ ಕೆಲಮಟ್ಟಿಗೆ ನಿಜ. ಮನೆಯಲ್ಲಿ ಎಲ್ಲರೂ ಅವರವರ ಕಾರ್ಯಗಳಲ್ಲಿ ಬಿಜಿಯಾಗಿರುತ್ತಾರೆ. ಹಾಗೆಂದು ಎಲ್ಲರ ಜೀವನವೂ ಹೀಗೆಯೆ ಇರುತ್ತದೆ ಎಂದೇನಿಲ್ಲ. ಕೆಲವರು ಆರಾಮವಾಗಿ ಜೀವನಸಂಗಾತಿಯೊಂದಿಗೆ ಸಮಯಕಳೆಯುತ್ತಾ ಮಕ್ಕಳು, ಮೊಮ್ಮಕ್ಕಳನ್ನು ಆವಾಗಾವಾಗ ಭೆಟ್ಟಿಕೊಡುತ್ತಲೂ ಇರುತ್ತಾರೆ.
ಈ ನಿವೃತ್ತಿ ಎನ್ನುವ ಕಲ್ಪನೆ ವಿವಿಧ ಬಗೆಯದಾಗಿದೆ, ವ್ಯಕ್ತಿಯಿಂದ ವ್ಯಕ್ತಿ ಭಿನ್ನವಾದ ಹಾಗೆ. ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿ ಕೂಡ ವಿಭಿನ್ನ ವಾಗಿಯೇ ಇರುವುದು ಸಹಜ. ಅವರವರು ನಿವೃತ್ತಿ ಹೊಂದಿದ ಕಾರ್ಯಕ್ಷೇತ್ರಗಳೂ ಕೂಡ ವಿಭಿನ್ನವೇ ಆಗಿರುತ್ತವೆ. ಒಮ್ಮೊಮ್ಮೆ ನಿವೃತ್ತಿ ಹೊಂದುತ್ತಿರುವ ಸಂದರ್ಭಗಳೂ ವಿಭಿನ್ನ ವಾಗಿಯೇ ಇರಬಹುದು. ಕೆಲವರು ಹದಗೆಟ್ಟ ಆರೋಗ್ಯದಿಂದಾಗಿ ಪರಿಸ್ಥಿತಿ ಕೈಮೀರೀಹೋಗಿಯೂ ನಿವೃತ್ತರಾದರೆ ಇನ್ನು ಕೆಲವರು  ಮತ್ತೆ ಇತರ ಕಾರಣಗಳಿಂದಾಗಿ ಬೇಸತ್ತು ಕೂಡ ಆಗಬಹುದು. ಇರಲಿ, ಕಾರಣ ಏನೇ ಇದ್ದರೂ ಕೆಲವೊಂದು ಸಾಮಾನ್ಯ ಸಿದ್ಧತೆ ಗಳೂ ಇವೆ ಎಂದೇ ಹೇಳಬಹುದು.
ನಿವೃತ್ತಿಯ ನಂತರದ ನಿಮ್ಮ ಆದಾಯದ ಮೂಲಗಳನ್ನು ಸರಿಯಾಗಿ ಲೆಕ್ಕ ಹಾಕುವುದು ಮೊದಲನೆಯ ಸಿದ್ಧತೆ.
ನಿವೃತ್ತಿ ವೇತನ ನಿಮ್ಮ ಮೊದಲಿನ ವೇತನದಷ್ಟೇ ಬರಲಾರದೆಂಬ ಅಂಶ ನೆನಪಿರಲಿ. ಆ  ಅಂಕಿಯಲ್ಲಿ ಹೆಚ್ಚಿನ ವ್ಯತ್ಯಾಸ ಬಾರದ ಹಾಗೆ ವ್ಯವಸ್ಥೆ ಮಾಡಿಕೊಂಡಿರಬೇಕು. ನೀವು ಬೇಕಾದಷ್ಟು ದೊಡ್ಡ ಮೊತ್ತದ ನಿವೃತ್ತಿ ವೇತನ ಪಡೆಯಲಿದ್ದರೂ ಮೊದಲು ಮಾಡಬೇಕಾದ ಕಾರ್ಯ ವೆಂದರೆ ನಿಮ್ಮ ಆದಾಯದ ಎಲ್ಲ ಮೂಲಗಳನ್ನು ಲೆಕ್ಕ ಹಾಕಿಡಬೇಕಾದದ್ದು ಅತ್ಯಂತ ಅವಶ್ಯಕ. ತಿಂಗಳ ಖರ್ಚು ಲೆಕ್ಕ ಮಾಡಿ ಒಂದು ಬಜೆಟ್ ಮಾಡಬೇಕು. ಬಂದ ಹಣದಲ್ಲಿ ಕೂಡ ಉಳಿತಾಯ ಮಾಡಬೇಕಾದುದು ಅವಶ್ಯ. ಯಾಕೆಂದರೆ ವಯೋಮಾನಕ್ಕೆ ತಕ್ಕಂತೆ ಕಾಯಿಲೆಗಳೂ ಬರುತ್ತವೆ. ಬಂದ ಕಾಯಿಲೆಗಳು ಸಂಜೆಯ ನೆಂಟ. ಅವುಗಳಲ್ಲಿ ಕೆಲವು ಸುಲಭದಲ್ಲಿ ಹೋಗಲಾರದವುಗಳಾದರೆ ಇನ್ನು ಕೆಲವು ನಮ್ಮ ಜೀವನಸಂಗಾತಿಗಳಂತೆ ನಮ್ಮೊಂದಿಗೆಯೇ  ಉಳಿದು ಬಿಡುತ್ತವೆ. ಈ ಕಾಯಿಲೆಗಳನ್ನು ಸರಿಯಾದ ಹಿಡಿತದಲ್ಲಿಟ್ಟುಕೊಂಡರೆ ನಾವು ಆರಾಮದಾಯಕ ಜೀವನವನ್ನು ಅನುಭವಿಸೇವು. ಇಲ್ಲವಾದರೆ ಎಷ್ಟು ಹಣವಿದ್ದರೇನು, ಆರೋಗ್ಯ ಸರಿಯಿಲ್ಲದೇ ನೆಮ್ಮದಿಯನ್ನೇ ಕಳೆದುಕೊಂಡರೆ? ಮೆಡಿಕಲ್ ಇನ್ಶೂರೆನ್ಸ್ ಮಾಡಿಸುವುದೂ ಅತ್ಯಂತ ಉತ್ತಮ.
ಸಮಯ ಕಳೆಯಲು ಕೂಡ ಒಂದು ಉತ್ತಮ ಯೋಜನೆ ಬೇಕೇ ಬೇಕು.
ಇಲ್ಲಿಯ ವರೆಗೂ ನೀವೊಂದು ವೇಳಾಪಟ್ಟಿಗೆ ಹೊಂದಿಕೊಂಡುಬಿಟ್ಟಿರುತ್ತೀರಿ. ಬೆಳಿಗ್ಗೆ ಬೇಗ ಏಳುವುದು. ಆಫೀಸಿಗೆ ಹೋಗುವುದಕ್ಕಾಗಿ ಅತ್ಯಂತ ಗಡಿಬಿಡಿಯಲ್ಲಿ ತಯಾರಾಗುವುದು, ಆಫೀಸು.. ಕೆಲಸ.. ಅದೇ ಸಂಗಾತಿಗಳು.. ಮತ್ತೆ ಮನೆ.. ಹೀಗೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಎಲ್ಲಾ ಬದಲಾಗುತ್ತದೆ. ಆಫೀಸಿಗೆ ಹೋಗುವ ಗಡಿಬಿಡಿಯಿಲ್ಲ. ಕೆಲಸದ ಟೆನ್ಷನ್ ಇಲ್ಲ. ಆರಾಮವೇ ಆರಾಮ! ಆದರೆ ಕೆಲವರು ಇದರಿಂದಾಗಿ ಖಿನ್ನತೆಗೆ ಈಡಾಗುತ್ತಾರೆ. ಆದಕ್ಕಾಗಿ ಹಣವನ್ನು ಗಳಿಸಲು ಸಾಧ್ಯವಾಗದಿದ್ದರೂ ಆತ್ಮಸಂತೋಷ ತರುವಂತಹ ಕೆಲಸಗಳನ್ನು ಹಮ್ಮಿಕೊಳ್ಳುವುದು
ಅತ್ಯಂತ ಸೂಕ್ತ. ಯಾವುದಾದರೂ ಕೆಲ ಹವ್ಯಾಸಗಳನ್ನು ಪ್ರಾರಂಭಿಸುವುದೋ ಅಥವಾ ಇದ್ದವುಗಳನ್ನೇ ಬೆಳೆಸಿಕೊಳ್ಳುವುದೋ ಸೂಕ್ತ. ಇತ್ತೀಚಿನ ಮತ್ತು ಹಳೆಯ ಸ್ನೇಹಿತರೊಂದಿಗೆ ಒಳ್ಳೆಯ ಸಂಬಂಧ ಇರಿಸಿಕೊಳ್ಳಿ. ಟೂರ್ ಮಾಡಿರಿ, ಬರೆಯಿರಿ, ಓದಿರಿ, ವಾಲಂಟರಿಯಾಗಿ ದುಡಿದು ಸಮಾಜ ಸೇವೆ ಮಾಡಿರಿ. ಮನೆಯ ಜನರನ್ನು ಕರೆದುಕೊಂಡು ಸಣ್ಣಪುಟ್ಟ ಟೂರ್ ಕೂಡ ಮಾಡಬಹುದು. ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಕೂಡಾ ಭಾಗವಹಿಸಬಹುದು.. ಸಂಬಂಧ ಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದೂ ಕೂಡ ಅತ್ಯವಶ್ಯ.
ಮನೆಯಲ್ಲಿ ಕೈತೋಟದಲ್ಲಿ ಕೆಲಸ, ಹೆಣಿಕೆ, ಹೊಲಿಗೆ, ಸಂಗೀತ, ಪೇಂಟಿಂಗ್ ಕೂಡ ಮಾಡಬಹುದು.
ಹೀಗೆ ನಿವೃತ್ತಿಯ ದಿನಗಳನ್ನು ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಆರಾಮವಾಗಿರ‍ಬಹುದು. ಮಹಿಳೆಯರು ತಾವು ನಿವೃತ್ತಿ ಹೊಂದುತ್ತಿರುವಂತೆಯೇ ಮಕ್ಕಳು ತಮ್ಮೊಂದಿಗೆ ಬಂದಿರಲು ಕರೆಯುತ್ತಾರೆ. ಅವರಿಬ್ಬರೂ ಹೊರಗೆ ಕೆಲಸಕ್ಕೆ ಹೋಗುವವರು. ಅವರ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ, ಕರೆತರುವ, ಎಲ್ಲರಿಗೂ ಅಡಿಗೆ ಮಾಡುವ ಕೆಲಸ. ನಮಗೆಲ್ಲಿಯ ನಿವೃತ್ತಿ? ಎಂತಲೂ ಗೊಣಗುತ್ತಾರೆ..ಅದು ತಪ್ಪು. ಮೊಮ್ಮಕ್ಕಳು ದೊಡ್ಡವರಾದಂತೆ ಅವರು ಕೂಡಾ ತಮ್ಮ ಅಭ್ಯಾಸ, ಶಾಲೆ ಇತ್ಯಾದಿಗಳಲ್ಲಿ ಬಿಜಿಯಾಗಿರುತ್ತಾರೆ. ಆದರೂ ಅವರು ತಮ್ಮ ಅಜ್ಜಿ ತಾತರೊಂದಿಗೆ ಕಳೆದ ದಿನಗಳನ್ನು ಎಂದೂ ಮರೆಯರು. ಇದಕ್ಕೂ ಹೆಚ್ಚಿನ ಉಡುಗೊರೆ ಏನು ಬೇಕು ಜೀವನದಲ್ಲಿ..?

ಮಾಲತಿ ಮುದಕವಿ

Leave a Reply