ನೀತಿ ಮತ್ತು ನೈತಿಕತೆ

ನೀತಿ ಮತ್ತು ನೈತಿಕತೆ
ನಾನು ಆಯ್ಕೆ ಮಾಡಿಕೊಂಡ ವಿಷಯ ನೀತಿ ಮತ್ತು ನೈತಿಕತೆ. ಪುರಾತನ ಕಾಲದಿಂದ ಇಂದಿನವರೆಗೂ ನಾವು ಮಾನವನ ಜೀವನದ ರೀತಿಯತ್ತ ದೃಷ್ಟಿ ಹರಿಸಿದರೆ ಕಂಡುಬರುವ ಒಂದು ಮುಖ್ಯ ಅಂಶವೆಂದರೆ ಒಬ್ಬಂಟಿ ಮಾನವನಿರಲಿ, ಕುಟುಂಬವಿರಲಿ, ಸಮಾಜವಿರಲಿ ಅಥವಾ ದೇಶವೇ ಇರಲಿ, ಅದರ ಸರಳ ನಿರ್ವಹಣೆಗೆ ಒಂದು ನೀತಿ ಸಂಹಿತೆ ಇರಲೇಬೇಕೆಂಬುದು. ನೀತಿ ಸಂಹಿತೆ ಇರದೇ ಹೋದಲ್ಲಿ ಮಾನವನ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೇ ಸರಿ. ನೀತಿಗಳಲ್ಲಿ ಸಾವಿರಾರು ವರ್ಷಗಳ ನಂತರ ಕೂಡ ಪ್ರಸಿದ್ಧವಿರುವ ನೀತಿಗಳೆಂದರೆ ವಿದುರನೀತಿ ಹಾಗೂ ಚಾಣಕ್ಯ ನೀತಿ. ಭಗವದ್ಗೀತೆಯಲ್ಲೂ ಕೂಡ ಶ್ರೀ ಕೃಷ್ಣನು ಜೀವನದ ನೀತಿಯ ಬಗ್ಗೆ ಹೇಳುತ್ತಾನೆ.
ನೀತಿ:
ನೀತಿ ಎಂದರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನದ ಆಚಾರ, ಅವನ ಉದಾತ್ತ ತತ್ವ. ಶಿಷ್ಟಾಚಾರ. ನೈತಿಕತೆ ಎಂಬುದು ತತ್ವ ಶಾಸ್ತ್ರದ ಒಂದು ಶಾಖೆ. ಈ ಪದವು ಗ್ರೀಕ ಪದ ಎಥಿಕೋಸ್ ದಿಂದ ಬಂದಿದೆ. ಇದು ಜನರಿಗೆ ಬದುಕುವ ಅತ್ಯುತ್ತಮ ಮಾರ್ಗವನ್ನು ಹೇಳುತ್ತದೆ. ನೈತಿಕತೆಯು ಒಳ್ಳೆಯ ಮತ್ತು ಕೆಟ್ಟ, ಸರಿ ಮತ್ತು ತಪ್ಪು, ಸದ್ಗುಣ ಮತ್ತು ದುರ್ಗುಣಗಳಂಥ ಪರಿಕಲ್ಪನೆಯನ್ನು ವಿವರಿಸುವ ಶಾಸ್ತ್ರ.
ಭಗವದ್ಗೀತೆಯಲ್ಲಿ ನೈತಿಕ ಜಿಜ್ಞಾಸೆ
ಭಗವದ್ಗೀತೆಯು ಒಂದು ಧಾರ್ಮಿಕ ಗ್ರಂಥವಾದರೂ ಜೀವನದ ವಿವಿಧ ಕ್ಷೇತ್ರಗಳಲ್ಲಿ ಇದರ ಪಾಠಗಳು ಇಂದಿಗೂ ಉಪಯುಕ್ತವಾಗಿವೆ. ಭಗವದ್ಗೀತೆಯು ಬಹಳಷ್ಟು ಸಮಾಜ ಸುಧಾರಕರು, ವಿಚಾರವಂತರು ಹಾಗೂ ತಿಲಕ, ಗಾಂಧಿಯವರಂಥ ನೇತಾರರುಗಳ ಮೇಲೂ ಪ್ರಭಾವ ಬೀರಿದೆ. ಇದು ಜೀವನದ ಅನೇಕ ನೈತಿಕ ಸಮಸ್ಯೆಗಳನ್ನು ಬಗೆಹರಿಸುವಂಥ ಗ್ರಂಥ. ಒಳ್ಳೆಯ ಹಾಗೂ ದುಷ್ಟತನಗಳ ನಡುವಿನ ಸಂಘರ್ಷವು ಯಾವಾಗಲೂ ನಡೆದೇ ಇರುವಂಥದು. ಸಮಾಜದಲ್ಲಿ ಹಾಗೂ ವ್ಯಕ್ತಿಯ ಆಂತರ್ಯದಲ್ಲಿಯ ಸಂಘರ್ಷಗಳಿಗೂ ಕೂಡ ಈ ಗೀತಾಸೂತ್ರಗಳೇ ಪರಿಹಾರವನ್ನು ಸೂಚಿಸುತ್ತವೆ. ಗೀತೆಯಿಂದ ನಾವು ಸ್ಥಿತಪ್ರಜ್ಞತೆ- ಇದರಿಂದ ನಾವು ಸಹಿಷ್ಣುತೆ, ನಿಷ್ಪಕ್ಷಪಾತ, ಸಹಾನುಭೂತಿ, ಸತ್ಯನಿಷ್ಠತೆ, ಪ್ರಾಮಾಣಿಕತೆ, ವಸ್ತುನಿಷ್ಠತೆ, ಧೈರ್ಯ ಮುಂತಾದವುಗಳನ್ನು, ನಿಷ್ಕಾಮಕರ್ಮ ಯೋಗದಿಂದ ಕರ್ತವ್ಯ ಪರಾಯಣತೆ, ಆನಾಸಕ್ತಿಗಳನ್ನೂ ಅಲ್ಲದೆ ಲೋಕಕಲ್ಯಾಣ, ಸಕಲ ಜೀವರಾಶಿಗಳಲ್ಲಿ ದಯೆ, ಜನಸೇವೆ, ಸಮರ್ಪಣಾ ಭಾವ ಮುಂತಾದ ಗುಣಗಳನ್ನು ಕಲಿಯುತ್ತೇವೆ.
ಭಗವದ್ಗೀತೆಯು ಒಂದು ಕತೆಯಲ್ಲ. ಅದು ಇತರ ಗ್ರಂಥಗಳಂತೆ ಧರ್ಮಗ್ರಂಥವಲ್ಲ, ಸಾಮಾಜಿಕ ವ್ಯವಸ್ಥೆಯನ್ನು ನಿರ್ದೇಶಿಸಲು ಹುಟ್ಟಿಕೊಂಡ ಸಂವಿಧಾನವೂ ಅಲ್ಲ. ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿ ತೋರಿಸುವ ಮಾರ್ಗದರ್ಶಿನಿ. ಹೀಗೆ ಅರ್ಥೈಸಿಕೊಂಡಾಗ ಭಗವದ್ಗೀತೆ ಪ್ರತಿಯೊಬ್ಬರಿಗೆ ನೀತಿಪಾಠವಾಗಿ ತೆರೆದುಕೊಳ್ಳುತ್ತದೆ. ವಸಾಹತುಶಾಹಿ ಆಳ್ವಿಕೆಯ ಜೊತೆಗೇ ಭಗವದ್ಗೀತೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಚಿಂತನಾಪರಂಪರೆ ಬೆಳೆದುಬಂದಿತು. ಪಾಶ್ಚಾತ್ಯರು ತಮ್ಮ ಧಾರ್ಮಿಕ ವಿಚಾರಧಾರೆಯ ಹಿನ್ನೆಲೆಯಲ್ಲಿ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಭಗವದ್ಗೀತೆಯು ಧಾರ್ಮಿಕ ಜಿಜ್ಞಾಸೆಯಾಯಿತೇ ವಿನಃ ಬದುಕಿನ ಜಿಜ್ಞಾಸೆಯಾಗಿ ಕಾಣಲೇ ಇಲ್ಲ. ಅದಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ವೈರುದ್ಧ್ಯತೆ. ಇದೇ ಮುಂದೆ ಸೆಕ್ಯುಲರ್ ಚಿಂತನಾ ವಿಧಾನದಲ್ಲೂ ಮುಂದುವರಿಯುತ್ತಾ ಬಂತು.
ಭಗವದ್ಗೀತೆಯಲ್ಲಿ ಧಾರ್ಮಿಕ ಜಿಜ್ಞಾಸೆಯೂ ಇದೆ, ಬದುಕಿನ ಜಿಜ್ಞಾಸೆಯೂ ಇದೆ. ಇಲ್ಲಿ ಧರ್ಮವು ಮಾನವತೆಯಾಗಿದೆ, ಜಾತಿಯಾಗಿಲ್ಲ. ಇಡೀ ಮನುಕುಲದ ದ್ವಂದ್ವಗಳ ಕುರಿತಾಗಿ ಚರ್ಚಿಸಲಾಗುತ್ತದೆ. ಜಗತ್ತಿನ ರಾಷ್ಟ್ರಗಳೆಲ್ಲ ಇಂದು ಯಾವ ಯಾವ ರೀತಿಯ ಸಂದಿಗ್ಧಗಳನ್ನು ಎದುರಿಸುತ್ತಿವೆಯೋ ಅವುಗಳಿಗೆಲ್ಲ ಉತ್ತರಿಸುತ್ತದೆ ಭಗವದ್ಗೀತೆ. ಪರಸ್ಪರ ಅವಲಂಬನೆಯ ಮೂಲಕವೇ ಈ ಸೃಷ್ಟಿ ಚಲಿಸುತ್ತಿರುತ್ತದೆ. ಬೇರೆ ಬೇರೆ ರೀತಿಯ ಕೆಲಸಕಾರ್ಯಗಳ ಮೂಲಕ ಈ ಸಮಾಜ ವ್ಯವಸ್ಥೆ ನಡೆಯುತ್ತಿರುತ್ತದೆ. ಹಾಗಾಗಿ ಈ ಭೂಮಿಯ ಮೇಲೆ ಹಿಂಸೆಯೂ ಇರುತ್ತದೆ, ಅಹಿಂಸೆಯೂ ಇರುತ್ತದೆ. ಯುದ್ಧವೂ ಇರುತ್ತದೆ, ಶಾಂತಿಯೂ ಇರುತ್ತದೆ. ತರತರದ ಜನರೂ ಇರುತ್ತಾರೆ. ಸದಾ ಸಂಘರ್ಷಗಳೂ ಅನಿವಾರ್ಯ. ಇಂತಹ ವಿಶಿಷ್ಟವಾದ ಪ್ರಪಂಚದಲ್ಲಿ ಮನುಷ್ಯನ ನಿಲುವುಗಳು ಹೇಗಿರಬೇಕು, ವ್ಯಕ್ತಿತ್ವವನ್ನು ಹೇಗೆ ಕಟ್ಟಿಕೊಳ್ಳಬೇಕು ಮತ್ತು ನೆಮ್ಮದಿಯನ್ನು ಹೇಗೆ ಪಡೆಯಬೇಕೆಂಬುದನ್ನು ಭಗವದ್ಗೀತೆ ನಿರ್ದೇಶಿಸುತ್ತದೆ. ಈ ದೃಷ್ಟಿಯಿಂದ ಇದೊಂದು ಅದ್ಭುತವಾದ ನೀತಿ ಸಂಹಿತೆಯ ಗ್ರಂಥ.
ಭಗವದ್ಗೀತೆಯು ನೈತಿಕ ಬೋಧನೆ ಮಾಡುತ್ತದೆಯೇ? ಈ ಪ್ರಶ್ನೆಯೇ ಇಂದಿನ ವಿವಾದಗಳಿಗೆ ಮುಖ್ಯ ಕಾರಣ. ಈ ಅಪವಾದವನ್ನು ಖಂಡಿಸುವಾಗ ಭಾರತೀಯರ ನೈತಿಕ ಸ್ವರೂಪವೇನೆಂಬುದರ ಬಗ್ಗೆ ನಾವು ತಿಳಿದುಕೊಳ್ಳಬೇಕಾಗುತ್ತದೆ. ಪಾಶ್ಚಾತ್ಯರ ನೈತಿಕತೆ ಪ್ರಮಾಣಕ ಸ್ವರೂಪದ್ದಾಗಿದೆ. ಅದಕ್ಕೆ ಎರಡೇ ಮುಖವಿರುತ್ತದೆ. ಒಳ್ಳೆಯದು ಕೆಟ್ಟದ್ದು, ಸರಿ, ತಪ್ಪು, ಸತ್ಯ, ಸುಳ್ಳು ಹೀಗೆ ಪರಸ್ಪರ ವಿರೋಧವಾದ ವಾಸ್ತವಗಳ ಮೂಲಕ ಅವರು ನೈತಿಕತೆಯನ್ನು ನಿರ್ಧರಿಸುತ್ತಾರೆ. ಅಂದರೆ ಅರ್ಧಸತ್ಯ ಎಂಬುದು ಅವರ ನಿಘಂಟುವಿನಲ್ಲಿ ಇಲ್ಲ. ಫಲವಿಲ್ಲದೆ ಕೆಲಸಮಾಡು ಎಂದರೆ ಅವರಿಗೆ ಆರ್ಥವೇ ಆಗಲಾರದು. ಕೆಲಸ ಮಾಡಿದ ಮೇಲೆ ಫಲ ಪಡೆಯಲೇಬೇಕೆಂಬುದು ಅವರ ನಂಬಿಕೆ. ಆದರೆ ಫಲವಿಲ್ಲದೆ ಕೆಲಸಮಾಡುವುದು ಭಾರತೀಯರಿಗೆ ಆಧ್ಯಾತ್ಮ! ನಮಗೆ ಅದೊಂದು ನೈತಿಕ ಸಿದ್ಧಾಂತ.
ಹಾಗಾದರೆ ಭಾರತದಲ್ಲಿ ನೈತಿಕತೆ ಅಂದರೆ ಏನು? ಭಾರತದಲ್ಲಿ ನೀತಿ ಅಂದರೆ ನಿರ್ಣಯ ಅಲ್ಲ, ನೀತಿ ಅಂದರೆ ನಿಷ್ಕರ್ಷೆ. ನೀತಿ ಅಂದರೆ ತೆಗೆ ಎಂದು ಅರ್ಥ. ಬದುಕಿನ ಬೇರೆ ಬೇರೆ ಸಂದರ್ಭದಲ್ಲಿ ಜಿಜ್ಞಾಸೆಯ ಮೂಲಕ ನೀತಿಯನ್ನು ರೂಪಿಸಿಕೊಳ್ಳುತ್ತೇವೆ ನಾವು. ದೃಷ್ಟಾಂತಗಳ ಮೂಲಕ ನೀತಿಯನ್ನು ಅರಿಯುವುದೇ ನೈತಿಕತೆ. ನೈತಿಕತೆ ಅಂದರೆ ಆಯಾ ವಾಸ್ತವಗಳಿಗೆ ನ್ಯಾಯವೆನ್ನುವಂತೆ ಮನುಷ್ಯ ಪ್ರಕಟಗೊಳ್ಳುವ ರೀತಿ. ಪರಿಸ್ಥಿತಿಯ ಒಳಿತಿಗೋಸ್ಕರ ಮನುಷ್ಯ ತೆಗೆದುಕೊಳ್ಳಬಹುದಾದ ನಿಲುವುಗಳು. ಧರ್ಮವೇ ನಮ್ಮ ನೀತಿ. ಏಕೆಂದರೆ ಧರ್ಮಕ್ಕೆ ಪ್ರಮಾಣಕ ಚೌಕಟ್ಟು ಇಲ್ಲ. ವಿಧಿ, ವಿಷೇಧದ ಜೊತೆಗೆ ಆಪದ್ಧರ್ಮವೂ ಇದೆ. ‘ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್’ ನ ಜೊತೆಯಲ್ಲಿಯೇ ‘ನ ಬ್ರೂಯಾತ್ ಸತ್ಯಮಪ್ರಿಯಂ’ ಎಂದೂ ಹೇಳುತ್ತೇವೆ. ಭಗವದ್ಗೀತೆಯ ತುಂಬ ಇದಕ್ಕೆ ಪರ್ಯಾಯವಾದ ನೈತಿಕ ಪಾಠಗಳು ನಡೆಯುತ್ತವೆ. ಭಗವದ್ಗೀತೆ ಮಾತ್ರವಲ್ಲ, ನಮ್ಮ ಪುರಾಣಗಳೆಲ್ಲವೂ ಕೇವಲ ಕಥೆಗಳಲ್ಲ, ಅವು ಬದುಕಿನ ಜಿಜ್ಞಾಸೆಗಳು. ನಮ್ಮ ನೀತಿಗೂ ಪಾಶ್ಚಾತ್ಯರ ನೈತಿಕತೆಗೂ ತುಂಬಾ ವ್ಯತ್ಯಾಸವಿದೆ. ಆದ್ದರಿಂದ ಭಗವದ್ಗೀತೆ ನಮ್ಮ ನೀತಿ ಕಥೆಯಲ್ಲ, ಅದೊಂದು ವಾಸ್ತವದ ಮಾರ್ಗದರ್ಶಿ.
ಯುದ್ಧಭೂಮಿಯಲ್ಲಿ ಅರ್ಜುನನೆದುರಿಗೆ ಇರುವುದು ಎರಡೇ ಆಯ್ಕೆ. ಹಿಂಸೆ ಮತ್ತು ಧರ್ಮ. ಅಹಿಂಸೆಯನ್ನು ಬೆಂಬಲಿಸಿದರೆ ಅಧರ್ಮಕ್ಕೆ ಜಯವಾಗುತ್ತದೆ. ಜೊತೆಗೆ ಯುದ್ಧ ಕ್ಷತ್ರಿಯ ಧರ್ಮವೂ ಕೂಡ. ಧರ್ಮವನ್ನು ಸಂರಕ್ಷಿಸಬೇಕೆಂದರೆ ಹಿಂಸೆಯನ್ನು ಬೆಂಬಲಿಸಬೇಕಾಗುತ್ತದೆ. ಎಂಥ ನೈತಿಕ ಸಂದಿಗ್ಧತೆಯಿದು!
ನಮ್ಮ ದಿನನಿತ್ಯದ ಬದುಕಿನಲ್ಲಿ ನಮಗೂ ಕೂಡ ಇಂತಹ ಅನೇಕ ಸಂದಿಗ್ಧಗಳು ಎದುರಾಗುತ್ತವೆ. ಆಧುನಿಕ ವಿಚಾರವಾದ ಇದರಿಂದ ನಮ್ಮನ್ನು ಬಿಡುಗಡೆಗೊಳಿಸಲು ಸೋಲುತ್ತದೆ. ಆದರೆ ಅರ್ಜುನನ ನೈತಿಕ ಸಂಘರ್ಷಗಳಿಗೆ ಕೃಷ್ಣ ವಿಶಿಷ್ಟವಾಗಿ ಮುಖಾಮುಖಿಯಾಗತ್ತಾನೆ. ಸರಿ-ತಪ್ಪುಗಳ ಮಾರ್ಗ ಮತ್ತು ಅವುಗಳ ಪರಿಣಾಮದ ಕುರಿತಾಗಿ ಹೇಳುತ್ತಾನೆ. ಅಂತಿಮ ನಿರ್ಣಯವನ್ನು ಅರ್ಜುನನಿಗೇ ಬಿಡುತ್ತಾನೆ. ಅಹಿಂಸೆ ಮತ್ತು ಧರ್ಮ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದೇ ನಿಜವಾದ ನೀತಿ. ಈ ನೀತಿ ಸಮಾಜದ ಒಳಿತನ್ನು ನಿರ್ಣಯಿಸಬೇಕು. ಯಾವ ವ್ಯಕ್ತಿ ತಾನು ಎನ್ನುವ ಅಹಂಕಾರ ತೊರೆಯುತ್ತಾನೋ ಅವನಿಗೆ ಪಾಪ-ಪುಣ್ಯಗಳೆರಡೂ ತಟ್ಟಲಾರದು. ವಿಶ್ವರೂಪ ದರ್ಶನದಿಂದ ಅರ್ಜುನನ ಅಹಂಕಾರ ನಾಶವಾಗುತ್ತದೆ. ಯುದ್ಧಕ್ಕೆ ಸಿದ್ಧನಾಗುತ್ತಾನೆ. ಯಾವ ಆಧುನಿಕ ಪಾಠವೂ ಈ ರೀತಿಯಲ್ಲಿ ಬದುಕಿನ ಸಂಘರ್ಷವನ್ನು ಪರಿಹರಿಸಿ ನೆಮ್ಮದಿಯ ಬದುಕಿಗೆ ದಾರಿ ತೋರಿಸಲಾರದು. ಭಗವದ್ಗೀತೆಯಲ್ಲಿ ಇದೇ ನೀತಿಯೆಂದೂ, ನೀವು ಹೀಗೆಯೇ ನಡೆಯಬೇಕೆಂದೂ ನೇರವಾಗಿ, ನಿರ್ದಿಷ್ಟವಾಗಿ ಎಲ್ಲೂ ಹೇಳುವುದಿಲ್ಲ. ಅದರಲ್ಲಿಯ ದೃಷ್ಟಾಂತಗಳ ಮೂಲಕ ನಾವು ನೀತಿಯನ್ನು ಕಂಡುಕೊಳ್ಳಬೇಕು. ಭಗವದ್ಗೀತೆ ನೀತಿಯಾಗುವುದು ನಮ್ಮ ಹೃದಯದಲ್ಲಿ. ಅದು ಹೆಪ್ಪಿಟ್ಟ ಮೊಸರಿನಂತೆ! ಹಾಗಾಗಿಯೇ ಭಗವದ್ಗೀತೆ ಎಲ್ಲ ಕಾಲದಲ್ಲಿಯೂ ಪ್ರಸ್ತುತವಾಗುತ್ತದೆ. ಭಗವದ್ಗೀತೆಯ ಮೇಲೆ ಎಷ್ಟೊಂದು ಭಾಷ್ಯಗಳು ಬಂದಿವೆ. ಭಗವದ್ಗೀತೆಯ ತಿರುಳನ್ನು ಉಪಯೋಗಿಸಿಕೊಂಡು ಎಷ್ಟೊಂದು ಸಾಹಿತ್ಯಗಳು ರಚಿತವಾಗಿವೆ. ಗಾಂಧೀಜೀಯವರಿಗೆ ಭಗವದ್ಗೀತೆಯಲ್ಲಿ ಸಿಕ್ಕ ನೀತಿಯೆಂದರೆ ಅಹಿಂಸಾ ಮಾರ್ಗ. ಅದನ್ನೇ ಸತ್ಯಾಗ್ರಹವನ್ನಾಗಿ ಪರಿವರ್ತಿಸಿಕೊಂಡರು.
ಸಂಸಾರದಲ್ಲಿದ್ದವರಿಗೂ ಆದ್ಯಾತ್ಮ ಸಾಧನೆ ಮಾಡುವ ಮಾರ್ಗ ತೋರಿಸುತ್ತದೆ ಭಗವದ್ಗೀತೆ. ಅದಕ್ಕಾಗಿಯೇ ಭಕ್ತಿ ಪಂಥದವರೂ ಭಗವದ್ಗೀತೆಯ ಮಾರ್ಗ ಅನುಸರಿಸಿದರು. ಭಾರತೀಯರ ಜೀವನಕ್ರಮಕ್ಕೂ ಪಾಶ್ಚಾತ್ಯರ ಚಿಂತನಾ ವಿಧಾನಕ್ಕೂ ಎಷ್ಟು ವೈರುದ್ಧ್ಯವಿದೆಯೆಂಬುದು ಭಗವದ್ಗೀತೆಯಿಂದ ತಿಳಿದು ಬರುತ್ತದೆ. ಆದ್ದರಿಂದ ಭಗವದ್ಗೀತೆ ಅಂದರೇನೇ ಒಂದು ರೀತಿಯ ನೈತಿಕ ಜಿಜ್ಞಾಸೆ. ಇದರ ಸರಿಯಾದ ಓದಿನ ಮೂಲಕವಾಗಿ ನಾವು ನಮ್ಮ ಸಂಸ್ಕೃತಿಯನ್ನು ಗುರುತಿಸಿಕೊಳ್ಳಬೇಕಾಗಿದೆ. ಮಾಡಿಕೊಳ್ಳಬೇಕಾಗಿದೆ. ಭಗವದ್ಗೀತೆಯು ಲೌಕಿಕ -ಪರಮಾರ್ಥಗಳೆರಡಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ-ಬೋಧನೆ-ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ.
ಆಧುನಿಕ ಧಾವಂತದ ಬದುಕಿನಲ್ಲಿ ಮಾನವನ ಮುಖ್ಯ ಸಮಸ್ಯೆ ಎಂದರೆ ನಿರ್ವಹಣೆಯದ್ದು. ನಾವು ಇಂದು ಯಾವುದನ್ನೂ ಸರಿಯಾಗಿ, ಸಮರ್ಥವಾಗಿ ನಿರ್ವಹಿಸಲಾಗದ ಅಶಕ್ತ ಸ್ಥಿತಿಯಲ್ಲಿದ್ದೇವೆ. ನಾವು ನಮ್ಮ ಆರ್ಥಿಕತೆಯನ್ನು ನಿರ್ವಹಿಸಲಾರೆವು. ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲಾರೆವು. ಸಂಬಂಧಗಳಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲಾರೆವು. ಸಮಯ ನಿರ್ವಹಣೆಯಂತೂ ನಮ್ಮ ಕೈಮೀರಿದ ಸಂಗತಿ. ಅಷ್ಟೇ ಏಕೆ, ನಮ್ಮ ಕೋಪವನ್ನು ಕೂಡ ನಾವು ನಿರ್ವಹಿಸಿಕೊಳ್ಳಲಾರೆವು. ಇವುಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಭಗವದ್ಗೀತೆಯನ್ನು ಅಭ್ಯಾಸ ಮಾಡಿದರೆ, ನಮಗೆ ಈ ಎಲ್ಲವನ್ನೂ ನಿರ್ವಹಿಸುವ ಸಮಗ್ರ ಸೂತ್ರವೊಂದು ದೊರಕುತ್ತದೆ. ವಸ್ತುತಃ ಕೃಷ್ಣನು ಅರ್ಜುನನಿಗೆ ಇದನ್ನು ಹೇಳುತ್ತಿರುವಂತೆ ಕಂಡರೂ ಪ್ರತಿಯೊಬ್ಬರೂ ಇದನ್ನು ತಮ್ಮ ತಮ್ಮ ಸದ್ಯದ ಸಮಸ್ಯೆಗೆ ಪರಿಹಾರವಾಗಿ ಆಲಿಸಬಹುದಾಗಿದೆ.
ದೈನಂದಿನ ಬದುಕನ್ನು ಸುಂದರವಾಗಿಸಿಕೊಳ್ಳಲು ಅಗತ್ಯವಿರುವ ಸಂಪನ್ಮೂಲ ನಿರ್ವಹಣೆ, ಆದ್ಯತೆಗಳು, ನೀತಿ-ನಿಯಮಾವಳಿಗಳು ಹಾಗೂ ಅವುಗಳನ್ನು ಜಾರಿಗೊಳಿಸುವುದು -ಈ ಎಲ್ಲವಕ್ಕೂ ಭಗವದ್ಗೀತೆ ಮಾರ್ಗದರ್ಶನ ನೀಡುತ್ತದೆ.
ತಮ್ಮ ದೌರ್ಬಲ್ಯವನ್ನು ಸಂಪೂರ್ಣವಾಗಿ ಮರೆತು ದಿಟ್ಟ ಪ್ರಯತ್ನ ಮಾಡಲು ಮುಂದಾದವರು ಮಾತ್ರ ಗೆಲ್ಲುತ್ತಾರೆ. ಕೃಷ್ಣನು ಅರ್ಜುನನಿಗೆ ಗೀತೆಯನ್ನು ಬೋಧಿಸುವುದು ಈ ಅಂಶವನ್ನು ಮನದಟ್ಟು ಮಾಡಲೆಂದೇ. ನಿರ್ವಹಣಾ ಕೌಶಲ್ಯವಿದ್ದವರಲ್ಲಿ ಮಾತ್ರ ಆಲೋಚನೆ ಹಾಗೂ ಕಾರ್ಯಾಚರಣೆಗಳ ನಡುವೆ ಉತ್ತಮ ಸೌಹಾರ್ದ ಮೂಡಿಸಿಕೊಳ್ಳಲು, ಹಾಗೂ ಈ ಮೂಲಕ ಸಾಧನೆಯ ಗುರಿ ತಲುಪಲು ಸಾಧ್ಯವಾಗುತ್ತದೆ. ಯೋಜನೆ, ಕಾರ್ಯಾಚರಣೆ, ಉತ್ಪತ್ತಿ ಹಾಗೂ ಮಾರುಕಟ್ಟೆ-ಈ ಪ್ರಕ್ರಿಯೆಯಲ್ಲಿ ಗೀತೆಯ ಬೋಧನೆಗಳನ್ನು ಮಾರ್ಗದರ್ಶಿಯಾಗಿ ಬಳಸಿಕೊಳ್ಳಬಹುದು.
ಗೀತಾಚಾರ್ಯನು ವೀರಯೋಧನಿಗೆ “ಹೇಡಿಯ ಹಾಗೆ ಕೂರಬೇಡ, ಎದ್ದು ಯುದ್ಧ ಮಾಡು” ಎಂದು ಹೇಳುವ ಸಂದರ್ಭದಲ್ಲಿ ಪ್ರತಿಯೊಂದು ಅಂಶವೂ ಆತನಿಗೆ ಪ್ರತಿಕೂಲವಾಗಿಯೇ ಇರುತ್ತವೆ. ಆ ಎಲ್ಲ ಅನಾನುಕೂಲಗಳ ನಡುವೆಯೂ ಕರ್ತವ್ಯ ಪ್ರಜ್ಞೆ ತೋರುವಂತೆ ಕೃಷ್ಣನು ಅರ್ಜುನನನ್ನು ಪ್ರೇರೇಪಿಸುತ್ತಾನೆ. ಹಾಗೆಯೇ ಲೋಕದಲ್ಲಿ ಬೇಕಾದಷ್ಟು ಸಾಮರ್ಥ್ಯವಂತರು, ಧೈರ್ಯಶಾಲಿಗಳು, ತುಂಬಾ ಐಶ್ವರ್ಯ ಉಳ್ಳವರು ಸಾಕಷ್ಟು ಜನ ಇದ್ದಾರೆ. ಆದರೆ ಅವರೆಲ್ಲರೂ ಭಗವದ್ಗೀತೆಗೆ ಅಧಿಕಾರಿಗಳಾಗುವುದಿಲ್ಲ. ಅವರೆಲ್ಲರಲ್ಲೂ ಅದರ ಬಗ್ಗೆ ಆಸಕ್ತಿಯೂ ಇರುವುದಿಲ್ಲ. ಅಧಿಕಾರವೂ ಇರುವುದಿಲ್ಲ. ಕೇವಲ ಸಾಮರ್ಥ್ಯ, ಐಶ್ವರ್ಯಗಳಿಂದಾಗಿ ಅವರಿಗೆ ಅದರ ಅಧಿಕಾರ ಬರುವುದು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಇರುವಷ್ಟು ದಿನ ಹೊಟ್ಟೆ-ಬಟ್ಟೆಗಳ ಸಮೃದ್ಧಿ ಇರಬೇಕು. ವಸ್ತು-ವಾಹನ ಸೇವಕರು ಮೊದಲಾದ ಐಶ್ವರ್ಯವಿರಬೇಕು. ಈ ಲೋಕದ ಸುಖವನ್ನೆಲ್ಲ ಅನುಭವಿಸಬೇಕು ಎಂದೆಲ್ಲಾ ಈ ಲೋಕದಿಂದ, ಮತ್ತು ಈ ದೇಹದಿಂದ ಸಿಗುವ ಸುಖಗಳಿಗೆ ಮಾತ್ರ ಸೀಮಿತರಾಗಿ ಅದರಲ್ಲಿಯೇ ಬಿದ್ದು ಒದ್ದಾಡುವವರ ಮುಂದೆ ಭಗವದ್ಗೀತೆಯು ತನ್ನ ಆಂತರ್ಯದ ಬೀಗವನ್ನು ತೆಗೆಯುವುದಿಲ್ಲ.
ಈ ಲೋಕದ ಎಲ್ಲ ಸುಖಗಳೂ ಬೇಕು. ಮತ್ತು ಆ ಎಲ್ಲ ಸುಖಗಳನ್ನೂ ಮೀರಿದ, ಇನ್ನೂ ಹೆಚ್ಚಿನ ಗಾಢವಾದ ಶಾಶ್ವತವಾದ ಸುಖ ಬೇಕು ಎಂದು ಬಯಸುವ ಧೀರನಾದರೆ ಮಾತ್ರ ಅವನಿಗೆ ಗೀತೆಯ ಕರುಣೆಯಾದೀತು. ಆದ್ದರಿಂದ ಭಗವದ್ಗೀತೆಯು ಅರ್ಥವಾಗಬೇಕಾದರೆ ಅರ್ಥ ಮಾಡಿಕೊಳ್ಳಬಯಸುವವನ ಹೃದಯದಲ್ಲಿ ಸುಖದ ಆಶೆ ತುಂಬಾ ತೀವ್ರವಾಗಿರಬೇಕು. ಈ ವಸ್ತುಗಳಿಂದ ಸಿಗುತ್ತಿರುವ ಸುಖಕ್ಕಿಂತ ಹೆಚ್ಚಿನ ಮಟ್ಟದ ಸುಖವನ್ನು ಪಡೆಯಬೇಕೆಂದು ಅವನ ಮನಸ್ಸು ಆತುರಗೊಳ್ಳಬೇಕು. ವೈರಾಗ್ಯವೆಂದರೆ ಎಲ್ಲ ಸುಖಸಾಧನಗಳನ್ನೂ ತೊರೆಯುವಂಥದ್ದೆಂದು ತಿಳಿಯಬಾರದು. ಎಲ್ಲಕ್ಕಿಂತ ಹೆಚ್ಚಿನ ಸುಖದ ಬಯಕೆಯೆಂದು ತಿಳಿಯಬೇಕು. ಅದಲ್ಲದೇ ಭಗವದ್ಗೀತೆಯು ಪಾರಮಾರ್ಥಿಕ ಗ್ರಂಥವಾದ್ದರಿಂದ ಲೋಕ ವ್ಯವಹಾರದಲ್ಲಿ ಅದರ ಉಪಯೋಗವೇನೂ ಇಲ್ಲವೆಂಬ ಬೆಪ್ಪುತನ ಇನ್ನೊಂದು ಕಾರಣವಾಗಿದೆ.
ಇದು ಪಾರಮಾರ್ಥಿಕ ಗ್ರಂಥವೇನೋ ನಿಜವೇ, ಆದರೆ ವ್ಯವಹಾರದಲ್ಲಿ ಅದರ ಉಪಯೋಗವಿಲ್ಲದೇ ಇಲ್ಲ. ಜಗತ್ತಿನಲ್ಲಿ ಸರ್ವೈಶ್ವರ್ಯಸಂಪನ್ನರೂ ಕೂಡ ತಮ್ಮ ಜೀವನದ ತಾಪತ್ರಯಗಳಿಂದ ಬೆಂದು ನಿಟ್ಟುಸಿರು ಬಿಡುವುದನ್ನು ನಾವು ನೋಡುತ್ತಲೇ ಇದ್ದೇವೆ. ಅಂಥವರಿಗೆ ಯಾವ ಸುಖಕ್ಕೆ ಏನು ಕೊರತೆ? ಆದರೂ ಅವರಲ್ಲಿ ಇರಬೇಕಾದಷ್ಟು ಸಮಾಧಾನವಿಲ್ಲ. ತಮ್ಮ ಐಶ್ವರ್ಯಾದಿ ಸಾಧನಗಳೆಲ್ಲ ಎಂದೆಂದಿಗೂ ತಮ್ಮವೇ. ತಾವೇ ಉತ್ಪತ್ತಿ ಮಾಡಿದ್ದು. ತಮಗೇ ಸೇರಿದ್ದು ಎಂಬುದಾಗಿ ಅಶಾಂತಿಯಿರುತ್ತದೆ. ಗೀತೆಯು ಆ ತಪ್ಪು ತಿಳಿವಳಿಕೆಗಳ ಬೇರನ್ನು ಕಿತ್ತೊಗೆಯುತ್ತದೆ.
ಜಗತ್ತೆಂಬುದು ತುದಿ-ಮೊದಲು ಕಾಣದ ಸಮುದ್ರದಂತಿದೆ. ಆ ಸಮುದ್ರದಲ್ಲಿ ಈಜುವ ಮರ್ಮವನ್ನು ನಾವು ತಿಳಿಯದೇ ಹೋದರೆ ಪದೇ ಪದೇ ಮುಳುಗಿ ಮೂಗು – ಬಾಯಿಗಳಲ್ಲೆಲ್ಲ ಉಪ್ಪು ನೀರು ತುಂಬುತ್ತದೆ. ಮೀನು ಮೊಸಳೆಗಳ ಭಯ ಕಾಡುತ್ತದೆ. ಇಂತಹ ಜಗತ್ತೆಂಬ ಸಮುದ್ರದಲ್ಲಿ ಸಮರ್ಥವಾಗಿ ಈಜಲಿಕ್ಕೆ ಭಗವದ್ಗೀತೆಯೇ ಸದ್ಗುರುವಾಗಿದೆ.
ಬದುಕಿನ ಮಾರ್ಗವೇ ಭಗವದ್ಗೀತೆ. ಭಗವದ್ಗೀತೆಯ ಅಂತರಾಳದ ಅರ್ಥವನ್ನು ಎಳೆ ಎಳೆಯಾಗಿ ತಿಳಿದುಕೊಳ್ಳುವುದು ಅಗತ್ಯ. ಗೀತೆಯಲ್ಲಿನ ಸಂದೇಶ ಸಮಾಜದ ಹಿತಕ್ಕಾಗಿ ಅನ್ವಯಿಸುತ್ತವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಭಗವದ್ಗೀತೆ ಮಾನವ ಕುಲಕ್ಕೆ ಎಷ್ಟು ಪ್ರಯೋಜನ ಎಂಬುದರ ಕುರಿತು ಅರ್ಥ ಮಾಡಿಕೊಳ್ಳಬೇಕು.
ಜೀವನ ನೀತಿ ಎಲ್ಲರಿಗೂ ಬೇಕು. ಭಗವದ್ಗೀತೆಯಲ್ಲಿ ಕೃಷ್ಣನು, “ಮಾನವರು” ಎಂದು ಹೇಳಿದ್ದಾನೆಯೇ ಹೊರತು “ಬ್ರಾಹ್ಮಣರು” ಎಂದು ಎಲ್ಲೂ ಹೇಳಿಲ್ಲ. ‘ಮನುಷ್ಯ ಮಾತ್ರವಲ್ಲ, ಸಕಲ ಜೀವರಾಶಿಗಳನ್ನು ಯಾರು ಪ್ರೀತಿಯಿಂದ ನೋಡುತ್ತಾರೋ ಅವರು ನನಗೆ ಅತ್ಯಂತ ಪ್ರಿಯಕರನಾದವರು’ ಎಂದು ಕೃಷ್ಣ ಪರಮಾತ್ಮ ಉಪದೇಶಿಸಿದ್ದಾನೆ. ಜೀವನ ನೀತಿ ಬಯಸುವ ಎಲ್ಲರಿಗೂ ಭಗವದ್ಗೀತೆ ಅನ್ವಯಿಸುತ್ತದೆ. ಇದು ಯಾವುದೇ ಒಂದು ಜಾತಿ, ಕೋಮಿಗೆ ಸೀಮಿತವಲ್ಲ.
ಯುವಕರಿಗೆ ಗೀತೆಯು ತನ್ನ ಸಂದೇಶದಲ್ಲಿ ಯಾವುದೇ ಮೌಲ್ಯಗಳು, ಶ್ರೇಯಸ್ಸಿನ ಮಾರ್ಗಗಳ ಬಗ್ಗೆ ಹೇಳುವಾಗ ಚಾಪಲ್ಯಕ್ಕೆ ಬಲಿಯಾಗಬಾರದು ಎಂದು ತಿಳಿಸುತ್ತದೆ. ದೈವಿ ಸಂಪನ್ನವಾದ ಮುಖಗಳನ್ನು ಹೇಳುವಾಗ ಅಭಯ, ಮನಸ್ಸು ಶುದ್ಧಿ, ಸತ್ ಸಂಶುದ್ಧಿ, ಭೌತಿಕ ವಿಷಯಗಳಲ್ಲಿನ ಆಸಕ್ತಿ ತೊರೆದು ಜ್ಞಾನ ಸಾಧನೆಯಲ್ಲಿ ನಿಷ್ಠೆ ಇಟ್ಟಾಗ ಹಾದಿ ತಪ್ಪುತ್ತಿರುವ ಯುವಕರು ಸರಿದಾರಿಗೆ ಬರುತ್ತಾರೆ ಎಂದು ಗೀತೆ ವಿಶ್ಲೇಷಿಸಿದೆ.
ಮನಸ್ಸು ವಿಕಾರವಾದರೆ ದುಶ್ಚಟಗಳಿಗೆ ಬಲಿಯಾಗುತ್ತಾನೆ. ವಿದ್ಯೆ, ಪ್ರಾಮಾಣಿಕತೆ, ಮನಸ್ಸು ಈ ಮೂರೂ ಕೃತಿಯಲ್ಲಿ ತರಬೇಕು. ಸದ್ಗ್ರಂಥಗಳ ಅಧ್ಯಯನ, ತಪಸ್ಸು, ವ್ರತ, ಉಪವಾಸ, ಆಹಾರದಲ್ಲಿ ಸಂಯಮದಿಂದಿದ್ದರೆ ಮನಸ್ಸು ವಿಕಾರವಾಗುವುದಿಲ್ಲ. ಸತ್ಯ, ಅಕ್ರೋಶ, ತ್ಯಾಗ, ಶಾಂತಿ, ಅಪ ಐಶ್ವರ್ಯ, ದಯೆ, ರಾಗ, ಅದ್ರೋಹ ಇವುಗಳನ್ನು ಅನುಸರಿಸಬೇಕು. ದರ್ಪ, ದುರಾಭಿಮಾನ, ನಿಷ್ಠುರವಾದ ಕ್ರಿಯೆ, ಮತ್ಸರ, ಫಲ ಕಾಮನೆ ಇವುಗಳನ್ನು ಜೀವನದಲ್ಲಿ ತ್ಯಾಗ ಮಾಡಿದಾಗ ಯುವ ಸಮೂಹ ಸನ್ಮಾರ್ಗದಲ್ಲಿ ಸಾಗುತ್ತದೆ ಎಂಬ ಸಂದೇಶವನ್ನು ಗೀತೆಯು ನೀಡಿದೆ. ಒಬ್ಬ ಮನುಷ್ಯ ಯಾವ ರೀತಿ ಜೀವನ ಸಾಗಿಸಬೇಕು ಎಂಬುದನ್ನು ಗೀತೆ ನಮಗೆ ತಿಳಿಸಿಕೊಡುತ್ತದೆ. ಕೇವಲ ಮೇಲ್ನೋಟದ ಅರ್ಥವನ್ನು ತಿಳಿದರೆ ಸಾಲದು. ಗೀತೆಯ ಅಂತರಾಳದ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕು.

Leave a Reply