ನಿಮ್ಮ ಜೀವನದಲ್ಲಿ ಸರಳತೆ..

ನಿಮ್ಮ ಜೀವನದಲ್ಲಿ ಸರಳತೆ..

Simple living and high thinking… ಈ ಮಾತು ಬಹಳಷ್ಟು ಜನಜನಿತವಾದದ್ದು. ನಾವೆಲ್ಲ ಚಿಕ್ಕಂದಿನಿಂದಲೂ ಗಾಂಧೀಜಿಯವರ ಬಗೆಗೆ ಜನಜನಿತವಾಗಿದ್ದ ಈ ಮಾತುಗಳನ್ನೇ ಕೇಳಿ ಬೆಳೆದವರು. ಅದಕ್ಕೆ ತಕ್ಕಂತೆ ನಮ್ಮ ಜೀವನವೂ ಇತ್ತೇನೋ.
ಆ ಕಾಲದಲ್ಲಿ ಜನರ ಹತ್ತಿರ ಈಗಿನಂತೆ ಹಣವೂ ಇರುತ್ತಿರಲಿಲ್ಲ. ಖರ್ಚು ಮಾಡುವ ಪ್ರವೃತ್ತಿಯೂ ಇರುತ್ತಿರಲಿಲ್ಲ.. ಸಂದರ್ಭಗಳೂ ಕಡಿಮೆಯೇ. ನಮ್ಮ ಮನೆಯಲ್ಲಂತೂ ಅವ್ವನದು ಯಾವಾಗಲೂ ಕೊರತೆಯ ಬಜೆಟ್ಟೇ. ಬಟ್ಟೆಗಳ ವಿಷಯದಲ್ಲಿ ಹೇಳಬೇಕೆಂದರೆ ಎರಡು ಶಾಲೆಯ ಸಮವಸ್ತ್ರಗಳು… ಎರಡು ಸಾದಾ ಫ್ರಾಕುಗಳು. ಒಂದು ಸ್ವಲ್ಪ ಜೋರಾಗಿರುವ ಲಂಗ, ಬ್ಲೌಸ್. ಅದು ಯಾರದಾದರೂ ಮದುವೆ, ಮುಂಜಿಗೆಂದು ತೆಗೆದಿರಿಸಿದ್ದುದು. ಅದೂ ಕೂಡ ಒಮ್ಮೊಮ್ಮೆ ಅವ್ವನ ಹಳೆಯ ರೇಶ್ಮೆ ಸೀರೆಯಲ್ಲಿ ಹೊಲೆಸಿದ್ದುದೂ ಇರುತ್ತಿತ್ತು.. ನಮಗೆ ಆ ಡ್ರೆಸ್ ಹಾಕ್ಕೊಂಡರೆ ಒಂಥರಾ ರಾಜಕುಮಾರಿ ಫೀಲಿಂಗು. ಅಷ್ಟೇ ಏಕೆ, ವಿಶೇಷವಾದದ್ದನ್ನು ತಿನ್ನಲು ಕೂಡ ನಾವು ಹಬ್ಬದ ದಾರಿ ಕಾಯಬೇಕಿತ್ತು. ಅದೂ ಪೂಜೆ, ನೈವೇದ್ಯಗಳು, ಊಟಕ್ಕೆ ಕರೆದವರನ್ನು ಉಪಚಾರ ಮಾಡಿದ ನಂತರವೇ ನಮ್ಮ ಊಟ. ಮನೆಯಲ್ಲಿ ಕೊರತೆಯೇ ಇದ್ದರೂ ವಾರಕ್ಕೊಮ್ಮೆ ಒಬ್ಬ ಶಾಲೆ ಕಲಿಯುತ್ತಿರುವ ಹುಡುಗನಿಗೆ ಊಟಕ್ಕೆ ಹಾಕುತ್ತಿದ್ದಂಥ ಹೃದಯವಂತಿಕೆ. ಒಮ್ಮೊಮ್ಮೆ ಆ ಹುಡುಗ ಮುಖ ಸಣ್ಣದು ಮಾಡಿಕೊಂಡಾಗ ಅಪ್ಪ ಕಾರಣ ಕೇಳುತ್ತಿದ್ದ. ‘ಕಾಕಾರ, ಪುಸ್ತಕ ತೊಗೋಬೇಕಾಗೇದರಿ.. ಅಪ್ಪ ಇನ್ನೂ ರೊಕ್ಕನ ಕಳಸಿಲ್ಲಾ.” ಅಂತ ಹೇಳಿದರೆ ಅವನಿಗೆ ಒಂದು ನೋಟನ್ನು ಥಟ್ಟನೆ ನೀಡುತ್ತಿದ್ದ.
ನಾನು ಯಾವಾಗಲೂ ಒಂದಿಷ್ಟು ರೆಬೆಲ್ಲೇ. ಅಪ್ಪನಿಗೆ “ಅಪ್ಪಾ, ನನಗಾದ್ರ ಏನರೆ ಕೇಳಿದ್ರ ರೊಕ್ಕಿಲ್ಲಂತೀ… ಆ ಮಾಧೂ ಮನ್ನೆ ಪುಸ್ತಕಕ್ಕ ರೊಕ್ಕಿಲ್ಲಂದಕೂಡ್ಲೇ ಹತ್ತ ರೂಪಾಯಿ ತಗದ ಕೊಟ್ಟೆಲಾ..ನಿನಗ ನನ್ನ ಮ್ಯಾಲ ಪ್ರೀತೀನ ಇಲ್ಲಾ…”
ಅಂದಾಗ ಅಪ್ಪ,”ನಿನಗ ಪುಸ್ತಕ, ನೋಟಬುಕ್ಕು, ಕಂಪಾಸು ಇವ್ಯಾವಕ್ಕರೆ ಕಡಿಮೀ ಮಾಡೇದೇನವಾ? ಆದರ ಹೆಚ್ಚಿನ ಐಶಾರಾಮಿ ಸಾಮಾನ ಮಾತ್ರ ಬ್ಯಾಡಂತೇನೀ.. ಪಾಪಾ, ಆ ಹುಡಗಾ ಸಾಲಿ ಕಲಿಯಾಂವಾ.. ತಾಯಿಲ್ಲದ ಪರದೇಶಿ. ಅಂವಗ ಪುಸ್ತಕಕ್ಕ ಕಡಿಮೀ ಬಿದ್ದಾವ ರೊಕ್ಕಾ.. ಇವತ್ತು ನಾ ಕೊಟ್ಟದ್ದು ಬರೇ ಹತ್ತು ರುಪಾಯಿ. ಅಂವಾ ಸಾಲೀ ಕಲತ ಮುಂದ ವಿದ್ಯಾವಂತಾಗಿ ಗಳಸಲಿಕ್ಕೆ ಸುರೂ ಮಾಡಿದ್ರ ಒಂದ ಸಂಸಾರದ ಉದ್ಧಾರ ಆಗತದ..” ಅಂತಿದ್ದರು.
ಅವರ ದೃಷ್ಟಿಯಲ್ಲಿ ಜೀವನದಲ್ಲಿ ನೆಮ್ಮದಿ ಬೇಕಾದರೆ ನಿಶ್ಚಿಂತೆ, ನಿರ್ಲಿಪ್ತತೆ ಮೈಗೂಡಿಸಿಕೊಳ್ಳಬೇಕು. ಏನೇನೋ ಆಶೆ ಮಾಡಿ ಅದು ಸಿಗದೇಹೋದಾಗ ಕೊರಗಿ ಇದ್ದ ಸಂತೋಷ ವನ್ನೂ ಹಾಳುಮಾಡಿಕೊಳ್ಳುವುದು ಸರಳ ಜೀವನದ ತತ್ವವಲ್ಲ. ಪರೋಪಕಾರ, ದಾನ, ಧರ್ಮಗಳಿಗೆ ಇದ್ದ ಗಳಿಗೆಯೇ ಪ್ರಶಸ್ತ. ಕೋಪ, ತಾಪ ಬಿಟ್ಟು ನೆರೆಹೊರೆಯವರನ್ನು ಪ್ರೀತಿಸುವುದನ್ನು, ಗೌರವಿಸುವುದನ್ನು, ಕ್ಷಮಿಸುವುದನ್ನು ಕಲಿಯಬೇಕು. ಇನ್ನೊಬ್ಬರ ದೋಷ ಹುಡುಕುವ ಬದಲು ನಮ್ಮೊಳಗಿನ ದೋಷವನ್ನು ಪತ್ತೆ ಹಚ್ಚಿ, ತಿದ್ದಿಕೊಳ್ಳಬೇಕು ಎಂಬುದೇ ಅವರ ಜೀವನದ ಮೂಲಮಂತ್ರವಾಗಿತ್ತು. ಹೀಗಾಗಿ ನಮ್ಮದು ಆರಕ್ಕೇರದ ಮೂರಕ್ಕಿಳಿಯದ ನೆಮ್ಮದಿಯ ಸಂಸಾರವಾಗಿತ್ತು. ಮನುಷ್ಯನಿಗೆ ನೀತಿ, ಸನ್ನಡತೆಗಳೇ ಮುಖ್ಯ. ಹೆಚ್ಚಿನದಕ್ಕೆ, ನಿಲುಕದುದಕ್ಕೆ ಆಶೆಪಟ್ಟರೆ ಅದು ನಮ್ಮ ಜೀವನದ ನೆಮ್ಮದಿಯನ್ನೇ ಕೆಡಿಸುತ್ತದೆ. ಹಣವಿದ್ದರೆ ನೆಮ್ಮದಿ ಸಿಗುವುದಿಲ್ಲ. ಗುಣವಿದ್ದರೆ ಮಾತ್ರ ನೆಮ್ಮದಿ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು
ಜಗತ್ತಿನಲ್ಲಿ ದೊಡ್ಡ ಶಕ್ತಿ ಸರಳತೆ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಆದರೂ ನಮ್ಮಿಂದ ಆದಷ್ಟು ಮಟ್ಟಿಗೆ ಪಾಲಿಸಬೇಕು ಎಂಬುದೇ ಅವರ ತತ್ತ್ವ.
ನಾವು ಗಳಿಸುವಂತಾದಾಗ ಜಗತ್ತಿನ ರೀತಿ ಬದಲಾಗಿತ್ತೋ, ನಾವೇ ಬದಲಾಗಿದ್ದೆವೋ ಅರಿಯದು. ಆ ಸರಳ ಜೀವನ ಕೈಬಿಟ್ಟಿತ್ತು. ಆದರೂ ಪೂರ್ತಿಯೇನಲ್ಲ! ಕಪಾಟಿನ ತುಂಬ ಬಟ್ಟೆ, ಒಂದೇ ಜೋಡಿ ಚಪ್ಪಲಿಯ ಮೇಲೆ ವರ್ಷಗಳನ್ನೇ ಕಳೆದ ನಮಗೆ ನಾಲ್ಕೈದು ಜೊತೆ ಚಪ್ಪಲಿ, ಒಂದು ಪಠ್ಯಪುಸ್ತಕ ತೆಗೆದುಕೊಳ್ಳಲು ಪರದಾಡುತ್ತಿದ್ದ, ಮುಂದಿನ ಕ್ಲಾಸಿನವರ ಹತ್ತಿರ ಸೆಕೆಂಡ್ ಹ್ಯಾಂಡ್ ಪಠ್ಯ ಪುಸ್ತಕಗಳಿಗಾಗಿ ವಾರ್ಷಿಕ ಪರೀಕ್ಷೆ ನಡೆದಿರುವಾಗಲೇ ಮುಂಗಡ ಬುಕಿಂಗ್ ಮಾಡಿರುತ್ತಿದ್ದ ನಾವು ಈಗ ಓದಲೆಂದು ಕಂಡ ಕಂಡೆಡೆಗಳಿಂದ ತಂದು ಪೇರಿಸಿದ ಪುಸ್ತಕಗಳು.. ಉಪಯೋಗ ಮಾಡದೆ ಚೀಲ ತುಂಬಿಟ್ಟ ಪಾತ್ರೆಪಡಗಗಳು, ಮನೆಯ ಉಪಯೋಗಕ್ಕೆ, ಅತಿಥಿಗಳು ಬಂದಾಗ ಉಪಯೋಗಕ್ಕೆ ಎಂದು ತಂದ ಅನೇಕ ನಿತ್ಯೋಪಯೋಗಿ ವಸ್ತುಗಳು!
ಆದರೂ ಮನಸ್ಸು ಮೊದಲಿನ ಸಂಸ್ಕಾರವನ್ನು ಮರೆತಿಲ್ಲ. ಶಾಲೆಯ ಪುಸ್ತಕ, ಪೆನ್ನು, ಪೆನ್ಸಿಲ್ ಗಳಿಗಾಗಿ ಇಲ್ಲವೆಂದು ಕಣ್ಣೀರು ತಂದ ಕೆಲಸದವಳ ಮಕ್ಕಳಿಗೆ ಅಲ್ಪ ಸ್ವಲ್ಪ ಸಹಾಯ, ಹಸಿದು ಬಂದವರಿಗೆ ಊಟ, ಇತ್ಯಾದಿ… ಅದೇ ಸರಳತೆಯೆಂದಾದಲ್ಲಿ ಅದು ನಮ್ಮ ಜೀವನದಲ್ಲಿ ಇನ್ನೂ ಜೀವಂತವಿದೆಯೆಂದು ಹೇಳಬಲ್ಲೆ. ಕಾಲಾಯ ತಸ್ಮೈ ನಮಃ.. ಎಂಬಂತೆ ಒಂಚೂರು ಬದಲಾವಣೆ ಸಹ್ಯವೇನೋ…

Leave a Reply