ನೂರೊಂದು ನೆನಪು ಎದೆಯಾಳದಿಂದ…

ನೂರೊಂದು ನೆನಪು ಎದೆಯಾಳದಿಂದ…
” ನನಗೆ ಸಾವಿನ ಅಂಜಿಕೆ ಇಲ್ಲ. ಏಕೆಂದರೆ ನಾನು ‘ಇರುವ’-ವರೆಗೂ ಅದು ಬರುವದಿಲ್ಲ, ‘ಅದು’ ಬಂದಾಗ ನಾನೇ ಇರುವದಿಲ್ಲ- ಹೀಗೆಂದವರು ನಮ್ಮ ಧಾರವಾಡ ನೆಲದ ಕವಿ ದ.ರಾ ಬೇಂದ್ರೆಯವರು.ಇದು ಪ್ರತಿಯೊಬ್ಬರ ವಿಷಯದಲ್ಲಿ ನಿಜವಾದರೂ ಅದರ ಪ್ರತ್ಯಕ್ಷ ಅನುಷ್ಠಾನ ಅಷ್ಟು ಸರಳವಲ್ಲ.
‌ ಇನ್ನು ‘ಚುಟುಕು ಬ್ರಮ್ಹ ‘ದಿನಕರ ದೇಸಾಯಿಯವರ ನಿಲುವು ಇದಕ್ಕಿಂತ ಕೊಂಚ ಭಿನ್ನ. ಜೀವಂತವಿದ್ದಾಗ ಸ್ವಾರ್ಥಮಾತ್ರದಿಂದ ವ್ಯರ್ಥವಾಗಿರಬಹುದಾದ ಬದುಕನ್ನು ಸಾವಿನ ತದನಂತರವಾದರೂ ಧನ್ಯವಾಗಿಸುವ ಪರಿಯದು.’ ದೇಹದ ಬೂದಿಯನ್ನು ಗಾಳಿಯಲ್ಲಿ ತೂರಿಬಿಟ್ಟು ಭತ್ತ ಬೆಳೆಯುವಲ್ಲಿ ಅದು ಹಾರಿ ಗೊಬ್ಬರವಾಗಿ ತೆನೆಯೊಂದು ಮೂಡಿಬಂದರೆ, ಹೊಳೆಯಲ್ಲಿ ತೇಲಿಬಿಟ್ಟು ಮೀನಿಗೆ ಆಹಾರವಾಗಿ ಅದು ಪುಷ್ಟಿ ಪಡೆದರೆ, ಕೊಳದ ಕೆಸರಿನಲ್ಲಿ ಕೂಡಿ ಕಮಲವೊಂದು ಅರಳಿದರೆ ಆಗ ‘ಹುಟ್ಟು’ ”ಸಾವಿ’ನಲ್ಲಿಯೂ ಧನ್ಯವಾದಂತೆ’- ಎಂಬುದವರ ಸಿದ್ಧಾಂತ…
‌‌ಇದು ‘ದೊಡ್ಡವರ’ ಮಾತಾಯಿತು.ಆದರೆ
ನಮ್ಮಂಥವರು ಮಾತ್ರ ನಮ್ಮ ಸುತ್ತು ಮುತ್ತಲಿನವರ ಬದುಕಿನ ರೀತಿಯಿಂದಲೇ
ಏನಾದರೂ ಪ್ರೇರಣೆ ಪಡೆಯಬೇಕು, ಇಲ್ಲವೇ ಇತರರಿಗೆ ಪ್ರೇರಣೆ ಕೊಡುವಂತಾಗಬೇಕು. ಅಂಥ ಅನೇಕರು ನಮ್ಮ ಮಧ್ಯವೇ ಕಾಣಸಿಗುತ್ತಾರೆ. ತಮ್ಮ ಬದುಕನ್ನೂ ಹಸನು ಗೊಳಿಸಿಕೊಂಡು, ಕೈಲಾದಷ್ಟು ಇತರರಿಗೂ ಸಹಾಯಮಾಡಿ ಅದೇ ಒಂದು ಜೀವನಕ್ರಮ ಎಂಬಂತೆ ಬದುಕಿ ಸದ್ದಿಲ್ಲದೇ ನೇಪಥ್ಯಕ್ಕೆ ಸರಿದು ಹೋಗಿ ಬಿಡುವವರು…ನಂತರವೂ ವರ್ಷಗಳೇ ಕಳೆದು ಹೋದರೂ ಮನಸ್ಸಿನಿಂದ ಮರೆಯಾಗದವರು…
ಭಾವನೆಗಳು ಭಾರವಾಗಿ ಮನದೊತ್ತಡ ತಡೆಯಲಿಕ್ಕೆ ಆಗದಾದಾಗ ಆತ್ಮೀಯರ ಅಕ್ಷರ ರೂಪದಲ್ಲಿ ಆಕಾರ ಪಡೆದು ಚಿರ ಅಮರರಾಗಿ ಉಳಿಯುವವರು. ಯಾವಾಗಲೋ ತೆಗೆದ ಭಾವ ಚಿತ್ರಗಳಲ್ಲಿ ಜೊತೆಗಿದ್ದು ಸದಾ ನಗುತ್ತಿರುವವರು.ಮನದಂಗಳಕ್ಕೆ ಕರೆದಾಗ ತಕ್ಷಣವೇ ಬಂದು ಜೊತೆಗಿದ್ದು ಧೈರ್ಯ ತುಂಬುವವರು…ಮನೆ ಜನರ, ಗೆಳೆಯರ, ಬಂಧು ಬಾಂಧವರ ನೆನಪಿನಾಳದಲ್ಲಿ ಶಾಶ್ವತವಾಗಿ ಸ್ಥಾನವೊಂದನ್ನು ಪಡೆದು ಸಾವಿನ ನಂತರವೂ ಜೊತೆ ಜೊತೆಯಲ್ಲಿಯೇ ಬದುಕುವವರು…
ಅಂಥವರ ಪೈಕಿ ನನ್ನ
ತಮ್ಮ ಸುಧೀನೂ ಒಬ್ಬ. ಕೈಹಿಡಿದವಳಿಗೆ ಅನವರತ ಎಲ್ಲ ರೀತಿಯಲ್ಲೂ ಸಂಗಾತಿಯಾಗಿ/ ಮಕ್ಕಳಿಗೆ ಮಮತೆಯ ಮೂರ್ತಿಯಾಗಿ/ ಅಣ್ಣತಮ್ಮಂದಿರು, ಅಕ್ಕತಂಗಿಯರಿಗೆ ಸದಾ ಬೆಂಗಾವಲಾಗಿ/ ಸ್ನೇಹಿತರಿಗೆ ಸೇತುಬಂಧವಾಗಿ/ ಹಚ್ಚಿಕೊಂಡವರಿಗೆಲ್ಲ ಮೆಚ್ಚುಗೆಯಾಗಿ/ ನೌಕರಿಯ ವೇಳೆ ಒಬ್ಬ ದಕ್ಷ ಅಧಿಕಾರಿಯಾಗಿ ತನ್ನ ಪ್ರಯತ್ನ ಮೀರಿ ಬದುಕಿದವ.ಹೋಗುವಾಗ ಯಾರ ಕೈಗೂ ನಿಲುಕದೇ ಸದ್ದಿಲ್ಲದೇ ನೇಪಥ್ಯದಲ್ಲಿ ಮರೆಯಾದವ. ಇಂದಿಗೆ ವರ್ಷವೊಂದು ಕಳೆದರೂ ‘ಅವನಿಲ್ಲ’ ಎಂದೆನಿಸುವದೇ ಇಲ್ಲ. ಆದರೆ ಒಮ್ಮೆ ನೆನಪಾಗಿ ಮನಸ್ಸು ಖಿನ್ನವಾದರೆ ಅವನ ಮಾತುಗಳೇ, ನಡೆ – ನಿಲುವುಗಳೇ, ಬದುಕಿನ ನಂಬಿಕೆಗಳೇ ಬರಬೇಕು ನಮಗೆ ಬುದ್ಧಿ ಹೇಳಲು. ಸಮಾಧಾನ ಕೊಡಲು…
ಆದರೂ ಅವನನ್ನು ಹಾಗೆಯೇ ‘ಬಿಟ್ಟು’ಕೊಡಲು ಯಾರಿಗೂ ಇಷ್ಟವಿಲ್ಲ. ಆ ಕಾರಣಕ್ಕಾಗಿಯೇ ಅವನ ಹೆಂಡತಿ/ ಮಕ್ಕಳು/ ಆಪ್ತರು / ಅವನನ್ನು ಬಲ್ಲವರು ಶಾಶ್ವತವಾಗಿ ಹೃದಯಕ್ಕೆ ಹತ್ತಿರವಾಗಿರಿಸಿಕೊಂಡದ್ದು ಹೀಗೆ…
Leave a Reply